ಕತ್ತಲ ಬಯಲಲ್ಲಿ ಹುಡುಕಬೇಡಿ (ರನ್ ವೇ)
ಅದೊಂದು ವಿಶಾಲವಾದ ಬಯಲು. ಅದರ ಮಧ್ಯದಲ್ಲಿ ನಿಂತಿದ್ದೀರಿ. ಅವತ್ತು ಅಮಾವಾಸ್ಯೆಯ ರಾತ್ರಿ. ಸಾಲದ್ದಕ್ಕೆ ಆ ಬಯಲಿನ ಸುತ್ತಲೂ ದಟ್ಟ ಮರಗಿಡಗಳ ಸಮೃದ್ಧ ರಾಶಿ. ಇನ್ನೂ ಹೇಳಬೇಕೆಂದರೆ ನಿಮಗೆ ಇರುಳು ದೃಷ್ಟಿದೋಷ. ನಿಮಗೆ ನಿಂತಲ್ಲಿ ನಿಲ್ಲುವುದನ್ನು ಬಿಟ್ಟರೆ ಬೇರೇನನ್ನೂ ಮಾಡಲು ಸಾಧ್ಯವಿದೆ? ಎಷ್ಟೇ ಕಣ್ಣಗಲಿಸಿ ನೋಡಿದರೂ ಸುತ್ತಲೂ ಗಾಡಾಂಧಕಾರ ಬಿಟ್ಟರೆ ಮತ್ತಿನ್ನೇನೂ ಗೋಚರಿಸಲು ಸಾಧ್ಯವಿಲ್ಲ. ಆ ಸ್ಥಿತಿಯಲ್ಲಿ ನಿಮ್ಮ ಸೂಜಿಯೊಂದು ಕಳೆದು ಹೋಗಿದೆ. ಅದನ್ನು ನೀವು ಆ ಬಯಲಿನಲ್ಲಿ ಮತ್ತೆ ಹುಡುಕಿ ಪಡೆದುಕೊಳ್ಳಲು ಸಾಧ್ಯವೇ? ಜೀವನದಲ್ಲಿ ಕಳೆದುಹೋದ ಅವಕಾಶಗಳು, ಕಳಕೊಂಡ ಸಂಬಂಧಗಳು, ಮುಗಿದು ಹೋದ ಘಟನೆಗಳೂ ಹಾಗೆಯೇ. ಒಪ್ಪಿಕೊಳ್ಳೋಣ, ಅದು ಚಿನ್ನದ ಸೂಜಿಯೇ ಆಗಿರಬಹುದು. ಹಾಗಲ್ಲದಿದ್ದರೂ ಸಂದರ್ಭಕ್ಕೆ ಚಿಕ್ಕ ಸೂಜಿಯೂ ಅತ್ಯಮೂಲ್ಯವೇ. ಅದನ್ನು ನಿರ್ಲಕ್ಷಿಸಬೇಕೆಂಬುದೇನೂ ಅಲ್ಲ. ಹಾಗೆಯೇ ಜೀವನದಲ್ಲಿ ಅದು ಎಷ್ಟೇ ಚಿಕ್ಕದಿದ್ದರೂ ಅದನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಎಲ್ಲವೂ ಪ್ರಮುಖವೇ. ಎಲ್ಲ ಸಂಬಂಧಗಳೂ ಮುಖ್ಯವೇ. ಹಾಗೆಂದು ಒಮ್ಮೆ ಅದು ದೂರಾಗಿ ಹೋದ ನಂತರ ಅದರ ಬಗ್ಗೆಯೇ ಯೋಚಿಸುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಒಮ್ಮೆ ದೂರಾಗಿದ್ದನ್ನು ಹೇಗಾದರೂ ಮಾಡಿ ಮತ್ತೆ ಗಳಿಸಿಕೊಳ್ಳಬೇಕೆಂದು ತೊಳಲಾಡುವುದೂ ಮೂರ್ಖತನವೇ. ಕತ್ತಲೆಯ ಬಯಲಿನಲ್ಲಿ ನೀವು ಓಡಾಡುವುದೇ ದುಸ್ತರವಾಗಿರುತ್ತದೆ. ಎಲ್ಲಿ ಏನಿದೆಯೋ? ಯಾವ ಕಡೆ ತಗ್ಗಿದೆ, ಎಲ್ಲಿ ದಿಬ್ಬವಿದೆ, ಎಲ್ಲಿ ಯಾವ ಹುಳುಹುಪ್ಪಟೆ ಇದೆ ಎಂಬುದು ಕಾಣಿಸಲು ಸಾಧ್ಯವೇ ಇಲ್ಲ. ಕಣ್ಣಿಗಂತೂ ಕಾಣುವುದಿಲ್ಲ. ಇನ್ನು ಕೈ ಮುಂದೆ ಮಾಡಿ ತಡಕಾಡುತ್ತಾ ಹೋಗಬಹುದು. ಅಂಥ ತಡಕಾಟಕ್ಕೆ ಏನೋ ಸಿಲುಕಲೂಬಹುದು. ಆದರೆ ಹಾಗೆ ಸಿಕ್ಕದ್ದು ಏನೆಂಬುದನ್ನು ಗುರುತಿಸಲು ಸಾಧ್ಯವೇ? ಹಾಗೆ ತಡಕಾಡುವುದರಿಂದ ನಿಮಗೆ ಅಪಾಯದ ಸಾಧ್ಯತೆಯೇ ಹೆಚ್ಚು. ಹೊರತಾಗಿ ನೀವು ಕಳಕೊಂಡದ್ದು ಸಿಗುತ್ತದೆ ಎಂದರೆ ಹುಚ್ಚುತನವಾಗುತ್ತದೆ. ಇಂಥ ವ್ಯರ್ಥ ಪ್ರಯತ್ನಗಳನ್ನು ನಿಲ್ಲಿಸಿ ಮುಂದೆ ಏನು ಎಂಬುದನ್ನು ಯೋಚಿಸುವುದು ಜಾಣತನವಾಗುತ್ತದೆ. ಮೊದಲೇ ಕಳಕೊಂಡ ಸಂದರ್ಭದಲ್ಲಿ ವಿವೇಚನೆಗೆ ಕತ್ತಲಾವರಿಸಿರುತ್ತದೆ. ಅಲ್ಲಿಂದ ಕ್ಷೇಮವಾಗಿ ಹೊರಬಂದು ಸುರಕ್ಷಿತ ತಾಣವನ್ನು ತಲುಪುವುದು ನಿಮ್ಮ ಆದ್ಯತೆಯಾಗಿರುತ್ತದೆ. ಸಾಧ್ಯವಾದಷ್ಟು ನೀವೆಲ್ಲಿದ್ದೀರಿ, ಬಯಲಿಂದ ಬೆಳಕಿನ ತಾಣ ಎಷ್ಟು ದೂರದಲ್ಲಿದೆ ಎಂಬುದನ್ನು ವಿವೇಚನಾಪೂರ್ವಕ ಅರಿಯುವ ಯತ್ನ ಮಾಡಿ. ಒಮ್ಮೆ ಬಯಲನ್ನು ದಾಟಿ ಬೆಳಕಿಗೆ ಬಂದರೆ ಕಳಕೊಂಡದ್ದಕ್ಕಿಂತ ಹೆಚ್ಚಿನದನ್ನು ಪಡೆದುಕೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ. ಒಂದೊಮ್ಮೆ ಅಲ್ಲಿಂದ ಹೊರಬರಲು ಸಾಧ್ಯವೇ ಇಲ್ಲವೆಂಬಂಥ ಅನಿವಾರ್ಯ ಮನವರಿಕೆ ಅದಲ್ಲಿ ಇದ್ದಲ್ಲೇ ಬೆಳಕು ಬರುವವರೆಗೆ ಹೇಗೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು ಎಂಬುದನ್ನು ಯೋಚಿಸಿ ಕಾರ್ಯೊನ್ಮುಖವಾಗಿ. ಧೈರ್ಯವಷ್ಟೇ ಆ ಸಂದರ್ಭದಲ್ಲಿ ನಿಮ್ಮನ್ನು ಕಾಪಾಡಬಲ್ಲುದು. ದಿಟ್ಟತೆ ನಿಮ್ಮ ಅಸ್ತ್ರವಾಗಿರಲಿ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

