ಬೈಟುಕಾಫಿ

ಆದಾಯದ ಬುಡಕ್ಕೇ ಬತ್ತಿ

ಆದಾಯದ ಬುಡಕ್ಕೇ ಬತ್ತಿ
Published On :

ಅಗರಬತ್ತಿಗಳ ತಯಾರಿಕೆಯಲ್ಲಿ ಉಪಯೋಗವಾಗುವಂಥ ಬಿದಿರನ್ನು ಬೆಳೆಸಲು ನಮ್ಮ ರೈತರನ್ನು ಪ್ರೋತ್ಸಾಹಿಸುವುದರ ಮೂಲಕ ನೂರಾರು ಕೋಟಿ ರುಪಾಯಿಗಳು ವಿದೇಶಗಳಿಗೆ ಹರಿದುಹೋಗುವುದನ್ನು ತಪ್ಪಿಸಬೇಕಿದೆ.

ಹೂವಿನೊಂದಿಗೆ ನಾರೂ ಸ್ವರ್ಗ ಸೇರುತ್ತ ಅನ್ನೋದು ಬಿದಿರಿಗೂ ಅನ್ವಯವಾಗಬೇಕು.
ನೀವೇ ಹೇಳಿ, ಅಗರಬತ್ತಿಗಳಿಲ್ಲದೇ ನಮ್ಮ ಪೂಜೆಗೆ ಪರಿಪೂರ್ಣತೆ ಇದೆಯೇ? ಅಗರಬತ್ತಿ ಆಗೋದೇ ಬಿದಿರಿನಿಂದ. ಹಾಗಿದ್ದ ಮೇಲೇ ಪೂಜೆಯ ಸಾರ್ಥಕ್ಯ, ಪುಣ್ಯ ಬಿದಿರಿಗೂ ಸಂದು ಅದರ ಸಂತತಿ ಸಾವಿರವಾಗವೇಕಿತ್ತು. ಆದರೆ ಅಗರಬತ್ತಿ ಕಂಪನಿಗಳು ಸಾವಿರವಾಗಿವೆ. ಬಿದಿರು ಸಾವಿನಂಚಿನಲ್ಲಿದೆ.
ಅಗರಬತ್ತಿಗಳ ತಯಾರಿಕೆಯಲ್ಲಿ ಬಳಕೆಯಾಗುವ ಕಚ್ಚಾವಸ್ತುಗಳಲ್ಲಿ ಬಿದಿರಿಗೆ ಅಗ್ರಸ್ಥಾನ. ಅಗರಬತ್ತಿಗಳ ತಯಾರಿಕೆಯಲ್ಲಿ ಕಡ್ಡಿಗಳ ರೂಪದಲ್ಲಿ ಬಳಕೆಯಾಗುವ ಬಿದಿರು ಭಾರತದಲ್ಲಿ ಹೇರಳ ಪ್ರಮಾಣದಲ್ಲಿ ಸಿಗುತ್ತಿದ್ದರೂ ಎಲ್ಲ ಬಿದಿರುಗಳು ಅಗರಬತ್ತಿಗಳ ತಯಾರಿಕೆಯಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಭಾರತದಲ್ಲಿ ಸುಮಾರು 18 ಬೇರೆ ಬೇರೆ ಜಾತಿಯ ಬಿದಿರುಗಳನ್ನು ಬೆಳೆಯಲಾಗುತ್ತದೆ. ಆದರೆ ಅವುಗಳಲ್ಲಿ ಅಗರಬತ್ತಿಗಳ ಪ್ರಭೇದಗಳು ಮಾತ್ರ ಕಡಿಮೆ. ಹೀಗಾಗಿ ಇಂತಹ ಬಿದಿರಿನ ಕಡ್ಡಿಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಅಗರಬತ್ತಿಗಳ ತಯಾರಿಕೆಗೆ ಬೇಕಾಗುವ ಬಿದಿರನ್ನು ನಾವು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವುದು ಜಗತ್ತಿನ ಒಂದು ಪುಟ್ಟ ರಾಷ್ಟ್ರ ವಿಯೆಟ್‌ನಾಮ್‌ನಿಂದ. ಜತೆಗೆ ಇಂಡೋನೇಷ್ಯಾ, ಚೀನಾ, ದಕ್ಷಿಣ ಆಫ್ರಿಕಾವೂ ನಮಗೆ ಬಿದಿರನ್ನು ಸರಬರಾಜು ಮಾಡುತ್ತವೆ. ಹೀಗೆ ನಾವು ಶೇಕಡಾ 70ರಷ್ಟು ಪ್ರಮಾಣದ ಬಿದಿರನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಉಳಿದ ಶೇಕಡಾ 30 ಬಿದಿರನ್ನು ನಮ್ಮ ದೇಶದ ಪೂರ್ವೋತ್ತರ ಭಾಗಗಳು ಪೂರೈಸುತ್ತವೆ.
ಎಲ್ಲದೂ ಆಗಲ್ಲ
ಅಗರಬತ್ತಿಗೆ ಬೇಕಿರೊ ಬಿದಿರುಗಳು 'ಮೆರೋಕೊನಾ ಬೆಕ್ಸಿಫೆರಾ' ಪ್ರಜಾತಿಯದ್ದು. ಒಂದು ಲೆಕ್ಕಾಚಾರದ ಪ್ರಕಾರ ಬೆಂಗಳೂರು ನಗರ ಒಂದಕ್ಕೆ ಪ್ರತಿ ವರ್ಷ 540 ಕೋಟಿ ರುಪಾಯಿಗಳ ಬಿದಿರು ಬೇಕು. ಅಷ್ಟೇ ಅಲ್ಲ ಮೈಸೂರಿನಲ್ಲೂ ಸಹ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಗರಬತ್ತಿಗಳನ್ನು ತಯಾರಿಸಲಾಗುತ್ತದೆ. ಇಲ್ಲಿನ ಅಗರಬತ್ತಿಗಳು ವಿದೇಶಗಳಿಗೂ ರಫ್ತಾಗಿ ಅಲ್ಲಿ ತಮ್ಮ ಪಾರಮ್ಯವನ್ನು ಮೆರೆದಿವೆ.
 ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನ ಅಗರಬತ್ತಿಗಳ ತಯಾರಿಕೆಗೆ 1000 ಟನ್ ಬಿದಿರಿನ ಕಡ್ಡಿಗಳ ಅವಶ್ಯಕತೆಯಿದೆ. ಇದರಲ್ಲಿ ಶ್ರೇಷ್ಠಮಟ್ಟದ ಅಗರಬತ್ತಿಗಳ ತಯಾರಿಕೆಗಾಗಿ ಉತ್ತಮ ಗುಣಮಟ್ಟದ ಕಡ್ಡಿಗಳು ಬೇಕು. ಇಂತಹ ಕಡ್ಡಿಗಳ ದರ ಕಿಲೋಗೆ 80-150 ರುಪಾಯಿವರೆಗೆ ಇದೆ. ಐಡಬ್ಲ್ಯೂಎಸ್‌ಟಿಯ ಬಿದಿರು ತಜ್ಞ ಡಾ. ಶ್ಯಾಂ ವಿಶ್ವನಾಥರ ಪ್ರಕಾರ ಅಗರಬತ್ತಿಗಳ ತಯಾರಿಕೆಗೆ ಫೈಬರ್ ಮುಕ್ತ ಬಿದಿರಿನ ಕಡ್ಡಿಗಳು ಬೇಕು. ಆದರೆ ಅಡವಿಗಳಲ್ಲಿ ಬೆಳೆಯುತ್ತಿರುವ ಬಿದಿರುಗಳಲ್ಲಿ ಫೈಬರ್ ಪ್ರಮಾಣ ಜಾಸ್ತಿ ಇರುತ್ತದೆ. ಹೀಗಾಗಿ ಅಗರಬತ್ತಿಗಳ ತಯಾರಿಕೆಗೆ 'ಬ್ರಾಂಡೇಸಿ', ಮೇಲೋಕೆಲಾ', ಮತ್ತು 'ಮೆಸೆಕೋನಾ ಬೆಕ್ಸಿಫೆರಾ' ಪ್ರಜಾತಿಯ ಬಿದಿರುಗಳು ಮಾತ್ರ ಸರ್ವಶ್ರೇಷ್ಠವೆಂದು ಪರಿಗಣಿಸಲಾಗಿದೆ.
ಸಂಶೋಧನೆಯಲ್ಲಿ ತೊಡಗಿಸಿ
ಐಡಬ್ಲ್ಯೂಎಸ್‌ಟಿ ಸಂಸ್ಥೆ ಬಿದಿರಿನ ಹೊಸ ಹೊಸ ಪ್ರಜಾತಿಯ ಸಂಶೋಧನೆಯಲ್ಲಿ ತೊಡಗಿಕೊಂಡಿದೆ. ಸಂಸ್ಥೆಯ ವಿಜ್ಞಾನಿಗಳು ಟಿಶ್ಯೂ ತಂತ್ರಜ್ಞಾನದ ಸಹಾಯದಿಂದ ವಿಭಿನ್ನ ಪ್ರಮಾಣದ ಹೊಸ ಬಿದಿರುಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ ಬೆಳೆಯುವ ಬರ್ಮಾ ಬಿದಿರು ಅಗರಬತ್ತಿಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ ಎನ್ನುವುದು ಈ ವಿಜ್ಞಾನಿಗಳ ಅಂಬೋಣ. ಸದ್ಯ ಈ ಬಿದಿರು ಸಿರಿಕಲ್ಚರ್ ಉದ್ಯಮದಲ್ಲಿ ಹೆಚ್ಚು ಬಳಕೆಯಾಗುತ್ತಿದೆ. ಈ ದಿಶೆಯಲ್ಲಿ ಅಗರಬತ್ತಿಗಳ ತಯಾರಿಕೆಯಲ್ಲಿ ಉಪಯೋಗವಾಗುವಂಥ ಬಿದಿರನ್ನು ಬೆಳೆಸುವುದರ ಮೂಲಕ ನೂರಾರು ಕೋಟಿ ರುಪಾಯಿಗಳು ವಿದೇಶಗಳಿಗೆ ಹರಿದುಹೋಗುವುದನ್ನು ತಪ್ಪಿಸಬಹುದಾಗಿದೆ.
  ವನಸಂರಕ್ಷಣೆಯ ಅಧಿನಿಯಮದ ಪ್ರಕಾರ ಅನುಮತಿಯಿಲ್ಲದೆ ಬಿದಿರುಗಳನ್ನು ಕಡಿಯುವುದು ಮತ್ತು ಸಾಗಿಸುವುದು ಅಪರಾಧ. ಇದರ ಹೊರತಾಗಿ ರೈತರು ತಮ್ಮ ಸ್ವಂತ ಹೊಲದಲ್ಲಿ ಬಿದಿರುಗಳನ್ನು ಬೆಳೆಯುವುದಕ್ಕೆ ಮತ್ತು ಮಾರುವುದಕ್ಕೂ ಸಹ ರಾಜ್ಯ ಸರಕಾರಕ್ಕೆ ಕರ ಪಾವತಿಸಬೇಕಾಗುತ್ತದೆ. ಈ ಎಲ್ಲ ಜಂಜಾಟದ ಕಾರಣದಿಂದಾಗಿ ರೈತರು ಬಿದಿರನ್ನು ಬೆಳೆಸಲು ಹೆಚ್ಚಿನ ಆಸಕ್ತಿ ವಹಿಸುವುದಿಲ್ಲ. ಈ ಕಾರಣದಿಂದಾಗಿಯೇ ಭಾರತ ಬಿದಿರಿನ ಅಭಾವವನ್ನು ಎದುರಿಸಬೇಕಾಗಿದೆ. ಈ ದಿಶೆಯಲ್ಲಿ ಸರಕಾರ ಮುತುವರ್ಜಿ ವಹಿಸಿ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಬಿದಿರು ಬೆಳೆಯುವುದಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ. <

-ಎಂ.ಬಿ. ನಾಯಕ, ಮೈಸೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.