ಸಮೀರ ಸಾಧಕ

ಅವನು ಪುತ್ತೂರಿನ ಮುತ್ತು. ಅಲ್ಲೊಂದು ಹಳ್ಳಿಯಲ್ಲಿ ಹುಟ್ಟಿದವ. ಅಂದದ ಮಿಣುಕು ಕಣ್ಣುಗಳ ಹುಡುಗ. ಓದಿದ್ದು ಕೇವಲ ಎಸ್ಸೆಸ್ಸೆಲ್ಸಿ. ಚಾನ್ಸು ಸಿಕ್ಕರೆ ಇನ್ನೂ ಓದಬೇಕೆಂಬ ತುಡಿತ ಇತ್ತು. ಆದರೆ, ಈ ಬಡತನವನ್ನು ಒಪ್ಪಿಸುವುದು ಹೇಗೆ? ಆಗ ಆತನಿಗೆ ಕಂಡಿದ್ದು ದೂರದ ಬೆಂಗಳೂರು. ಏನಾದರೂ ಸಾಧಿಸಲೇಬೇಕೆಂಬ ಛಲದಿಂದ ಉದ್ಯಾನ ನಗರಿಯ ಬೆನ್ನು ಹತ್ತಿದ ಈತ ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸುವಂಥ ಪ್ಯಾಷನ್ ಕೊರಿಯೋಗ್ರಾಫರ್.
ಹೆಸರು ಸಮೀರ್‌ಖಾನ್.
ಇಂದು ಪ್ಯಾಷನ್ ಜಗತ್ತು ವಿಶಾಲವಾಗಿ ಹರಡಿದೆ. ಕರುನಾಡ ಹಲವು ಪ್ರತಿಭೆಗಳು ಪ್ಯಾಷನ್ ಲೋಕದಲ್ಲಿ ಮಿಂಚಿ, ಲೋಕದ ಕಣ್ಣನ್ನು ತಮ್ಮತ್ತ ತಿರುಗಿಸಿವೆ. ಈ ರಂಗಿನ ದುನಿಯಾದಲ್ಲಿ ಹಳ್ಳಿ ಪ್ರದೇಶದವರಿಗೆ ಅವಕಾಶ ದಕ್ಕುವುದು ಕಷ್ಟದಾಯಕವೇ ಸರಿ. ಏಕೆಂದರೆ, ಅವರ ಅಭಿರುಚಿಗಳು ಬಹುಮಟ್ಟಿಗೆ ಅಪ್‌ಡೇಟ್ ಆಗಿರುವುದಿಲ್ಲ. ಇನ್ನೂ ಹಳೇ ಶೈಲಿಯಲ್ಲಿ ಅವಲ ಸ್ಟೈಲುಗಳಿರುತ್ತವೆ. ಆದರೆ, ಈ ಪದಕ್ಕೆ ಅಪವಾದವಾಗಿ ಹೊರಹೊಮ್ಮಿದ ಸಮೀರ್. ಈಗ ಆತ ತುಂಬಾ ಡಿಮ್ಯಾಂಡಿನ ಕೊರಿಯೋಗ್ರಾಫರ್.
ಬೆಂಗಳೂರಲ್ಲಿ ಮೊದಲ ಕೆಲ ತಿಂಗಳು ತರಬೇತಿ ಪಡೆದು ಅನೇಕ ವೇದಿಕೆಯಲ್ಲಿ ರ್ಯಾಂಪ್ ಮುಖೇನ ಗಮನ ಸೆಳೆಯತೊಡಗಿದ. ಹಂತ-ಹಂತವಾಗಿ ಸಮೀರನ ಗಮನ ಕೊರಿಯೋಗ್ರಫಿಯತ್ತ ತಿರುಗಿತು. ಮುಂದಿನ ದಿನದಲ್ಲಿ ಬೆಂಗಳೂರಿನಲ್ಲಿ 'ಎಲೈಟ್ ಮಾಡೆಲ್ ಪ್ಲಾಟ್' ತರಬೇತಿ ಕೇಂದ್ರ ಆರಂಭಿಸಿದ. ಸಮೀರನ ಕನಸಿನ ಕೂಸಾದ ಈ ಸಂಸ್ಥೆಯಲ್ಲಿಂದು ಸುಮಾರು ಐದುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಮಾಡೆಲ್‌ಗಳು ಪಳಗುತ್ತಿದ್ದಾರೆ.
'ಚಿಂಗಾರಿ' ಚಿತ್ರದ ಬೆಡಗಿ ದೀಪಿಕಾ ಕಾಮಯ್ಯ, 'ಪೊರ್ಕಿ' ಹುಡುಗಿ ಪ್ರಣೀತಾ ಅಲ್ಲದೆ ಹಲವು ಬಾಲಿವುಡ್ ನಟ- ನಟಿಯರಿಗೂ ಈತನದ್ದೇ ಮಾರ್ಗದರ್ಶನ. ಇಷ್ಟೇ ಅಲ್ಲ, ಈ ಆರು ವರ್ಷದಲ್ಲಿ ಇನ್ನೂರಕ್ಕೂ ಹೆಚ್ಚು ಪ್ರದರ್ಶನಗಳು ಈತನ ನಿರ್ದೇಶನದಲ್ಲಿ ಮೂಡಿಬಂದಿವೆ.
'ವಿಶಾಲವಾದ ಪ್ಯಾಷನ್ ಜಗತ್ತು ಹೊರ ನೋಟಕ್ಕೆ ಕೆಟ್ಟ ಮನೋಭಾವನೆ ಮೂಡಿಸುತ್ತದೆ. ಆದರೆ, ಒಳ ಹೊಕ್ಕರೆ ಅದರ ನಿಜಾಂಶ ಬೆಳಕಿಗೆ ಬರುತ್ತದೆ' ಎಂಬುವುದು ಸಮೀರನ ಮನದ ಮಾತು.
ಕರ್ನಾಟಕ- ಕೇರಳ- ಹೈದರಾಬಾದ್ ಅನ್ನು ಒಳಗೊಂಡ ಮಿಸ್ ಸೌತ್‌ಇಂಡಿಯಾ ಸ್ಪರ್ಧೆಯನ್ನು ಸತತ 4 ವರ್ಷದಿಂದ ಆಯೋಜಿಸುತ್ತಿರುವ ಕೀರ್ತಿ ಈ ಕರಾವಳಿ ಪೋರನದ್ದು.
2011ರಲ್ಲಿ ನಡೆದ 'ಮಿಸ್ ಕ್ವೀನ್ ಇಂಡಿಯಾ' ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿದ ಸಮೀರ್, 2012ರ ಸ್ಪರ್ಧೆಯಲ್ಲೂ ಕೈಚಳಕ ತೋರಿದವರು. ಹಲವು ಮಾಡೆಲ್‌ಗಳು ಪಾಲ್ಗೊಂಡ ಸಿಗ್ನೇಚರ್ ಕಂಪೆನಿ ಪ್ರಸ್ತುತ ಪಡಿಸಿದ ವಿವಂತ ತಾಜ್ ಮಲಬಾರ್ ಅವರ ಪ್ಯಾಷನ್ ಶೋದಲ್ಲೂ ಈತನದ್ದೇ ಪಾಲು. ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಮಿಸ್ ಸೌತ್ ಇಂಡಿಯಾ, ಬೆಸ್ಟ್ ಮಿಸ್‌ವರ್ಲ್ಡ್ ಸ್ಪರ್ಧೆಗಳಲ್ಲದೆ, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಪಾರ್ವತಿ ಒಮನಕುಟ್ಟನ್ ಅವರಿಗೂ ಕೊರಿಯೋಗ್ರಫಿ ಮಾಡಿ ಪ್ರಥಮ ಸ್ಥಾನ ಪಡೆದ ಪುಣ್ಯಾತ್ಮ ಈತ.
ಇದಲ್ಲದೆ ಬ್ಲಿಂದರ್ ಪ್ರೈಡ್ ಶೋ, ಮಿಸ್‌ಸೌತ್ ಇಂಡಿಯಾ ಸ್ಟಾರ್ಸ್, ಶುಭ ಜ್ಯುವೆಲ್ಲರ್ ಶೋ, ಸಾರಿ ಫೆಸ್ಟ್, ಮರ್ಸೂಝ್ ಬೆನ್ಝ್, ಸೆಲ್ಕಾನ್ ಮೊಬೈಲ್ ಸೇರಿದಂತೆ ಹಲವು ಶೋಗಳನ್ನೂ ಅಂದಚೆಂದಗೊಳಿಸಿದ್ದಾರೆ ಸಮೀರ್.
ಈ ಸಮೀರ್ ಕಣ್ಣು ಕನ್ನಡ ಸಿನಿಮಾ ಮೇಲೂ ಬಿದ್ದಿದೆ. ಸದ್ಯದಲ್ಲೇ ಕನ್ನಡ ಚಲನಚಿತ್ರಕ್ಕೆ ಬಣ್ಣ ಹಚ್ಚುವ ತರಾತುರಿಯಲ್ಲಿದ್ದಾರೆ. ಅಲ್ಲದೆ, ಚಲನಚಿತ್ರ ವಲಯದ ಸಿಸಿಎಲ್ ಟೂರ್ನಿಯ ಕರ್ನಾಟಕ ಬುಲ್ಡೋಜರ್ ತಂಡದಲ್ಲೂ ಇವರು 'ಪವರ್'ಸ್ಟಾರ್.
ಸಾಧಿಸಲು ವಿದ್ಯೆಯೊಂದೇ ಮುಖ್ಯವಲ್ಲ. ನಿರ್ದಿಷ್ಟ ಗುರಿ, ಶ್ರಮ, ಜೇಬು ತುಂಬಾ ಕನಸು ಇದ್ದರೆ ಸಮೀರ್‌ನಂತೆ ಯಾರೂ ದಡ ಸೇರಬಹುದು.
- ನವೀನ್ ಭಟ್ ಇಳಂತಿಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


