ಬೈಟುಕಾಫಿ

ಟಿಬೆಟ್ ಪಟ

ಟಿಬೆಟ್ ಪಟ
Published On :

ಪದ್ಮಸಾಂಭವರ ಜಯಂತಿಯ ಕ್ಷಣಗಳು..
ಚಿತ್ರಪರದೆಯೊಂದು ಎಷ್ಟು ದೊಡ್ಡದಿರಬಹುದು... ಅಷ್ಟು- ಇಷ್ಟು ಅಂಥ ಲೆಕ್ಕಾಚಾರ ಬೇಡ. ಕುಶಾಲನಗರದ ಬೈಲುಕುಪ್ಪೆಯಲ್ಲಿ ಪ್ರತಿವರ್ಷವೂ ಟಿಬೆಟಿಯನ್ ಲಾಮಗಳು ಜಗತ್ತಿನಲ್ಲಿ ಅತ್ಯಂತ ಬೃಹತ್ ಎನ್ನಲಾದ ಚಿತ್ರಪಟ ಅನಾವರಣಗೊಳಿಸ್ತಾರೆ.
ಈ ಚಿತ್ರಪಟ 7 ಅಂತಸ್ತಿನ ತುಂಬೆಲ್ಲಾ ಹರಡಿಕೊಳ್ಳುತ್ತದೆ. 150 ಅಡಿ ಎತ್ತರ, 80 ಅಡಿ ಅಗಲವಿರುವ ಚಿತ್ರಪಟವನ್ನು ಅನಾವರಣಗೊಳಿಸುವ ಟಿಬೆಟಿಯನ್ನರ ಸಡಗರ ನೋಡುವುದೇ ಒಂದು ಸಂಭ್ರಮ. ಬೆಳ್ಳಂಬೆಳಗ್ಗೆ 7 ಗಂಟೆಗೆ ಬೈಲುಕುಪ್ಪೆಯ ಬಯಲಿನಾಚೆಯಿಂದ ಸೂರ್ಯ ಉದಯಿಸುತ್ತಿರುವಾಗಲೇ ಟಿಬೆಟಿಯನ್ನರ ವಿಶಿಷ್ಟ ಶಂಖ, ಜಾಗಟೆಗಳಂಥ ಸಾಂಪ್ರದಾಯಿಕ ವಾದ್ಯಗಳ ಮೊಳಗುವಿಕೆಯೊಂದಿಗೆ ಮಣ ಮಣ ಮಂತ್ರ ಪಠಿಸುತ್ತಾ ನೂರಾರು ಬೌದ್ಧ ಸನ್ಯಾಸಿಗಳು ಮಣಭಾರದ ಚಿತ್ರಪರದೆಯನ್ನು ಹೊತ್ತು ಸಾಗುತ್ತಾರೆ. ಇರುವೆ ಸಾಲಿನಂತೆ ಸರಸರನೆ ಸಾಗುವ ಆ ಸೊಬಗು ನಿಜಕ್ಕೂ ಅದ್ಭುತ. ಈ ರೀತಿ ಚಿತ್ರಪರದೆಯನ್ನು ಹೊತ್ತು ತರುತ್ತಿರುವಂತೆಯೇ    ವಿಶಾಲವಾದ ಮೈದಾನದಲ್ಲಿನ ಹಲವು ಬೌದ್ಧ ಅನುಯಾಯಿಗಳು ಸುರುಳಿ ಸುತ್ತಿರುವ ಚಿತ್ರಪರದೆಗೆ ಶ್ವೇತವಸ್ತ್ರಗಳನ್ನು ಅರ್ಪಿಸಿ, ಗೌರವ ಸಲ್ಲಿಸುತ್ತಾರೆ.
ಬಯಲಿಗೆ ಚಿತ್ರಪರದೆಯನ್ನು ತಂದ ಕೂಡಲೇ ಅಲ್ಲಿನ 7 ಅಂತಸ್ತಿನ ಕಟ್ಟಡದ ಮೇಲಕ್ಕೆ ಚಿತ್ರಪರದೆಯನ್ನು ಕೊಂಡೊಯ್ಯುವ ಕಸರತ್ತು ಶುರು. ಕೆಳಗೆ ನೂರಕ್ಕೂ ಅಧಿಕ ಲಾಮಾಗಳು ಸರಸರನೆ ಪರದೆಯನ್ನು ಕಟ್ಟಡದ ಮೇಲಿನಿಂದ ಇಳಿ ಬಿಟ್ಟ ಹಗ್ಗಕ್ಕೆ ಸಿಕ್ಕಿಸುತ್ತಿದ್ದರೆ, ಕಟ್ಟಡದ ಮೇಲೆ ನಿಂತ ಲಾಮಾಗಳು ಚಿತ್ರಪರದೆಯನ್ನು ಹತ್ತಾರು ರಾಟೆಯ ನೆರವಿನಿಂದ ಮೇಲೇರಿಸಲು ಅಣಿಯಾಗುತ್ತಾರೆ. ಕ್ಷಣಾರ್ಧದಲ್ಲಿ ಪರದೆಯನ್ನು ಮೇಲಕ್ಕೀರಿಸುವ ಕಾರ್ಯ ಆರಂಭವಾಗುತ್ತಿರುವಂತೆಯೇ ಜನ ಮೈದಾನದಲ್ಲಿ ಕಿಕ್ಕಿರಿದು ನಿಂತು ನೋಡುತ್ತಿರುವಂತೆಯೇ ಚಿತ್ರಪಟ 7 ಅಂತಸ್ತಿನ ಕಟ್ಟಡದಲ್ಲಿ ಅನಾವರಣಗೊಂಡಿರುತ್ತದೆ.
ಪದ್ಮಸಾಂಭವರ ಚಿತ್ರ
ಆ ಪಟದಲ್ಲಿ ಪದ್ಮಸಾಂಭವರ ಸುಂದರ ಚಿತ್ರ ಕಂಗೊಳಿಸುತ್ತದೆ. ಬೌದ್ಧಧರ್ಮಿಯರ ಧಾರ್ಮಿಕ ಗುರುಗಳಲ್ಲಿ ಒಬ್ಬರಾದ ಪದ್ಮಸಾಂಭವರ ಚಿತ್ರಪಟವನ್ನು ನೋಡುವುದೇ ಭಾಗ್ಯ ಎಂಬ ನಂಬಿಕೆ ಇಲ್ಲಿದೆ. ಕೇವಲ 10 ನಿಮಿಷ ಮಾತ್ರವೇ ಅನಾವರಣಗೊಳ್ಳುವ ಈ ಚಿತ್ರಪಟಕ್ಕೆ ಬೌದ್ಧಗುರುಗಳು ಕೆಳಗಿನಿಂದಲೇ ಧೂಪಾರತಿ ಎತ್ತಿ, ಪೂಜೆ ಸಲ್ಲಿಸುತ್ತಾರೆ. ಲಾಮಾಗಳ ಪ್ರಾರ್ಥನೆಯೂ ಭರದಿಂದ ನಡೆಯುತ್ತದೆ. ಎಲ್ಲರೂ ಭಾವಾವೇಶಕ್ಕೊಳಗಾದವರಂತೆ ಚಿತ್ರಪಟ ನೋಡುತ್ತಾ ಅದಕ್ಕೆ ಕೈಮುಗಿಯುತ್ತಾರೆ.
7 ಅಂತಸ್ತಿನ ಮೇಲಕ್ಕೆ ಏರಿಸಿದಷ್ಟೇ ಸಲೀಸಾಗಿ ಪರದೆಯನ್ನು ಕಟ್ಟಡದಿಂದ ಕೆಳಕ್ಕಿಳಿಸಲಾಗುತ್ತದೆ. ಅಷ್ಟೇ ವೇಗವಾಗಿ ಮತ್ತೆ ಪರದೆಯನ್ನು ಪದ್ಮಸಾಂಭವರ ದೇವಾಲಯಕ್ಕೆ ಕೊಂಡೊಯ್ಯಲಾಗುತ್ತದೆ. ಈ ರೀತಿ ಪರದೆ ತರುವುದು, ಕಟ್ಟಡಕ್ಕೇರಿಸುವುದು, ಅನಾವರಣಗೊಳಿಸುವುದು, ಕೆಳಕ್ಕಿಳಿಸುವುದ ಹೀಗೆ.. ಎಲ್ಲಾ ಪ್ರಕ್ರಿಯೆ ಕೇವಲ 30 ನಿಮಿಷಗಳಲ್ಲಿ ಮುಗಿದುಹೋಗುತ್ತದೆ.
ಪದ್ಮಸಾಂಭವ ಜಯಂತಿ:
ಪದ್ಮಸಾಂಭವ ಜಯಂತಿ ಅಂಗವಾಗಿ ಗುರು ಪದ್ಮಸಾಂಭವ ಮತ್ತು ಟಿಬೆಟಿಯನ್ನರ ಪಾಲಿಗೆ ಆಯುಷ್ಯ ಹೆಚ್ಚಿಸುವ ದೈವ ಎಂಬ ನಂಬಿಕೆಯಿರುವ ಅಮಿತಾಯುಷ್‌ರ ಚಿತ್ರಪಟಗಳನ್ನು ಬೇರೆ ಬೇರೆ ದಿನ ಅನಾವರಣಗೊಳಿಸಲಾಗುತ್ತದೆ. ವಿಶ್ವದಲ್ಲೇ ಅತಿ ದೊಡ್ಡದಾದ ಕಲಾತ್ಮಕವಾಗಿ ಮೂಡಿರುವ ಈ ಚಿತ್ರ ಪರದೆಯನ್ನು 10 ವರ್ಷಗಳ ಹಿಂದೆ ಮಾತೃನೆಲ ಟಿಬೆಟ್‌ನಲ್ಲಿಯೇ ತಯಾರಿಸಿ ಬಿಡಿಬಿಡಿಯಾಗಿ ಬೈಲುಕುಪ್ಪೆಯಲ್ಲಿನ ತಮ್ಮ ನಿರಾಶ್ರಿತ ಶಿಬಿರಕ್ಕೆ ತರಲಾಯಿತು.
ಪರದೆ ವೀಕ್ಷಣೆಯ ಮೂಲಕ ಪುಣ್ಯ ಭಾವನೆಯನ್ನೂ, ತವರು ದೇಶದ ಕಲ್ಪನೆಯನ್ನೂ ತಂದುಕೊಂಡು, ಟಿಬೆಟ್‌ಗೆ ಮರಳುವ ತಮ್ಮ ಜೀವನದ ಹೊಂಗನಸನ್ನು ಈ ಮೂಲಕ ಜೀವಂತವಿರಿಸಿಕೊಂಡಿದ್ದಾರೆ. ಈ ಎಲ್ಲಾ ಸಂಭ್ರಮವನ್ನು ಭಾಷಣ, ಸಭೆ ಮುಂತಾದ ರಿವಾಜುಗಳಿಗೆ ಅವಕಾಶವಿಲ್ಲದಂತೆ ತಮ್ಮ ಮನದ ಮೌನದ ಗೂಡಿನಲ್ಲಿಯೇ ಆಚರಿಸುತ್ತಾರೆ.

- ಅನಿಲ್ ಎಚ್.ಟಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.