ಬೈಟುಕಾಫಿ

ಸಾಸಿವೆ ಇಲ್ಲದ ಮನೆ ಕಂಡಿರಾ?

Published On :

ಸಾಸಿವೆ ಎಂದಾಕ್ಷಣ ನೆನಪಾಗುವುದು ಬುದ್ಧನ ಕಥೆ. ಸಾಸಿವೆ ಇಲ್ಲದ ಮನೆ ಇಲ್ಲವೇ ಇಲ್ಲ. ಹಾಗೇ ಸಾಸಿವೆಯನ್ನು ಬಳಸದೆ ಮಾಡುವ ಅಡುಗೆಯೂ ಇಲ್ಲ. ಅಡುಗೆಗೆ ಸಾಸಿವೆ ಬಳಸಿಯೇ ಇಲ್ಲವೆಂದು ನೀವು ಎಷ್ಟೇ ಹೇಳಿದರೂ, ಕೊನೆಯಲ್ಲಿ ಕೊಡುವ ಒಗ್ಗರಣೆಯಲ್ಲಾದರೂ ಸಾಸಿವೆ ಉಪಯೋಗಿಸಿಯೇ ಇರುತ್ತೀರಿ. ಭಾರತದಾದ್ಯಂತ ಎಲ್ಲ ಭಾಗಗಳಲ್ಲೂ, ಎಲ್ಲ ರೀತಿಯ ಅಡುಗೆಗಳಲ್ಲೂ ಸಾಸಿವೆ ಉಪಯೋಗ ಇದ್ದೇ ಇದೆ.
ಸಾಸಿವೆ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿ. ದಕ್ಷಿಣ ಭಾರತೀಯರು ಸಾಸಿವೆಯನ್ನು ಹೆಚ್ಚಾಗಿ ಬಳಸುವುದೇ ಉಪ್ಪಿನಕಾಯಿಯಲ್ಲಿ. ಇನ್ನು ಉಳಿದಂತೆ ಎಲ್ಲಾ ತರಹದ ಖಾರದ ಅಡುಗೆಯಲ್ಲಿ, ಒಗ್ಗರಣೆಗೆ ಬಳಸುತ್ತಾರೆ.
ಉತ್ತರ ಭಾರತೀಯರು ಸಾಸಿವೆ ಕಾಳನ್ನಷ್ಟೇ ಅಲ್ಲ, ಸಾಸಿವೆ ಎಣ್ಣೆ, ಸಾಸಿವೆ ಸೊಪ್ಪನ್ನೂ ಬಳಸಿ ಅಡುಗೆ ಮಾಡುತ್ತಾರೆ. ಉತ್ತರ ಭಾರತದಲ್ಲಿ ಅಡುಗೆಗೆ ಬಳಸುವುದು ಸಾಸಿವೆ ಎಣ್ಣೆಯನ್ನು. ಉತ್ತರ ಭಾರತದ ಅಡುಗೆಯಲ್ಲಿ 'ಸರ್ಸೊನ್ ಕಾ ಸಾಗ್‌' ತುಂಬಾ ಪ್ರಸಿದ್ಧವಾದುದು. ಉತ್ತರ ಭಾರತೀಯ ತಾಲಿಯಲ್ಲಿ ಈ ಸಾಗುವನ್ನು ಕಾಣಬಹುದು. ಸಾಸಿವೆ ಸೊಪ್ಪನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ.
ಸಾಸಿವೆಯಲ್ಲಿ ಬಿಳಿ ಸಾಸಿವೆ, ಕಪ್ಪು ಸಾಸಿವೆ ಎಂಬ ಎರಡು ವಿಧಗಳಷ್ಟೇ ಅಲ್ಲ, 150ಕ್ಕೂ ಹೆಚ್ಚು ಜಾತಿಗಳಿವೆ. ಸಾಸಿವೆ ಕಾಳಿನ ಗಾತ್ರದಲ್ಲೂ ವ್ಯತ್ಯಾಸವಿದೆ. ಚಿಕ್ಕ ಸಾಸಿವೆ ಮತ್ತು ದೊಡ್ಡ ಸಾಸಿವೆ. ಉತ್ತರ ಭಾರತದಲ್ಲಿ ಇವುಗಳನ್ನು ಎಣ್ಣೆಬೀಜವಾಗಿ ಹಾಗೂ ದನಗಳ ಮೇವಿಗಾಗಿ ಬೆಳೆಯಲಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಸಾಸಿವೆ ಕಾಳುಗಳು ಎಣ್ಣೆ ತೆಗೆದಂಥವುಗಳು. ಭಾರತದಲ್ಲಿ ಹಳದಿ ಸಾಸಿವೆ, ಕಂದು ಸಾಸಿವೆಯನ್ನು ಪಂಜಾಬಿನ ಕೆಲವು ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ಈ ಎರಡು ಉಪಜಾತಿಯ ಬೀಜಗಳನ್ನು 'ಟೇಬಲ್ ಮಸ್ಟರ್ಡ್‌' ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ಸಾಸಿವೆ ಕ್ರುಸಿಫೆರಿ ವಂಶಕ್ಕೆ ಸೇರಿದ್ದು. ಭಾರತ ಆಮದು ಮಾಡಿಕೊಳ್ಳುವ ಸಾಂಬಾರ ಜಿನಸುಗಳಲ್ಲಿ ಸಾಸಿವೆಯೂ ಸೇರಿದೆ. ನಮ್ಮ ದೇಶದಲ್ಲಿನ ಬೇಡಿಕೆಗೆ ಸಾಕಾಗುವಷ್ಟು ಸಾಸಿವೆಯನ್ನು ನಾವು ಬೆಳೆಯುತ್ತಿಲ್ಲ. ಆದ್ದರಿಂದ ಹೆಚ್ಚಿನ ಸಾಸಿವೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ದಕ್ಷಿಣ ಯುರೋಪ್ ಮತ್ತು ಪಶ್ಚಿಮ ಏಷ್ಯಾ ಇದರ ಮೂಲಸ್ಥಾನ. ಭಾರತದಲ್ಲಿ ಇದನ್ನು ಉತ್ತರ ಭಾರತದ ಸಮಶೀತೋಷ್ಣ ಭಾಗದಲ್ಲಿ ಚಳಿಗಾಲದ ತೋಟದ ಬೆಳೆಯಾಗಿ ಮಾತ್ರ ಬೆಳೆಯುತ್ತಾರೆ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.