ಬೈಟುಕಾಫಿ

ಇಷ್ಟು ಅಗ್ಗವೇ ಸಂಬಂಧ ? (ರನ್ ವೇ)

Published On :

ಸದಭಿಪ್ರಾಯವೆಂಬುದನ್ನು ಕಾಪಿಟ್ಟುಕೊಳ್ಳುವುದು ಎಂದರೆ ಅದೊಂದು ನಿರಂತರ ಸರ್ಕಸ್. ಜೀವನದ ಅತ್ಯಂತ ಸೂಕ್ಷ್ಮ ಸಂಗತಿಗಳಲ್ಲಿ ಅದು ಸಹ ಒಂದು. ನಾವು ಸರಿಯಾಗಿಯೇ ಇರುತ್ತೇವೆ. ಗುಣ, ಚಾರಿತ್ರ್ಯ, ವರ್ತನೆ ಎಲ್ಲವೂ ಸರಿಯೇ ಇರುತ್ತದೆ. ಆದರೆ ಅದೇನಾಗುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ಇದ್ದಕ್ಕಿದ್ದಂತೆ ಯಾವುದೋ ಒಂದು ಸಣ್ಣ ಸಂಗತಿ, ಮಾತಿನಲ್ಲಿನ ಒಂದೇ ಒಂದು ಪದ ಬಳಕೆ, ತಮಾಷೆಗಾಗಿ ತೋರಿದ ವರ್ತನೆ... ಹೀಗೆ ಇಷ್ಟೇ ಸಾಕಾಗುತ್ತದೆ ನಮ್ಮ ಬಗೆಗೆ ಇದ್ದ ಭಾವನೆ, ಅಭಿಪ್ರಾಯಗಳು ಬದಲಾಗಲು. ಒಮ್ಮೆ 'ಇವನು ಹೀಗೆ ಅಂತ ಗೊತ್ತಿರಲಿಲ್ಲ' ಎನ್ನುವ ಭಾವನೆ ಮೂಡಿಬಿಟ್ಟರೆ ಸಾಕು. ಮತ್ತೆ ಏನು ಮಾಡಿದರೂ ಅದನ್ನು ಸರಿಪಡಿಸಲಾಗುವುದಿಲ್ಲ.
ಬಹಳ ವಿಚಿತ್ರ ಸಂಗತಿಯೆಂದರೆ ಹಾಗೊಮ್ಮೆ ಪ್ರಮಾದವನ್ನೇ ಮಾಡಿದ್ದೇವೆಂದಾದರೂ ಅದಕ್ಕೆ ಕಾರಣವೇನು, ಎಂದೂ ಮಾಡದವರು ಇಂದೇಕೆ ಹೀಗೆ ಮಾಡಿದರು, ಸನ್ನಿವೇಶದ ಒತ್ತಡ ಹೇಗಿದ್ದೀತು, ಅಥವಾ ಯಾವುದೋ ಒತ್ತಡಕ್ಕೆ ಸಿಲುಕಿ ಹಾಗಾಗಿರಬಹುದೇ ಇದ್ಯಾವುದನ್ನೂ ಜನ ಯೋಚಿಸುವುದೇ ಇಲ್ಲ. ಅಥವಾ ತಪ್ಪು ಎಲ್ಲರೂ ಮಾಡುತ್ತಾರೆ. ಅದನ್ನೇ ನೇರವಾಗಿ ಚರ್ಚಿಸಿ ಸರಿಪಡಿಸಿಕೊಳ್ಳೋಣ ಎಂಬ ಮನಸ್ಸನ್ನೂ ಮಾಡುವುದಿಲ್ಲ.
ಏಕಾಏಕಿ ತೀರ್ಮಾನಕ್ಕೆ ಬರುವುದಿದೆಯಲ್ಲ, ಅದೇ ಇಡೀ ಸಂಬಂಧಕ್ಕೇ ಧಕ್ಕೆ ತಂದು ಬಿಡುತ್ತದೆ. ಬಹುತೇಕ ಸಂದರ್ಭದಲ್ಲಿ ಸಮನ್ವಯದ ಕೊರತೆಯೇ ತಪ್ಪು ಅಭಿಪ್ರಾಯಕ್ಕೆ ಕಾರಣವಾಗಿರುತ್ತದೆ. ಒಮ್ಮೆ ಪ್ರತಿಷ್ಠೆ ಬಿಟ್ಟು ಅಥವಾ ಸಂಬಂಧ ಹಾಳುಮಾಡಿಕೊಳ್ಳಬಾರದೆಂಬ ನೈಜ ಕಳಕಳಿಯೊಂದಿಗೆ ನಾವೇ ಮುಂದಾಗಿ ವಿಷಯವನ್ನು ಚರ್ಚಿಸಿದರೆ ಮುಗಿಯಿತು. ಆದರೆ ಬಹುತೇಕರು ಹಾಗೆ ಮಾಡುವುದೇ ಇಲ್ಲ. ಇನ್ನೂ ದುರಂತವೆಂದರೆ ಬೇರೆ ಯಾರೋ ಅಥವಾ ಇಬ್ಬರಿಗೂ ಗೊತ್ತಿರುವ ನಮ್ಮವರೆನಿಸಿಕೊಂಡವರೇ ತಪ್ಪು ತಿಳಿವಳಿಕೆಯನ್ನು ಮೂಡಿಸಿಬಿಡುತ್ತಾರೆ. ಅಂಥವನ್ನು ಉಪೇಕ್ಷಿಸಲೇಬೇಕು. ಅದಿಲ್ಲದಿದ್ದರೆ ಕೊನೇ ಪಕ್ಷ ಅದನ್ನು ಒಪ್ಪಿಕೊಳ್ಳುವ ಮುನ್ನ ಸತ್ಯಾಸತ್ಯತೆಯನ್ನು ಪರಿಶೀಲಿಸಲೂ ಹೋಗುವುದಿಲ್ಲ. ಒಮ್ಮೆ ಹೀಗೆ ಸದಭಿಪ್ರಾಯ ಕಳೆದು ಹೋದರೆ ನಂತರ ಮಾಡಿದ್ದೆಲ್ಲವೂ ತಪ್ಪಾಗಿಯೇ ಕಾಣಲಾರಂಭಿಸುತ್ತದೆ. ಮನುಷ್ಯ ಸಂಬಂಧಗಳೆಂದರೆ ಅದು ಇಷ್ಟು ಹಗುರವೇ?

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.