ಬೈಟುಕಾಫಿ

ನೆಲೆಪ್ರವಾಹ

ಅಲ್ಲಿಗೆ ಬರುವವರಲ್ಲಿ ಚಿಂದಿ ಆಯುವ, ಬೀದಿ ಮಕ್ಕಳೇ ಹೆಚ್ಚು. ಅಂಥವರಿಗೆ ಬದುಕು ಕಟ್ಟಿಕೊಡುವುದು, ಸಂಸ್ಕಾರವಂತರನ್ನಾಗಿ ರೂಪಿಸಿ ದೇಶದ ಸತ್ಪ್ರಜೆಗಳನ್ನಾಗಿ ಮಾಡುವ ಗುರಿ. ಇದೇ 17ರಂದು ಮೈಸೂರಿನಲ್ಲಿ 'ನೆಲೆ'ಗೆ ಸ್ವಂತ ಮನೆಯ ಗೃಹಪ್ರವೇಶ ಸಂಭ್ರಮ.

ನೆಲೆಪ್ರವಾಹ
Published On :

ಘಟನೆ ನಡೆದದ್ದು 2010ರಲ್ಲಿ.
ಬೆಂಗಳೂರಿನ ಮೆಜೆಸ್ಟಿಕ್ ಏರಿಯಾ ಎಲ್ಲರಿಗೂ ಗೊತ್ತಿರುವಂಥದ್ದೇ. ಅದರ ಮಡಿಲಲ್ಲೇ ಕೊಳೆಗೇರಿಗಳಿರುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಆ ಸ್ಲಮ್ಮಿನ ಮೋರಿ ಪಕ್ಕ ಮಗುವೊಂದು ಕುಳಿತಿತ್ತು. ಅದರ ಕಾಲನ್ನು ಹಗ್ಗದಿಂದ ಕಟ್ಟಿಹಾಕಲಾಗಿತ್ತು ಮತ್ತು ಆ ಹಗ್ಗದ ಇನ್ನೊಂದು ತುದಿಯನ್ನು ಮೋರಿಯ ಕಂಬಿಗೆ ಕಟ್ಟಲಾಗಿತ್ತು! ಈ ಬಗ್ಗೆ ಎದುರಿನ ಅಂಗಡಿಯಲ್ಲಿ ವಿಚಾರಿಸಿದಾಗ, 'ಮಗುವಿನ ಅಜ್ಜಿ ನಿತ್ಯ ಇದೇ ಜಾಗದಲ್ಲಿ ಮಗುವನ್ನು ಕಟ್ಟಿಹಾಕಿ ಕೂಲಿಗೆ ಹೋಗುತ್ತಾಳೆ. ಸಾಯಂಕಾಲ ಮನೆಗೆ ಹೋಗುವಾಗ ಮಗುವನ್ನು ಕರೆದೊಯ್ಯುತ್ತಾಳೆ. ನಿತ್ಯ ಹೀಗೆಯೇ' ಎಂಬ ಉತ್ತರ ಕೇಳಿ ದಿಗ್ಭ್ರಮೆ.
'ಆ ಮಗುವಿಗಾಗಿ, ಅಂಥ ಮಕ್ಕಳಿಗಾಗಿ ಏನಾದರೂ ಮಾಡಲೇಬೇಕು ಎಂದು ಅಲ್ಲಿಯೇ ನಿಶ್ಚಯಿಸಿದೆವು. 'ನೆಲೆ'ಯ ಕಲ್ಪನೆ ಮೂಡಿದ್ದು ಹೀಗೆ... ಒಂದು ಪುಟಾಣಿಯಿಂದ..' ಎನ್ನುತ್ತ ಹಳೆಯದನ್ನು ನೆನಪಿಸಿಕೊಂಡರು  ಶ್ರೀಧರ ಸಾಗರ್. ಅವರೇ 'ನೆಲೆ'ಯ ರೂವಾರಿ, ಅದರ ಹಿಂದಿನ ಚೇತನ ಮತ್ತು ಹಿಂದು ಸೇವಾ ಪ್ರತಿಷ್ಠಾನದ ನಿರ್ದೇಶಕ.

ಹಿಂದು ಸೇವಾ ಪ್ರತಿಷ್ಠಾನದ ರಾಜ್ಯದ ಹಳ್ಳಿಹಳ್ಳಿಗಳಲ್ಲೂ ಚಿರಪರಿಚಿತ. 'ಸರ್ವೇ ಭವಂತು ಸುಖಿನಃ' ಎಂಬ ಮಹಾನ್ ಸಂದೇಶವನ್ನು ಸಾಮಾಜಿಕ ಪರಿವರ್ತನೆಗೆ ಸಾಧನವನ್ನಾಗಿಸಿಕೊಂಡು ಸಮಾಜದ ಏಳಿಗೆಗಾಗಿ 32 ವರ್ಷಗಳಿಂದ ನಿರಂತರ ಶ್ರಮಿಸುತ್ತಾ ಬಂದಿದೆ. ಬಡ ಮಕ್ಕಳ ನೆಮ್ಮದಿಯ ನಾಳೆಗಳಿಗಾಗಿ ಪ್ರತಿಷ್ಠಾನವೇ 'ನೆಲೆ' ಕಲ್ಪಿಸಿದೆ.
ಶ್ರೀಧರ ಸಾಗರ್ ಹೇಳುತ್ತಾರೆ, 'ಬಾಲ್ಯ ಅತ್ಯಲ್ಪಾವಧಿಯದ್ದು. ಮಕ್ಕಳ ಮನಸ್ಸು ಹಸಿಮಣ್ಣಿನಂತೆ. ನಾವು ಯಾವ ಆಕಾರ ಕೊಡುತ್ತೇವೋ ಅದೇ ಆಕಾರವನ್ನು ಅವು ಪಡೆದುಕೊಳ್ಳುತ್ತವೆ. ಹೊಟ್ಟೆಗೆ ಹಿಟ್ಟಿಲ್ಲದ, ಬಟ್ಟೆಯಿಲ್ಲದ, ಸೂರಿಲ್ಲದ, ಆಶ್ರಯವಂಚಿತ, ಸಮಾಜಕ್ಕೆ ಬೇಡವಾದ, ಪ್ರೀತಿ ವಂಚಿತ, ಜನರ ಆದರ, ಪೋಷಣೆ ಇಲ್ಲದೆ ಸಮಾಜದಿಂದ ಉಪೇಕ್ಷೆಗೊಳಗಾದ ಮಕ್ಕಳು 'ನೆಲೆ'ಯಲ್ಲಿದ್ದಾರೆ. ಸಾಮಾನ್ಯವಾಗಿ ಇಲ್ಲಿಗೆ ಬರುವವರಲ್ಲಿ ಚಿಂದಿ ಆಯುವ, ಬೀದಿ ಮಕ್ಕಳೇ ಹೆಚ್ಚು. ಚಿಕ್ಕವಯಸ್ಸಿಗೇ ಬದುಕು ಅವರಿಗೆ ದೊಡ್ಡ ಪಾಠ ಕಲಿಸಿದೆ. ಕಷ್ಟ, ಸೋಲು, ಅವಮಾನ ಎಲ್ಲವನ್ನೂ ಕಂಡುಬಂದವರು. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುತ್ತಾ ಬಂದ ಅವರ ಅನುಭವಗಳ ಹರವು ಮಾತ್ರ ಬಹಳ ದೊಡ್ಡದು'.
'ಇಂಥ ಮಕ್ಕಳಿಗೆ ಬದುಕು ಕಟ್ಟಿಕೊಡುವುದೇ ನೆಲೆಯ ಉದ್ದೇಶ. ಇವರೆಲ್ಲರನ್ನೂ ಸಂಸ್ಕಾರವಂತರನ್ನಾಗಿ, ದೇಶದ ಸತ್ಪ್ರಜೆಗಳನ್ನಾಗಿ ಮಾಡುವ ಗುರಿ ಹೊಂದಿದೆ 'ನೆಲೆ'. ಮಕ್ಕಳು ದೇಶದ ಆಸ್ತಿ. ಅವರನ್ನು ಪ್ರೀತಿಯಿಂದ ನೋಡಿ, ಅವರನ್ನು ಉತ್ತಮ ಪ್ರಜೆಗಳಾಗಿ ರೂಪಿಸುವ ಹೊಣೆ ಸಮಾಜದ ಎಲ್ಲರದು. ಮಕ್ಕಳನ್ನು ಕ್ರೂರವಾಗಿ ನಡೆಸಿಕೊಳ್ಳದೆ, 'ಮೊದಲು ಮಾನವೀಯತೆ, ನಂತರ ಶಿಸ್ತು, ಕಲಿಕೆ' ಎಂಬ ಮಂತ್ರವನ್ನು ನೆನಪಿನಲ್ಲಿಡಬೇಕು.'

ಈ ಮಗುವಿನ ಕುಟುಂಬ ಇದ್ದದ್ದು ಕೊಳೆಗೇರಿಯಲ್ಲಿ. ಸಮಸ್ಯೆ ಇರುವುದು ಬಡತನದ್ದಲ್ಲ. ಅವನ ತಂದೆ- ತಾಯಿ ಇಬ್ಬರೂ ಕುಡುಕರು. ಸದಾ ಜಗಳ, ಬೈಗುಳ, ಬಡಿದಾಟ. ಹೊಡೆತ ಬೀಳುವುದು ಮಾತ್ರ ಆ ಪುಟ್ಟ ಮಗುವಿನ ಮೇಲೆ. ಪೋಷಕರ ಅಸಡ್ಡೆಗೊಳಗಾದ, ಪ್ರೀತಿ, ಕಾಳಜಿ ಇರದಿದ್ದ ಮಕ್ಕಳು ಇನ್ನೇನಾಗಲು ಸಾಧ್ಯ? ಮಕ್ಕಳ ಹಿನ್ನೆಲೆ ಹೀಗಿರುವಾಗ ಸಹಜವಾಗಿಯೇ ಆ ಮಕ್ಕಳು ದುಶ್ಚಟಗಳನ್ನು ರೂಢಿಸಿಕೊಂಡಿರುತ್ತಾರೆ. ಅವರನ್ನು ಹಾಗೆಯೇ ಬಿಟ್ಟರೆ ಮುಂದೆ ಸಮಾಜಘಾತುಕರಾಗುತ್ತಾರೆ. ಇದೆಲ್ಲವನ್ನೂ ಯೋಚಿಸಿ, ಅಂಥ ಮಕ್ಕಳಿಗಾಗಿ ಪ್ರತಿಷ್ಠಾನ 2000ರಲ್ಲಿ 'ನೆಲೆ'ಯ ಪ್ರಥಮ ಶಾಖೆಯನ್ನು 15 ಮಕ್ಕಳಿಂದ ಪ್ರಾರಂಭಿಸಿತು. ಇಂದು ನೆಲೆ 10 ಶಾಖೆ, 320 ಮಕ್ಕಳನ್ನೊಳಗೊಂಡಿದೆ.
ಸರಿಯಾದ ನೆಲೆ ಸಿಕ್ಕಾಗ ಮಕ್ಕಳು ಹೇಗೆ ಬೆಳೆಯಬಲ್ಲರು, ಹೇಗೆ ಸಂಸ್ಕಾರವಂತರಾಗಬಲ್ಲರು ಎಂಬುದಕ್ಕೆ ಹಿಂದು ಸೇವಾ ಪ್ರತಿಷ್ಠಾನದ 'ನೆಲೆ' ಮಕ್ಕಳೇ ಉದಾಹರಣೆ. ನೆಲೆಯ ಪ್ರತಿ ಮಗುವೂ ಪ್ರತಿಭಾವಂತ ಮಗುವೇ. ಪ್ರತಿಯೊಬ್ಬರಲ್ಲೂ ಒಂದೊಂದು ಕಲೆಯಲ್ಲಿ ಪ್ರತಿಭೆ ಇದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಿ, ಆ ನಿಟ್ಟಿನಲ್ಲಿ ತರಬೇತಿ ನೀಡಿದರೆ ಎಲ್ಲ ಮಗುವೂ ಸಮಾಜಕ್ಕೆ ದೊಡ್ಡ ಆಸ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ.
10ನೇ ತರಗತಿಯವರೆಗೆ ಹೇಗೋ ವ್ಯಾಸಂಗ ಮುಂದುವರಿಸಿದ ಹುಡುಗನಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲಿಗೆ ಕಬ್ಬಿಣದ ಕಡಲೆ ಎನಿಸಿತು. ಫಲಿತಾಂಶ ಬಂದಾಗ ಹುಡುಗ ಫೇಲ್ ಆಗಿದ್ದ. ಆದರೆ ಅವನಲ್ಲಿರುವ ವಿಶೇಷ ಪ್ರತಿಭೆಯಿಂದ ಇಂದು ಆತ ಪ್ರತಿಷ್ಠಾನದ ನಿಪುಣ ಕಾರು ಚಾಲಕನಾಗಿದ್ದಾನೆ. ಬದುಕಿನ ಪರೀಕ್ಷೆಯಲ್ಲಿ ಆತ ಪ್ರಥಮ ದರ್ಜೆಯಲ್ಲಿ ಪಾಸಾಗಿಬಿಟ್ಟಿದ್ದ.
ನೆಲೆಯಲ್ಲಿ ಓದಿ ಇಂದು ಸ್ವಾವಲಂಬಿಗಳಾಗಿ ಜೀವನ ನಡೆಸುತ್ತಿರುವ ಉದಯ, ಸುಧೀರ, ಚಿತ್ರಕಲೆಯಲ್ಲಿ ನಿಪುಣನಾದ ನಾಗೇಶ, ಇಲ್ಲಿಯೇ ಓದಿ ಈಗ ಐಎಎಸ್ ಪರೀಕ್ಷೆ ಬರೆಯುತ್ತಿರುವ ಸಿದ್ಧರಾಜು, ಎಲ್ಲ ವಿಷಯಗಳಲ್ಲೂ ಶೇ.100 ಅಂಕ ಗಳಿಸುವ ಸೌಮ್ಯಾ, ಶ್ವೇತಾ, ನಮಿತಾ, ಸುರೇಶ, ಶಿವಶಂಕರ, ವೀಣಾ; ನೃತ್ಯ, ಸಂಗೀತ, ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದ ನೂರಾರು ಸಂಸ್ಕಾರವಂತ ಮಕ್ಕಳು 'ನೆಲೆ'ಯಲ್ಲಿದ್ದಾರೆ.

ಶ್ಲಾಘನೀಯ ಸೇವೆ
ಮನೆಯಲ್ಲಿರುವ ಇಬ್ಬರು ಮಕ್ಕಳನ್ನು ನಿಭಾಯಿಸುವುದೇ ಕಷ್ಟವಾಗಿರುವಾಗ ಪ್ರತಿ ನೆಲೆ ಕೇಂದ್ರದಲ್ಲಿ 25ರಿಂದ 30, ಕೆಲವು ಕೇಂದ್ರದಲ್ಲಿ 75 ಮಕ್ಕಳನ್ನು ಸಂಭಾಳಿಸುವುದು ಸಣ್ಣ ಮಾತಲ್ಲ. ಅವರ ಮನಸ್ಸನ್ನು ಹದಗೊಳಿಸಿ, ತಿಳಿಗೊಳಿಸಿ, ಶಿಸ್ತು, ಸಂಯಮ, ಶುಚಿತ್ವವನ್ನು ಕಲಿಸುವುದಕ್ಕೆ ಸೇವಾವ್ರತಿಗಳಿಗೆ ಸಹನೆ ತುಂಬಾನೇ ಇರಬೇಕು.
ಮೂರು ಹೊತ್ತೂ ಆಟವಾಡಬೇಕೆಂಬ ಮನಸ್ಸು. ನಿರ್ಬಂಧ ಸಹಿಸಲಾಗದು. ಆದರೆ ಕತೆ ಕೇಳುವ ಮನಸ್ಸಿದೆ, ಹೇಳುವ ಮನಸ್ಸಿದೆ. ಯಾವುದನ್ನಾದರೂ ಕೂತೂಹಲದಿಂದ ವೀಕ್ಷಿಸುವ ಮನಸ್ಸು. ಕಲ್ಪನೆಯಲ್ಲೇ ಹೂವರಳಿಸುವ ಮನಸ್ಸು. ಇದ್ಯಾವುದಕ್ಕೂ ಆಸ್ಪದವಿಲ್ಲದ, ಕಟ್ಟುಪಾಡುಗಳಿಗೆ ಒಳಗಾಗುವುದೆಂದರೆ ಯಾವ ಮಗುವಿಗೆ ತಾನೇ ಇಷ್ಟವಾದೀತು?
ನೆಲೆಗೆ ಸೇರಿದ 2-3 ತಿಂಗಳು, ಬೆಳಗ್ಗೆ ಎದ್ದು ಹಲ್ಲುಜ್ಜುವುದರಿಂದ ಪ್ರಾರಂಭಿಸಿ ರಾತ್ರಿಯವರೆಗಿನ ದಿನಚರಿಯ ಪ್ರತಿಯೊಂದನ್ನೂ ಈ ಮಕ್ಕಳಿಗೆ ಕಲಿಸಬೇಕು. ಜತೆಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ, ಮನಸ್ಸು ಹಿಂದಿನ ಬದುಕಿನತ್ತ ಹೊರಳದಂತೆ ನೋಡಿಕೊಳ್ಳುವುದು ಅದೆಷ್ಟು ದೊಡ್ಡ ಜವಾಬ್ದಾರಿ. ಅಂತಹ ಮಕ್ಕಳಿಗೆ ತಂದೆಯಾಗಿ, ತಾಯಿಯಾಗಿ ನೋಡಿಕೊಳ್ಳಬೇಕಾಗುತ್ತದೆ. ಈ ವಿಷಯದಲ್ಲಿ ಸೇವೆಯನ್ನು ವ್ರತವಾಗಿ ಸ್ವೀಕರಿಸಿರುವ ಹಿಂದು ಸೇವಾ ಪ್ರತಿಷ್ಠಾನದ ಸೇವಾವ್ರತಿಗಳು ಪ್ರಾತಃಸ್ಮರಣೀಯರು.  

ನೆಲೆ ಕೇಂದ್ರಗಳು
1. ನೆಲೆ ನರೇಂದ್ರ 2. ನೆಲೆ ನಿವೇದಿತಾ 3. ನೆಲೆ ನಮ್ಮಮನೆ 4. ನೆಲೆ ಆಶಾಕಿರಣ 5. ನೆಲೆ ಪ್ರೇಮಾಂಜಲಿ 6. ನೆಲೆ ಚಂದನ 7. ನೆಲೆ ಅಜಿತ 8. ನೆಲೆ ದ್ವಾರಕಾ 9. ನೆಲೆ ಮಾಧವ 10. ನೆಲೆ ಆಶ್ರಯಧಾಮ. ಬೆಂಗಳೂರು, ಶಿವಮೊಗ್ಗ, ಮೈಸೂರು, ತುಮಕೂರು, ಬಾಗಲಕೋಟೆ ಸೇರಿದಂತೆ ಒಟ್ಟೂ ಹತ್ತು ಕೇಂದ್ರಗಳು ನಿರಂತರ ಚಟುವಟಿಕೆಯ ತಾಣಗಳಾಗಿವೆ. ಪ್ರಮುಖವಾಗಿ ನೆಲೆ ಯೋಜನೆ ಪ್ರಾರಂಭವಾಗಿರುವುದೇ ಕೊಳೆಗೇರಿ ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು.

(080) 22118318, ಮೊ: 9886250908. ಮಿಂಚಂಚೆ: nelehsp@gmail.com

- ಶಶಿರೇಖಾ ಹೆಗಡೆ
rekhatumbe@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.