ಬೈಟುಕಾಫಿ

ಪ್ರೇಮ ಪಾಕ

ಪ್ರೀತಿಗೆ ಕಣ್ಣಿಲ್ಲ ಅಂತಾರೆ, ಹಾಗಾಗೋದು ಬೇಡ. ವಿವೇಕದ ಕಣ್ಣು ಪ್ರೀತಿಗೆ ಕಾವಲಾಗಲಿ. ಸಹನೆ, ಸಂಯಮ ಪ್ರೀತಿಯನ್ನು ಪರಿಪಕ್ವ ಫಲವಾಗಿಸಲಿ. ಪ್ರೀತಿಗೇಕೆ ಪ್ರದರ್ಶನದ ಹಂಗು?

ಪ್ರೇಮ ಪಾಕ
Published On :

ಪ್ರೀತಿಗೆ ಕಣ್ಣಿಲ್ಲ ಅಂತಾರೆ, ಹಾಗಾಗೋದು ಬೇಡ. ವಿವೇಕದ ಕಣ್ಣು ಪ್ರೀತಿಗೆ ಕಾವಲಾಗಲಿ. ಸಹನೆ, ಸಂಯಮ ಪ್ರೀತಿಯನ್ನು ಪರಿಪಕ್ವ ಫಲವಾಗಿಸಲಿ. ಪ್ರೀತಿಗೇಕೆ ಪ್ರದರ್ಶನದ ಹಂಗು? ಅದು ಗುಪ್ತಗಾಮಿನಿಯಾಗಿ  ನಿರಂತರವಾಗಿ ಹರಿಯುತ್ತಿರಲಿ. ಆ ಪ್ರವಾಹಕ್ಕೆ ನಮ್ಮೆಲ್ಲಾ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಸೆಳೆತ ಇರಬೇಕು ಅಷ್ಟೇ!

ಎಲ್ಲಿದ್ದೀಯಾ ಗೊತ್ತಿಲ್ಲ, ಹೇಗಿದ್ದೀಯಾ ತಿಳಿದಿಲ್ಲ. ಆದರೂ ನನ್ನ ಮನಮಂದಿರದಲ್ಲಿ ಅಸ್ಪಷ್ಟ ಮುಖ ಹೊತ್ತು ಗಟ್ಟಿಯಾಗಿ ನಿಂತವನು ನೀನು. ಅಂದರೆ ನನ್ನ ಕಲ್ಪನೆಯ ಪ್ರೇಮಿ, ಅಲ್ಲಲ್ಲ ಜೀವನ ಸಂಗಾತಿ. ಅಕಸ್ಮಾತ್ ಸಿಕ್ಕರೆ, ನಾನು ನಿನ್ನವಳು; ಸಿಗದಿದ್ದರೂ ನೀನು ನನ್ನವನೇ... ಕನಸುಗಳಲ್ಲಿ!

ನನಗಾಗಿ ನೀನು ಏನೇನೂ ಮಾಡುವುದು ಬೇಡ, ಬದಲಾಗೋದು ಬೇಡ. ಹಾಗೇ ಅದನ್ನು ನನ್ನಿಂದಲೂ ನಿರೀಕ್ಷಿಸಬೇಡ. ನೀನು ನೀನಾಗಿ, ನಾನು ನಾನಾಗಿ ಯಾವುದೇ ಕಪಟತೆಯ ಸೋಗಿಲ್ಲದೆ, ಮುಖವಾಡ ತೊಡದೆ ಮನ ತೆರೆಯೋಣ, ಸ್ವೀಕರಿಸೋಣ. ಪ್ರೀತಿ- ಪ್ರೇಮ ಏಕಾಏಕಿ ಒಂದೇ ನೋಟದಲ್ಲಿ, ಒಂದೇ ಭೇಟಿಯಲ್ಲಿ ಆಗಬೇಕೆಂದಿಲ್ಲ. ಸ್ನೇಹ, ಗೌರವ, ನಿಷ್ಠೆ, ವಿಶ್ವಾಸದ ಭದ್ರ ಬುನಾದಿಯ ಮೇಲೆ ಒಂದೊಂದೇ ಪ್ರೀತಿಯ ಸೌಧದ ಇಟ್ಟಿಗೆ ಇಟ್ಟರಾಗದೇ?
ಪ್ರೀತಿಗೆ ಕಣ್ಣಿಲ್ಲ ಅಂತಾರೆ, ಹಾಗಾಗೋದು ಬೇಡ. ವಿವೇಕದ ಕಣ್ಣು ಪ್ರೀತಿಗೆ ಕಾವಲಾಗಲಿ. ಸಹನೆ- ಸಂಯಮ ಪ್ರೀತಿಯನ್ನು ಪರಿಪಕ್ವ ಫಲವಾಗಿಸಲಿ. ಅಂತಸ್ತು ಹೆಚ್ಚಿಸುವ ವಜ್ರದ ಪದಕ, ಹರಳಿನ ಉಂಗುರ, ದುಬಾರಿ ಸೀರೆಗಿಂತ ಒಂದು ಗುಲಾಬಿ, ಪುಟ್ಟ ಚಾಕೋಲೇಟ್, ಮಸಾಲೆ ಮಂಡಕ್ಕಿ, ಮಧುರ ಪ್ರೇಮಗೀತೆ... ಸಾಕೇ ಸಾಕು ನಮ್ಮ ಪ್ರೀತಿ ನಳನಳಿಸಲು. ಮೈ ತುಂಬಾ ಚಿನ್ನ ತೊಡದಿದ್ದರೂ ಚಿಂತಿಲ್ಲ, ನೀನು ಬಾಯ್ ತುಂಬಾ 'ಚಿನ್ನಾ' ಎಂದು ಕರೆದರೆ ಸಾಕು ಬದುಕಿನ ಸಾರ್ಥಕತೆಗೆ. ನಿನ್ನ ಒಲವಿನ ಕಣ್ಣೋಟ, ಹಿತವಾದ ಸ್ಪರ್ಶ ಸಾಕು ಬದುಕಿನ ಸಹಚರ್ಯಕ್ಕೆ.

ನನನಾಗಿ ನೀನು ಹುಚ್ಚನಂತೆ ಪರಿತಪಿಸುವುದು, ಒದ್ದಾಡುವುದು, ಎಲ್ಲರೆದುರು ಪ್ರದರ್ಶನ ಮಾಡುವುದು ಯಾವುದೂ ನಂಗೆ ಬಿಲ್‌ಕುಲ್ ಇಷ್ಟವಿಲ್ಲ. ಪ್ರೀತಿಗೇಕೆ ಪ್ರದರ್ಶನದ ಹಂಗು? ಅದು ಗುಪ್ತಗಾಮಿನಿಯಾಗಿ  ನಿರಂತರವಾಗಿ ಹರಿಯುತ್ತಿರಲಿ. ಆ ಪ್ರವಾಹಕ್ಕೆ ನಮ್ಮೆಲ್ಲಾ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಸೆಳೆತ ಇರಬೇಕು ಅಷ್ಟೇ!

ಸಂಬಂಧ ಅಂದ ಮೇಲೆ ವಾದ, ವಿವಾದ, ಜಗಳ, ಮುನಿಸು ಇದ್ದದ್ದೇ. ಎಲ್ಲವೂ ಇರಲಿ, ಆದರೆ ಇತಿ-ಮಿತಿಯಲ್ಲಿ. ನಾ ಮೇಲು ನೀ ಮೇಲು ಎಂದು ಓಡುವ ಬದಲು ಕೈ ಹಿಡಿದು ಜತೆಯಾಗಿ ಬಾಳ ದಾರಿಯಲ್ಲಿ ನಡೆಯೋಣ. ಒಬ್ಬರು ಬಿದ್ದಾಗ ಇನ್ನೊಬ್ಬರು ಆಸರೆಯಾಗಿ, ಭಾರವನ್ನು ಕೂಡಿ ಹೊತ್ತು ಸಹಪಥಿಕರಾಗೋಣ.

'ನನಗೆ ಮಾತ್ರ ಸೇರಿದವಳು, ಹೀಗೆ ಇರಬೇಕು' ಎಂಬ ಪೊಸೆಸಿವ್ ಪ್ರೀತಿ ನನಗೂ ಬೇಡ, ನಿನಗೂ ಬೇಡ. ಸ್ವಾತಂತ್ರ್ಯದ ಗಾಳಿಯಲ್ಲಿ ಪ್ರೀತಿ ಪುಷ್ಪ ನಳನಳಿಸಲಿ. ನಮ್ಮ ಪ್ರೀತಿ ನಲುಗದ ಹಾಗೆ ಕಾಳಜಿ ಮಾಡಿದರೂ ಇತರ ಸಂಬಂಧಗಳನ್ನು ಕತ್ತರಿಸುವ ಕ್ರೌರ್ಯ ಬೇಡ. ನಮ್ಮ ಆಸಕ್ತಿ- ಅಭಿರುಚಿ, ಇಷ್ಟಾ-ನಿಷ್ಟಗಳು ಎಷ್ಟೇ ಬೇರೆಯಾಗಿದ್ದರೂ ನನಗೆ ನೀನು, ನಿನಗೆ ನಾನು ಎಂಬುದು ಸದಾ ನೆನಪಿರಲಿ.

ಪ್ರೀತಿ- ಪ್ರೇಮದ ಹಾದಿ ಸುಲಭವೇನೂ ಅಲ್ಲ. ಅಳಲೊಂದು ಮಡಿಲು, ಕುಸಿವ ಹೆಜ್ಜೆಗೊಂದು ಹೆಗಲು, ಧೈರ್ಯದ ಕೋಲು ಕೊಟ್ಟು ನಡೆಸುವ ಆತ್ಮೀಯ ನೀನಾಗುವೆಯಾ? ಮನದ ಬಾಗಿಲು ತೆರೆದಿಟ್ಟು ಕುಳಿತಿದ್ದೇನೆ...

ಎಲ್ಲಿರುವೆ? ಕಾಯುತ್ತಲೇ ಇದ್ದೇನೆ ನನ್ನ ಕಲ್ಪನೆಗಳು ಹರಳುಗಟ್ಟಿ ಮೂರ್ತವಾಗುವ ಆ ಅಮೃತ ಗಳಿಗೆಗೆ! ಹಾಗೆಂದು ನಿನಗಾಗಿ ಕಾಯುವುದೂ ನನಗೆ ಹಿತವೇ. ಏಕೆಂದರೆ ಕಾಯುವಿಕೆಯಲ್ಲಿ ಮಧುರ ಯಾತನೆಯಿದೆ.
ನಿನ್ನಂಥವನು ಸಿಗಬಹುದೇ?

ಪ್ರೇಮಫಲ
ರಾಶಿಚಕ್ರದಲ್ಲಿ ನಿಮ್ಮ ಪ್ರೇಮಭವಿಷ್ಯವೂ ಅಡಗಿದೆ. ಯಾವ ರಾಶಿಗೆ ಎಷ್ಟು ಪ್ರೇಮಫಲ ಎನ್ನುವ ಅಂಕಿ ನೋಟ ಇಲ್ಲುಂಟು. ಪ್ರಪೋಸ್ ಮಾಡುವವರ ರಾಶಿ ಆಧಾರದ ಮೇಲೆ ಇಲ್ಲಿ ಫಲ ನಿಗದಿ ಮಾಡಲಾಗಿದೆ...

ಮೇಷ: 7/10
ವೃಷಭ: 2/10
ಮಿಥುನ:9/10
ಕಟಕ: 6/10
ಸಿಂಹ: 4/10
ಕನ್ಯಾ: 4/10
ತುಲಾ: 8/10
ವೃಶ್ಚಿಕ: 5/10
ಧನು: 5/10
ಮಕರ: 7/10
ಕುಂಭ: 0/10
ಮೀನ: 7/10

- ಡಾ. ಕೆ.ಎಸ್. ಪವಿತ್ರಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.