ಬೈಟುಕಾಫಿ

ದುಬಾರಿ ಉಡುಗೊರೆ

Published On :

ಬದುಕಿನಲ್ಲಿ ಎಷ್ಟು ದುಡಿದರೇನು? ಎಷ್ಟು ಗಳಿಸಿದರೇನು?  ಶುದ್ಧ ಪ್ರೀತಿ ಎನ್ನುವುದು ಸಿಗದೇ ಇದ್ದರೆ ನಮ್ಮ ದುಡಿಮೆಗೆ, ಗಳಿಕೆಗೆ ಅರ್ಥವಾದರೂ ಏನು? ಪ್ರೀತಿ ಎನ್ನುವುದೇ ಹಾಗೆ. ಅದು ಅತ್ಯಮೂಲ್ಯವಾದದ್ದು.  ಅದು ಹೇಗಿರುತ್ತದೆ ಎಂದರೆ ಆ ಪ್ರಶ್ನೆಗೆ ಉತ್ತರವಿಲ್ಲ. ಕೆಲವರು ಉತ್ತರಿಸುವ ಪ್ರಯತ್ನ ಮಾಡಬಹುದಾದರೂ ಅವರವರ ಭಾವಕ್ಕೆ, ಅನುಭವಕ್ಕೆ ನಿಲುಕಿದಷ್ಟನ್ನೇ ಹೇಳಬಲ್ಲರು.  ಪ್ರಪಂಚದಲ್ಲಿ ಕಟ್ಟಲಾಗದ ಬೆಲೆಯಿದ್ದರೆ, ಯಾರಿಂದಲೂ ದಕ್ಕಿಸಿಕೊಳ್ಳಲಾಗದ ಸಂಬಂಧವಿದ್ದರೆ, ಕದಿಯಲಾಗದ ಆಸ್ತಿ ಅನ್ನುವುದೊಂದಿದ್ದರೆ ಅದೇ ಪ್ರೀತಿ. ಜೀವನದಲ್ಲಿ ಎಷ್ಟೆಲ್ಲ ಸಂಪಾದಿಸಬಹುದು,  ಸ್ಥಾನಮಾನವನ್ನೂ ಗಳಿಸಿಕೊಳ್ಳಬಹುದು. ನಮಗೆ ಅರಗಿಸಿಕೊಳ್ಳಲು ಕಷ್ಟ ಅನ್ನಿಸುವ ಜ್ಞಾನವನ್ನೂ ಸ್ವಲ್ಪ ಪ್ರಯತ್ನಪಟ್ಟರೆ ದಕ್ಕಿಸಿಕೊಂಡುಬಿಡಬಹುದು. ಆದರೆ ಈ ಪ್ರೀತಿ ಅನ್ನುವುದಿದೆಯಲ್ಲ. ಅದು ಹದಪಟ್ಟಿಗೆ ದಕ್ಕುವುದಾಗಲೀ, ಒಲಿಯುವುದಾಗಲೀ ಅಲ್ಲ. ಅದು ತಾನೇಗೇ ಒಲಿದು ಬರಬೇಕು. ಹಾಗೆ ಒಲಿಸಿಕೊಂಡವರೇ ನಿಜವಾಗಲೂ ಅದೃಷ್ಟವಂತರು.
ಪ್ರೀತಿ ಒಲಿದು ಬಂತು ಎಂದರೆ ಆಕಾಶವೇ ಕೈಗೆಟುಕಿದಷ್ಟು ಸಂತೋಷವಾಗುವುದು ನಿಜ.  ನೆನಪಿರಲಿ. ಅದು ಬದುಕಿನುದ್ದಕ್ಕೂ ಉಳಿದು ಬಿಡುತ್ತದೆ ಎನ್ನುವ ಭ್ರಮೆ ಬೇಡ. ಪ್ರೀತಿಯನ್ನು ಉಳಿಸಿಕೊಳ್ಳುವುದು ಒಲಿಸಿಕೊಳ್ಳುವುದಕ್ಕಿಂತಲೂ ಕಷ್ಟ. ಪ್ರೀತಿ ಎಷ್ಟು ಶ್ರೀಮಂತವೋ ಅಷ್ಟೇ ಚಂಚಲೆ.  ಅದನ್ನು ಒಲಿಸಿಕೊಳ್ಳಲು ಹಾಗೂ ಉಳಿಸಿಕೊಳ್ಳಲು ಎರಡಕ್ಕೂ ಬೇಕಾದದ್ದು ಒಂದೇ ಒಂದು ಆರ್ಹತೆ. ಅದುವೇ ಪ್ರಾಮಾಣಿಕತೆ. ಯಾರಲ್ಲಿ ಪ್ರಾಮಾಣಿಕತೆ, ಪರಿಶುದ್ಧತೆ, ಒಳ್ಳೆಯ ಮನಸ್ಸು ಇರುತ್ತದೆಯೋ  ಅವರ ಬಳಿ ಮಾತ್ರವೇ ಪ್ರೀತಿ ಯಾವತ್ತೂ ಉಳಿಯುತ್ತದೆ. ಪ್ರೀತಿಯೇ ಇಲ್ಲದ ಬದುಕು ಖಂಡಿತಾ ಬರಡು. ಎಲ್ಲವೂ ಇದ್ದು ಪ್ರೀತಿಯೇ ಇರದವನ ಬದುಕು ಶಿರವಿಲ್ಲದ ದೇಹದಂತೆಯೇ ಸರಿ. ಅದಕ್ಕಾಗಿಯೇ ಮನುಷ್ಯ ಜೀವನದುದ್ದಕ್ಕೂ ಪರಿತಪಿಸುತ್ತಾನೆ. ಮಾನವ ಪ್ರೀತಿಗಿರುವ ಮೌಲ್ಯವೇ ಅಂಥದ್ದು. ನಂಬಿಕೆ ಮತ್ತು ಪ್ರಾಮಾಣಿಕತೆಯನ್ನು ಹೊಂದಿರುವ ಹೃದಯ ಶ್ರೀಮಂತ ಮಾತ್ರವೇ ಪ್ರೀತಿಗೆ ಅರ್ಹ. ಆತ ಮಾತ್ರವೇ ಪ್ರೀತಿಯನ್ನು ಇನ್ನೊಬ್ಬರಿಗೂ ಹಂಚಬಲ್ಲ.
ಜಗತ್ತಿನಲ್ಲಿ ನಾವು ಕೊಡಬಹುದಾದ ಅಥವಾ ಪಡೆಯಬಹುದಾದ ಅತ್ಯಂತ ದುಬಾರಿ ಉಡುಗೊರೆ ಎಂಬುದೊಂದಿದ್ದರೆ ಅದನ್ನೇ ಪ್ರೀತಿ ಅಂತ ಕರೆಯುವುದು. ಪ್ರೀತಿಯ ಆರ್ಥವೇ ಗೊತ್ತಿಲ್ಲದವರ ಬಳಿ ಅದನ್ನು ಹಂಚಿಕೊಂಡರೆ ನಮ್ಮನ್ನೇ ನಾವು ವಂಚಿಸಿಕೊಂಡಂತೆ.

-ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.