ಔಷಧದ ಖನಿ ಮುರುಗಲ...
ನನ್ನಜ್ಜಿ ಮನೆಮದ್ದು ಕೊಡುವುದರಲ್ಲಿ ಸುತ್ತಮುತ್ತಲ ಊರಿಗೆಲ್ಲ ಹೆಸರುವಾಸಿ. ಒಮ್ಮೆ ಪಕ್ಕದ ಮನೆ 5 ವರ್ಷದ ಹುಡುಗನಿಗೆ ಮೈತುಂಬ ಸಣ್ಣಸಣ್ಣ ಗುಳ್ಳೆಗಳೆದ್ದಿದ್ದವು. ಅದನ್ನು ನೋಡಿದ ಅಜ್ಜಿ 'ಅದೆಂಥದೂ ಅಲ್ಲ, ಪಿತ್ಥ ಆಗಿದೆ' ಎಂದವರೇ ತಮ್ಮ ಮದ್ದಿನ ಸರಕಿನ ಡಬ್ಬಿಯಿಂದ ಮುರುಗಲದ ಸಿಪ್ಪೆಯನ್ನು ತಂದು, ತೊಳೆದು ಒಂದು ಲೋಟ ನೀರಿನಲ್ಲಿ ಎರಡು ಸಿಪ್ಪೆಯನ್ನು ನೆನೆಹಾಕಿದಳು. 15-20 ನಿಮಿಷಗಳ ನಂತರ ಆ ನೀರಿಗೆ ಸ್ವಲ್ಪ ಬೆಲ್ಲ ಸೇರಿಸಿ ಕದಡಿ, ಹುಡುಗನಿಗೆ ಕುಡಿಸಿದಳು. ಇದನ್ನು ಎರಡು ದಿನ ಮಾಡಿದಾಗ ಗುಳ್ಳೆಗಳು ಹೇಳಹೆಸರಿಲ್ಲದಂತೆ ಮಂಗಮಾಯ!
ಮುರುಗಲವನ್ನು ಪಾನೀಯವಾಗಿ, ಅಡುಗೆಯಲ್ಲಿ ಹಿಂದಿನಿಂದಲೂ ಬಳಸುತ್ತಾ ಬಂದಿದ್ದಾರೆ. ಸಾಮಾನ್ಯವಾಗಿ ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೇಸಿಗೆಕಾಲದಲ್ಲಿ ಮುರುಗಲದ ಉಪಯೋಗ ಹೆಚ್ಚು. ಮುರುಗಲ ಹಣ್ಣಿಗೆ ಹಿತವಾದ ಸುವಾಸನೆ ಮತ್ತು ಸಿಹಿ-ಹುಳಿ ರುಚಿ ಇರುತ್ತದೆ. ಹಣ್ಣಿನ ಸಿಪ್ಪೆಯನ್ನು ಅದರ ತಿರುಳಿನ ರಸದಲ್ಲಿ ನೆನೆಸಿ ಬಿಸಿಲಿನಲ್ಲಿ ಒಣಗಿಸಿಟ್ಟುಕೊಳ್ಳಬಹುದು.
ಮುರುಗಲದಿಂದ ಮಾಡಿದ ಪಾನಕ ದೇಹವನ್ನು ತಂಪಾಗಿಡುತ್ತದೆ. ಅದೇ ರೀತಿ ಮುರುಗಲದ ಸಾರು ಕೂಡ. ಮಹಾರಾಷ್ಟ್ರ ರಾಜ್ಯದಲ್ಲಿ 'ಕೋಕಮ್ ಕಡಿ' ಮಾಡಿ ಉಪಯೋಗಿಸುತ್ತಾರೆ. ಮುರುಗಲದ ರಸವನ್ನು ಮಜ್ಜಿಗೆಯೊಂದಿಗೆ ಬೆರೆಸಿ, ಇಂಗಿನ ಒಗ್ಗರಣೆ ಕೊಟ್ಟರೆ 'ಕೋಕಮ್ ಕಡಿ' ಸಿದ್ಧ.
ಒಣಗಿಸಿ ಶೇಖರಿಸಿಟ್ಟುಕೊಂಡ ಮುರುಗಲವನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿ, ನಂತರ ಸಿಪ್ಪೆಯನ್ನು ಹಿಂಡಿ ತೆಗೆದ ರಸಕ್ಕೆ ಸ್ವಲ್ಪ ಬೆಲ್ಲ ಅಥವಾ ಸಕ್ಕರೆ ಸೇರಿಸಿ ಪಾನಕ ಮಾಡಬಹುದು. ಈ ರಸಕ್ಕೆ ಉಪ್ಪು, ಬೆಲ್ಲ ಸೇರಿಸಿ ಬಿಸಿ ಮಾಡಿ, ಕರಿಬೇವು-ಇಂಗಿನ ಒಗ್ಗರಣೆ ಕೊಟ್ಟರೆ ಮುರುಗಲ ಸಾರು ಸಿದ್ಧ.
ಆಯುರ್ವೇದ ವೈದ್ಯದಲ್ಲಿ ಕೋಕಮ್ ಬಳಕೆ ಹೆಚ್ಚು. ಹಣ್ಣಿಗೆ ಜಂತುಹುಳು ನಿವಾರಕ ಮತ್ತು ಹೃದಯೋತ್ತೇಜಕ ಗುಣಗಳಿವೆ. ಮುರುಗಲವನ್ನು ಪಿತ್ತನಿವಾರಕವಾಗಿಯೂ ಬಳಸುತ್ತಾರೆ. ಇದನ್ನು ಮೂಲವ್ಯಾಧಿ, ರಕ್ತಭೇದಿ, ನೋವು ಮತ್ತು ಹೃದ್ರೋಗಗಳ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ. ಹಣ್ಣಿನ ಶರಬತ್ತನ್ನು ಪಿತ್ತ ರೋಗಗಳಿಗೆ ಕೊಡುತ್ತಾರೆ. ಇನ್ನು ಮುರುಗಲದ ಬೇರುಗಳಿಗೆ ಸ್ಥಂಭಕ ಗುಣವಿದೆ. ಬೀಜಗಳಲ್ಲಿ ಶೇ. 44ರಷ್ಟು ಜಿಡ್ಡಿನಂಶವಿರುತ್ತದೆ. ಇದನ್ನು ಮುರುಗಲ ಬೆಣ್ಣೆ ಎಂದು ಕರೆಯುತ್ತಾರೆ. ಇದನ್ನು ಗೃಹ ಉದ್ಯಮವಾಗಿ ಕೂಡ ಅನೇಕರು ಮಾಡುತ್ತಿದ್ದಾರೆ.
ಕೋಕಮ್ ಬೆಣ್ಣೆಗೆ ಪೋಷಕ, ಶಾಮಕ, ಸ್ಥಂಭಕ ಮತ್ತು ಮೃದುಕಾರಕ ಗುಣಗಳಿವೆ. ಬೆಣ್ಣೆಯನ್ನು ಮುಲಾಮುಗಳಿಗೆ, ನಿಕ್ಷೇಪಗಳಿಗೆ ಮತ್ತು ಇತರ ಔಷಧಗಳ ತಯಾರಿಕೆಗೆ ಬಳಸುತ್ತಾರೆ. ಹುಣ್ಣುಗಳಿಗೆ ಮತ್ತು ತುಟಿ, ಕೈಕಾಲು ಬಿರಿದಾಗ ಹಚ್ಚಲು ಬಳಸುತ್ತಾರೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

