ಅಜ್ಜಿ ಮದ್ದಿಗೂ ಬೇಕು ಮುರುಗಲ
ಬಿಳಿ ಮುರುಗಲ ವಿಶೇಷವಾದುದು. ಆದರೆ ಇದರ ಲಭ್ಯತೆ ಬಹಳ ಕಡಿಮೆ ಎಂದೇ ಹೇಳಬಹುದು. ಬಿಳಿ ಮುರುಗಲ ಮರ ತುಂಬಾ ಸೂಕ್ಷ್ಮ. ಇದು ಎಲ್ಲ ಹವಾಮಾನದಲ್ಲೂ, ಕೆಂಪು ಮುರುಗಲ ಬೆಳೆಯುವಂತೆ ಬೆಳೆಯುವುದಿಲ್ಲ. ಹಾಗಾಗಿ ಬಿಳಿಮುರುಗಲ ಅಷ್ಟೊಂದು ಪ್ರಮಾಣದಲ್ಲಿ ಕಂಡುಬರುವುದಿಲ್ಲ. ಆಯುರ್ವೇದ ಔಷಧಗಳಲ್ಲಿ ಸಾಮಾನ್ಯವಾಗಿ ಬಿಳಿ ಮುರುಗಲವನ್ನೇ ಬಳಸುತ್ತಾರೆ.
ಮುರುಗಲದ ಬೀಜ ದಿಂದ ಬೆಣ್ಣೆಯನ್ನೂ ತಯಾರಿಸಬಹುದು. ಬೀಜವನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಬೇಕು. ಒಣಗಿದ ಬೀಜದ ಮೇಲಿನ ಗಟ್ಟಿಯಾದ ಸಿಪ್ಪೆಯನ್ನು ತೆಗೆದು ಒಳಗಿನ ಕೆಂಪನೆಯ ಬೀಜವನ್ನು ಬಾಣಲೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಹುರಿಯಬೇಕು.
ಹುರಿದ ಬೀಜದಿಂದ ಘಮ್ಮನೆ ಸುವಾಸನೆ ಬರಬೇಕು. ಹುರಿಯುವಾಗ ಬೀಜ ಕಪ್ಪಾಗದಂತೆ ನೋಡಿಕೊಳ್ಳಬೇಕು. ಏಕೆಂದರೆ ಬೀಜ ಕಪ್ಪಾದರೆ ಅದರಲ್ಲಿರುವ ಎಣ್ಣೆಯು ಆರಿಹೋಗುತ್ತದೆ.
ಹುರಿದ ಬೀಜವನ್ನು ತಣ್ಣಗೆ ಮಾಡಿ ಮಿಕ್ಸಿಯಲ್ಲಿ ಪುಡಿ ಮಾಡಿ. ನಂತರ ಸಾಕಷ್ಟು ನೀರಿನೊಂದಿಗೆ ನುಣ್ಣಗೆ ರುಬ್ಬಬೇಕು. ರುಬ್ಬಿದ ಹಿಟ್ಟನ್ನು ಪಾತ್ರೆಯೊಂದರಲ್ಲಿ ಹಾಕಿ ಕಾಯಿಸಬೇಕು. ಕಾಯಿಸಿದಾಗ ಅದರಲ್ಲಿರುವ ನೀರಿನ ಅಂಶ ಆರಿ ಎಣ್ಣೆಯು ತೇಲುತ್ತದೆ. ಹಾಗಾದಾಗ ಅದಕ್ಕೆ ಸ್ವಲ್ಪ ತಣ್ಣೀರು ಹಾಕಿ ಒಂದು ದಿನ ಹಾಗೆಯೇ ಬಿಡಬೇಕು. ದಿನದ ನಂತರ ಪಾತ್ರೆಯ ಮೇಲ್ಭಾಗದಲ್ಲಿ ಬೆಣ್ಣೆ ತೇಲುತ್ತಿರುತ್ತದೆ. ಅದನ್ನು ನೀರಿನಿಂದ ಬೇರ್ಪಡಿಸಿ ಅದರಲ್ಲಿರುವ ನೀರಿನಂಶ ಆರುವಂತೆ ಕಾಯಿಸಿ ಶೇಖರಿಸಬಹುದು.
ಕೋಕಮ್ ಬೆಣ್ಣೆ ಮಾರುಕಟ್ಟೆಗಳಲ್ಲಿ ಸಣ್ಣ ಸಣ್ಣ ಉಂಡೆಗಳು ಹಾಗೂ ಬಿಲ್ಲೆಯಾಕಾರದಲ್ಲಿ ದೊರೆಯುತ್ತವೆ. ಈ ಬಿಲ್ಲೆ ತಿಳಿ ಬೂದುಬಣ್ಣ ಅಥವಾ ತಿಳಿ ಹಳದಿಬಣ್ಣದಲ್ಲಿ ಜಿಡ್ಡುಜಿಡ್ಡಾಗಿರುತ್ತದೆ.
ಮುರುಗಲದ ಬೆಣ್ಣೆಗೆ ಪೋಷಕ, ಶಾಮಕ, ಸ್ತಂಭಕ ಮತ್ತು ಮೃದುಕಾರಕ ಗುಣಗಳಿವೆ.
ಚಳಿಗಾಲದಲ್ಲಿ ಮೈ ಒಡೆಯುತ್ತಿದ್ದರೆ ಮುರುಗಲದ ಬೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಹಚ್ಚುವುದರಿಂದ ಮೈ ಒಡೆಯುವುದನ್ನು ತಡೆಗಟ್ಟಬಹುದು. ಕಾಲಿನ ಬಿರುಕಿಗೂ ಇದು ದಿವೌಷಧ. ಮುರುಗಲದ ಬೆಣ್ಣೆ ದೇಹದಲ್ಲಿ ತೇವಾಂಶವನ್ನು ಹಿಡಿದಿಡುತ್ತದೆ.
ಇದನ್ನು ಮುಖ್ಯವಾಗಿ ಅಡುಗೆಗೆ ಮತ್ತು ತುಪ್ಪದ ಕಲಬೆರಕೆಗೆ ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಇದರಲ್ಲಿ ಬೀಜದ ಕಣಗಳು ಕಲ್ಮಷವಾಗಿ ಸೇರಿರುತ್ತವೆ. ಶುದ್ಧಗೊಳಿಸಿ ಮತ್ತು ವಾಸನೆ ತೆಗೆದ ಕೋಕಮ್ ಬೆಣ್ಣೆಯು ಬಿಳಿ ಬಣ್ಣವಾಗಿದ್ದು ವನಸ್ಪತಿ ತುಪ್ಪವನ್ನು ಹೋಲುತ್ತದೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

