ಸವಿದವನೇ ಬಲ್ಲ ಪುನರ್ಪಳಿ ರುಚಿಯ...

ಕೋಕಮ್ಗೆ ಅನೇಕ ಹೆಸರುಗಳಿವೆ. 'ಕೋಕಮ್ ಬೆಣ್ಣೆ ಮರ', 'ಬ್ರಿಂಡೋನಿಯ ಟ್ಯಾಲೋ ಮರ' ಅಥವಾ 'ಮ್ಯಾಂಗೋಸ್ಟೀನ್ ಎಣ್ಣೆ ಮರ'. ಇದು ಗುಟಿಫೆರೆ ವಂಶಕ್ಕೆ ಸೇರಿದ್ದು. ಪಂಜಾಬಿಯಲ್ಲಿ ಕೋಕಮ್, ಗುಜರಾತಿಯಲ್ಲಿ ಕೋಕನ್, ಕನ್ನಡದಲ್ಲಿ ಮುರುಗಲು, ಮಲಯಾಳಂನಲ್ಲಿ ಪುನಾಮ್ಪುಳಿ, ಮರಾಠಿಯಲ್ಲಿ ಅಮಸೋಲ್, ಪುನರ್ಪುಳಿ, ತಮಿಳಿನಲ್ಲಿ ಮುರ್ಗಲ ಎಂದು ಕರೆಯುತ್ತಾರೆ.
ಮುರುಗಲದಲ್ಲಿ ಎರಡು ವಿಧ- ಕೆಂಪು ಮುರುಗಲ ಮತ್ತು ಬಿಳಿ ಮುರುಗಲ. ಮುರುಗಲ ಮರ ತೆಳ್ಳನೆಯ, ಹಸುರಿನಿಂದ ಕೂಡಿದ ಮರ. ಮರದ ರೆಂಬೆಗಳು ಜೋತುಬಿದ್ದಂತಿರುತ್ತದೆ. ಎಲೆಗಳು ದೀರ್ಘ ವೃತ್ತಾಕಾರವಾಗಿರುತ್ತವೆ. ಮೇಲ್ಭಾಗ ಕಡುಹಸಿರು ಹಾಗೂ ಎಲೆಯ ಅಡಿಭಾಗ ತಿಳಿಹಸಿರು ಬಣ್ಣದ್ದಾಗಿರುತ್ತದೆ. ಎಲೆಯು ಹುಳಿ ರುಚಿಯಿಂದ ಕೂಡಿರುತ್ತದೆ. ಅಲ್ಲದೇ ಎಲೆ ತುಂಬಾ ಮೃದುವಾಗಿರುತ್ತದೆ.
ಮುರುಗಲ ಕಾಯಿ ತಿಳಿಹಸಿರಿನಿಂದ ಕೂಡಿರುತ್ತದೆ. ಹಣ್ಣು ಕೆಂಪು ವರ್ಣದಿಂದ ಕೂಡಿದ್ದು, ಪಕ್ವವಾದಾಗ ಕಡುಗೆಂಪು(ಕಪ್ಪುಕೆಂಪು-ಮೆರೂನ್) ವರ್ಣಕ್ಕೆ ತಿರುಗುತ್ತದೆ. ಹಣ್ಣಿನಲ್ಲಿ ಎಂಟರಿಂದ ಹತ್ತು ಬೀಜಗಳಿರುತ್ತವೆ. ಬೀಜ ಸಿಹಿಮಿಶ್ರಿತ ಹುಳಿಯಿಂದ ಕೂಡಿರುತ್ತದೆ.
ಮರವು ಪಶ್ಚಿಮಘಟ್ಟಗಳ ಉಷ್ಣವಲಯದ ಮಳೆಗಾಡುಗಳಲ್ಲಿ ಕೊಂಕಣದಿಂದ ದಕ್ಷಿಣಕ್ಕೆ ಮೈಸೂರು, ಕೊಡಗು ಮತ್ತು ವೈನಾಡು ಪ್ರದೇಶಗಳಲ್ಲಿ ಬೆಳೆಯುತ್ತದೆ. ಮಹಾರಾಷ್ಟ್ರದ ದಕ್ಷಿಣ ಜಿಲ್ಲೆಗಳಲ್ಲಿ ಇದನ್ನು ನೆಟ್ಟು ಬೆಳೆಸುತ್ತಾರೆ. ಇದು ನೀಲಗಿರಿ ಬೆಟ್ಟಗಳ ತಗ್ಗು ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ರಾಜ್ಯದ ಉತ್ತರಕನ್ನಡ ಹಾಗೂ ದಕ್ಷಿಣಕನ್ನಡ ಜಿಲ್ಲೆಗಳಲ್ಲೂ ಮುರುಗಲ ಬೆಳೆಯುತ್ತದೆ. ನವೆಂಬರ್-ಫೆಬ್ರವರಿಯಲ್ಲಿ ಹೂಬಿಟ್ಟು, ಏಪ್ರಿಲ್-ಮೇನಲ್ಲಿ ಹಣ್ಣುಗಳು ಪಕ್ವವಾಗುತ್ತವೆ.
ಪಕ್ವವಾದ ಹಣ್ಣುಗಳನ್ನು ಕೊಯ್ದು, ಬೀಜಗಳಿಂದ ಬೇರ್ಪಡಿಸಿದ ಸಿಪ್ಪೆಗೆ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಸಕ್ಕರೆ ಮಿಶ್ರಮಾಡಿ 10ರಿಂದ 12 ಗಂಟೆ ಇಡಬೇಕು. ಇದರಲ್ಲಿರುವ ಕೆಂಪನೆಯ ರಸ ಬಿಟ್ಟುಕೊಂಡು ಸಂಗ್ರಹಿಸಲು ಯೋಗ್ಯವಾಗುತ್ತದೆ.ಆಗ ಸಿಪ್ಪೆ ಹಾಗೂ ರಸವನ್ನು ಬೇರ್ಪಡಿಸಿ, ರಸಕ್ಕೆ ಸ್ವಲ್ಪ ಉಪ್ಪು ಸೇರಿಸಿ ಒಂದೆರಡು ದಿನ ಬಿಸಿಲಿನಲ್ಲಿ ಒಣಗಿಸಿ ಬಾಟಲಿಗಳಲ್ಲಿ ಶೇಖರಿಸಿಡಬಹುದು. ಉಳಿದ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಶೇಖರಿಸಿಟ್ಟುಕೊಂಡರೆ ಅಡುಗೆಯಲ್ಲಿ ಹುಣಸೆಹಣ್ಣಿಗೆ ಬದಲಾಗಿ ಉಪಯೋಗಿಸಬಹುದು. ಒಣಗಿದ ಸಿಪ್ಪೆಯನ್ನು ಪುಡಿಮಾಡಿ ಕೂಡ ಬಳಸಬಹುದು.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


