ಬೈಟುಕಾಫಿ

ಪುಷ್ಪರಾಜ

ಮನೆಯಲ್ಲೇ ಪುಷ್ಪ ಪ್ರದರ್ಶನ ಏರ್ಪಡಿಸುವ ರಾಜ್ಯದ ಏಕೈಕ ಉದಾಹರಣೆ ಇದು. ಮಡಿಕೇರಿಯಿಂದ 6 ಕಿ.ಮೀ. ದೂರದ ಬೊಯಿಕೇರಿಯಲ್ಲಿನ ಎಫ್.ಎಂ. ಖಾನ್ ಎರಡು ಎಕರೆ ಪ್ರದೇಶದಲ್ಲಿ ನೂರಾರು ವಿಶಿಷ್ಟ ಪುಪ್ಪಗಳನ್ನು ಬೆಳೆಸಿದ್ದಾರೆ.

ಪುಷ್ಪರಾಜ
Published On :

ಹಸಿರ ಹೊದ್ದ ಕೊಡಗು ಜಿಲ್ಲೆಯ ಖಾನ್ ಸಾಹೇಬರ ಮನೆಯಂಗಳದಲ್ಲಿ ಪುಪ್ಪರಾಣಿಯರ ಸಂಭ್ರಮ. ಒಂದಲ್ಲ, ಹತ್ತಲ್ಲ, ನೂರಾರು ಪುಪ್ಪ ಬೆಡಗಿಯರು ಖಾನ್ ಸಾಹೇಬರ ಮನೆ ಮುಂದೆ ಅರಳಿ ನಿಂತು ಬಿನ್ನಾಣ ಪ್ರದರ್ಶಿಸುತ್ತಾರೆ. ಮನೆಯಲ್ಲೇ ಪುಷ್ಪ ಪ್ರದರ್ಶನ ಏರ್ಪಡಿಸುವ ರಾಜ್ಯದ ಏಕೈಕ ಉದಾಹರಣೆ ಇದು!
ಮಡಿಕೇರಿಯಿಂದ 6 ಕಿ.ಮೀ. ದೂರದ ಬೊಯಿಕೇರಿಯಲ್ಲಿನ ಎಫ್.ಎಂ. ಖಾನ್ ಎರಡು ಎಕರೆ ಪ್ರದೇಶದಲ್ಲಿ ನೂರಾರು ವಿಶಿಷ್ಟ ಪುಪ್ಪಗಳನ್ನು ಬೆಳೆಸಿದ್ದಾರೆ. ಪ್ರತಿ ವರ್ಷ ಎರಡು ದಿನ ಪ್ರದರ್ಶನ ಏರ್ಪಡಿಸುತ್ತಾರೆ. ಮೊನ್ನೆಯಷ್ಟೇ ಈ ಸೌಭಾಗ್ಯ ಸವಿಯುವ ಅವಕಾಶ ಕೊಡಗಿನ ಜನಕ್ಕೆ ಸಿಕ್ಕಿತ್ತು.
ಅಂದಹಾಗೆ, ಎಫ್.ಎಂ. ಖಾನ್ ಮಾಜಿ ಸಂಸದ. ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಭಾರಿ ಪ್ರಭಾವಿಯಾಗಿದ್ದರು. ದೆಹಲಿಯಲ್ಲಿನ ತಮ್ಮ ಸಂಸದ ಬಂಗಲೆಯಲ್ಲೂ ಆಕರ್ಷಕ ಪುಷ್ಪವನ ನಿರ್ಮಿಸಿದ್ದರು. ಇಂದಿರಾಗಾಂಧಿ ಇದನ್ನು ವೀಕ್ಷಿಸಿ, ಮೆಚ್ಚುಗೆ ಸೂಚಿಸಿದ್ದು ಇತಿಹಾಸ. ಅನಂತರ ರಾಜಕೀಯದಿಂದ ದೂರವಾದ ಖಾನ್, ಕೊಡಗಿನ ಬಲ್ಯಾಟ್ರಿ ಎಸ್ಟೇಟ್‌ಗೆ ಮರಳಿ ಮತ್ತೊಂದು ಪುಷ್ಪೋದ್ಯಾನ ನಿರ್ಮಿಸಿದರು.
ಈ ಮನೆಯೇ ಒಂದು ಮಿನಿ ಲಾಲ್‌ಬಾಗ್. ದೇಶವಿದೇಶಗಳಿಂದ ಹೂ ಗಿಡ ತರಿಸಿ ನೀರೆರೆಯುವುದು ರೂಢಿಯಾಗಿ ಹೋಗಿದೆ. 20 ವರ್ಷದ ಪುಷ್ಪ ಕೃಷಿಯನ್ನು, ಹೂಗಳ ಸೌಂದರ್ಯವನ್ನು ಜನ ಸವಿಯದಿದ್ದರೆ ಹೇಗೆ ಎಂದೆನ್ನಿಸಿತು ಅವರಿಗೆ. ಹೀಗಾಗಿ, 12 ವರ್ಷಗಳಿಂದ ಮನೆಯಂಗಳದಲ್ಲೇ ಪುಷ್ಪ ಪ್ರದರ್ಶನ ಏರ್ಪಡಿಸುತ್ತಿದ್ದಾರೆ. ರಾಜ್ಯದ ಹಲವೆಡೆಯಿಂದ ಬರುವ ಪುಪ್ಪ ಪ್ರೇಮಿಗಳಿಗೆ ಬಲ್ಯಾಟ್ರಿ ಎಸ್ಟೇಟ್‌ನಲ್ಲಿ ಸಮಯ ಕಳೆಯುವುದೆಂದರೆ ಎಲ್ಲಿಲ್ಲದ ಖುಷಿ.
ಖಾಸಗಿ ವ್ಯಕ್ತಿ ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಹೂ ಬೆಳೆಸಿರುವುದು ದೇಶದಲ್ಲೇ ಮೊದಲು. ಸರ್ಕಾರಿ ವ್ಯವಸ್ಥೆಯಲ್ಲಿಯೇ ಪುಷ್ಪ ಪ್ರದರ್ಶನಗಳು ನೀರಸ ಎನ್ನಿಸುವಾಗ, ಖಾನ್ ಹೀಗೆ ವೈಭವಯುತವಾಗಿ ಮೇಳ ಏರ್ಪಡಿಸುವುದು ಅಚ್ಚರಿಯೇ ಸರಿ.
ಪುಪ್ಪವನ ಸಿದ್ಧಗೊಳಿಸುವಲ್ಲಿ ಸೋದರ ಎ.ಎಂ. ಖಾನ್ ಅವರ ಸಹಕಾರವೂ ಇದೆ ಎನ್ನುನ ಎಫ್.ಎಂ. ಖಾನ್, 'ಮಳೆಯೇ ಹೆಚ್ಚಾಗಿರುವ ಕೊಡಗಿನಲ್ಲಿ ಪುಪ್ಪವನ ನಿರ್ವಹಿಸುವುದು ಅತ್ಯಂತ ಕಷ್ಟ. ಮಳೆಗಾಲದಲ್ಲಿ ಹೂಗಳನ್ನು ಮಕ್ಕಳನ್ನು ನೋಡಿಕೊಳ್ಳುವಂತೆ ರಕ್ಷಿಸಬೇಕಾಗುತ್ತದೆ. ಸಾವಿರಾರು ಹೂಗಿಡಗಳನ್ನು ವರ್ಷವಿಡೀ ಲಕ್ಷಾಂತರ ರು. ವೆಚ್ಚ ಮಾಡಿ, ಹತ್ತಾರು ಕಾರ್ಮಿಕರನ್ನು ಕಲೆಹಾಕಿ ಪೋಷಿಸಬೇಕಾಗುತ್ತದೆ. ಉದ್ಯಾನದಲ್ಲಿ ಹೀಗೆ ದಿನ ಕಳೆಯುವಾಗ ನಾನು ಇಪ್ಪತ್ತು ವರ್ಷದ ತರುಣನಾಗುತ್ತೇನೆ' ಎಂದು ಹೆಮ್ಮೆಪಡುತ್ತಾರೆ 86 ವರ್ಷದ ಖಾನ್.

ಖಾನ್ ವನದ ಪುಷ್ಪಗಳು
ಗ್ಲೇಕೋನಿಯಾ, ಕಾಲೇನ್ ಕೋಸ್, ಲೇಡಿ ಲ್ಯಾಕ್, ಕಾಸ್ಮಸ್, ಗೋಲ್ಜ್ ಬಾಲ್ಲಂ, ಕಾಕ್ಸ್ ಕೋಂಬ್, ಲವ್ ಇನ್ ಮಿಸ್ಚ್, ಆರ್ಕಿಡ್. ಅಂಥೋರಿಯಂ, ಕ್ಯೂಪಿಯಾ, ಕ್ರೋಟಾನ್, ಬೋಗನ್ ವಿಲ್ಲಾ, ಟೈಗರ್ ಜಾ, ಇಕ್ಸೋರಾ, ಪಾಮ್ಸ್, ಲಿಲ್ಲಿ, ಜೀನಿಯಾ, ಬೋನ್ಸಾಯಿ, ಮೇರಿ ಗೋಲ್ಡ್... ಇನ್ನೂ ನೂರಾರು.

- ಚಿತ್ರ, ಲೇಖನ: ಅನಿಲ್ ಎಚ್.ಟಿ.
     anilmadikerizgmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.