ಬೈಟುಕಾಫಿ

ಫ್ರೆಂಚ್ ಕೃಷ್ಣಾರಾಧಕಿ

ಫ್ರೆಂಚ್ ಕೃಷ್ಣಾರಾಧಕಿ
Published On :

ದೈವದ ಮೇಲಿನ ಭಕ್ತಿಯನ್ನು ನಾನಾ ಪ್ರಕಾರಗಳಲ್ಲಿ ಅಭಿವ್ಯಕ್ತಿಗೊಳಿಸಿದ್ದು ಉಂಟು. ಆದರೆ, ಇಲ್ಲೊಬ್ಬ ವಿದೇಶಿ ಮಹಿಳೆ ಶ್ರೀ ಕೃಷ್ಣನ ಬಗೆಗಿನ ತನ್ನ ಭಕ್ತಿ ಮಾರ್ಗದಿಂದ ಎಲ್ಲರಲ್ಲೂ ಬೆರಗು ಮೂಡಿಸುತ್ತಿದ್ದಾರೆ.
ಆಕೆ ಡೊಮಿನಿಕ್ ಅಮೆಂಡಲಾ. ವಯಸ್ಸು 57. ವೃತ್ತಿಯಲ್ಲಿ ಚಿತ್ರ ಕಲಾವಿದೆ. ಮೂಲತಃ ಫ್ರಾನ್ಸ್‌ನವರು. ವಿವಾಹವಾಗಿ ಮಕ್ಕಳಿದ್ದರೂ ಸಾಂಸಾರಿಕ ಜವಾಬ್ದಾರಿಯಿಂದ ಹೊರ ಬಂದ ಇವರ ಪಾಲಿಗೆ ದ್ವಾಪರದ ಶ್ರೀಕೃಷ್ಣನೇ ಸರ್ವಸ್ವ.
ಅಮೆಂಡಲಾ ಕುಂಚದಲ್ಲಿ ಅರಳಿರುವ ಕೃಷ್ಣನ ಭಾವ- ಭಂಗಿಗಳು ಭಕ್ತರು ಮತ್ತು ಚಿತ್ರಕಲಾಸಕ್ತರ ಮನಸೂರೆಗೊಳ್ಳುತ್ತಿವೆ. ಶ್ರೀಕೃಷ್ಣನ ಲೀಲೆಗಳು, ಭಗವದ್ಗೀತೆಯ ಘಟನೆಗಳ ಕುರಿತು ಸ್ಪಿರಿಚುವಲ್ ಆರ್ಟ್, ಲ್ಯಾಂಡ್‌ಸ್ಕೇಪ್ ಇತ್ಯಾದಿ ಪ್ರಕಾರಗಳಲ್ಲಿ ಈವರೆಗೆ 200ಕ್ಕೂ ಹೆಚ್ಚು ಕಲಾಕೃತಿಗಳನ್ನು ರಚಿಸಿದ್ದಾರೆ. ಒಂದಕ್ಕಿಂತ ಒಂದು ಭಿನ್ನವಾಗಿವೆ.
ಕೃಷ್ಣನ ಮೇಲೆ ತನಗಿರುವ ಭಕ್ತಿಗೆ ಸಾಕ್ಷಿಯಾಗಿ ಅಮೆಂಡಲಾ, ತಮ್ಮ ಹೆಸರನ್ನು ಧೀರ ಲಲಿತಾ ಎಂದು, ಪತಿ  ಜೇಮ್ಸ್ ನ್ಯೂಸಮ್‌ರ ಹೆಸರನ್ನು ಜಗದೀಶ್ವರ್ ಎಂದು ಬದಲಿಸಿಕೊಂಡಿದ್ದಾರೆ. ಇಬ್ಬರು ಪುತ್ರಿಯರಿಗೆ ರಾಧಾಷ್ಠಮಿ, ಜಾಹ್ನವಿ ಹಾಗೂ ಪುತ್ರನಿಗೆ ಗೌರ ಗೋಪಾಲ ಎಂದು ನಾಮಕರಣ ಮಾಡಿದ್ದಾರೆ.
ಈಗ ಪುತ್ರಿಯರು ಅಮೆರಿಕದಲ್ಲಿ ನೆಲೆಸಿದ್ದಾರೆ. ಧೀರಲಲಿತಾ, ಜಗದೀಶ್ವರ್ ಮತ್ತು ಗೌರ ಗೋಪಾಲರೊಂದಿಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಹೊರವಲಯದ ಗೋಸಾಯ್‌ಘಟ್ಟದ ಶ್ರೀ ನರಸಿಂಗ ಚೈತನ್ಯ ಮಠದಲ್ಲಿ ಭಕ್ತಿಮಾರ್ಗದಲ್ಲಿ ಜೀವಿಸುತ್ತಿದ್ದಾರೆ.
ತಾಯಿಯ ಒಡನಾಟದಲ್ಲೇ ಹೆಚ್ಚಾಗಿ ಬೆಳೆದ ಗೌರ ಗೋಪಾಲ ಸಹ ಶ್ರೀಕೃಷ್ಣನ ಆರಾಧಕ. ಸಂಸ್ಕೃತದಲ್ಲಿ ಪಾಂಡಿತ್ಯ ಸಾಧಿಸಿದ್ದು, ಸ್ಥಳೀಯ ಮಕ್ಕಳಿಗೆ ಸಂಸ್ಕೃತ ಕಲಿಸುವ ಗುರುವಾಗಿ ರೂಪುಗೊಂಡಿದ್ದಾರೆ.
ಬಾಲ್ಯದಲ್ಲಿಯೇ ಚಿತ್ರಕಲೆಯತ್ತ ಆಕರ್ಷಿತರಾದ ಅಮೆಂಡಲಾ, 30 ವರ್ಷಗಳ ಹಿಂದೆಯೇ ಅದನ್ನು ವೃತ್ತಿಯಾಗಿ ಸ್ವೀಕರಿಸಿದವರು. ತಮಗೆ ಒಲಿದಿರುವ ಚಿತ್ರಕಲೆ ಬಳಸಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಚಿತ್ರಕಲೆಗಳ ಮಾರಾಟದಿಂದ ಬರುವ ಆದಾಯದಲ್ಲಿ ಶೇ.90ರಷ್ಟನ್ನು ಮಠದ ಮೂಲಕ ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿಸುವ ಸೇವಾ ಗುಣ ಇವರದು.

ದೇಶ ವಿದೇಶಗಳಲ್ಲಿ ಮಾರಾಟ
ಅಮೆರಿಕ, ಇಟರಿ, ಫ್ರಾನ್ಸ್, ಸ್ವಿಜ್ಜರ್ಲೆಂಡ್ ಸೇರಿದಂತೆ ಅನೇಕ ದೇಶಗಳಲ್ಲಿ ಅಮೆಂಡಲಾ ಕಲಾಕೃತಿಗಳು ಪ್ರದರ್ಶನಗೊಂಡಿವೆ. 1 ಸಾವಿರದಿಂದ 10 ಸಾವಿರ ಡಾಲರ್‌ಗಳಿಗೆ ಮಾರಾಟವಾಗಿವೆ. ಖಾಸಗಿ ಮ್ಯೂಸಿಯಂಗಳಲ್ಲಿ ಅಲಂಕರಿಸಲ್ಪಟ್ಟಿವೆ.
1973ರಲ್ಲಿ ಇಸ್ಕಾನ್‌ನ ಭಕ್ತಿವೇದಾಂತ ಸ್ವಾಮಿಪ್ರಭು ಅವರಿಂದ ಅಮೆಂಡಲಾ ದೀಕ್ಷೆ ಪಡೆದರು. ಆನಂತರ ಇದೇ ಹಾದಿಯನ್ನು ಪತಿ ಮತ್ತು ಮಗ ಅನುಸರಿಸಿದರು. ಇವರೆಲ್ಲರಿಗೀಗ ಕಲೆ, ಸಾಹಿತ್ಯ, ಭಕ್ತಿಯೇ ಜೀವನ. ತವರು ಫ್ರಾನ್ಸ್‌ಗಿಂತ ಭಾರತವನ್ನೇ ಹೆಚ್ಚು ಇಷ್ಟಪಡುತ್ತಾರೆ, ಪ್ರೀತಿಸುತ್ತಾರೆ.
ಗುರುಕುಲದಲ್ಲಿ ನಿತ್ಯವೂ ಬೆಳಗಿನ ಜಾವ ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗುವ ಈ ಕುಟುಂಬದವರು ವ್ರತಗಳನ್ನು ಕೈಗೊಳ್ಳುತ್ತಾರೆ. ಹೋಮ ಯಜ್ಞಾದಿಗಳನ್ನೂ ನೆರವೇರಿಸುತ್ತಾರೆ.
ಅಮೆಂಡಲಾ ಅವರ ಸಂಪರ್ಕಿಸುವ ವೆಬ್ ವಿಳಾಸ: dominiqueamendola.com

-   ಎಂ. ಅಫ್ರೋಜ್‌ಖಾನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.