ಬೈಟುಕಾಫಿ

ಪ್ರೀತಿ ಬಿಸಾಡುವ ಕಸವಲ್ಲ!

Published On :

ಹೀಗೊಂದು ಪ್ರಶ್ನೆ. ಒಂದೊಮ್ಮೆ ನಮ್ಮ ಪಾಲಿಗೆ ಕಸ ಎಂಬುದು ಅತ್ಯಮೂಲ್ಯವಾದುದು. ಅದಕ್ಕೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇದೆ ಎಂದುಕೊಳ್ಳೋಣ. ಜಗತ್ತಿನಲ್ಲಿ ಯಾರಾದರೂ ಎಂದಾದರೂ ಕಸವನ್ನು ಹೊರಗೆ ಬಿಸಾಕುತ್ತಿದ್ದರೆ? ಮನೆಯಿಂದ ಹೊರಗೆ ಅದನ್ನು ಚೆಲ್ಲುತ್ತಿದ್ದರೆ? ಹೋಗಲಿ, ರಸ್ತೆಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಒಂದಾದರೂ ಕಸ ಕಾಣಲು ಸಿಗುತ್ತಿತ್ತೇ? ನಮ್ಮ ಮನೋಭಾವವೇ ಹಾಗೆ. ಈ ಜಗತ್ತಿನಲ್ಲಿ ಅತಿ ಬೆಲೆಬಾಳುವುದು ಏನನ್ನೂ ನಾವು ಹೇಗೆಂದರೆ ಹಾಗೆ ಬಿಸಾಡುವುದಿಲ್ಲ. ಅದರ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ನಮ್ಮದಾಗಿರುತ್ತದೆ.
ಅದು ತೀರಾ ಮೌಲ್ಯಯುತವಾದುದೆಂದರೆ ಅದನ್ನು ಬಹಳಷ್ಟು ಬಾರಿ ಬಹುತೇಕರ ಕಣ್ಣಿಗೂ ಬೀಳದಂತೆ ಅತ್ಯಂತ ಗೋಪ್ಯವಾಗಿ ಬಚ್ಚಿಡುತ್ತೇವೆ. ಜೀವನದಲ್ಲಿ ಪ್ರೀತಿ ಎಂಬುದೂ ಹಾಗೆಯೇ. ಅದು ತೀರಾ ಮೌಲ್ಯಯುತವಾದುದು. ಅದನ್ನು ನಾವು ಹೇಗೆಂದರೆ ಹಾಗೆ ನಿರ್ಲಕ್ಷ್ಯವಾಗಿ ಬಿಸಾಡುವುದು ಸರಿಯೇ? ನಮ್ಮ ಪ್ರೀತಿಯನ್ನು ಪರಿಚಿತವಲ್ಲದ, ಗೊತ್ತು ಗುರಿಯಿಲ್ಲದ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದು ಉಚಿತವೇ? ಹಾಗೊಮ್ಮೆ ಯಾರಿಗೆ ಬೇಕಾದರೂ ಅದು ಸುಲಭದಲ್ಲಿ ಸಿಗುವಂತೆ ಧಾರಾಳವಾಗಿದೆ ಎಂದರೆ ಅದಕ್ಕೆ ಬೆಲೆ ಇಲ್ಲವೆಂದೇ ಅರ್ಥ. ಪ್ರೀತಿ ಅತ್ಯಂತ ಮೌಲ್ಯಯುತ ಎನಿಸಿಕೊಳ್ಳುವುದು ಅದನ್ನು ನಮ್ಮೊಳಗೆ ಬಚ್ಚಿಟ್ಟುಕೊಂಡಾಗ ಮಾತ್ರ. ಅದು ಪ್ರದರ್ಶನದ ವಸ್ತುವಾಗಬೇಕಿಲ್ಲ. ರಸ್ತೆ ಬೀದಿಗಳಲ್ಲಿ, ಪಾರ್ಕು-ಪೇಟೆಯಲ್ಲಿ ಎಲ್ಲೆಂದರಲ್ಲಿ ಅದನ್ನು ಪ್ರದರ್ಶಿಸುವುದರಿಂದ ಅದರ ಬೆಲೆ ಕಳೆದು ಹೋಗುವುದರ ಜತೆಗೆ ಅದು ದುರುಪಯೋಗವಾಗುವ ಸಾಧ್ಯತೆಯೇ ಹೆಚ್ಚು. ಹಾಗೆಂದು ಅದು ಕೇವಲ ಸಂಗ್ರಹಿಸಿಟ್ಟುಕೊಳ್ಳುವಂಥದ್ದೂ ಅಲ್ಲ. ಹಣವನ್ನು ಪೆಠಾರಿಯಲ್ಲಿಟ್ಟು ಬೀಗ ಹಾಕಿ, ಪ್ರತಿ ದಿನವೂ ಅದರ ಮುಚ್ಚಳ ತೆಗೆದು ನೋಡಿಕೊಂಡ ಮಾತ್ರಕ್ಕೆ ಪ್ರಯೋಜನವೇನು ಬಂತು?
ಅದು ವಿನಿಯೋಗವಾಗಬೇಕು. ಸತ್ಕಾರ್ಯಕ್ಕೆ, ಸಕಾಲಕ್ಕೆ, ಸದ್ವ್ಯಕ್ತಿಗಳಿಗೆ ಅದು ಬಳಕೆಯಾದಾಗ ಅದರ ಮೌಲ್ಯ ಇನ್ನಷ್ಟು ಹೆಚ್ಚುತ್ತದೆ. ಜತೆಗೆ ಅದರಿಂದ ನಮಗೆ ಸಿಗುವ ಆನಂದ ಮತ್ತು ತೃಪ್ತಿಯ ಪರಿಮಾಣವೂ ಹೆಚ್ಚುತ್ತದೆ. ಹಾಗೆಯೇ ಪ್ರೀತಿಯೂ ಸಹ. ಅದನ್ನು ಸೂಕ್ತ, ಸಪಾತ್ರ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬೇಕು. ನಮ್ಮ ಪ್ರೀತಿಯನ್ನು ಪಡೆದ ವ್ಯಕ್ತಿ ಅದರಿಂದ ಇನ್ನಷ್ಟು ಮಾನವೀಯ ಪ್ರೀತಿಯನ್ನು ಗಳಿಸಿಕೊಳ್ಳುವಂತಿರಬೇಕು. ಅದರ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಆಗಲೇ ಪ್ರಿತಿಗೊಂದು ಬೆಲೆ. ನೆನಪಿಡಿ, ನಮ್ಮ ಪ್ರೀತಿ ಬೀದಿಗೆ ಬಿಸಾಡುವ ಕಸವಲ್ಲ.

-ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.