ಬೈಟುಕಾಫಿ

ಕಲ್ಲು ಘಂಟೆ ಬಾರಿಸುತ್ತೆ!

ದೇವಸ್ಥಾನದ ಘಂಟೆಯಂತೆ ನಾದ ಹೊಮ್ಮಿಸುವ ವಿಸ್ಮಯಕಾರಿ ಬಂಡೆ ಯಾದಗಿರಿ ಬಳಿಯ ಕಂಚಗಾರಹಳ್ಳಿಯಲ್ಲಿ ಇದೆ...

ಕಲ್ಲು ಘಂಟೆ ಬಾರಿಸುತ್ತೆ!
Published On :

ದೇವಸ್ಥಾನದ ಘಂಟೆಯಂತೆ ನಾದ ಹೊಮ್ಮಿಸುವ ವಿಸ್ಮಯಕಾರಿ ಬಂಡೆ ಯಾದಗಿರಿ ಬಳಿಯ ಕಂಚಗಾರಹಳ್ಳಿಯಲ್ಲಿ ಇದೆ.

ಬಂಡೆಗೆ ಬಾರಿಸಿದರೆ ಘಂಟಾನಾದ ಹೊಮ್ಮುತ್ತೆ!
ಕಿವಿ ಮೇಲೆ ಹೂವು ಇಡುತ್ತಿಲ್ಲ ಸ್ವಾಮಿ. ಜಿಲ್ಲಾ ಕೇಂದ್ರ ಯಾದಗಿರಿಯಿಂದ ಎಂಟೇ ಕಿ.ಮೀ ದೂರದಲ್ಲಿರುವ ಕಂಚಗಾರಹಳ್ಳಿ ಗ್ರಾಮದಲ್ಲಿ ಇಂಥ ವಿಶಿಷ್ಟ ಬಂಡೆ ಇದೆ. ಮತ್ತೊಂದು ಕಲ್ಲಿನಿಂದ ಇದಕ್ಕೆ ಬಡಿದರೆ ದೇವಸ್ಥಾನದಲ್ಲಿನ ಘಂಟೆಯಂತೆ 'ಢಣ್‌ಢಣ್‌' ಎಂಬ ನಾದ ಹೊಮ್ಮುತ್ತದೆ. ಸುಮಾರು ಎರಡು ಕಿ.ಮೀ.ವರೆಗೂ ಇದು ಅಲೆಅಲೆಯಾಗಿ ಕೇಳಿಸುತ್ತದೆ.
ಬೃಹತ್ ಬಂಡೆಗಳಿಂದ ಆವೃತವಾಗಿರುವ ರಮಣೀಯ ಬೆಟ್ಟ ಯಾವ ಶತಮಾನದಲ್ಲಿ ನಿರ್ಮಾಣವಾಗಿದೆಯೋ ಗೊತ್ತಿಲ್ಲ. ಆದರೆ ಈ ಬೆಟ್ಟದಲ್ಲಿನ ಎಲ್ಲಾ ಕಲ್ಲೂಗಳೂ ನಾದ ಹೊಮ್ಮಿಸುವುದಿಲ್ಲ. ಒಂದು ಬಂಡೆಯಿಂದ ಮಾತ್ರ ಈ ರೀತಿಯ ಶಬ್ದ ಬರುತ್ತಿದೆ.  
ನೋಡಲು ಸಾಮಾನ್ಯ ಕಲ್ಲಿನಂತೆಯೇ ಇರುವ ಈ ಬಂಡೆ ಸುತ್ತಮುತ್ತಲ ಗ್ರಾಮದವರಿಗೆ ಕೌತುಕದ ವಿಷಯ.  ಇದರಿಂದ ಹೊಮ್ಮುವ ನಾದಕ್ಕೆ ಕಾರಣ ಗೊತ್ತಾಗಿಲ್ಲ. ಆ ಬಗ್ಗೆ ಸಂಶೋಧನೆಯೂ ನಡೆದಿಲ್ಲ. ಕಲ್ಲಿನಲ್ಲಿ ಇರುವ ಖನಿಜಾಂಶವೋ ಅಥವಾ ಮತ್ತಾವ ಕಾರಣವಿದೆಯೇ ಎನ್ನುವುದು ಗೊತ್ತಾಗಬೇಕಿದೆ. ಈ ಅಪರೂಪದ ಬಂಡೆಯನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಬರುತ್ತಾರೆ. ಹಂಪಿಯ ಸಂಗೀತ ಗೋಪುರದಲ್ಲಿನ ವಿಶಿಷ್ಟ ಕಲ್ಲುಗಳು ಇಲ್ಲಿನವೇ ಆಗಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.
ಈ ವಿಸ್ಮಯಕಾರಿ ಬಂಡೆಗೆ ನೇರವಾಗಿ ಮೌನೇಶ್ವರ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಈ ಗ್ರಾಮ ಹಿಂದೆ ಆಯುಧಗಳನ್ನು ತಯಾರಿಸಲಾಗುತ್ತಿತ್ತಂತೆ. ಅದರಿಂದಾಗಿಯೇ ಕಂಚಗಾರಹಳ್ಳಿ ಎಂದು ಹೆಸರು ಬಂದಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಐತಿಹಾಸಿಕ ಹಾಗೂ ಪುರಾತನ ಸ್ಮಾರಕಗಳು ಜಿಲ್ಲೆಯಲ್ಲಿ ಹೇರಳವಾಗಿವೆ. ಅವುಗಳನ್ನು ಸಂರಕ್ಷಿಸುವ ಕಾರ್ಯ ಮಾತ್ರ ಆಗುತ್ತಿಲ್ಲ. ನಿಧಿಗಳ್ಳರ ಹಾವಳಿಗೆ ಇಂಥ ಸ್ಮಾರಕಗಳು ಬಲಿಯಾಗುತ್ತಿವೆ. ಆದ್ದರಿಂದ ಈ ವಿಸ್ಮಯಕಾರಿ ಬಂಡೆಯ ರಕ್ಷಣೆಗೆ ಸರ್ಕಾರ ಮುಂದಾಗಬೇಕಿದೆ.

ಖನಿಜ ಕಾರಣ?
ಬಂಡೆಯಲ್ಲಿ ಕಬ್ಬಿಣ ಅಥವಾ ಮತ್ತಾವುದೋ ಖನಿಜಾಂಶ ಇರುವ ಸಾಧ್ಯತೆಯಿದೆ.
 ಅಲ್ಲಿಗೆ ಭೇಟಿ ನೀಡಿ ಕಲ್ಲಿನ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗುವುದು. ನಂತರವಷ್ಟೇ
 ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲು ಸಾಧ್ಯ.
- ಮುಕುಂದಪ್ಪ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ

ರಕ್ಷಿಸಿ
ಅಪರೂಪದ ಬಂಡೆಯನ್ನು ಸಂರಕ್ಷಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ನಿಧಿಗಳ್ಳರ ಕಣ್ಣಿಗೆ ಬೀಳುವ ಮುನ್ನವೇ ಆ ಕಾರ್ಯ ಆಗಬೇಕು. ಜತೆಗೆ ಈ ಬಂಡೆ ಬಗ್ಗೆ ಸಂಶೋಧನೆ ನಡೆಸಿ ನಾದದ ಕಾರಣ ಪತ್ತೆ ಮಾಡಬೇಕು.
- ಸೈದಪ್ಪ ಗುತ್ತೇದಾರ, ವಿಠ್ಠಲ
    ಕಂಚಗಾರಹಳ್ಳಿ ನಿವಾಸಿಗಳು
 
-ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.