ಬೈಟುಕಾಫಿ

ಮನಸ್ಸನ್ನು ಸುತ್ತಾಡಲು ಬಿಡಿ

Published On :

ಅದ್ಯಾರು ಹೇಳಿಬಿಟ್ಟರೋ ನಮ್ಮ ಮನಸ್ಸು ಅತಿ ಚಂಚಲ. ಅದನ್ನು ಹಿಡಿದಿಟ್ಟುಕೊಳ್ಳಬೇಕು. ಅದಕ್ಕಾಗಿ ದೇವರನ್ನು ಮೊರೆ ಹೋಗುವುದೊಂದೇ ಮಾರ್ಗ! ಇಲ್ಲೇ ವಿಚಿತ್ರವೆನಿಸುವುದು, ಏಕೆಂದರೆ ನಿಮ್ಮ ಮಾತನ್ನೇ ಕೇಳಲು ಸಿದ್ಧನಿಲ್ಲದ ನಿಮ್ಮ ಮನಸ್ಸು ಬೇರೆಯವರ ಮಾತನ್ನು ಕೇಳಲು ಸಾಧ್ಯವೇ? ಅದರಲ್ಲೂ ಈವರೆಗೆ ಯಾರ ಕಣ್ಣಿಗೂ ಬೀಳದ, ಹೇಗಿದ್ದಾನೆಂದು ಅರಿಯದ ದೇವರು ನಿಮ್ಮ ಮನಸ್ಸನ್ನು ಹಿಡಿದಿಡಲು ಹೇಗೆ ಸಾಧ್ಯ? ಇದಕ್ಕಿಂತ ಹಾಸ್ಯಾಸ್ಪದ ಸಂಗತಿ ಇನ್ನೊಂದು ಈ ಜಗತ್ತಿನಲ್ಲಿ ಇಲ್ಲ.
ಬಹುತೇಕ ಹೆತ್ತವರು ತಮ್ಮ ಮಕ್ಕಳ ವಿಷಯದಲ್ಲಿ ಮಾಡುವ ತಪ್ಪೂ ಇದೇ. ಮಕ್ಕಳು ಏಕಾಗ್ರತೆಯಿಂದ ಓದುವುದೇ ಇಲ್ಲ. ಅವರ ಮನಸ್ಸು ಒಂದು ಕಡೆ ನಿಲ್ಲುವುದೇ ಇಲ್ಲ. ತಮ್ಮ ಮಕ್ಕಳು ಕಡಿಮೆ ಅಂಕ ಗಳಿಸಲು ಇದೇ ಕಾರಣ... ಇತ್ಯಾದಿ ಹಳಹಳಿ ಪ್ರತಿ ಪೋಷಕರಿಂದಲೂ ಕೇಳಿ ಬರುತ್ತಲೇ ಇರುತ್ತದೆ. ಒಂದೊಮ್ಮೆ ಮಕ್ಕಳಲ್ಲಿ ಅಂಥದ್ದೊಂದು ಏಕಾಗ್ರತೆಯನ್ನು ಎಳವೆಯಲ್ಲೇ ಪ್ರತಿ ಮಗುವೂ ಹೊಂದಿದ್ದೇ ಆದರೆ ಇಷ್ಟು ಹೊತ್ತಿಗೆ ಈ ಜಗತ್ತಿನ ಬಹುಭಾಗ ಕೇವಲ ಶಿಲಾ ಮೂರ್ತಿಗಳಷ್ಟೇ ಕಾಣುತ್ತಿದ್ದವು. ಎಂಥ ಅಪಾಯಕಾರಿಯಾಗಿ ನಾವು ಯೋಚಿಸುತ್ತೇವೆ ಎಂಬುದನ್ನು ನೋಡಿ. ಅಷ್ಟಕ್ಕೂ ಮನಸ್ಸೇಕೆ ಒಂದು ಕಡೆ ನಿಲ್ಲಬೇಕು? ಅತ್ತಿತ್ತ ಓಡಾಡುವುದು, ಎಲ್ಲ ಸಂಗತಿಗಳ ಮೇಲೆ ಹರಿದಾಡುವುದು ಅದರ ಸಹಜ ಗುಣ. ಅಂಥ ಗುಣವನ್ನು ಮನಸ್ಸು ಹೊಂದಿರದೇ ಇದ್ದಿದ್ದರೆ ಎಷ್ಟೋ ವಿಚಾರಗಳ ಬಗ್ಗೆ ನಮಗೆ ಅರಿಯಲೇ ಆಗುತ್ತಿರಲಿಲ್ಲ. ಅಷ್ಟಕ್ಕೂ ನಾವು ಇವತ್ತು ಧಾರ್ಮಿಕರಾಗಿದ್ದರೆ, ದೇವರು, ಧರ್ಮಗಳನ್ನು ನಂಬುತ್ತಿದ್ದರೆ ಅದಕ್ಕೂ ಮನಸ್ಸಿನ ಚಾಂಚಲ್ಯವೇ ಕಾರಣ ಎಂಬುದು ಗೊತ್ತೇ? ಏಕೆಂದರೆ ಒಂದೊಮ್ಮೆ ಮನಸ್ಸು ಯಾವುದೋ ಕ್ಷುಲ್ಲಕ ಸಂಗತಿಯೊಂದರ ಬಗ್ಗೆ ಕೀಳು ಅಭಿರುಚಿಯೆಡೆಗೆ ಕೇಂದ್ರೀಕೃತವಾಗಿಬಿಟ್ಟಿತ್ತು ಎಂದುಕೊಳ್ಳಿ. ಮನಸ್ಸಿಗೆ ಒಂದೊಮ್ಮೆ ಚಂಚಲ ಸ್ವಭಾವ ಇರದಿದ್ದರೆ ಅದರಿಂದ ನಾವು ಹೊರಬರಲು ಸಾಧ್ಯವಾಗುತ್ತಲೇ ಇರಲಿಲ್ಲ. ಅಲ್ಲಿಯೇ ನಾವು ಉಳಿದು ಹೋಗುತ್ತಿತ್ತು. ವ್ಯರ್ಥ ವಸ್ತುವೊಂದನ್ನು ಕಂಡಾಕ್ಷಣ ಅದನ್ನೇ ಪರಮ ಪಾವನವೆಂದುಕೊಂಡು ಬಿಡುತ್ತಿದ್ದೆವು. ಸದ್ವಿಚಾರ, ಸಚಾರಿತ್ರಯಗಳು ನಮ್ಮ ಗಮನಕ್ಕೆ ಬರುತ್ತಲೇ ಇರಲಿಲ್ಲ. ಏಕಾಗ್ರತೆ ಎಂಬುದು ನಮ್ಮ ಸಾಧನೆಯಷ್ಟೆ ಅಗಬೇಕು. ಬೇಕಿದ್ದಾಗ ಪ್ರಯತ್ನ ಪೂರ್ವಕ ಅದನ್ನು ನಾವು ಗಳಿಸಿಕೊಳ್ಳಬೇಕು. ವಿಸ್ತಾರದ ಸಂಗತಿಗಳೆಲ್ಲದರತ್ತ ಮಕ್ಕಳ ಗಮನ ಹರಿಯುತ್ತಲೇ ಇರಬೇಕು. ಆಗಲೇ ಅವರ ಚಿಂತನೆಗಳು ವಿಕಾಸಗೊಂಡು ವಿವೇಚನೆ ಮೊಳೆಯಲು ಸಾಧ್ಯ. ಅದಿಲ್ಲದಿದ್ದರೆ ಒಂದಿಡೀ ಜನಾಂಗ ಕೀಲಿಕೊಟ್ಟ ಯಂತ್ರಗಳಂತೆ ಕೇವಲ ಒಂದೇ ಕೆಲಸ ಮಾಡುತ್ತಲೇ ಇರುತ್ತದೆ. ಕ್ರಿಯಾಶೀಲತೆ ಮರೆಯಾಗಿ ಹೋಗಿಬಿಡುವ ಅಪಾಯಗಳಿವೆ.

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.