ಅಗ್ರಿ FACEಬುಕ್

ಬೆರಳ ತುದಿಯಲ್ಲಿ ಮಾಹಿತಿ ಪಡೆಯುವ ಕಾಲದಲ್ಲಿ ಸಾಮಾಜಿಕ ತಾಣಗಳ ಮೂಲಕ ಕೃಷಿಕರು ಮಾಹಿತಿ, ಸಂವಹನ ಸಾಧ್ಯವಿಲ್ಲವೇ? ಏಕಿಲ್ಲ ಎಂದು ಪ್ರಶ್ನಿಸುತ್ತಾರೆ ಕೃಷಿಕರ ವೇದಿಕೆ ಎಂಬ ಹಣೆಪಟ್ಟಿಯುಳ್ಳ ಗ್ರೂಪ್ನ ರೂವಾರಿ ಪತ್ರಕರ್ತ ಮಹೇಶ್ ಪುಚ್ಚೆಪ್ಪಾಡಿ.
ಹೌದು, ಸಾಮಾಜಿಕ ತಾಣ ಫೇಸ್ಬುಕ್ನಲ್ಲಿ ಸಂಚಲನವನ್ನುಂಟು ಮಾಡುತ್ತಿದೆ 'ಅಗ್ರಿಕಲ್ಚರಿಸ್ಟ್ ಗ್ರೂಪ್' ಇದು ಕೇವಲ ನಾಲ್ಕೈದು ಸದಸ್ಯರೊಂದಿಗೆ ಆರಂಭಗೊಂಡದ್ದು. ಆದರೆ, ಈಗ ಇದರ ಸದಸ್ಯರ ಸಂಖ್ಯೆ ಸುಮಾರು ಎರಡು ಸಾವಿರ ಸನಿಹ. ರಾಜ್ಯದ ನಾನಾ ಕಡೆಗಳ ಕೃಷಿಕರಲ್ಲದೆ ಯುವಕರೂ ಇದ್ದಾರೆ. 20ರಿಂದ 60 ವಯೋವುತಿಯವರು ಇಲ್ಲಿ ಸದಾ ಸಕ್ರಿಯ. ಬೆಂಗಳೂರು, ಶಿರಸಿ, ಮಂಗಳೂರು ಹೀಗೆ ಹಲವು ಪ್ರದೇಶಗಳ ಕೃಷಿ ಮಿತ್ರರು ತಮ್ಮ ಅನುಭವ ಹಂಚುತ್ತಾರೆ.
ಕೃಷಿಕರು ಬೇಸಾಯದಲ್ಲಿ ಪಡೆದ ಅನುಭವ ಇಲ್ಲಿ ಹಂಚಿಕೆ. ಅಲ್ಲದೆ, ಕೃಷಿ ವಲಯದ ಸಮಸ್ಯೆಯನ್ನೂ ಇಲ್ಲಿ ಪೋಸ್ಟ್ ಮಾಡುತ್ತಾರೆ. ಅದರ ಬಗೆಗೆ ಕೃಷಿ ತಜ್ಞರು ಅಭಿಪ್ರಾಯ ಮಂಡಿಸುತ್ತಾರೆ.
ಮಾರುಕಟ್ಟೆ ಧಾರಣೆ ಲಭ್ಯ
ಇಲ್ಲಿ ಕೃಷಿ ವಿಷಯಗಳ ಕುರಿತು ಮಾತ್ರವೇ ಚರ್ಚಿಸುವ- ಪ್ರಶ್ನಿಸುವ ಅವಕಾಶ. ಯಾವುದಾದರೂ ಒಂದು ಬೆಳೆಯನ್ನು ಚರ್ಚಾ ವಿಷಯವನ್ನಾಗಿಟ್ಟುಕೊಂಡು ಪ್ರತಿಯೊಬ್ಬರೂ ಅವರವರ ಅಭಿಪ್ರಾಯ ಮಂಡಿಸಬಹುದು. ಅದು ಕೃಷಿ ಚಟುವಟಿಕೆಗೆ ಸೂಕ್ತ, ಇಷ್ಟವಾಗುವಂಥದ್ದಾಗಿರಬೇಕು. ಬೆಳೆಗೆ ತಗುಲುವ ರೋಗ, ಕಾರಣ, ಅದಕ್ಕಿರುವ ಸೂಕ್ತ ಪರಿಹಾರ ಹೀಗೆ ಮಾಹಿತಿಗಳು ಸದಾ ಸಿದ್ಧ. ತೆಂಗು, ಬಾಳೆ, ಬತ್ತ ನಾಟಿ, ತರಕಾರಿ ಇತ್ಯಾದಿ ಬೆಳೆಗಳ ಪ್ರತಿದಿನದ ಮಾರುಕಟ್ಟೆ ಧಾರಣೆ ಸಹ ಸದಾ ಲಭ್ಯ.
ಆರೋಗ್ಯಕರ ಚರ್ಚೆ
ಇಲ್ಲಿ ಚರ್ಚೆಗೊಳಗಾಗುವ ವಿಷಯಗಳು ಹಲವು. ರಾಸಾಯನಿಕ ಗೊಬ್ಬರ, ಪೊಟ್ಯಾಷಿಯಂ ಪಾಸ್ಪನೇಟ್, ಅಡಕೆ ಬೆಳೆಯ ಅಸಲು- ಫಸಲು, ತೊಂಡೆ ಬಳ್ಳಿಯ ರೋಗ... ಹೀಗೆ ಹಲವು ವಿಷಯಗಳಲ್ಲಿ ನಡೆದ ಬಿಸಿ ಚರ್ಚೆಗಳಂತೂ ತೀವ್ರವಾಗಿತ್ತು. ಅಷ್ಟೇ ಅಲ್ಲ, ಫಲಕಾರಿಯೂ ಆಯಿತು. ಸಾಂಪ್ರದಾಯಿಕ ಕೃಷಿಕರೂ ಅಲ್ಲದೆ ಅನೇಕರಿಗೆ ಇದರಿಂದ ವರದಾನವೆನಿಸಿರುವ ಪ್ರಯೋಜನವೂ ಬಹಳ.
ಸರ್ವೆ ಕಾರ್ಯ
ಕೃಷಿಕರ ವೇದಿಕೆ ಗ್ರೂಪ್ ನೇತೃತ್ವದಡಿ ಕೃಷಿ ರಂಗದ ಪ್ರಗತಿಗಾಗಿ ಕೃಷಿ ಕ್ಷೇತ್ರಗಳಿಗೆ ನೇರ ಭೇಟಿ ಕೊಡುವ ಸರ್ವೆ ಕಾರ್ಯವೂ ನಡೆಯುತ್ತಿದೆ. 'ಒಣಗಿಸಿ ಕಟ್ಟು ಕಟ್ಟಿದ ಹಾಳೆ ಮಾರಾಟಕ್ಕೆ ಸಿದ್ಧ. ನಮ್ಮ ಪಕ್ಕದಲ್ಲೇ ತಟ್ಟೆ ಮಾಡುವವರಿದ್ದಾರೆ. ಒಂದು ಹಾಳೆಗೆ 75 ಪೈಸೆ'- ಈ ಮಾದರಿಯ ಜಾಹೀರಾತನ್ನೂ ವೇದಿಕೆಯಿಂದ ನೋಡಬಹುದು.
ಯುವ ಜನತೆಯು ಕೃಷಿ ವಲಯದಿಂದ ದೂರ ಹೋಗುತ್ತಿರುವ ಇಂದಿನ ಕಾಲದಲ್ಲಿ ಯುವಕರೂ ಕೃಷಿಯತ್ತ ಬೆರಗುಗಣ್ಣಿನಿಂದ ನೋಡಬೇಕು ಮತ್ತು ಕೃಷಿರಂಗದ ಚಟುವಟಿಕೆ ಎಲ್ಲರಿಗೂ ಅರಿತುಕೊಳ್ಳಬೇಕೆಂದು ಹುಟ್ಟಿಕೊಂಡಿರುವ ಅಗ್ರಿಕಲ್ಚರಿಸ್ಟ್ ಗ್ರೂಪ್ಗೆ ಆಲ್ ದಿ ಬೆಸ್ಟ್ ಎನ್ನೋಣ.
ಈ ಪೇಜನ್ನು ವೀಕ್ಷಿಸಲು https:www.facebook.com/groups/agriculturist ಭೇಟಿ ನೀಡಿ.
ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಿರುವಾಗ ಇಂಥ ವೇದಿಕೆ ಸ್ವಾಗತಾರ್ಹ. ಪ್ರಾಯಶಃ ಕೃಷಿ ರಂಗದ ಆಕರ್ಷಣೆ ಹೆಚ್ಚಿಸುವಲ್ಲಿ ಕೃಷಿಕರ ವೇದಿಕೆ ಸಾಕಷ್ಟು ಶ್ರಮಿಸುತ್ತಿದೆ
-ರಾಕೇಶ್ಕುಮಾರ್ ಕಮ್ಮಜೆ,
-ನವೀನ್ ಭಟ್, ಇಳಂತಿಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


