ಬೈಟುಕಾಫಿ

ಬೆಳ್ಳುಳ್ಳಿ ಬೆಳೆಯೋಣ..

Published On :

ಕಾರವಾರದಿಂದ ಮಹೇಶ್ ನಾಯ್ಕ ಎಂಬವರು ಮೆಸೇಜ್ ಮಾಡಿದ್ದರು, 'ಬರೀ ಆಹಾರಗಳ ಸಂಯೋಜನೆ, ಮಹತ್ವದ ಬಗ್ಗೆಯೇ ಹೇಳುತ್ತೀರಿ. ಅದನ್ನು ಕೃಷಿ ಮಾಡುವುದನ್ನೂ ವಿವರಿಸಿ. ಇದರಿಂದ ನಮ್ಮಂಥ ರೈತರಿಗೆ ಉಪಯೋಗವಾಗುತ್ತದೆ' ಎಂದು.
ಮಹೇಶ್, ಖಂಡಿತಾ ನಾನು 'ಬೆಳ್ಳಿತಟ್ಟೆ'ಯಲ್ಲಿ ಅಂಥ ಮಾಹಿತಿಗಳನ್ನು ಬಡಿಸಬಹುದು. ಆದರೆ, 'ಕನ್ನಡಪ್ರಭ'ದಲ್ಲಿ ಬೆಳೆಗಳ ಬಗ್ಗೆಯೇ ಬರುವ 'ಬೆಳೆಬಾತ್‌' ನೀವು ನೋಡಿಲ್ಲ ಅಂತ ಕಾಣುತ್ತದೆ. ಅದರಲ್ಲಿ ಒಂದೊಂದು ಬೆಳೆಯ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುತ್ತದೆ. ಈಗ ನೀವು ಹೇಳಿದಿರಿ ಎನ್ನುವ ಕಾರಣಕ್ಕಾಗಿ ಬೆಳ್ಳುಳ್ಳಿ ಕೃಷಿ ಬಗ್ಗೆ ವಿವರಿಸುತ್ತೇನೆ.
ಬೆಳ್ಳುಳ್ಳಿ ಗಡ್ಡೆ ಚೆನ್ನಾಗಿ ಬಲಿತ ಮೇಲೆ ಮೊಳಕೆಗೆ ಇಡಬೇಕು. ಹಸಿರು ಮೊಳಕೆ ಕಾಣಿಸಿಕೊಂಡಾಗ ಅದು ನಾಟಿಗೆ ಯೋಗ್ಯ. ನೀರು ಬಸಿದುಹೋಗುವ, ಫಲವತ್ತಾದ ಮಣ್ಣು ಇದಕ್ಕೆ ಯೋಗ್ಯ. ತಂಪು ಹವಾ ಅಂತೂ ಅತಿಮುಖ್ಯ. ಅರೆಮಲೆನಾಡು ಪ್ರದೇಶಗಳಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಅತಿಮಳೆ ಬೀಳುವ ಕಡೆಗಳಲ್ಲಿ ಬೆಳ್ಳುಳ್ಳಿ ಬೆಳೆಯುವ ಪ್ರಯತ್ನವನ್ನು ಖಂಡಿತಾ ಮಾಡಬಾರದು. ಕೊಳೆತು ಹೋಗುವುದೇ ಹೆಚ್ಚು.
15-20 ಸೆಂ.ಮೀ.ಗಳಲ್ಲಿ ಸಾಲುಗಳನ್ನು ನಿರ್ಮಾಣ ಮಾಡಬೇಕು. ಪ್ರತಿ 8 ಸೆ.ಮೀ.ಗೆ ಒಂದು ಎಸಳು ನೆಡಬೇಕು. ನೆಟ್ಟ 30 ದಿನಗಳ ನಂತರ ಕೊಟ್ಟಿಗೆ ಗೊಬ್ಬರ ಕೊಡಬೇಕು. ಆರೈಕೆ ವೇಳೆ ನೀರು ಕೊಡುವಾಗ ತುಂಬಾ ಎಚ್ಚರ. ವಾತಾವರಣವನ್ನು ಗಮನದಲ್ಲಿಟ್ಟುಕೊಂಡು, ಎಷ್ಟು ಅಗತ್ಯವೋ ಅಷ್ಟು ನೀರು ಪೂರೈಸಬೇಕು. ನೆಟ್ಟ ಕೆಲವೇ ದಿನಗಳಲ್ಲಿ ಮಳೆ ಬಂದರೆ ನಿಮ್ಮ ಅದೃಷ್ಟ ನೆಟ್ಟಗಿಲ್ಲ ಅಂತಲೇ! ಒಣವಾತಾವರಣವಿದ್ದರೆ ಬೆಳ್ಳುಳ್ಳಿ ನಿಜಕ್ಕೂ ಬಂಪರ್. ನುಸಿ ಹಾಗೂ ಶಿಲೀಂದ್ರ ರೋಗಗಳು ಹೆಚ್ಚು ಕಾಡುತ್ತವೆ. 4-5 ತಿಂಗಳಲ್ಲಿ ಫಸಲು ಕೈಗೆ ಸಿಗುತ್ತದೆ.
ಗಿಡದ ಮೇಲ್ಭಾಗ ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗಿದಾಗ ಅದು ಒಣಗುತ್ತಿದೆ ಎಂದರ್ಥ. ಅಂದರೆ, ಕೊಯ್ಲು ಮಾಡಲು ಅದು ಸೂಕ್ತ ಸಮಯ. ಕೊಯ್ಲಾದ ನಂತರ 3-4 ದಿನ ನೆರಳಿನಲ್ಲಿ ಒಣಗಿಸಿ ನಂತರ ಕೋಣೆಗಳೊಳಗೆ ದಾಸ್ತಾನು ಮಾಡಲಾಗುತ್ತದೆ. ಚೆನ್ನಾಗಿ ಒಣಗಿದ ಬೆಳ್ಳುಳ್ಳಿ ಗಾಳಿ ಸಂಚಾರವಿರುವ ಸಾಮಾನ್ಯ ಕೋಣೆಯಲ್ಲಿ ಹೆಚ್ಚುಕಾಲ ಕೆಡದೇ ಇರುತ್ತದೆ.
ನಾನು ಗಮನಿಸಿದ ಹಾಗೆ ಉತ್ತರ ಭಾರತದ ವ್ಯಾಪಾರದಲ್ಲಿ ಬೆಳ್ಳುಳ್ಳಿಯಲ್ಲಿ ಯಾವ ಬಗೆಗಳನ್ನೂ ಗುರುತಿಸುವುದಿಲ್ಲ. ಆದರೆ ದಕ್ಷಿಣದಲ್ಲಿ, ಅದರಲ್ಲೂ ನಮ್ಮ ಬಳ್ಳಾರಿ ಭಾಗದಲ್ಲಿ 'ಫವಾರಿ', 'ರಾಜಲ್ಲೆ ಗಡ್ಡಿ' ಎಂಬ ಎರಡು ಬಗೆಗಳನ್ನು ಗುರುತಿಸಲಾಗುತ್ತದೆ.
ಲೂಧಿಯಾನದಲ್ಲಿರುವ ಪಂಜಾಬ್ ಕೃಷಿ ವಿಶ್ವವಿದ್ಯಾಲಯದಂತೆ ದೇಶದ ಎಲ್ಲ ವಿವಿಗಳೂ ಸಂಶೋಧನೆಗಳಿಗೆ ಮುಂದಾಗಬೇಕು. ಈಗಾಗಲೇ ಬೇರೆ ಬೇರೆ ಬೆಳೆಯ ಹೊಸ ತಳಿಗಳನ್ನು ಸಂಶೋಧಿಸಿ ಸೈ ಎನ್ನಿಸಿಕೊಂಡ ಪಂಜಾಬ್ ಕೃಷಿ ವಿವಿ, ಬೆಳ್ಳುಳ್ಳಿಯಲ್ಲಿ ಹೊಸ ತಳಿ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಇಂಥ ಪ್ರಯತ್ನ ಎಲ್ಲೆಡೆ ನಡೆದರೆ ಚೆನ್ನ. <

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.