ಬೈಟುಕಾಫಿ

ಪೂರ್ವ'ಗ್ರಹಪೀಡಿತ'ರಾಗಬೇಡಿ!

Published On :

ನಿಮ್ಮ ಮೇಲೆ ನೀವು ನಂಬಿಕೆ ಇಡಿ. ಜಗತ್ತನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ಅದನ್ನು ನಂಬಿಸಲು, ಮೆಚ್ಚಿಸಲೂ ಸಾಧ್ಯ ಇಲ್ಲ. ಹಣೆಬರಹ ಎಂದು ಕುಳಿತುಕೊಂಡರೆ, ಗ್ರಹಚಾರ, ಭವಿಷ್ಯಗಳನ್ನು ನಂಬುತ್ತಾ ಹೊರಟರೆ ಖಂಡಿತಾ ನಿಮ್ಮ ಭವಿಷ್ಯ ಬದಲಾಗಲು ಸಾಧ್ಯವೇ ಇಲ್ಲ. ನಮ್ಮನ್ನು ಮೀರಿದ, ನಮ್ಮ ವಿಶ್ವಾಸವನ್ನು ದಾಟಿದ ಭವಿಷ್ಯವೊಂದು ಇರಲಿಕ್ಕೆ ಸಾಧ್ಯವೇ ಇಲ್ಲ. ಗ್ರಹಗತಿಗಳು ಚಲಿಸುವುದೇ ನಮ್ಮ ಮನಸ್ಸಿನ ಗತಿಯನ್ನು ಅವಲಂಬಿಸಿ.
ಚಂಚಲನೊಬ್ಬನ ಪಾಲಿನ ಗ್ರಹಗಳು ಯಾವತ್ತೂ ಅವನನ್ನು ದೃಢವಾಗಿ ನಿಲ್ಲಸಲು ಸಾಧ್ಯವೇ ಇಲ್ಲ. ಹಾಗೆಂದು ನಂಬಿಕೆಗಳು ಸುಳ್ಳೆಂದಲ್ಲ. ಆದರೆ ಅಂಥ ವಿಚಾರಗಳು ಒಮ್ಮೆ ಮನಸ್ಸಿನ ಒಳ ಹೊಕ್ಕರೆ ಅದೇ ನಮ್ಮನ್ನು ಅಧೀರರನ್ನಾಗಿಸುತ್ತದೆ. ಅಂಥ ಅಧೀರತೆ ನಮ್ಮ ಸಾಮರ್ಥ್ಯವನ್ನು ಕಸಿದುಕೊಳ್ಳುತ್ತದೆ. ವ್ಯಕ್ತಿ ಕುಗ್ಗುವುದೇ ಆಗ. ತನ್ನ ಗುರಿಯತ್ತ ವ್ಯಕ್ತಿ ಹೊಂದಿದ್ದ ಏಕಾಗ್ರತೆಯನ್ನು ಅದು ಕದಡುತ್ತದೆ. ಸಹಜವಾಗಿಯೇ ವೈಫಲ್ಯಗಳು ಬೆಂಬತ್ತುತ್ತವೆ. ಯಶಸ್ಸು ದೂರವಾಗುತ್ತ ಸಾಗುತ್ತದೆ. ಇದನ್ನೇ ಕಾಕತಾಳೀಯ ಎನ್ನುವುದು.
ಇಷ್ಟಾಗಿಬಿಟ್ಟರೆ ಗ್ರಹಚಾರದ ಬಗೆಗಿನ ಭ್ರಮೆ ಗಟ್ಟಿಯಾಗಿಬಿಡುತ್ತದೆ. ಎಲ್ಲದಕ್ಕೂ ನಮ್ಮ ಸಮಯ ಈಗ ಸರಿಯಿಲ್ಲ. ಗ್ರಹಗತಿಗಳು ಕೆಟ್ಟದಾಗಿವೆ. ನಾವು ಈಗ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದು ಯಶಸ್ವಿಯಾಗುವುದಿಲ್ಲ ಎಂಬ ಮನೋಭಾವ ಕೂತುಬಿಟ್ಟಿರುತ್ತದೆ. ಹೀಗಾಗಿ ಪ್ರಯತ್ನಕ್ಕೆ ಮುಂದಾಗುವ ಮೊದಲೇ ಅದರ ಫಲವನ್ನು ನಕಾರಾತ್ಮಕವಾಗಿ ಗ್ರಹಿಸಿಬಿಡುತ್ತೇವೆ. ಇದನ್ನೇ 'ಪೂರ್ವಗ್ರಹಪೀಡಿತ' ಮನೋಭಾವ ಎನ್ನುವುದು. ಗ್ರಹಚಾರ ಎನ್ನುವುದು ಆರಂಭವಾಗುವುದೇ ನಮ್ಮ ಮನಸ್ಸಿನಲ್ಲಿ. ಈ ಜಗತ್ತಿನಲ್ಲಿ ಯಾವುದೇ ಗ್ರಹಗಳೂ ಕೆಟ್ಟದ್ದು ಎಂದು ಇಲ್ಲವೇ ಇಲ್ಲ. ಹಾಗೊಮ್ಮೆ ಇದ್ದಿದ್ದರೆ ಅದನ್ನು ನಾವು ಪೂಜಿಸುವ ಪ್ರಮೇಯವೇ ಇರುತ್ತಿರಲಿಲ್ಲ. ಕೆಟ್ಟದ್ದು ಎಂದಾದರೆ ಅದು ಪೂಜಾರ್ಹ ಹೇಗಾಗುತ್ತದೆ? ಅದನ್ನು ನೋಡುವ ನಮ್ಮ ದೃಷ್ಟಿಕೋನ ಕೆಟ್ಟದ್ದೇ ವಿನಾ ಅದರ ಅನುಗ್ರಹ ಕೆಟ್ಟದ್ದಲ್ಲ. ಇಂಥ ಭ್ರಮೆಗಳನ್ನು ಬಿಟ್ಟು ನಮ್ಮ ಪ್ರಯತ್ನಕ್ಕೆ ನಾವು ಬದ್ಧರಾಗಬೇಕು. ಅದರಲ್ಲಿ ಶ್ರದ್ಧೆ ಇರಬೇಕು. ದುಡುಕುವ ಬದಲು ಸಾಕಷ್ಟು ಚಿಂತಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವ ತಾಳ್ಮೆ ನಮ್ಮದಾಗಬೇಕು. ನಮ್ಮ ಪ್ರಯತ್ನಕ್ಕೆ ಯಶಸ್ಸಿನ ಬೆಂಬಲವಾಗಿ ಪೂಜೆ, ನಂಬಿಕೆಗಳು ನಿಲ್ಲಬೇಕೇ ಹೊರತೂ ಕೇವಲ ಅದರಿಂದಲೇ ನಮ್ಮ ಬದುಕು ಸರಿ ಹೋಗುತ್ತದೆ ಎಂಬುದು ಶುದ್ಧ ಮೂರ್ಖತನ. ಪ್ರಯತ್ನದ ನಂತರೂ ವಿಫಲವಾದರೆ ನಾವು ಎಡವಿದ್ದೇವೆ ಎಂದೇ ಅರ್ಥ. ಬಹುತೇಕರು ವೃಥಾ ಇಂಥ ಭ್ರಮೆಗಳಲ್ಲಿ ತೇಲುತ್ತ ಸದಾ ತಮ್ಮ ಹಣೆಬರಹ, ಗ್ರಹಚಾರವೇ ಸರಿ ಇಲ್ಲವೆಂದು ಗೊಣಗುತ್ತಾರೆ.
ಒಂದು ನೆನಪಿಡಿ, ಹುಟ್ಟು ನಮ್ಮ ಕೈಯಲ್ಲಿ ಇರುವುದಿಲ್ಲ. ಸಾವೂ ನಮ್ಮ ನಿರ್ಧಾರವಲ್ಲ. ಅದರೆ ಬದುಕು ನಮ್ಮದೇ ಪ್ರಯತ್ನದ ಫಲ.

-ಸಹನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.