ಗಾಢ ವಾಸನೆಯ, ಬಿಳಿ ಪಕಳೆಗಳ ಬೆಳ್ಳುಳ್ಳಿ
ಬೆಳ್ಳುಳ್ಳಿ ರುಚಿಯನ್ನು ಬಲ್ಲವರೇ ಬಲ್ಲರು. ಮಾನವ ಮತ್ತು ಬೆಳ್ಳುಳ್ಳಿ ಸಂಬಂಧ ಏಳು ಸಾವಿರ ವರ್ಷದ ಹಿಂದೆಯೇ ಶುರುವಾಯಿತಂತೆ. ಈಜಿಪ್ಟ್ ನಾಗರೀಕತೆಯನ್ನು ಅಧ್ಯಯನಿಸುತ್ತಾ ಹೋದರೆ, ಬೆಳ್ಳುಳ್ಳಿ ಬಗ್ಗೆ ಹಲವು ಸಂಗತಿಗಳನ್ನು ತಿಳಿದುಕೊಳ್ಳಬಹುದು.
ಬೆಳ್ಳುಳ್ಳಿಯ ಶಾಸ್ತ್ರೀಯ ಹೆಸರು ಆ್ಯಲಿಯಂ ಸಟೈವಮ್ ಲಿನ್. 'ಲಿಲ್ಲಿಯೇಸಿ' ವಂಶಕ್ಕೆ ಸೇರಿದ ಬೆಳ್ಳುಳ್ಳಿಯನ್ನು ಇಂಗ್ಲಿಷಿನಲ್ಲಿ 'ಗಾರ್ಲಿಕ್' ಎಂದು ಕರೆಯುತ್ತಾರೆ. ಹಿಂದಿಯಲ್ಲಿ 'ಲಸೂನ್', 'ಲಸಾನ್', ಬಂಗಾಳಿಯಲ್ಲಿ 'ರಶೂನ್', ಗುಜರಾತಿಯಲ್ಲಿ 'ಲಸಾನ್', ಕಾಶ್ಮೀರಿಯಲ್ಲಿ 'ರುಹಾನ್', ಮಲಯಾಳಂನಲ್ಲಿ 'ವೆಳ್ಳುಳ್ಳಿ', ಮರಾಠಿಯಲ್ಲಿ 'ಲುಸೂನ್', ಒರಿಯಾದಲ್ಲಿ 'ರುಸೋನ', ತಮಿಳಿನಲ್ಲಿ 'ವೆಲೈಪುಂಡು', ತೆಲುಗಿನಲ್ಲಿ 'ವೆಲ್ಲೂರಿ' ಎಂದು ಕರೆಯುತ್ತಾರೆ.
ಜನಸಂಖ್ಯೆ ಉತ್ಪಾದನೆಯಲ್ಲಿ ಚೀನಾ ಮತ್ತು ನಮ್ಮ ನಡುವೆ ಸ್ಪರ್ಧೆ ಎಷ್ಟು ಇದೆಯೋ ಹಾಗೆ ಬೆಳ್ಳುಳ್ಳಿ ಉತ್ಪಾದನೆಯಲ್ಲೂ ಇದೆ. ಚೀನಾ ನಂಬರ್ 1. ನಂತರ ಸ್ಥಾನ ನಮಗೆ. ಮೂರನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ, ನಾಲ್ಕರಲ್ಲಿ ಈಜಿಪ್ಟ್ ಬರುತ್ತವೆ. ಚೀನಾ ಪ್ರತಿವರ್ಷ 1,36,64,069 ಟನ್ ಬೆಳ್ಳುಳ್ಳಿ ಉತ್ಪಾದಿಸುತ್ತದೆ. ಜನಸಂಖ್ಯೆ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿ ವೇಗವಾಗ ಮುನ್ನುಗ್ಗುತ್ತಿರುವ ನಾವು ಅದೇ ಉತ್ಸಾಹವನ್ನು ಬೆಳ್ಳುಳ್ಳಿ ಉತ್ಪಾದನೆಯೆಡೆಗೆ ಕೊಡುತ್ತಿಲ್ಲ. ಏಕೆಂದರೆ, ನಮ್ಮ ಉತ್ಪಾದನೆ ಪ್ರಮಾಣ 8,33, 970 ಟನ್‌ಗಳಷ್ಟೇ. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಬೆಳ್ಳುಳ್ಳಿಗೆ ಭಾರಿ ಬೇಡಿಕೆ ಇದೆ. ಇಲ್ಲಿಂದ ರಫ್ತಾಗುವ ಬೆಳ್ಳುಳ್ಳಿ ಪುಡಿ, ವಿದೇಶಿಗರಿಗೆ ಹೆಚ್ಚು ಪ್ರಿಯ.
ಇದು ನೆಲದ ಕೆಳಗೆ ಗಡ್ಡೆ ಬಿಡುವ, ಅಗಲವಿಲ್ಲದ ಮತ್ತು ಚಪ್ಪಟೆಯಾದ ಎಲೆಗಳನ್ನೂ, ಚಿಕ್ಕ ಬಿಳಿಯ ಹೂಗಳನ್ನುಳ್ಳ ಸಾರ್ವಕಾಲಿಕ ಗಿಡ. ಕೆಲವು ತಳಿಗಳ ಒಂದು ಬೆಳ್ಳುಳ್ಳಿಯಲ್ಲಿ 35 ಚಿಕ್ಕ ಹೋಳುಗಳಿರುತ್ತವೆ. ಇನ್ನೂ ಕೆಲವು ದೊಡ್ಡ ಜಾತಿಯ ತಳಿಗಳು. ಕೇವಲ ಆರೇ ಆರು ಹೋಳುಗಳು ಇರುತ್ತವೆ. ಇದರ ಸುತ್ತ ಕಾಗದಂಥ ನವುರಾದ, ತಿಳಿಗುಲಾಬಿ ಬಣ್ಣದ ಕೋಶವಿರುತ್ತದೆ. ಈರುಳ್ಳಿಗಿಂತ ಗಾಢ ವಾಸನೆ ಇದರದ್ದು.
ನಮ್ಮಲ್ಲಿ ಬಹುತೇಕ ರೈತರು ಈರುಳ್ಳಿ ಬೆಳೆಯುವ ಜಾಗದಲ್ಲೇ ಬೆಳ್ಳುಳ್ಳಿಯನ್ನೂ ಬೆಳೆಯುತ್ತಾರೆ. ಬೆಳ್ಳುಳ್ಳಿಗೆ ಇನ್ನೂ ಫಲವತ್ತಾದ ಮಣ್ಣು, ಎತ್ತರದ ಪ್ರದೇಶ ಬೇಕಾಗುತ್ತದೆ. 900- 1200 ಮೀಟರ್ ಎತ್ತರದ ಪ್ರದೇಶ ಹೆಚ್ಚು ಸೂಕ್ತ. ಸುಲಭವಾಗಿ ನೀರು ಹರಿದುಹೋಗುವ, ಜಿಗುಟು ಮಣ್ಣು ತುಂಬಾ ಉತ್ತಮ. ಬೆಳೆಯುವಾಗ ತಂಪು ಹವೆ, ಬಲಿಯುವಾಗ ಶುಷ್ಕ ಹವೆ ಅತಿಮುಖ್ಯ. ಭಾರತದಲ್ಲಿ ಇದು ಅಲ್ಪಾವಧಿ ನೀರಾವರಿ ಬೆಳೆ. ದಕ್ಷಿಣ ಭಾರತದಲ್ಲಿ ಇದನ್ನು ಮೆಣಸಿನಕಾಯಿ, ಜೋಳ, ಆಲೂಗಡ್ಡೆ ಮತ್ತು ಹುರುಳಿಕಾಯಿಯೊಂದಿಗೆ ಪರ್ಯಾಯವಾಗಿ ಬೆಳೆಯುತ್ತಾರೆ.
ಇನ್ನು ಇದರ ಜಾತಿ, ಸಂಯೋಜನೆಗಳನ್ನು ಮುಂದಿನ ಅಂಕಣದಲ್ಲಿ ನೋಡೋಣ... <
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

