ಹಾಗಿದ್ದರೆ ನೀವೇನು?
ನೀವು ನೀವಾಗಿಲ್ಲದಿದ್ದರೆ ನಿಮ್ಮನ್ನು ಈ ಸಮಾಜ ಗುರುತಿಸುತ್ತದೆಯೇ? ಆಗಲೂ ನಿಮ್ಮನ್ನು ಅಷ್ಟೇ ಗೌರವಾದರಗಳಿಂದ ನೋಡುತ್ತದೆಯೇ? ನೀವು ಏನಾಗಿದ್ದೀರೋ ಅದಾಗಿಲ್ಲದಿದ್ದರೂ ನಿಮ್ಮ ಜನಪ್ರಿಯತೆ ಕುಗ್ಗುವುದೇ ಇಲ್ಲವೇ? ಹೀಗೊಮ್ಮೆ ನಿಮ್ಮನ್ನು ಪ್ರಶ್ನಿಸಿಕೊಂಡು ನೋಡಿ. ವಿಚಿತ್ರ ಎಂದೆನಿಸಬಹುದು. 'ಇದೇನಿದು?' ನಾನು ನಾನಾಗಿಲ್ಲದಿರುವುದು ಎಂದರೇನು? ಗೊಂದಲ ಸಹಜ.
ಆದರೆ, ನೀವು ಏನೆಂಬುದನ್ನು ಕಂಡುಕೊಳ್ಳಲು ಇದೇ ಸೂಕ್ತವಾದ ಮಾರ್ಗ. ನಿಮ್ಮ ವ್ಯಕ್ತಿತ್ವ ಎಷ್ಟು ನೈಜವಾದದ್ದು ಎಂಬುದನ್ನು ತಿಳಿದುಕೊಳ್ಳಲೂ ಇದೇ ಉಪಾಯ. ಬಹುಶಃ ಇದನ್ನು ಹೀಗೆ ಹೇಳಿದರೆ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದೇನೋ. ನೀವು ಏನು ಮಾಡಿಕೊಂಡಿದ್ದೀರಿ ಎಂದು ನಿಮ್ಮನ್ನು ಯಾರಾದರೂ ಪ್ರಶ್ನಿಸಿದರೆ ಥಟ್ಟನೆ ನಿಮ್ಮ ವೃತ್ತಿ ಅಥವಾ ಜೀವನೋಪಾಯಕ್ಕೆ ನೀವು ಕಂಡುಕೊಂಡ ಮಾರ್ಗ ಏನೆಂಬುದನ್ನು ಹೇಳುತ್ತೀರಿ. ಅದೇ ರೀತಿ ನಿಮ್ಮನ್ನು ಯಾವುದೇ ಅಧಿಕಾರಿ ಎಂಬ ಕಾರಣಕ್ಕೋ, ರಾಜಕಾರಣಿ ಎಂಬುದಕ್ಕೋ, ಊರಿನ ಮುಖಂಡ, ಪ್ರಭಾವಿ, ಶಿಕ್ಷಕ, ಬರಹಗಾರ, ಪತ್ರಕರ್ತ... ಹೀಗೆ ಬೇರೆಬೇರೆ ಕಾರಣಗಳಿಗಾಗಿ ಸಮಾಜ ಗುರುತಿಸುತ್ತಿರುತ್ತದೆ. ಅದೇ ಕಾರಣಕ್ಕೆ ನಿಮ್ಮನ್ನು ಗೌರವಿಸುತ್ತದೆ. ಒಂದೊಮ್ಮೆ ನೀವು ಬದುಕಿನ ಯಾವುದೇ ಹಂತದಲ್ಲಿ ಅಂಥದ್ದೊಂದು ಐಡೆಂಟಿಟಿಯಿಂದ ಹೊರಬಂದರೆಂದು ಅಂದುಕೊಳ್ಳಿ, ನೀವು ಈವರೆಗೆ ಹೊಂದಿದ್ದ ಅಧಿಕಾರ ಹೋಗುವುದಿರಬಹುದು, ಬರಹ ಸಾಧ್ಯವಾಗದೇ ಇರಬಹುದು... ಒಟ್ಟಾರೆ ನಿಮ್ಮನ್ನು ಈವರೆಗೆ ಸಮಾಜ ಏನೆಂದು ಗುರುತಿಸುತ್ತದೆಯೋ ಅದೀಗ ನೀವಲ್ಲ ಎಂಬ ಸ್ಥಿತಿಯಲ್ಲಿಯೂ ಸುತ್ತಲಿನವರು ನಿಮ್ಮನ್ನು ಮೊದಲಿನಷ್ಟೇ ಆಪ್ತವಾಗಿ ನಡೆಸಿಕೊಳ್ಳುತ್ತದೆಯೇ? ಒಂದೊಮ್ಮೆ ಹೌದು ಎಂಬುದು ನಿಮ್ಮ ಉತ್ತರವಾಗಿದ್ದರೆ ಅದು ನಿಜವಾಗಲೂ ನಿಮ್ಮ ಸ್ವಂತಿಕೆ. ಅದೇ ನಿಮ್ಮ ವ್ಯಕ್ತಿತ್ವ. ವೃತ್ತಿ, ಹವ್ಯಾಸ, ಅಧಿಕಾರ, ಹುದ್ದೆ ಇತ್ಯಾದಿಗಳಿಂದ ಹೊರತಾಗಿಯೋ ಪ್ರತಿಯೊಬ್ಬನಿಗೂ ಅವನದೇ ಆದ ಒಂದು ವ್ಯಕ್ತಿತ್ವ ಇರುತ್ತದೆ. ಅದು ನಿಮ್ಮದೇ ಆಗಿರಬೇಕಾದುದು ಅಥವಾ ಅದನ್ನು ನಿಮ್ಮದೇ ಆಗಿಸಿಕೊಳ್ಳುವುದು ಸುಲಭದ ಮಾತಲ್ಲ. ಮನುಷ್ಯ ಏನಾಗಿದ್ದಾನೆ ಎಂಬುದಕ್ಕಿಂತ ಅವನು ಹೇಗೆ ವರ್ತಿಸುತ್ತಾನೆ ಎಂಬುದರ ಮೇಲೆ ಅವನ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ನಿಮ್ಮ ಬಳಿ ಇರುವ ಶ್ರೀಮಂತಿಕೆ, ಅಧಿಕಾರ ಅಥವಾ ಇನ್ನೇನೋ ಒಂದರಿಂದ ಜನ ನಿಮ್ಮನ್ನು ಗುರುತಿಸುತ್ತಾರೆ ಎಂದರೆ ಅದೇ ನಿಮ್ಮ ವ್ಯಕ್ತಿತ್ವ ಎಂದುಕೊಳ್ಳುವುದು ಮೂರ್ಖತನ. ಏಕೆಂದರೆ ಹಾಗೆ ಸಿಗುವ ಪ್ರೀತಿ, ಬೆಲೆ, ಗೌರವ, ಆದರಗಳು ನಿಮಗಲ್ಲ. ನೀವೇನಾಗಿದ್ದಿರೋ ಅದಕ್ಕೆ. ಅದರಿಂದ ಹೊರತಾಗಿಯೂ ನೀವೊಬ್ಬ ಮಾನವ ಎಂದು ಗುರುತಿಸಿಕೊಂಡು ಪ್ರೀತಿ ವಿಶ್ವಾಸವನ್ನು ಗಳಿಸಿಕೊಳ್ಳುವುದಿದೆಯಲ್ಲ, ಅದರ ಸಾರ್ಥಕ್ಯಕ್ಕೆ ಸಾಟಿ ಇನ್ನೊಂದಿಲ್ಲ.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

