ನಿಂದನೆ ನಿಲ್ಲಿಸಿ,ವಂದನೆ ಸಲ್ಲಿಸಿ
ಇಬ್ಬರು ನಾವಿಕರು ಆಕಸ್ಮಿಕ ಅಪಘಾತಕ್ಕೆ ಒಳಗಾಗಿ ಒಂದು ನಿರ್ಜನ ದ್ವೀಪದಲ್ಲಿ ಬಿದ್ದರು. ಹತ್ತಿರದಲ್ಲಿ ಸಿಕ್ಕಿದ ಎಲೆ, ಕೊಂಬೆ, ನಾರುಗಳನ್ನು ಉಪಯೋಗಿಸಿ ಸಣ್ಣ ಗುಡಿಸಲನ್ನು ಕಟ್ಟಿಕೊಂಡರು. ಇಬ್ಬರು ನಾವಿಕರ ಪೈಕಿ ಒಬ್ಬ ತನ್ನ ದುರದೃಷ್ಟಕ್ಕೆ ದೇವರೇ ಕಾರಣ ಅಂತ ಬಯ್ಯುತ್ತಿದ್ದ. ಇನ್ನೊಬ್ಬ ತನ್ನ ಜೀವ ಉಳಿದಿದ್ದಕ್ಕೆ ಕಾರಣ ದೇವರೇ ಅಂತ ದೇವರನ್ನು ವಂದಿಸುತ್ತಿದ್ದ.
'ಸುಮ್ನೆ ದೇವರನ್ನು ನಿಂದಿಸುವುದರಲ್ಲಿ ಅರ್ಥವಿಲ್ಲ. ಗಟ್ಟಿಯಾದ ನೆಲದ ಮೇಲಿದ್ದೀವಿ. ಓಡಾಡಲು ಕಾಲುಗಳಿವೆ. ಕೆಲಸ ಮಾಡಲು ಕೈಗಳಿವೆ. ನೋಡುವುದಕ್ಕೆ ಕಣ್ಣುಗಳಿವೆ. ಇವುಗಳಿಗೆ ನಾವು ದೇವರಿಗೆ ಕೃತಜ್ಞರಾಗಿರಬೇಕು' ಎಂದು ಹೇಳುತ್ತಿದ್ದ. ಒಂದು ದಿನ ಇನ್ನೊಂದು ಆಘಾತ ಕಾದಿತ್ತು. ಅವರ ಗುಡಿಸಲು ಸುಟ್ಟು ಬೂದಿಯಾಗಿತ್ತು. ಮೊದಲನೆ ನಾವಿಕನ ಸಿಟ್ಟು ಮುಗಿಲುಮುಟ್ಟಿತು. ದೇವರನ್ನು ಮನಸೋಇಚ್ಛೆ ಬಯ್ಯಲಾರಂಭಿಸಿದ. ಆದರೆ ಎರಡನೇ ನಾವಿಕ, 'ಗೆಳೆಯ, ಇದರಿಂದ ನಮಗೆ ಪ್ರಯೋಜನ ಖಂಡಿತ ಆಗುತ್ತೆ. ಸಹನೆಯಿಂದ ನೋಡ್ತಾ ಇರು. ದೇವರನ್ನು ಪ್ರಾರ್ಥಿಸು, ವಂದಿಸು' ಎಂದ. 'ನೀನು ಮತ್ತು ನಿನ್ನ ದೇವರನ್ನು ಕಂಡರೆ ನನಗಾಗೊಲ್ಲ, ಹೋಗು' ಅಂತ ಸಿಡುಕಿದ.
ಬೆಳಗಿನ ಜಾವ, ನದಿ ತೀರದಲ್ಲಿ ಸದ್ದು ಕೇಳಿ ಇಬ್ಬರೂ ನೋಡಿದಾಗ ಒಂದು ಹಡಗು ಕಾಣಿಸಿತು. ಅದರ ಮುಖ್ಯಸ್ಥ ಇಳಿದು ಬಂದು, 'ನಿನ್ನೆ ಸಂಜೆ ಇಲ್ಲಿಂದ ಹೊಗೆ ಕಾಣಿಸಿತು. ಯಾರೋ ಸಹಾಯಕ್ಕಾಗಿ ಕರೆಯುತ್ತಿದ್ದಾರೆಂದು ತಿಳಿದು ಬಂದೆವು' ಎಂದ. ಮೊದಲನೆ ನಾವಿಕ ಆಕಾಶದೆಡೆ ಮುಖ ಮಾಡಿ, 'ದೇವರೇ ನಮಗೆ ಸಹಾಯ ಮಾಡಿದ, ನಿನ್ನನ್ನು ನಿಂದಿಸಿದ್ದು ತಪ್ಪು' ಅಂದ.
ನೀತಿ: ನಾವು ಪ್ರತಿಯೊಂದು ಘಟನೆಯನ್ನೂ ಆಶಾವಾದದಿಂದ ನೋಡುವುದನ್ನು ಕಲಿಯಬೇಕು.
-ಸಂಪಟೂರು ವಿಶ್ವನಾಥ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

