ಬೈಟುಕಾಫಿ

ಕಾಮನಬಿಲ್ಲಿನ ಬಣ್ಣಗಳು

ಆಕಾಶವಾಣಿಯ ಎಫ್.ಎಂ. ರೇನ್‌ಬೊ ಕೇಳದವರ್ಯಾರಿದ್ದಾರೆ? ಪ್ರತಿಯೊಬ್ಬರೂ ಮಾತನಾಡುವುದು 'ನಮ್ಮ ಆಕಾಶವಾಣಿ' ಎಂದೇ.

ಕಾಮನಬಿಲ್ಲಿನ ಬಣ್ಣಗಳು
Published On :

ಆಕಾಶವಾಣಿಯ ಎಫ್.ಎಂ. ರೇನ್‌ಬೊ ಕೇಳದವರ್ಯಾರಿದ್ದಾರೆ? ಪ್ರತಿಯೊಬ್ಬರೂ ಮಾತನಾಡುವುದು 'ನಮ್ಮ ಆಕಾಶವಾಣಿ' ಎಂದೇ. ಆಕಾಶವಾಣಿಗೆ ಬಹುದೊಡ್ಡ ಇತಿಹಾಸವಿದೆ. ಅದೊಂದು ದೊಡ್ಡ ಆಲದಮರ. ವಿಶಾಲವಾಗಿ ಹರಡಿದ ಅದರ ರೆಂಬೆ-ಕೊಂಬೆಗಳಲ್ಲಿ ನೂರಾರು ವೈವಿಧ್ಯಮಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಆಬಾಲ ವೃದ್ಧರಾದಿಯಾಗಿ ಹೆಚ್ಚಿನ ಜನರು ಮಾಹಿತಿ, ಮನರಂಜನೆಗೆ ಅವಲಂಬಿಸುವುದು ಎಫ್.ಎಂ. ರೇನ್‌ಬೊವನ್ನೇ.

2 ತಾಸು ಬೋನಸ್!
ಬೆಂಗಳೂರು ಆಕಾಶವಾಣಿ ತನ್ನ ಎಫ್.ಎಂ. ರೇನ್‌ಬೊ ಕಾರ್ಯಕ್ರಮದಲ್ಲಿ ಏಪ್ರಿಲ್ 7ರಿಂದ ಒಂದಷ್ಟು ಬದಲಾವಣೆಯೊಂದಿಗೆ ವಿನೂತನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಜನರಿಗೆ ಮಾಹಿತಿ ಕೊಡುವುದರ ಜತೆಗೆ ಮನರಂಜನೆ ನೀಡುವ ಹೊಸ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ತನ್ನ ಕಾರ್ಯಕ್ರಮ ಪಟ್ಟಿಯಲ್ಲಿ ಸೇರಿಸಿದೆ. ಒಂದಕ್ಕಿಂತ ಒಂದು ಹೊಸದು, ವಿಭಿನ್ನ. ಏಪ್ರಿಲ್ 7ರಿಂದ ಬೆಳಗ್ಗೆ 4.55ಕ್ಕೇ ಎಫ್.ಎಂ. ರೇನ್‌ಬೊ ಪ್ರಾರಂಭವಾಗುತ್ತದೆ. ಬದಲಾದ ಕಾರ್ಯಕ್ರಮದಲ್ಲಿ ಕೇಳುಗರಿಗೆ 2 ತಾಸು ಹೆಚ್ಚಿಗೆ ಸಿಗುತ್ತಿದೆ!
'ಐದು ಗಂಟೆಗೆ ಜನ ಆಗಲೇ ವಾಕಿಂಗ್ ಮಾಡ್ತಿರ್ತಾರೆ. ಅದರಲ್ಲೂ ಬೆಂಗಳೂರಿನ ಜನ 5 ಗಂಟೆಗೆ ಪಾರ್ಕ್‌ನಲ್ಲಿ ಒಂದು ರೌಂಡ್ ವಾಕ್ ಮುಗಿಸೇಬಿಟ್ಟಿರುತ್ತಾರೆ. ಆ ವೇಳೆಯಲ್ಲಿ ಭಕ್ತಿಗೀತೆಗಳನ್ನು ಕೇಳಿಸ್ತೀವಿ. ಏಕೆಂದರೆ ದಿನದ ಆರಂಭ ಸಂತೋಷದಾಯಕ, ಉಲ್ಲಾಸಭರಿತವಾಗಿ ಆದರೆ ಇಡೀ ದಿನ ಸಂತೋಷವಾಗಿ ಕಳೆಯಬಹುದು ಅಂತ. ಇದಕ್ಕೆ ಪೂರಕವಾಗಿ ಬೆಂಗಳೂರು ಆಕಾಶವಾಣಿಯಲ್ಲಿ ಹಳೆಯ-ಹೊಸ ಕನ್ನಡ ಚಿತ್ರಗೀತೆಗಳ, ಭಾವಗೀತೆಗಳ, ಹಿಂದಿ ಚಿತ್ರಗೀತೆಗಳ ಬೃಹತ್ ಸಂಗ್ರಹವೇ ಇದೆ. ಇದಕ್ಕೆ ಕಾರಣ ಇಲ್ಲಿ ಒಂದು ದೊಡ್ಡ ಪ್ರೊಡಕ್ಷನ್ ಟೀಂ ಕೆಲಸ ಮಾಡುತ್ತಿದೆ' ಎನ್ನುತ್ತಾರೆ ಬೆಂಗಳೂರು ಆಕಾಶವಾಣಿ ಎಫ್.ಎಂ. ರೇನ್‌ಬೊದ ಅಸಿಸ್ಟೆಂಟ್(ಪ್ರೊಗ್ರಾಮ್) ಡೈರೆಕ್ಟರ್ ಬಿ.ವಿ. ಪದ್ಮಾ ಅವರು.
'2001 ಸೆಪ್ಟೆಂಬರ್‌ನಲ್ಲಿ ಎಫ್.ಎಂ. ರೇನ್‌ಬೊ ಪ್ರಾರಂಭ ಮಾಡಿದ್ದು ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು. ಆ ಸಂದರ್ಭದಲ್ಲಿ ಯಾವ ಕನ್ನಡ ಕಾರ್ಯಕ್ರಮಗಳೂ ಎಫ್.ಎಂ.ನಲ್ಲಿ ಇರಲಿಲ್ಲ. ಇದು ಬಹುಬೇಗ ಜನಪ್ರಿಯವಾಯಿತು. ಇದು ಇಷ್ಟು ಬೇಗ ಜನಪ್ರಿಯವಾಗಲು ಇನ್ನೊಂದು ಪ್ರಮುಖ ಕಾರಣ ಡಿಟಿಎಚ್ ಸೌಲಭ್ಯ. ಇದರಿಂದ ದೇಶದ ಯಾವುದೇ ಭಾಗದ ಜನ ಎಫ್.ಎಂ. ರೇನ್‌ಬೊ ಕೇಳಬಹುದು. ಕಾರ್ಯಕ್ರಮಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸರ್ವೆ ಮಾಡಿ, ಕೇಳುಗರ ಅಭಿಪ್ರಾಯ, ಸಲಹೆಗಳನ್ನು ಪರಿಗಣಿಸಿಯೇ ಕಾರ್ಯಕ್ರಮ ಸೆಟ್ ಮಾಡಲಾಗುತ್ತದೆ. ಪ್ರತಿದಿನ ಕೇಳುಗರಿಂದ ಅಭಿಪ್ರಾಯಗಳು ಪತ್ರಗಳ ಮೂಲಕ, ಎಸ್ಸೆಮ್ಮೆಸ್, ಇಮೇಲ್, ಫೋನ್‌ಗಳ ಮೂಲಕವೂ ಬರುತ್ತವೆ. ಅವುಗಳನ್ನು ಗಣನೆಗೆ ತೆಗೆದುಕೊಂಡೇ ಕಾರ್ಯಕ್ರಮದ ರೂಪುರೇಷೆ ರೂಪಿಸಲಾಗುತ್ತದೆ' ಎನ್ನುತ್ತಾರೆ ಪ್ರೊಗ್ರಾಮ್ ಎಕ್ಸಿಕ್ಯೂಟಿವ್ ಎ.ವಿ. ವಿನೋದ್‌ಕುಮಾರ್.
ಇನ್ನು ರೆವೆನ್ಯೂ ದೃಷ್ಟಿಯಿಂದಲೂ ಬೆಂಗಳೂರು ಎಫ್.ಎಂ. ರೇನ್‌ಬೊ ಮುಂಚೂಣಿಯಲ್ಲಿದೆ. 'ಯಾವುದೇ ಸಂಸ್ಥೆಯನ್ನು ಜಾಹೀರಾತಿಲ್ಲದೆ ನಡೆಸುವುದು ಕಷ್ಟ. ಜನರಿಗೆ ಮಾಹಿತಿಪೂರ್ಣವಾಗಿರುವ ಜಾಹೀರಾತನ್ನು ಪ್ರಸಾರ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ' ಎನ್ನುತ್ತಾರೆ ಪ್ರೊಗ್ರಾಮ್ ಎಕ್ಸಿಕ್ಯೂಟಿವ್ ರಘು.

ಎಫ್.ಎಂ. ರೇನ್‌ಬೊ ವಿಶೇಷತೆ
ಇದರಲ್ಲಿ ಪ್ರಸಾರವಾಗುವ ಎಲ್ಲ ಕಾರ್ಯಕ್ರಮಗಳಿಗೂ ಪರಿಣಿತರನ್ನೇ ಆಹ್ವಾನಿಸಲಾಗುತ್ತದೆ. ಆರೋಗ್ಯ ಕಾರ್ಯಕ್ರಮವನ್ನು ಪರಿಣಿತ ಡಾಕ್ಟರ್‌ಗಳಿಂದ, ಕಾನೂನಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ವಕೀಲರಿಂದ, ಕೌಟುಂಬಿಕ ಕೌನ್ಸೆಲಿಂಗ್‌ಗೆ ಹೈಕೋರ್ಟ್ ರಿಟೈರ್ ಜಡ್ಜ್‌ಗಳಿಂದ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಸೆಲೆಬ್ರಿಟಿಗಳಿಂದ ಕಾರ್ಯಕ್ರಮ ನಡೆಸಿಕೊಡಲಾಗುತ್ತದೆ. ಜನರಲ್ಲಿ ಕಾರ್ಯಕ್ರಮಗಳ ಬಗ್ಗೆ ವಿಶ್ವಾಸ ಮೂಡಿಸುವುದು ವಾಹಿನಿಯ ಉದ್ದೇಶ.

ಬದಲಾದ ರೇನ್‌ಬೊನಲ್ಲಿ
ಬದಲಾದ ರೇನ್‌ಬೊ ಕಾರ್ಯಕ್ರಮ ಪಟ್ಟಿ ನೋಡಿದರೆ ನಮ್ಮ ದಿನಚರಿಗೆ ಹೊಂದಿಕೆಯಾಗುವ ರೀತಿ ಒಂದು ಚಾರ್ಟ್ ತಯಾರಿಸಲಾಗಿದೆ ಎಂದೆನಿಸುತ್ತದೆ. ಬೆಳಗ್ಗೆ 5-6 ಭಕ್ತಿ ಸಂಗೀತ, ಅರ್ಚನೆ-ಆರಾಧನೆ ಕಾರ್ಯಕ್ರಮದಲ್ಲಿ ಭಕ್ತಿಗೀತೆಗಳ ಜತೆಗೆ ಬೇರೆ ಬೇರೆ ಭಾಗದ ದೇವಸ್ಥಾನಗಳ ಪರಿಚಯ, ನಮ್ಮ ಆಚರಣೆಗಳು, ಸಂಪ್ರದಾಯಗಳ ಬಗ್ಗೆ ವಿವರಣೆ. ಹಬ್ಬದ ದಿನಗಳಲ್ಲಿ ವಿಶೇಷ ಕಾರ್ಯಕ್ರಮ. ನೆನಪಿನ ದೋಣಿಯಲ್ಲಿ ಹಳೆಯ ಸುಮಧುರ ಕನ್ನಡ ಚಿತ್ರಗೀತೆಗಳು, ಅವುಗಳ ಸಂಪೂರ್ಣ ವಿವರ ಕೂಡ ನೀಡಲಾಗುತ್ತದೆ. ಭಾವಧಾರೆಯಲ್ಲಿ ಕನ್ನಡ ಭಾವಗೀತೆಗಳ ಜತೆ ಹವಾಮಾನ ವರದಿ, ರೇಲ್ವೆ ವೇಳಾಪಟ್ಟಿ, ನಗರದ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ.
ಜನರಲ್ಲಿ ಜಾಗೃತಿಯನ್ನುಂಟುಮಾಡಲು ಹಸಿರು ಬಂಡಿ. ಕೇಳುಗರ ಕ್ರಿಯೇಟಿವಿಟಿಯನ್ನು ಒರೆಗೆ ಹಚ್ಚಲು ಪ್ರತಿ ಬುಧವಾರ ಹಾಡಿನ ಹಾರ. ಪಂಚರಂಗಿ ಕಾರ್ಯಕ್ರಮ ಗೃಹಿಣಿಯರಿಗಾಗಿಯೇ ಇರುವಂಥದ್ದು. ಅಕ್ಕಪಕ್ಕದಲ್ಲಿ ಆರೋಗ್ಯಕರ ಸಾಮಾಜಿಕ ಜೀವನಕ್ಕೆ ಪೂರಕವಾದ ನಾಗರಿಕ ಪ್ರಜ್ಞೆ ಕುರಿತು ಕಾರ್ಯಕ್ರಮಗಳಿವೆ. ಫ್ಯಾಷನ್ ಫ್ರಿಲ್‌ನಲ್ಲಿ ಫ್ಯಾಷನ್ ಟ್ರೆಂಡ್ ಬಗ್ಗೆ ಮಾಹಿತಿ, ಹೋಮ್ ಸ್ವೀಟ್ ಹೋಮ್‌ನಲ್ಲಿ ಮನೆಯ ಅಲಂಕಾರಿಕ ವಸ್ತುಗಳ ಬಗ್ಗೆ, ಚಿಂಗಾರಿಯಲ್ಲಿ ಮಹಿಳೆಯರ ಸಂದರ್ಶನ, ವಿಸ್ಮಯ ವಿಜ್ಞಾನದಲ್ಲಿ ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಮಾಹಿತಿ, ಟ್ರಿವಿಯಾ ಟೈಮ್‌ನಲ್ಲಿ ರಸಪ್ರಶ್ನೆಗಳು, ಚಮಕ್ ಚಾಲೆಂಜ್‌ನಲ್ಲಿ ಮಿದುಳಿಗೆ ಕಸರತ್ತಿದೆ.
ಲಂಚ್‌ಬಾಕ್ಸ್‌ನಲ್ಲಿ ಪ್ರೊಗ್ರಾಮ್ ಎಕ್ಸಿಕ್ಯೂಟಿವ್ ರಾಜೇಶ್ವರಿ ನಡೆಸಿಕೊಡುವ ವಿನ್ನರ್ ವನಿತಾ, ವಿಶೇಷ ಸಾಧನೆ ಮಾಡಿದ ಮಹಿಳಾ ಸಾಧಕಿಯರ ಸಂದರ್ಶನ ಕಾರ್ಯಕ್ರಮ. ಬ್ಯಾಂಕ್ವೆಟ್ ಹಾಲ್‌ನಲ್ಲಿ ಸರ್ಕಾರಿ ಅಧಿಕಾರಿಗಳೊಂದಿಗೆ ಸಂದರ್ಶನ. ಶೃಂಗಾರ ಲಹರಿಯಲ್ಲಿ ಬ್ಯೂಟಿ ಟಿಪ್ಸ್, ಹೀಲ್ಸ್ ಆನ್ ವೀಲ್ಸ್‌ನಲ್ಲಿ ಪ್ರವಾಸದ ಬಗ್ಗೆ ಮಾಹಿತಿ. ರೇನ್‌ಬೊ ಕಲರ್ಸ್‌ನಲ್ಲಿ ಯುವಜನತೆಗೆ ರೊಮ್ಯಾಂಟಿಕ್ ಸುಮಧುರ ಕನ್ನಡ ಸಿನಿಮಾಗಳಿವೆ. ಹಾಗೇ ರಸ-ನಿಮಿಷ, ಹೊಸ ಸಿನೆಮಾಗಳ ಮಾಹಿತಿಗಾಗಿ ಸಿನೆಮಾ-ಸಿನೆಮಾ. ನಾನ್ಯಾರುನಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ರಸಪ್ರಶ್ನೆ ಕಾರ್ಯಕ್ರಮಗಳಿವೆ.

- ಶಶಿರೇಖಾ ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.