ಪೇಜ್ ವರ್ಲ್ಡ್

ಶಾಲೆಯ ಪುಸ್ತಕವಲ್ಲದೆ ಇತರೆ ಪುಸ್ತಕ, ಪತ್ರಿಕೆ, ಪುರವಣಿಗಳ ಪುಟದತ್ತ ಕಣ್ಣು ಹಾಯಿಸಲೂ ಇಚ್ಛಿಸದ ಮಕ್ಕಳನ್ನು ಎಲ್ಲೆಡೆ ಕಾಣುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ, ಮಕ್ಕಳನ್ನು ಸದಭಿರುಚಿಯ ಓದಿನತ್ತ ಎಳೆದು ತರುವ ಕಿರು ಪ್ರಯತ್ನ ಮಾಡಲು ಹೊರಟ ಶಿಕ್ಷಿತ ಗೃಹಿಣಿಯರಿಬ್ಬರ ಕಲ್ಪನೆಯ ಕೂಸು ಪೇಜ್‌ವರ್ಲ್ಡ್ ಇಂಡಿಯಾ ಎನ್ನುವ ಪುಸ್ತಕ ಮಳಿಗೆ.
ಛಾಯಾ ಕುಂಬ್ಳೆ ಮತ್ತು ಸುಧಾ ಕಾಕಲ್, ಇಬ್ಬರೂ ಚಿಕ್ಕಂದಿನಿಂದಲೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿದ್ದವರು. ಅಮೆರಿಕದಲ್ಲಿ ಕೆಲ ಕಾಲ ನೆಲೆಸಿದ್ದರು. ಓದುವ ಚಾಳಿಯನ್ನು ಬಿಟ್ಟಿರಲಿಲ್ಲ. ಊರಿಗೆ ಹಿಂತಿರುಗಿದ ಬಳಿಕ, ನಮ್ಮೂರಿನಲ್ಲೂ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕೆಂಬ ಸದಿಚ್ಛೆ ಮನದಲ್ಲಿ ಮೂಡಿತು. ಬಾಲಲೋಕದ ಅಭಿರುಚಿಗೆ ತಕ್ಕಂಥ ಉಪಯುಕ್ತ ಪುಸ್ತಕಗಳನ್ನು ಕಲೆಹಾಕಿ 'ಪೇಜ್‌ವರ್ಲ್ಡ್ ಇಂಡಿಯಾ- ನೆರೆಹೊರೆಯ ಜ್ಞಾನಕೇಂದ್ರ' ಎನ್ನುವ ಪುಸ್ತಕ ಮಳಿಗೆಯೊಂದನ್ನು ಜೆ.ಪಿ.ನಗರದ 7ನೇ ಹಂತದಲ್ಲಿರುವ ಕೊತ್ತನೂರು ದಿಣ್ಣೆ ಮುಖ್ಯ ರಸ್ತೆಯಲ್ಲಿ ಆರಂಭಿಸಿಯೇಬಿಟ್ಟರು.
ಏಪ್ರಿಲ್ ತಿಂಗಳಲ್ಲಿ ತೆರೆಯಲಾದ ಈ ಪುಟಲೋಕಕ್ಕೆ ಕಾವ್ಯ, ನಾಟಕ, ಬಾಲ ಸಾಹಿತ್ಯ, ಸಾನೆಟ್ ಇತ್ಯಾದಿಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಸಮೃದ್ಧಗೊಳಿಸಿರುವ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರಿಂದ ಶುಭಾರಂಭ ದೊರೆತಿದೆ. ತಂದೆ-ತಾಯಿಯರಲ್ಲೂ ಸಾಹಿತ್ಯಾಭಿರುಚಿ ಮರುಕಳಿಸಲೆಂದು ತಿಂಗಳಿನ ಒಂದು ಭಾನುವಾರ ಸಂಜೆ ಮಳಿಗೆಯ ಪರಿಸರದಲ್ಲಿಯೇ ಖ್ಯಾತ ಸಾಹಿತಿ- ಕಲಾವಿದರನ್ನು ಕರೆಸಿ ಸಾಹಿತ್ಯ ಸಂಜೆ ಏರ್ಪಡಿಸಲಾಗುತ್ತಿದೆ. ಮಕ್ಕಳಿಗಾಗಿ ಕತೆ ಹೇಳುವ ಕಾರ್ಯಕ್ರಮವನ್ನು ತಿಂಗಳ ಕಾರ್ಯಕ್ರಮದಲ್ಲಿ ವಾದಿರಾಜ ಭಟ್‌ರಿಂದ ಈಗಾಗಲೇ ಮಾಡಿಸಲಾಗಿದೆ. ಇಂಗ್ಲಿಷ್ ಕಾದಂಬರಿಗಾರ್ತಿ ಶಶಿ ದೇಶಪಾಂಡೆ, ಕವಿ ಜಯಂತ್ ಕಾಯ್ಕಿಣಿ ಇವರ ಜೊತೆ ನಡೆಸಿದ ಸಾಹಿತ್ಯ ಸಂಜೆ, ಸಂವಾದಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಎಲ್ಲ ಉತ್ತಮ ಕೃತಿಗಳು ಇಲ್ಲಿ ಸಿಗುತ್ತವೆ. ಜತೆಗೆ, ಕೃತಿಕಾರರೂ ಇಲ್ಲಿ ಬರುತ್ತಾರೆ.
ಕೆಲವು ಪುಸ್ತಕದಂಗಡಿಗಳು ಮುಚ್ಚುತ್ತಿವೆ. ಆದರೆ, ಓದುವ ಹವ್ಯಾಸಕ್ಕೆ ಸಾವಿಲ್ಲ ಎಂಬಂತೆ ಇಂಥ ಮಳಿಗೆಗಳು ಹುಟ್ಟಿಕೊಳ್ಳುತ್ತವೆ. ಅಕ್ಷರಗಳ 'ಮಾತೃಭಾವ'ವನ್ನೂ ಅನುಭವಿಸಬಹುದು ಎಂಬುದು ಇಲ್ಲಿನ ಬೋನಸ್.
-ಬಿ.ಎಸ್.ವೆಂಕಟಾಚಲ ಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


