ನಾನು ಮುನಿಯ

ನಾನು ಲಾಲ್ ಮುನಿಯ. ನಾನು ಮತ್ತು ನನ್ನ ಸ್ನೇಹಿತರಾದ ಸ್ಮಾಲ್ ಬ್ಲೂ, ಪೈಡ್ ಕಿಂಗ್‌ಫಿಷರ್, ಬೀ ಈಟರ್ ನಾವೆಲ್ಲ ಸ್ವಚ್ಛಂದವಾಗಿ ನಮ್ಮ ಜೀವನ ಸಾಗಿಸಿಕೊಂಡು ಹೋಗ್ತಿದೀವಿ. ನಮ್ಮಿಂದ ಯಾರಿಗೂ ತೊಂದರೆ ಇಲ್ಲ. ಆದರೆ ನಮಗೆ ಮನುಷ್ಯರಾದ ನಿಮ್ಮಿಂದ ತೊಂದರೆ ಆಗ್ತಿದೆ. ಈಗ ನೋಡಿ, ನಾನು ನನ್ನ ಹೆಂಡ್ತಿ ಮಕ್ಕಳಿಗೋಸ್ಕರ ಗೂಡು ಕಟ್ಟಬೇಕಾದರೆ ಬಾಯಲ್ಲಿ ಹುಲ್ಲು, ಗರಿ ಇಟ್ಕೊಂಡಿರ್ತೀವಿ. ಆ ಸಮಯದಲ್ಲಿ ಬುದ್ಧಿವಂತ ಮನುಷ್ಯರಾದ ನೀವು ಇಲ್ಲಿಗೆ ಬರ್ತೀರಿ, ಪೋಟೋ ತೆಗಿತೀರಿ. ನಿಮ್ಮ ಕ್ಯಾಮೆರಾದ ಆ ಉದ್ದವಾದ ಮೂತಿ ಕಂಡರೆ ತುಂಬಾ ಹೆದರಿಕೆ ಆಗುತ್ತೆ. ನೀವು ಇರೋ ಭಯದಲ್ಲೇ ನನ್ನ ಗೂಡು ಕಟ್ತೀನಿ.
ಗೂಡು ಕಟ್ಟಿದ ಕೆಲವೇ ದಿನಗಳ ನಂತರ ಮಿಲನ ಆಗುತ್ತೆ. ಮಿಲನದ ನಂತರ ನನ್ನ ಹೆಂಡ್ತಿ ಮೊಟ್ಟೆ ಇಡ್ತಾಳೆ. ಮೊಟ್ಟೆಗೆ ಕಾವು ಕೊಡ್ತಾಳೆ. ಮನುಷ್ಯರಿಗೆ ಇರುವ ಹಾಗೆ ನಮಗೆ ಆಸ್ಪತ್ರೆಗಳಿಲ್ಲ, ಡಾಕ್ಟ್ರೂ ಇಲ್ಲ. ನನ್ನರಸಿಯೇ ಕಾವು ಕೊಟ್ಟು ಮೊಟ್ಟೆಯಿಂದ ಮರಿ ಹೊರ ಬರುವವರೆಗೆ ಜತನದಿಂದ ನೋಡುತ್ತಾಳೆ. ಆ ಸಮಯದಲ್ಲೂ ನೀವು ಪ್ರೈವೆಸಿ ಕೊಡುವುದಿಲ್ಲ. ಪಾಪ, ಗರ್ಭಿಣಿ, ಡಿಸ್ಟರ್ಬ್ ಆಗುತ್ತೆ ಎಂದು ಯೋಚಿಸುವುದಿಲ್ಲ. ಹೊಂಚು ಹಾಕಿ ಕೂತು ಪೋಟೋ ಕ್ಲಿಕ್ಕಿಸುತ್ತಿರುತ್ತೀರಿ. ಆ ಸಂದರ್ಭದಲ್ಲೂ ನಮ್ಗೆ ಭಯ ಇರುತ್ತೆ.
ಮೊಟ್ಟೆಯಿಂದ ಹೊರಗೆ ಬಂದ ತಕ್ಷಣ ಮರಿಗಳ ಜೋಪಾನದ ಜವಾಬ್ದಾರಿ ಅಪ್ಪನಾದ ನನ್ನದು. ಅವಾಗಿಂದ ನನ್ನ ಕೆಲಸ ಇನ್ನೂ ಜಾಸ್ತಿ. ಯಾಕಂದ್ರೆ, ನಾಲ್ಕೈದು ಮರಿಗಳಿಗೋಸ್ಕರ ಆಹಾರ ತರಬೇಕಾಗುತ್ತೆ. ಆದ್ರೆ ಮನುಷ್ಯರಾದ ನಿಮಗೆ ಜಾಸ್ತಿ ತಲೆನೋವೇ ಇಲ್ಲ. ಪೋನ್ ಮಾಡಿದ್ರೆ ತಕ್ಷಣ ಅಕ್ಕಿ, ಸೂಜಿಯಿಂದ ಮೊದಲ್ಗೊಂಡು ಟೀವಿ, ಫ್ರಿಡ್ಜ್‌ವರೆಗೂ ಕ್ಷಣಾರ್ಧದಲ್ಲೇ ಬಂದು ಬಿಡುತ್ತೆ. ಆದ್ರೆ ನಮಗೆ, ನಮ್ಮ ಆಹಾರ ಹುಡುಕಲು ಹೋದಾಗ ನಮ್ಮ ಮಕ್ಕಳದ್ದೇ ಚಿಂತೆ. ಆಹಾರ ತಿನ್ನೋದನ್ನೆಲ್ಲ ಕೆಂಗಣ್ಣಿನಿಂದ ಪೋಟೋ ತೆಗೆದ್ರಿ. ಆ ಪೋಟೋದಿಂದ ಪ್ರಶಸ್ತಿನೂ ಗಿಟ್ಟಿಸಿಕೊಂಡ್ರಿ. ಆದ್ರೂ ಪರವಾಗಿಲ್ಲ.
ಆದ್ರೆ ಅಂದೊಂದಿನ, ಆಹಾರ ಸಂಗ್ರಹಿಸಲು ನಾನು ಮತ್ತು ನನ್ನ ಹೆಂಡ್ತಿ ಹೋಗಿದ್ದೆವು. ವಾಪಸ್ ಬರುವಷ್ಟರಲ್ಲಿ, ನನ್ನ ಪುಟ್ಟ ಗೂಡು ಮತ್ತು ನನ್ನ ಮರಿಗಳನ್ನು ನೀವು ಸರ್ವನಾಶ ಮಾಡಿದ್ರಿ! ಒಂದು ಗೂಡು ಕಟ್ಟಬೇಕಾದರೆ ಎಷ್ಟು ಕಷ್ಟ ಆಗುತ್ತೆ ಎನ್ನೋದು ನಿಮ್ಗೆ ಗೊತ್ತಾ? ನಿಮ್ಮಂತೆ ಮನೆ ಬೇಕಾದ್ದೆಲ್ಲ ನಮಗೆ ರೆಡಿಮೇಡ್ ಸಿಗಲ್ಲ. ನಿಮ್ಮ ಮಗು ಕಳ್ಕೊಂಡ್ರೆ ಎಷ್ಟೆಲ್ಲ ಹುಡುಕ್ತೀರಾ... ಪೊಲೀಸ್ ನೆರವು ಬೇರೆ ಪಡೀತೀರಾ. ಆದ್ರೆ ನಮಗೆ ಯಾರಿದ್ದಾರೆ? ನಾವು ಇನ್ನೊಂದು ಮಗು ಪಡೆಯಯಬೇಕಾದರೆ ಮುಂದಿನ ಸೀಸನ್ ಬಂದಾಗಲೇ.
ನನ್ನ ಗೆಳೆಯರಾದ ಗುಬ್ಬಿ, ಮೈನಾ ಇವತ್ತು ಕಾಣ್ತಿಲ್ಲ. ಅದಕ್ಕೆ ಕಾರಣ ನೀವೇ. ಗಿಡ, ಮರ, ಪ್ರಾಣಿ, ಪಕ್ಷಿಗಳಿದ್ದಾಗಲೇ ಪರಿಸರಕ್ಕೆ ಒಂದು ಸೊಬಗು. ನಾವು ಭೂಮಿಗೆ ಬಂದ ಎಷ್ಟೋ ವರ್ಷದ ನಂತರ ನೀವು ಬಂದಿದ್ದು. ಆ ಕಟು ಸತ್ಯ ಮನುಷ್ಯರಾದ ನಿಮಗೆ ಗೊತ್ತಿದೆ. ಪರಿಸರ ವಿಕೋಪಕ್ಕೆ ಹೋದಾಗ ನಿಮಗೆ ಜೀವ ಭಯ ಕಾಡುತ್ತೆ. ಸ್ವಾರ್ಥ ತೊರೆದು, ನಮ್ಮ ತಂಟೆಗೆ ಬರದೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟರೆ ಎಲ್ಲರೂ ನೆಮ್ಮದಿಯಾಗಿರಬಹುದು.
ಕೆಲ ವಿಶಿಷ್ಟ ಪಕ್ಷಿಗಳನ್ನು ಈಗ ಚಿತ್ರಪಟದಲ್ಲಷ್ಟೇ ನೋಡಬಹುದು. ಛಾಯಾಗ್ರಾಹಕ ಈ ಹಕ್ಕಿಗಳ ದೃಶ್ಯಗಳಿಗೆ ಜೀವ ತುಂಬುವ ಕಲೆಗಾರ. ಆದರೆ ಕೆಲವೊಮ್ಮೆ ಆ ಚಿತ್ರಗಳಿಗೆ ಜೀವ ತುಂಬುವ ಹಾದಿಯಲ್ಲಿ ಪಕ್ಷಿ ಸಂಕುಲದ ಸಾವೂ ಘಟಿಸುವುದುಂಟು. ಇಲ್ಲಿಯವರೆಗೆ ಸುಮಾರು 27,000 ಹಾವುಗಳನ್ನು ಸಂರಕ್ಷಿಸಿದ ಮೈಸೂರಿನ ಸ್ನೇಕ್ ಶ್ಯಾಂ(ಎಂ.ಎಸ್. ಬಾಲಸುಬ್ರಮಣ್ಯಂ) ಪಕ್ಷಿ ಸಂಕುಲದ ಈ ಕೂಗಿಗೆ ಇಲ್ಲಿ ಧ್ವನಿ ನೀಡಿದ್ದಾರೆ.
ನಿರೂಪಣೆ: ರುದ್ರಗೌಡ ಮುರಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


