ಊಟದ ವಿಷಯ
ಓದುಗರೊಬ್ಬರು ಎಸ್‌ಎಂಎಸ್ ಮಾಡಿದ್ದರು. 'ಆರೋಗ್ಯದಲ್ಲಿ ಆಹಾರದ ಪ್ರಾಮುಖ್ಯವೇನು ಎನ್ನುವುದನ್ನು ಚೆನ್ನಾಗಿ ಹೇಳುತ್ತಿದ್ದೀರಿ. ಆದರೆ ಟಿ.ವಿ ಸೀರಿಯಲ್‌ಗಳ ಥರಾ ಸ್ವಲ್ಪ ಎಳೆಯುತ್ತಿದ್ದೀರಿ ಎನ್ನುವುದು ನನ್ನ ಅನಿಸಿಕೆ. ಯಾವ ಕಾಯಿಲೆಗೆ ಯಾವ ರೀತಿಯ ಆಹಾರ ಸೇವಿಸಬೇಕು ಎನ್ನುವುದನ್ನೂ ತಿಳಿಸಿಕೊಟ್ಟರೆ ಚೆನ್ನಾಗಿರುತ್ತಿತ್ತು' ಎನ್ನುವುದು ಅವರ ಆಕ್ಷೇಪ. ಇಂಥಹದೊಂದು ಪ್ರತಿಕ್ರಿಯೆಯನ್ನು ನಾನು ಖಂಡಿತವಾಗಲೂ ನಿರೀಕ್ಷಿಸಿದ್ದೆ. ಧಾರಾವಾಹಿಗಳಂತೆ ಎಳೆಯುವ ಯೋಚನೆಯಲ್ಲ. ಈ ಸರಣಿಯ ಉದ್ದೇಶವೇ ಯಾವ ಕಾಯಿಲೆಗೆ ಎಂಥ ಆಹಾರ ಬೇಕು ಎನ್ನುವುದನ್ನು ತಿಳಿಸಿಕೊಡುವುದು. ಸದ್ಯ ಆರೋಗ್ಯದಲ್ಲಿ ಆಹಾರದ ಪಾತ್ರದ ಬಗ್ಗೆ ಉದ್ದೇಶಪೂರ್ವಕವಾಗಿಯೇ ವಿವರವಾಗಿ ಹೇಳುತ್ತಿದ್ದೇನೆ. ಆಹಾರವನ್ನು ಅವಸರವಸರದಲ್ಲಿ ಗಬಗಬನೆ ನುಂಗಲಾದೀತೆ? ಹಸಿವಾಗಿದೆ ಎಂದಾಕ್ಷಣ ಸಿಕ್ಕಿದ್ದನ್ನೆಲ್ಲ ತಿನ್ನಲಾದೀತೆ? ಇಲ್ಲ ಅಲ್ಲವೆ? ಹಾಗೊಂದು ವೇಳೆ ಮಾಡಿದ್ದೇ ಆದರೆ ತಿಂದದ್ದು ಮೈಗೆ ಅಂಟುವುದಿಲ್ಲ. ಗಂಟಲಲ್ಲಿ ಸಿಕ್ಕಿಕೊಳ್ಳುತ್ತದೆ...ಮತ್ತೇನೇನೋ ತಾಪತ್ರಯಗಳು.
ಇವತ್ತಿನ ನಮ್ಮ ಗಡಿಬಿಡಿಯ ಜೀವನಶೈಲಿಯಲ್ಲಿ ಆಹಾರವೊಂದನ್ನು ಹೊರತುಪಡಿಸಿ ಉಳಿದವುಗಳ ಬಗ್ಗೆ ವಿಪರೀತ ತಲೆ ಕೆಡಿಸಿಕೊಳ್ಳುತ್ತೇವೆ. ಆದ್ದರಿಂದಲೇ ಆಹಾರದ ಮಹತ್ವವನ್ನು ಚೆನ್ನಾಗಿ ಮನದಟ್ಟು ಮಾಡಿಸುವುದು ನನ್ನ ಆಶಯ. ಇನ್ನೊಂದು ಕೇಳ್ತೇನೆ. ಆರೋಗ್ಯ ಚೆನ್ನಾಗಿರಲು ಅಥವಾ ಹದಗೆಡಲು ಆಹಾರವೊಂದೇ ಕಾರಣವಲ್ಲ. ಉಸಿರಾಡುವ ಗಾಳಿ, ಕುಡಿಯುವ ನೀರು, ಸುತ್ತಮತ್ತಲಿನ ಪರಿಸರ; ಕೌಟುಂಬಿಕ ಮತ್ತು ಸಾಮಾಜಿಕ ಜವಾಬ್ದಾರಿ, ಒತ್ತಡ ಎಲ್ಲವೂ ಆರೋಗ್ಯದ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಪರಿಣಾಮ ಬೀರಿಯೇಬೀರುತ್ತವೆ. ಆದರೆ ಆಹಾರದ್ದು ಮುಖ್ಯ ಪಾತ್ರ.
ಬಜ್ಜಿ, ಬೋಂಡಾ ಚೆನ್ನಾಗಿದೆ ಎಂದು ಬಾಯಿ ಚಪ್ಪರಿಸುತ್ತ ನಾಲ್ಕು ಹೆಚ್ಚಿಗೆ ತಿಂದರೆ ತಕ್ಷಣ ತೊಂದರೆ ಶುರು. ಸಿಹಿ ಇಷ್ಟ ಎಂದುಕೊಂಡು ಸಿಕ್ಕಾಪಟ್ಟೆ ತಿಂದರೆ ಕೆಲ ಕ್ಷಣಗಳಲ್ಲೇ ಹೊಟ್ಟೆನೋವು ಆರಂಭ. ಅಡುಗೆ ರುಚಿಕಟ್ಟಾಗಿದೆ ಅಂತ ಹೊಟ್ಟೆ ಬಿರಿಯುವಷ್ಟು ಊಟ ಮಾಡಿದರೆ ಕೈ ತೊಳೆಯಲು ಮೇಲೇಳಲೂ ಆಗದಷ್ಟು ಆಲಸ್ಯ, ಅಜೀರ್ಣ ಮತ್ತು ಅಜೀರ್ಣದಿಂದಾಗಿ ಇನ್ನೊಂದಿಷ್ಟು ಸಮಸ್ಯೆಗಳು. ಗಾಳಿ ನಮ್ಮ ಹಿಡಿತದಲ್ಲಿಲ್ಲ. ನೀರನ್ನು ಶುದ್ಧೀಕರಿಸಬಹುದಾದರೂ ಕಲುಷಿತಗೊಂಡಿದ್ದೇ ತಿಳಿಯದಿದ್ದರೆ ಏನು ಮಾಡುವುದು? ಅಂದರೆ ಸ್ವಲ್ಪಮಟ್ಟಿಗೆ ಅದೂ ನಮ್ಮ ನಿಯಂತ್ರಣದಲ್ಲಿಲ್ಲ. ಇನ್ನು ಭಾವನೆಗಳು, ಪರಿಸ್ಥಿತಿಗಳು ಕೂಡ ಬಹುತೇಕ ಸಂದರ್ಭಗಳಲ್ಲಿ ನಮ್ಮನ್ನೇ ಆಳುತ್ತವೆ. ಆದರೆ ನಾವು ತಿನ್ನುವ ಪ್ರತಿ ತುತ್ತೂ ನಮ್ಮ ಕೈಯ್ಯಲ್ಲಿಯೇ ಇರುತ್ತದೆ. ನಮಗೆ ಏನು ಬೇಕು, ಎಷ್ಟು ಬೇಕು ಎನ್ನುವುದನ್ನು ಯೋಚಿಸಿ ಸೇವಿಸುವ ಸ್ವಾತಂತ್ರ್ಯ ನಮಗೇ ಇರುತ್ತದೆ. ಬಾಯಿ ಮತ್ತು ಹೊಟ್ಟೆಗೆ ಯಾವಾಗ ಏನು ಕೊಡಬೇಕು ಎನ್ನುವುದು ನಮ್ಮ ವಿವೇಚನೆಯಲ್ಲಿಯೇ ಇರುತ್ತದೆ. ಹೀಗಾಗಿ ಆಹಾರಕ್ಕೆ ಇರುವಷ್ಟು ಮಹತ್ವ ಬೇರಾವುದಕ್ಕೂ ಇಲ್ಲ ಅಂತಲೇ ನನ್ನ ಭಾವನೆ. ಹೌದು ಅಂತೀರೊ? ಇಲ್ಲ ಅಂತೀರೊ? <
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

