ಮೇಷ್ಟ್ರೇ ಪಾಠ

ಈ ಮೂವರು ವೃತ್ತಿಯಿಂದ ಶಿಕ್ಷಕರು. ವಿಭಿನ್ನ ಆಲೋಚನೆ ಮತ್ತು ಸಮಾಜಕ್ಕೆ ಏನಾದರೂ ಒಂದಷ್ಟು ಕೊಡುಗೆ ನೀಡಬೇಕು ಎಂಬ ತುಡಿತ. ಗ್ರಾಮೀಣ ಜನರಲ್ಲಿ ಪುಸ್ತಕ ಮತ್ತು ವೃತ್ತಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳಸಿದರೆ ಅದಕ್ಕಿಂತ ಸಾರ್ಥಕ ಕೆಲಸ ಮತ್ತೊಂದಿಲ್ಲ. ಈ ಉದ್ದೇಶದಿಂದಲೇ ಇವರು ತಮ್ಮ ತಮ್ಮ ಗ್ರಾಮಗಳಲ್ಲಿ ಗ್ರಂಥಾಲಯ ತೆರೆದು, ಜನರಿಗೆ ಜ್ಞಾನದಾಸೋಹವಾಗುವಂತೆ ಮಾಡಿದ್ದಾರೆ.
ಈ ಮೂವರೇ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ಉಜ್ಜಯಿನಿ ಗ್ರಾಮದ ನಿವೃತ್ತ ಪ್ರಾಶುಂಪಾಲ ಕೆ. ಸಿದ್ದನಗೌಡ ಹಾಗೂ ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾ ಅಪ್ಪಾಜಿ.
5 ಲಕ್ಷ ರು. ದೇಣಿಗೆ
ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾ ಅಪ್ಪಾಜಿ ಅವರ ಚಿಂತನೆ ಕೊಂಚ ವಿಭಿನ್ನ. ತಾವು ಸೇವೆ ಸಲ್ಲಿಸುತ್ತಿರುವ ಕಾಲೇಜಿಗೆ 40 ವರ್ಷ ತುಂಬಿದೆ. 2400 ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. ಸ್ವಂತ ಗ್ರಂಥಾಲಯದ ಕಟ್ಟಡ ಇಲ್ಲದ ಕಾರಣಕ್ಕಾಗಿ ನೆರೆ ಪದವಿ ಪೂರ್ವ ಕಾಲೇಜಿನ ಕೊಠಡಿಯಲ್ಲೇ ಪದವಿ ಕಾಲೇಜಿನ ಗ್ರಂಥಾಲಯ ಆರಂಭಿಸಿ 4 ದಶಕ ಕಳೆದು ಹೋಗಿವೆ. ಹೀಗಾಗಿ ತಮ್ಮ ಕಾಲೇಜಿಗೆ ಸ್ವಂತ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಪ್ರಾಂಶುಪಾಲರೇ ಸ್ವತಃ 5 ಲಕ್ಷ ರು. ದೇಣಿಗೆಯಾಗಿ ನೀಡಲು ಮುಂದಾಗಿದ್ದಾರೆ.
ಸ್ವಂತ ಹಣದಲ್ಲಿ ಕಟ್ಟಡ
ಇನ್ನು ಕನ್ನಡದ ಮೇಷ್ಟ್ರು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಯಾರಿಗೆ ತಾನೆ ಅಪರಿಚಿತರು? ಇವರು ತಮ್ಮ ಹುಟ್ಟೂರು ನಾಗತಿಹಳ್ಳಿಯಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಒಂದು ಗ್ರಂಥಾಲಯ ಕಟ್ಟಡವನ್ನು ಕಟ್ಟಿಸಿ, 10 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಸಂಪಾದಿಸಿ ಇಟ್ಟಿದ್ದಾರೆ. ಈ ಗ್ರಂಥಾಲಯದಲ್ಲಿ ಅಧ್ಯಯನ ಮಾಡಿದ ಅನೇಕರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಬದುಕು ಕಂಡು ಕೊಂಡಿದ್ದಾರೆ. ಅನೇಕ ಮಹಿಳೆಯರು ಈ ಗ್ರಂಥಾಲಯದಲ್ಲೇ ಓದಿ ಮುಕ್ತ ವಿವಿ ಮೂಲಕ ಪದವಿ, ಸ್ನಾತಕೋತ್ತರ ಪದವಿ ಗಿಟ್ಟಿಸಿದ್ದಾರೆ. ಒಂದು ದಶಕದ ಹಿಂದೆಯೇ ಹುಟ್ಟೂರಿನಲ್ಲಿ ಗ್ರಂಥಾಲಯದ ತೆರೆಯುವ ಪರಿಕಲ್ಪನೆಗೆ ನಾಂದಿ ಹಾಡಿದ ನಾಗತಿಹಳ್ಳಿಯವರಿಗೆ ಹಲವಾರು ದಾನಿಗಳು ನೆರವಾಗಿದ್ದಾರೆ.
3 ಲಕ್ಷದಿಂದ ಗ್ರಂಥಾಲಯ
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ಉಜ್ಜಯಿನಿ ಗ್ರಾಮದವರೇ ಆದ ಕೆ. ಸಿದ್ದನಗೌಡರು ನಿವೃತ್ತಿಯ ನಂತರ ಪಟ್ಟಣದಲ್ಲಿ ಉಳಿದುಕೊಳ್ಳದೆ ಸ್ವಗ್ರಾಮಕ್ಕೆ ತೆರಳಿದರು. ಗ್ರಾಮದ ಜನರಿಗೆ ಅನುಕೂಲಕ್ಕಾಗಿ ಪಿತ್ರಾರ್ಜಿತ ಕಟ್ಟಡದಲ್ಲಿ 3 ಲಕ್ಷ ರು. ವೆಚ್ಚ ಮಾಡಿ, ಸಿದ್ದೇಶ್ವರ ಪುಸ್ತಕ ಮನೆ ಎಂಬ ಹೆಸರಿನಲ್ಲಿ ಗ್ರಂಥಾಯಲವೊಂದನ್ನು ಇತ್ತೀಚೆಗೆ ಆರಂಭಿಸಿದ್ದಾರೆ. ಸ್ನೇಹಿತರು ಕಾಣಿಕೆಯಾಗಿ ನೀಡಿದ ಹಾಗೂ ಸ್ವಂತ ಖರೀದಿಸಿದ ಪುಸ್ತಕಗಳ ಸಂಖ್ಯೆ 2 ಸಾವಿರದ ಗಡಿ ದಾಟಿದೆ. ಅವೆಲ್ಲವೂ ಪುಸ್ತಕ ಮನೆಯಲ್ಲಿವೆ. ನಿತ್ಯವೂ ದಿನಪತ್ರಿಕೆ ತರಿಸಲಾಗುತ್ತದೆ. ಜನ ವೃತ್ತಪತ್ರಿಕೆಗಳು, ಕನ್ನಡ ಸಾಹಿತಿಗಳ ಕೃತಿಗಳನ್ನು ಓದುತ್ತಿದ್ದಾರೆ. ಇದರಿಂದ ಕೊಂಚ ಬದಲಾವಣೆಯ ಗಾಳಿ ಬೀಸುತ್ತಿರುವುದು ಗೌಡರಿಗೆ ಹರ್ಷ ತಂದಿದೆ.
ಸಮಾಜಕ್ಕೆ ಆದರ್ಶವಾಗಬೇಕು ಎಂಬ ಹಂಬಲ ಇರುವ ಈ ಮಹನೀಯರನ್ನು ಅಭಿನಂದಿಸಲು ಹಾಗೂ ಸಾಧ್ಯವಾದರೆ ಅವರು ಆರಂಭಿಸಿರುವ ಗ್ರಂಥಾಲಯಗಳಿಗೆ ಪುಸ್ತಕ ದಾನ ಮಾಡುವ ದಾನಿಗಳಿಗೆ ಸಂಪರ್ಕ: ನಾಗತಿಹಳ್ಳಿ ಚಂದ್ರಶೇಖರ(9845878899), ಕೆ. ಸಿದ್ದನಗೌಡ(9945794663).
-ಕೆ.ಎನ್. ರವಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


