ದಿನದ ಮಟ್ಟಿಗೆ ಮಗುವಾಗಿ
ಒಂದು ದಿನ ಬೆಳಗ್ಗೆ ಏಳುತ್ತಲೇ ಹೀಗೊಂದು ನಿರ್ಧಾರಕ್ಕೆ ಬಂದು ಬಿಡಿ, 'ಇವತ್ತೊಂದು ದಿನ ನಾನು ಮಗು. ಯಾವುದೇ ಕಾರಣಕ್ಕೂ ಆ ಪರಿಧಿಯಿಂದ ಹೊರಬರುವುದಿಲ್ಲ' ಎಂದು ಸಂಕಲ್ಪಿಸಿಕೊಳ್ಳಿ. ಅದಕ್ಕೆ ಬದ್ಧರಾಗಿಬಿಡಿ. ಮೊದಲು ನಿಮ್ಮ ಮೊಬೈಲ್, ಲ್ಯಾಪಟಾಪ್ ಇತ್ಯಾದಿ ಇತ್ಯಾದಿಗಳನ್ನು ದೂರವಿಟ್ಟುಬಿಡಿ. ಏಳುತ್ತಲೇ ನಿಮ್ಮೊಳಗಿನ ಮಗುವನ್ನು ಹೊರಕರೆದುಬಿಟ್ಟುಬಿಡಿ. ಇವತ್ತೊಂದು ದಿನ ಆ ಮಗುಮನಸ್ಸಿಗೆ ಯಾವುದೇ ನಿರ್ಬಂಧವಿಲ್ಲ. ಅಲ್ಲಿ ಕಲ್ಮಶವಿಲ್ಲ, ಕಪಟವಿಲ್ಲ. ಸಿಟ್ಟು, ನಗು, ಅಳು ಹೀಗೆ ಭಾವನೆಗಳಿಗೆ ಚೌಕಾಸಿಯಿಲ್ಲ. ಆಟ, ಮನರಂಜನೆಗಳಿಗೆ ಮಿತಿಯಿಲ್ಲ. ಕುತೂಹಲಕ್ಕೆ ಕೊನೆಯಿಲ್ಲ... ಒಟ್ಟಾರೆ ಮನಸ್ಸು ಪಕ್ಕಾ ಮೊದಲಿನ ಹಸಿತನಕ್ಕೆ ಮರಳಿಬಿಡಬೇಕು. ಹೀಗಾಗಲು ಮೊದಲಿಗೆ ನೀವು ಮಾಡಬೇಕಾಗಿದ್ದು ನಿಮ್ಮ ತಲೆಯೊಳಗೆ ನೀವು ಹೊತ್ತು ಕುಳಿತಿದ್ದೀರಲ್ಲಾ ನೂರೆಂಟು ಯೋಚನೆಗಳ ಹೊರೆ, ಅದನ್ನು ಮೊದಲು ಕೆಳಗಳಿಸಿಬಿಡಿ. ನೀವು ಬಾಲ್ಯವೆಂಬುದನ್ನು, ಅದರ ಮುಗ್ಧತೆಯನ್ನು ಕಳೆದುಕೊಂಡಿದ್ದರೆ ಅದಕ್ಕೆ ಕಾರಣವೇ ನೀವು ಸೃಷ್ಟಿಸಿಕೊಂಡಿರುವ ನೂರೆಂಟು ಯೋಚನೆಗಳ ಬಲೆ. ಬದುಕಿನ ಅತ್ಯುತ್ತಮ ದಿನಗಳು ಯಾವುದೆಂದು ಜಗತ್ತಿನಲ್ಲಿ ಯಾರನ್ನೇ ಕೇಳಿದರೂ ಅವರು ಹೇಳುವುದು ಬಾಲ್ಯವೆಂದೇ. ಆದರೂ ಅದು ಗೊತ್ತಿಲ್ಲದಂತೆ ಕಳೆದು ಹೋಗಿಬಿಡುತ್ತದೆ. ಬಾಲ್ಯ ಕಳೆದು ಹೋದರೆ ಹೋಗಲಿಬಿಡಿ. ಬಾಲಿಶತನವನ್ನು ಕೆಲವಾದರೂ ವಿಚಾರದಲ್ಲಿ ಕಳಕೊಳ್ಳದೇ ಇರುವುದು ಉತ್ತಮವೇನೋ. ಅದು ನಮ್ಮ ಕೈಯಲ್ಲೇ ಇರುತ್ತದೆ. ಎಲ್ಲೋ ಒಂದು ಕಡೆ ನಾವು ಬೆಳೆದಂತೆಲ್ಲ ಬೇರೆಯವರಿಗಿಂತ ನಮ್ಮೊಳಗೇ ನಮ್ಮ ಬಗ್ಗೆ ನಿರೀಕ್ಷೆಗಳ ಕಂತೆ ಹೆಚ್ಚುತ್ತಾ ಹೋಗುತ್ತದೆ. ಅದನ್ನು ಮುಟ್ಟುವ ಭರದಲ್ಲಿ ಮನಸ್ಸನ್ನು ಕಟ್ಟಿಹಾಕಲಾರಂಭಿಸುತ್ತೇವೆ. ಪ್ರಬುದ್ಧವಾಗಿ ವರ್ತಿಸುವುದು ತೀರಾ ಅಗತ್ಯ, ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದು ಬಿಡುತ್ತೇವೆ. ಪ್ರತಿಷ್ಠೆ, ಘನತೆ, ಸ್ಥಾನಮಾನ, ಹುದ್ದೆ, ಅಧಿಕಾರಗಳಿಗಾಗಿ ಹಾಗೂ ಅವೆಲ್ಲಕ್ಕಿಂತ ಹೆಚ್ಚಾಗಿ ತನ್ನನ್ನು ಸಮಾಜ ಪ್ರೌಢನೆಂದು ಗುರುತಿಸಬೇಕು ಎಂಬ ಕಾರಣಕ್ಕಾಗಿ ನಾವು ಗಂಭೀರತೆಯ ಮುಖವಾಡವನ್ನು ಹೊತ್ತು ತಿರುಗಲಾರಂಭಿಸುತ್ತೇವೆ. ನಗುವ ಅವಕಾಶದಲ್ಲೂ ನಗುವುದನ್ನು ಮರೆಯುತ್ತೇವೆ. ಅಳು ಒತ್ತರಿಸಿ ಬಂದಾಗಲೂ ತುಟಿ ಕಚ್ಚಿ ಹಿಡಿಯುತ್ತೇವೆ. ಒಟ್ಟಾರೆ ನಮ್ಮ ಬಾಲ್ಯವನ್ನು ನಾವೇ ಕಿತ್ತುಕೊಳ್ಳುತ್ತೇವೆ. ಹೊರಗಿನ ಅರಿವು ನಮ್ಮನ್ನು ಇಂಥ ಜಡತೆಗೆ ತಳ್ಳುತ್ತದೆ. ವಾಸ್ತವವಾದದ ಹೆಸರಿನಲ್ಲಿ ಬಾಲ್ಯದ ಸ್ವಾತಂತ್ರ್ಯವನ್ನು, ಕುತೂಹಲವನ್ನು ಸಮಾಧಿ ಮಾಡಿ ಮೇಲೊಂದು ಕಲ್ಮಶಗಳ ಗೂಡನ್ನು ಪ್ರತಿಷ್ಠಾಪಿಸಿಬಿಡುತ್ತೇವೆ. ಅಂಥವೆಲ್ಲ ಹಂಗುಗಳನ್ನು ತೊರೆದು ತಿಂಗಳಿಗೆ ಒಮ್ಮೆಯಾದರೂ ನಿಮ್ಮನಿಮ್ಮ ಬಾಲ್ಯದ ಅದೇ ನೆನಪಿನೊಂದಿಗೆ ಮಗುವಾಗಿ ಇರಲು ಪ್ರಯತ್ನಿಸಿ ನೋಡಿ. ನಿಮ್ಮ ಎಷ್ಟೋ ಸಮಸ್ಯೆಗಳು ದೂರವಾಗಿ ಬದುಕು ಸುಂದರ ಎನಿಸತೊಡಗದಿದ್ದರೆ ಹೇಳಿ.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

