ಹಲಸುದಿನ

ಹಸಿದು ಹಲಸು ತಿನ್ನು ಎನ್ನುವುದು ಒಂದು ಕಾಲದಲ್ಲಿ ಪ್ರಚಲಿತವಿದ್ದ ಗಾದೆ. ಕೇವಲ 25 ವರ್ಷಗಳ ಹಿಂದಿನ ಮಾತು, ಹಳ್ಳಿಗಳಲ್ಲಿ ಒಂದೇ ಒಂದು ಹಲಸಿನ ಹಣ್ಣು ಹಾಳಾಗದೆ ಬಳಕೆಯಾಗುತ್ತಿತ್ತು. ಅಕ್ಕಿ ಹಾಗೂ ಇತರ ಆಹಾರಧಾನ್ಯಗಳು ಸುಲಭವಾಗಿ ಎಂದು ದೊರಕಲು ಪ್ರಾರಂಭವಾಯಿತೋ, ಹಲಸಿನ ಹಣ್ಣುಗಳ ಬಗ್ಗೆ ನಿರ್ಲಕ್ಷ್ಯ ಆರಂಭವಾಯಿತು. ತೋಟಗಳಲ್ಲಿ ಹಾಗೇ ಬಿದ್ದು ಕೊಳೆಯಲು ಪ್ರಾರಂಭವಾಯಿತು. ಸೀಸನ್‌ನಲ್ಲಿ ವಿಧ ವಿಧ ಖಾದ್ಯಗಳೊಂದಿಗೆ ಊಟ ಹಾಗೂ ಚಹಾದ ತಟ್ಟೆಯಲ್ಲಿ ಪ್ರಧಾನ ಸ್ಥಾನ ಪಡೆದು ರಾಜಮರ್ಯಾದೆ ಪಡೆಯುತ್ತಿದ್ದ ಹಲಸು ಹೇಳಹೆಸರಿಲ್ಲದೆ ಮಾಯವಾಗಿ ಹೋಗಲು ಪ್ರಾರಂಭವಾಯಿತು. ಕಳೆದು ಹೋಗಿರುವ ಹಲಸಿನ ರಾಜ ಮರ್ಯಾದೆಯನ್ನು ಮತ್ತೆ ಪ್ರತಿಷ್ಠಾಪಿಸಲು ಕೆಲವರು ಪಣತೊಟ್ಟಿರುವುದು ಇಂದಿನ ವರ್ತಮಾನ.
ದಕ್ಷಿಣ ಕನ್ನಡದ ವಿಟ್ಲ ಪರಿಸರದಲ್ಲಿ ಸಮಾನ ಮನಸ್ಕ ಹಲಸುಪ್ರಿಯರೆಲ್ಲ ಸೇರಿ 'ಹಲಸು ಸ್ನೇಹಿಕೂಟ' ಕಟ್ಟಿಕೊಂಡು ಈ ಹಣ್ಣಿನ ಮೌಲ್ಯವರ್ಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರೈತರೇ ಸೇರಿ ಕೂಟ ಕಟ್ಟಿದ್ದು ರಾಜ್ಯದಲ್ಲೇ ಮೊದಲು. ಕಳೆದೆರಡು ವರ್ಷದಿಂದ ಈ ಸಂಘಟನೆ ಸಕ್ರಿಯವಾಗಿದೆ. ಹಲಸಿಗೆ ರಾಜ ಮಾರ್ಯಾದೆ ತಂದುಕೊಡುವ ನಿಟ್ಟಿನಲ್ಲಿ ಕೆಲಮಟ್ಟಿನ ಯಶಸ್ಸನ್ನೂ ಗಳಿಸಿದ್ದಾರೆ. ಈಗ ಐಸ್‌ಕ್ರೀಮ್ ತಯಾರಿಕೆಗಾಗಿ ಮಂಗಳೂರು, ಮುಂಬೈಯಿಂದಲೂ ಹಲಸು ಹುಡುಕಿ ಇಲ್ಲಿಗೆ ಬರಲಾರಂಭಿಸಿದ್ದಾರೆ. ಜಾಗೃತಿಯ ಬಳಿಕ ಕೆಲವರು ಎಕ್ರೆಗಟ್ಟಲೆ ಜಾಗದಲ್ಲಿ ಕೇವಲ ಹಲಸನ್ನೇ ಬೆಳೆಯಲು ಪ್ರಾರಂಭಿಸಿದ್ದಾರೆ.
ಪುಟ್ಟ ರಾಜ್ಯ ನೆರೆಯ ಕೇರಳದಲ್ಲಿ ಏನೆಲ್ಲಾ ಜಾಗೃತಿಯಾಯಿತೋ ಅದು ಬಲುಬೇಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಗೆ ಬರುತ್ತದೆ. ಹಲಸಿನ ಮೌಲ್ಯ ವರ್ಧನೆ ಕುರಿತು ಕೇರಳದಲ್ಲಾದ ಜಾಗೃತಿಯನ್ನು ಅಡಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಹೋದಲ್ಲೆಲ್ಲ ಹೇಳುತ್ತಾ ಬಂದರು. ಸಾಹಸಗಾಥೆಗಳನ್ನು ಪರಿಚಯಿಸಿದರು. ಅದರಿಂದ ಪ್ರಭಾವಿತರಾಗಿ ವಿಟ್ಲ ಪರಿಸರದಲ್ಲಿ ಹಲಸು ಸ್ನೇಹಿ ಕೂಟ ಸಕ್ರಿಯಗೊಂಡಿದೆ. ಪ್ರತಿ ವರ್ಷ ಕೂಟದ ವತಿಯಿಂದ ನಾಲ್ಕೈದು ಕಾರ್ಯಕ್ರಮ ಆಯೋಜಿಸಿ, ಕಾರ್ಯಕ್ರಮದ ನೆನಪಿಗಾಗಿ 'ಖಾಸಗಿ ವಾರ್ತಾಪತ್ರ'ವನ್ನೂ ಹೊರ ತರುತ್ತಿದ್ದಾರೆ. ಈ ಬಾರಿ ನಡೆದ ಕಾರ್ಯಕ್ರಮದ ವಿವರ ಮುಂದಿನ ಕಾರ್ಯಕ್ರಮದಲ್ಲಿ ವಾರ್ತಾಪತ್ರ ರೂಪದಲ್ಲಿ ಬಿಡುಗಡೆ.
ಸ್ನೇಹಿಕೂಟದ ಉದ್ದೇಶ
ಹಲಸಿನ ಹಣ್ಣಿನ ಬಗ್ಗೆ ಒಲವುಳ್ಳ ಆಸಕ್ತರನ್ನು ಒಂದೇ ಸೂರಿನಡಿ ತರುವುದು ಮೂಲ ಉದ್ದೇಶ. ಹಲಸಿನ ವೈವಿಧ್ಯ ಗುರುತಿಸುವುದು, ಅವುಗಳಲ್ಲಿ ಉತ್ಕೃಷ್ಟ ತಳಿಯ ಕಸಿ ಮಾಡುವುದು, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡಲು ಪ್ರಯತ್ನಿಸುವುದು, ಜೊತೆಗೆ ಕಾಡು ಹಣ್ಣು, ನಾಡು ಹಣ್ಣುಗಳ ಸಂರಕ್ಷಣೆಯ ಆಶಯವನ್ನು ಕೂಟ ಹೊಂದಿದೆ.
ಸ್ನೇಹಿಕೂಟ ನಡೆಸಿದ ಜಾಗೃತಿಯ ಪರಿಣಾಮವೋ ಎಂಬಂತೆ, ಈ ಭಾಗದಲ್ಲಿ ಕೆಲವರು ಹಲಸನ್ನೇ ಬೆಳೆಯಲು ಪ್ರಾರಂಭಿಸಿದ್ದಾರೆ. ಪುತ್ತೂರಿನ ಮಲ್ಯ ಶಂಕರನಾರಾಯಣ ಭಟ್ಟರು, ಹಲಸು ಬೆಳೆಗಾರರ ಸಂಘದ ಸಕ್ರಿಯ ಸದಸ್ಯ. ತಮ್ಮ ತೋಟದ 2 ಎಕರೆ ಜಾಗದಲ್ಲಿ ಕೇವಲ ಹಲಸಿನ ಸಸಿ ನೆಟ್ಟಿದ್ದಾರೆ. ಸುಮಾರು 200 ಕಸಿ ಹಲಸು ಸಸಿ ಮಾಡಿದ್ದಾರೆ. ಮಂಗಳೂರಿನ ನ್ಯಾಚುರಲ್ ಐಸ್‌ಕ್ರೀಮ್‌ಗೆ ಕಳೆದ ವರ್ಷ 13 ಕ್ವಿಂಟಾಲ್ ಹಲಸಿನ ಹಣ್ಣನ್ನು ಮಾರಾಟ ಮಾಡಿದ್ದಾರೆ. ಅದೇ ರೀತಿ ಉಬಾರು ರಾಜಗೋಪಾಲ ಭಟ್ಟರು, ಶಿರಂಕಲ್ಲು ನಾರಾಯಣ ಭಟ್ಟರು, ವಾರಣಾಶಿ ಫಾರ್ಮ್‌ನಲ್ಲಿ ಹಲಸಿಗಾಗೇ ಪ್ರತ್ಯೇಕ ತೋಟಗಳಿವೆ.
ಕಳೆದ ಬಾರಿ ವಿಟ್ಲ ಪರಿಸರದ ಅಳಿಕೆ, ಕೇಪು ಸುತ್ತಮುತ್ತಲಿನ ಐದು ಗ್ರಾಮಗಳಿಂದ 27 ಟನ್ ಬಲಿತ ಹಲಸಿನ ಕಾಯಿ ಐಸ್‌ಕ್ರೀಮ್‌ಗಾಗಿ ಮುಂಬೈ ಪ್ರವೇಶಿಸಿದೆ. ಎಲ್ಲ ಸರಿ ಹೋದರೆ ಹಳ್ಳಿ ಹಲಸು ವಿದೇಶಕ್ಕೂ ಪ್ರಯಾಣ ಬೆಳೆಸಿದರೆ ಅಚ್ಚರಿಯಿಲ್ಲ. ಏಕೆಂದರೆ ಕಳೆದ ಬಾರಿ ಅಮೆರಿಕದ ಗ್ಲೋಬಲ್ ವಿಲೇಜ್ ಫ್ರುಟ್ಸ್ ಕಂಪನಿಯಿಂದ ಬಕ್ಕೆ ಹಣ್ಣಿನ ಒಣ ಸೊಳೆ, ಹಲಸಿನ ಬೀಜದ ಹುಡಿ ಬೇಕು ಎಂಬ ಬೇಡಿಕೆ ಬಂದಿದೆ.
ಹಲಸಿಗಷ್ಟೇ ಸೀಮಿತವಾಗಿಲ್ಲ
ಕೂಟದ ಕಾರ್ಯಕ್ಷೇತ್ರ ಹಲಸಿಗೆ ಸೀಮಿತವಾಗಿಲ್ಲ. ಕಳೆದ ಬಾರಿ ಕಾಡು ಮಾವಿನ ಜಾಡು ಹಿಡಿದು 'ಮಾವಿನ ಊಟ- ತಳಿ ಹುಡುಕಾಟ' ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭ ಮಿಡಿ ವಿಭಾಗದಲ್ಲಿ 70 ಮತ್ತು ಹಣ್ಣುಗಳ ವಿಭಾಗದಲ್ಲಿ 65 ವಿವಿಧ ಮಾವಿನ ತಳಿಗಳು ಪ್ರದರ್ಶನಕ್ಕೆ ಬಂದಿತ್ತು. ಬಳಿಕ ನಿರ್ವಿಷ ತರಕಾರಿ ಹುಡುಕಾಟ ಸಲುವಾಗಿ ಪುಣಚದ ಮಲ್ಯ ಶಂಕರನಾರಾಯಣ ಭಟ್‌ರ ಮನೆಯಂಗಳದಲ್ಲಿ ತರಕಾರಿ ಹಬ್ಬ, ಹಾಗೇ ಗಡ್ಡೆ ಗೆಣಸು ಮೇಳವನ್ನೂ ಆಯೋಜಿಸಿದೆ. ಮುಂದಿನ ದಿನಗಳಲ್ಲಿ ಹಲಸಿನ ಖಾದ್ಯದ ಬಗ್ಗೆ ತರಬೇತಿ , ಬಳಿಕ ಸೊಪ್ಪು ತರಕಾರಿ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎನ್ನುತ್ತಾರೆ ಕೂಟದ ಸಂಚಾಲಕ ಮುಳಿಯ ವೆಂಕಟಕೃಷ್ಣ ಶರ್ಮ.
ಹಲಸಿನ ಬಗ್ಗೆ ಈ ಪರಿಸದಲ್ಲಿ ಜಾಗೃತಿ ಮೂಡಿಸಿದ ಅಡಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಹೇಳುವುದಿಷ್ಟು: ಹಲಸಿನ ಬಗ್ಗೆ ಈಗ ಅಲ್ಲಲ್ಲಿ ಜಾಗೃತಿ ಮೂಡುತ್ತಿದೆ. ಆದರೆ ಬೆಳೆಗಾರರಲ್ಲಿ ಸಂವಹನ ಕೊರತೆಯಿದೆ. ನಮ್ಮಲ್ಲಿ ಹಣ್ಣನ್ನು ಮಾತ್ರ ಬಳಸಿದರೆ, ವಿದರ್ಭದಂತ ಪ್ರದೇಶದಲ್ಲಿ ಹಲಸನ್ನು ತರಕಾರಿ ರೂಪದಲ್ಲಿ ಬಳಸುತ್ತಿದ್ದಾರೆ. ಉತ್ತರ ಭಾರತದಲ್ಲಿ ಇದು ಶ್ರೀಮಂತರ ತರಕಾರಿಯಾಗಿ ಬಳಕೆಯಾಗುತ್ತಿದೆ. ಹಣ್ಣು ರೆಡಿ ಟು ಕುಕ್ ಆಗಿ ಮಾರುಕಟ್ಟೆಗೆ ಬಂದರೆ ಇನ್ನಷ್ಟು ಬೇಡಿಕೆ ಹೆಚ್ಚಲು ಸಾಧ್ಯ. ಇದಕ್ಕೆ ಸರ್ಕಾರದಿಂದಲೂ ಬೆಂಬಲ ಅಗತ್ಯ.
- ರಾಘವೇಂದ್ರ ಅಗ್ನಿಹೋತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


