ಬೈಟುಕಾಫಿ

ತಿಂತೀವಿ ಅನ್ನೋದಷ್ಟೇ ಮುಖ್ಯವಲ್ಲ!

Published On :

ನನ್ನ ತಂಡದ ಬಗ್ಗೆ ನನಗೆ ಭಾರಿ ಹೆಮ್ಮೆ. ನಮ್ಮ ಮೈಯ್ಯಾಸ್ ಹೋಟೆಲ್ ಇರಬಹುದು. ಸಿದ್ಧ ತಿನಿಸುಗಳ ತಯಾರಿಕಾ ಘಟಕ ಇರಬಹುದು. ಪ್ರಯೋಗಾಲಯ ಇರಬಹುದು. ಆಹಾರ ಸಂಶೋಧನೆ ವಿಚಾರದಲ್ಲಿ ಎಲ್ಲರೂ ಅಪ್‌ಡೇಟ್ ಆಗಿರುತ್ತಾರೆ. ಆಹಾರಕ್ಕೆ ಸಂಬಂಧಿಸಿ ಎಲ್ಲೆಲ್ಲಿ ಏನೇನು ಪ್ರಯೋಗ, ಸಂಶೋಧನೆಗಳು ನಡೆಯುತ್ತಿರುತ್ತವೆ ಎನ್ನುವುದನ್ನು ಅವರು ತಿಳಿದಿರುತ್ತಾರೆ. ನಾನು ಸಣ್ಣ ಮಾಹಿತಿ ಕೇಳಿದರೂ ಸಾಕು, ನನ್ನ ಟೇಬಲ್ ಮೇಲೆ ಪ್ರವಾಹ!
ಮೊನ್ನೆ ಶ್ರೀಧರನ ಕೈಯ್ಯಲ್ಲಿ ಒಂದು ಪೇಪರ್ ಇತ್ತು. ಅದು ನಾನು ಈಗ ಬರೆಯುತ್ತಿರುವ ಸರಣಿ ಕುರಿತಾಗಿಯೇ ಆಗಿತ್ತು. ಕುತೂಹಲದಿಂದ ಕಣ್ಣಾಡಿಸಿದೆ. ಬ್ರೊಕೊಲಿ, ಕ್ಯಾರೆಟ್ ಕುರಿತಾದ ಸಂಶೋಧನಾ ವರದಿ. ಜಾನ್ಸ್ ಹಾಪ್‌ಕಿನ್ಸ್, ಹಾರ್ವರ್ಡ್‌ನಂಥ ವಿಶ್ವವಿದ್ಯಾಲಯಗಳಲ್ಲಿ ನಡೆದ ಸಂಶೋಧನೆ ವಿವರ. ಕೋಸುಗಡ್ಡೆಯಲ್ಲಿ ಕ್ಯಾನ್ಸರ್ ನಿರೋಧಕ ಶಕ್ತಿ ಇದೆ. ಬ್ರೊಕೊಲಿ, ತಿನ್ನುವವರು ಕ್ಯಾನ್ಸರ್‌ನಿಂದ ದೂರ ಇರಬಹುದು. ಗೆಜ್ಜರಿ ಜಾಸ್ತಿ ತಿಂದರೆ ಪಾರ್ಶ್ವವಾಯು, ಹೃದ್ರೋಗಗಳಿಂದ ದೂರ ಇರಬಹುದು ಎನ್ನುವ ವಿವರಣೆ ಅದರಲ್ಲಿತ್ತು.
ಕ್ಯಾನ್ಸರ್ ನಿರೋಧಕ ಶಕ್ತಿ ಇರುವ ಆಹಾರ ಕ್ಯಾನ್ಸರ್‌ಕಾರಕ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಕ್ಯಾನ್ಸರ್ ಕೋಶಗಳನ್ನು ಅನಿಲೀಕರಿಸಿ, ದೇಹದ ತುಂಬ ನಡೆಯುವ ಅದರ ರಾಸಾಯನಿಕ ಪ್ರಕ್ರಿಯೆಗಳಿಗೆ ತಡೆಯೊಡ್ಡುವ ಸಾಮರ್ಥ್ಯ ನಾವು ಸೇವಿಸುವ ಆಹಾರಕ್ಕೆ ಇದೆ. ಅಡ್ಡಾದಿಡ್ಡಿಯಾಗಿ ಬೆಳೆದು ಮುಂದೆ ಕ್ಯಾನ್ಸರ್ ಅನ್ನು ತರಬಹುದಾದ ಕೋಶಗಳ ಬೆಳವಣಿಗೆ ಸಂಕುಚಿತಗೊಳಿಸುವ ತಾಕತ್ತೂ ಆಹಾರಕ್ಕೆ ಇದೆ. ಕ್ಯಾನ್ಸರ್ ಕೋಶಗಳ ಹರಡುವಿಕೆಯನ್ನು ನಿಯಂತ್ರಿಸಿಕೊಳ್ಳುವುದು ಸರಿಯಾದ ಆಹಾರದಿಂದ ಸಾಧ್ಯವಿದೆ.   
ಅದು ಬಿಡಿ. ಆಹಾರ ನಮ್ಮ ಮೂಡ್ ಅನ್ನೂ ನಿಯಂತ್ರಿಸಬಲ್ಲದು. ಅದು ಖಿನ್ನತೆಗೂ ದೂಡಬಹುದು, ಖಿನ್ನತೆಯಿಂದ ಪಾರು ಮಾಡಲೂಬಹುದು. ಮೆದುಳನ್ನು ಕ್ರಿಯಾಶೀಲಗೊಳಿಸುವುದೇ ನಮ್ಮ ಆಹಾರ. ಪೌಷ್ಟಿಕ ಆಹಾರದಿಂದ ಸ್ವಾಭಾವಿಕವಾಗಿ ಮೆದುಳು ಬಲಗೊಳ್ಳುತ್ತದೆ. ತತ್ಫಲವಾಗಿ ಯೋಚನಾಶಕ್ತಿ ಹೆಚ್ಚುತ್ತದೆ. ತ್ವರಿತವಾಗಿ ಕೆಲಸಗಳನ್ನು ಪೂರ್ಣಗೊಳಿಸುತ್ತೇವೆ. ಪರೀಕ್ಷಿಸಿ ನೋಡಿ ಬೇಕಾದರೆ. ಸಿಕ್ಕಾಪಟ್ಟೆ ಹಸಿವಾದಾಗ ಏನು ಮಾಡಬೇಕು ಎನ್ನುವುದು ತೋಚದೇ ದಿಕ್ಕೆಟ್ಟು ಕುಳಿತುಬಿಡುತ್ತೇವೆ. ಅದೇ ಹೊಟ್ಟೆಗೆ ಏನಾದರೂ ಬಿತ್ತು ಅಂತಾದರೆ ದೇಹದ ಎಂಜಿನ್ ಏಕಾಏಕಿ ಹುಮ್ಮಸ್ಸು ಪಡೆದುಬಿಡುತ್ತದೆ (ಅತಿಯಾಗಿ ತಿಂದರೆ ಅಜೀರ್ಣ ಮತ್ತಿತರ ಸಮಸ್ಯೆಗಳು ಕಾಡುವುದುಂಟು. ಅದು ಬೇರೆ ಮಾತು. ಆದರೆ ತಿನ್ನುವ ಪ್ರಮಾಣ ಏರುಪೇರಾದರೆ ಸ್ವಾಸ್ಥ್ಯ ಹದಗೆಡುತ್ತದೆ ಅಂತಾಯಿತಲ್ಲ!).
ಹಸಿವಾದಾಗ ಅಥವಾ ಏನನ್ನಾದರೂ ತಿನ್ನಬೇಕು ಅನ್ನಿಸಿದಾಗ ನಾವು ತಿನ್ನುತ್ತೇವೆ ಎನ್ನುವುದಷ್ಟೇ ಮುಖ್ಯವಲ್ಲ. ಏನು ತಿನ್ನುತ್ತೇವೆ? ಎಷ್ಟು ತಿನ್ನುತ್ತೇವೆ? ಹೇಗೆ ತಿನ್ನುತ್ತೇವೆ ಎನ್ನುವುದು ಕೂಡ ಮುಖ್ಯ ಎಂಬ ಸಂಗತಿ ನಿಮಗೆ ಅರಿವಾಗಿದೆ ಎಂದುಕೊಳ್ಳುತ್ತೇನೆ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.