ನಂಬಿಕೆಯ ಪೊರೆ ಕಳಚದಿರಲಿ
ನಂಬಿಕೆ ಎನ್ನುವುದು ಮನುಷ್ಯನ ಮೂಲಭೂತ ಆಸ್ತಿ. ಅದರ ಆಧಾರದಲ್ಲೇ ಬದುಕು ನಿಂತಿರುತ್ತದೆ. ನಂಬಿಕೆಗೆ ಕೊಂಚ ಧಕ್ಕೆ ಬಂದರೂ ಬದುಕಿನ ಅಡಿಪಾಯವೇ ಅಲ್ಲಾಡಿ ಹೋಗುತ್ತದೆ. ಅದನ್ನು ಉಳಿಸಿಕೊಳ್ಳುವುದು ಅತ್ಯಂತ ಸಾಹಸದ ಕಾರ್ಯ. ಯಾವುದೇ ಕ್ಷಣದಲ್ಲಿ, ಎಂಥದ್ದೇ ಸನ್ನಿವೇಶದಲ್ಲಿ ಒಬ್ಬ ವ್ಯಕ್ತಿಯ ಮೇಲೆ ನಮಗೆ ಅಪನಂಬಿಕೆ ಮೂಡಿತೆಂದರೆ ಮತ್ತೆಂದೂ ಅದನ್ನು ಸರಿಪಡಿಸಲಾಗುವುದೇ ಇಲ್ಲ. ಎಷ್ಟೇ ನಿಯತ್ತಾಗಿ ವರ್ತಿಸಿದರೂ ಒಂದಲ್ಲಾಒಂದು ಹಂತದಲ್ಲಿ ಆ ವ್ಯಕ್ತಿಯನ್ನು ಅನುಮಾನದ ದೃಷ್ಟಿಯಿಂದಲೇ ನೋಡಲಾಗುತ್ತದೆ. ಅತ್ಯಂತ ತೆಳುವಾದ ನಂಬಿಕೆಯ ಪೊರೆ ಕಳಚಿಬಿದ್ದರೆ ಅದು ಮತ್ತೆ ಮೊಳೆಯುವುದು ಕಷ್ಟ ಸಾಧ್ಯ. ಸಂಬಂಧಗಳ ವಿಚಾರದಲ್ಲಂತೂ ಇದರ ಪಾತ್ರ ತೀರಾ ಪ್ರಮುಖವಾದುದು. ಯಾವುದೇ ಕ್ಷಣದಲ್ಲಿ ನಮ್ಮ ಮೇಲೆ ಇನ್ನೊಬ್ಬರು ಇಟ್ಟ ನಂಬಿಕೆ ಹುಸಿಯಾಗದಂತೆ ಎಚ್ಚರ ವಹಿಸುವುದು ತೀರಾ ಅಗತ್ಯ. ಅನುಮಾನಕ್ಕೆ ಎಡೆಮಾಡಿಕೊಡುವಂಥ ವರ್ತನೆಗಳು, ತಪ್ಪು ಗ್ರಹಿಕೆಗೆ ಕಾರಣವಾಗುವ ಸಂಭಾಷಣೆ, ಭಿನ್ನಾಭಿಪ್ರಾಯಕ್ಕೆ ಕಾರಣವಾಗುವ ನಡತೆ, ಮರೆ ಮಾಚಲಾಗುತ್ತಿದೆ ಎನಿಸುವಂಥ ಸಂಗತಿ, ಅಸಹಜವೆನಿಸುವಂಥ ಧೋರಣೆ ಇವೆಲ್ಲವೂ ನಂಬಿಕೆಯನ್ನು ಘಾಸಿಗೊಳಿಸುತ್ತವೆ. ಸಂಬಂಧದ ವಿಚಾರದಲ್ಲಿ ಉದ್ದೇಶಪೂರ್ವಕವಲ್ಲದಿದ್ದರೂ ಕೆಲವೊಮ್ಮೆ ಸಂಶಯದ ಸುಳಿ ಹರಿದಾಡಿಬಿಡುತ್ತದೆ. ಇಂಥ ಸಂದರ್ಭಗಳಲ್ಲಿ ಮೌನವಾಗಿದ್ದಷ್ಟೂ ಬಿರುಕು ಹೆಚ್ಚುತ್ತಾ ಹೋಗುತ್ತದೆ. ಮುಕ್ತವಾಗಿ ವಿಷಯವನ್ನು ಹಂಚಿಕೊಳ್ಳುವುದೊಂದೇ ಇದಕ್ಕಿರುವ ಏಕೈಕ ಪರಿಹಾರ. ಗ್ರಹಿಕೆ ಎಲ್ಲಿ ಎಡವಿರಬಹುದು ಎಂಬ ಬಗ್ಗೆ ಕೂಲಂಕುಷ ಪರಿಶೀಲನೆ ನಡೆಸಿ, ಆ ಬಗ್ಗೆ ವಾಸ್ತವಾಂಶವನ್ನು ಸಂಬಂಧಿಸಿದ ವ್ಯಕ್ತಿಗಳೆದುರು ಬಿಚ್ಚಿಟ್ಟುಬಿಡಬೇಕು. ಇಂಥ ಉದ್ದೇಶಕ್ಕೆ ಹೀಗೆ ಮಾತನಾಡಬೇಕಾಯಿತು, ಅಥವಾ ಇಂಥ ವರ್ತನೆಯ ಹಿಂದೆ ಇಂಥ ಅಚಾತುರ್ಯ ಅಗಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ವೃಥಾ ಪ್ರತಿಷ್ಠೆಗೆ ಕಟ್ಟುಬಿದ್ದು ಸಂಶಯವನ್ನು ನಿವಾರಿಸಿದೇ ಹೋದಲ್ಲಿ, ಗಂಭೀರ ನಷ್ಟಕ್ಕೆ ಒಳಗಾಗುವ ಸಾಧ್ಯತೆಯಿರುತ್ತದೆ. ಒಂದೊಮ್ಮೆ ತಪ್ಪೇ ಇದ್ದರೂ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಅಂಥ ಸಂದರ್ಭಗಳು ಮತ್ತೆ ಸೃಷ್ಟಿಯಾಗದಂತೆ ಎಚ್ಚರ ವಹಿಸಬೇಕು. ಸಂಯಕ್ಕೆ ಕಾರಣ ಏನೆಂಬುದು ಮನವರಿಕೆಯಾಗುತ್ತಿದ್ದಂತೆ ಅಂಥ ಸನ್ನಿವೇಶ, ವರ್ತನೆ, ಮಾತು, ಕೃತಿಗಳಿಂದ ಹೊರಬಂದುಬಿಡಬೇಕು. ಸಂಬಂಧ ಮತ್ತು ಸನ್ನಿವೇಶ ಎರಡರಲ್ಲಿ ನಮ್ಮ ಆಯ್ಕೆ ಯಾವತ್ತಿಗೂ ಸಂಬಂಧವೇ ಆಗಿರಬೇಕು. ಅನಗತ್ಯ ಸಮರ್ಥನೆಗಿಳಿಯುವುದರಿಂದ ಹಳಸಿದ ಸಂಬಂಧ ಇನ್ನಷ್ಟು ಹಳ್ಳ ಹಿಡಿಯುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಂಬಿಕೆಗೆ ದ್ರೋಹ ಆಗಿದೆ ಎಂಬುದು ಗೊತ್ತಾದಾಗ ನಂಬಿದ ವ್ಯಕ್ತಿಗಳಿಗೆ ಆಗುವ ಆಘಾತ ನಿಜಕ್ಕೂ ಚೇತರಿಸಿಕೊಳ್ಳಲಾಗದ್ದು ಎಂಬುದನ್ನು ನೆನಪಿಡಿ. ಅಂಥ ಆಘಾತ ಇನ್ನೊಬ್ಬರಿಗೆ ನಮ್ಮಿಂದ ಆಗದಿರಲಿ.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

