ಅಮರನಾಥನ ಅಂತಿಮಯಾತ್ರೆ!

ಒಂದು ಮಾತು. ಒಂದೇ ಒಂದು ಮಾತು. ಕೊಲೆಯಾದ ವ್ಯಕ್ತಿ ಅಂತಿಮವಾಗಿ ಆಡಿದ ಒಂದು ಮಾತಿನಿಂದ ಕೊಲೆ ಪ್ರಕರಣ ಭೇದಿಸಿದ ಪೊಲೀಸರು ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದ ಪ್ರಕರಣವಿದು. ತನಿಖಾಧಿಕಾರಿ ಸೂಕ್ಷ್ಮವಾಗಿ ಪರಿಗಣಿಸಿದರೆ ಎಂಥ ಪ್ರಕರಣವನ್ನಾದರೂ ಭೇದಿಸಬಹುದು ಎಂಬುದಕ್ಕೆ ಇದೊಂದು ನಿದರ್ಶನ ಮಾತ್ರ...
ಪೊಲೀಸ್ ಠಾಣೆಯಲ್ಲಿ ಕಡತಗಳನ್ನೆಲ್ಲಾ ನೋಡಿ ಮುಗಿಸಿದ ಇನ್ಸ್‌ಪೆಕ್ಟರ್ ಪಾಲಾಕ್ಷಯ್ಯ ಮನೆಗೆ ಹೊರಡುವ ಸಿದ್ಧತೆಯಲ್ಲಿದ್ದರು. ಅದೇ ಸಮಯಕ್ಕೆ ಸರಿಯಾಗಿ ಒಂದೇ ಸಮನೆ ಫೋನ್ ಬಡಿದುಕೊಳ್ಳಲಾರಂಭಿಸಿತು. ಮನೆಗೆ ಹೋಗುವ ಮೂಡ್‌ನಲ್ಲಿದ್ದ ಅವರು ಬೇಸರದಿಂದಲೇ ಫೋನ್ ರಿಸೀವ್ ಮಾಡಿದರು. ಆ ಕಡೆಯಿಂದ 'ಸರ್ ನಾನು ಹೊಸಕೆರೆ ಪಂಚಾಯಿತಿ ಅಧ್ಯಕ್ಷ ವೆಂಕಟಪ್ಪ ಮಾತನಾಡುವುದು. ಇಲ್ಲೇ ನಮ್ಮ ಹಳ್ಳಿಗೆ ಸಮೀಪದ ನೀಲಗಿರಿ ತೋಪಿನಲ್ಲಿ ಈಗ ತಾನೆ ಒಂದು ಹೆಣ ಬಿದ್ದಿದೆ! ಹೆಣದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಬೆಂಕಿ ಇನ್ನೂ ಆರಿಲ್ಲ. ಬೇಗ ಬನ್ನಿ' ಎಂದು ಒಂದೇ ಉಸಿರಿಗೆ ಹೇಳಿದ. ಮನೆಗೆ ಹೋಗುವ ಮೂಡ್‌ನಲ್ಲಿದ್ದ ಇನ್ಸ್‌ಪೆಕ್ಟರ್, ಇನ್ನು ಮನೆಗೆ ಹೋದಂತೆ ಎಂದು ಗೊಣಗಿಕೊಂಡು ಫೋನ್ ಬಂದ ವಿಳಾಸದತ್ತ ಇಬ್ಬರು ಪೇದೆಗಳೊಂದಿಗೆ ಹೊರಟರು.
----
ರಾಷ್ಟ್ರೀಯ ಹೆದ್ದಾರಿ 4ರಿಂದ ಬಲಕ್ಕೆ ತಿರುಗಿದರೆ ಹೊಸಕೆರೆಗೆ ಹೋಗುವ ದಾರಿ ಸಿಗುತ್ತದೆ. ಆ ಮಾರ್ಗದಲ್ಲಿ ಸ್ವಲ್ಪ ದೂರ ಕ್ರಮಿಸಿದರೆ ಎದುರಾಗುವುದು ನೀಲಗಿರಿ ತೋಪು. ಅದೇ ತೋಪಿನ ಅಂಚಿಗೆ ಪೊಲೀಸ್ ಜೀಪು ತಲಪುವಷ್ಟರಲ್ಲಿ ಒಂದು ಮರದ ಕೆಳಗೆ ಇಬ್ಬರು ವ್ಯಕ್ತಿಗಳು ನಿಂತಿರುವುದು ಜೀಪಿನ ಹೆಡ್‌ಲೈಟ್ ಬೆಳಕಿನಲ್ಲಿ ಕಾಣಿಸಿತು. ಅಲ್ಲಿ ಜೀಪು ನಿಲ್ಲುವಷ್ಟರಲ್ಲಿ ಬಂದ ವ್ಯಕ್ತಿಗಳು 'ಸರ್ ನಾನೇ ನಿಮಗೆ ಫೋನ್ ಮಾಡಿದ ವೆಂಕಟಪ್ಪ ಬನ್ನಿ ಇಲ್ಲೇ ಘಟನೆ ನಡೆದಿರುವುದು' ಎಂದು ದಾರಿಯ ಪಕ್ಕದಲ್ಲೇ ಇದ್ದ ಒಂದು ಮರದ ಕಡೆಗೆ ಕರೆದೊಯ್ದರು.
ಮರದ ಸಮೀಪ ಬರುವಷ್ಟರಲ್ಲೇ ಕಮಟು ವಾಸನೆ ಮೂಗಿಗೆ ಬಡಿಯಿತು. ಅದು ಮಾಂಸ ಸುಟ್ಟ ವಾಸನೆ ಎಂಬುದು ಇನ್ಸ್‌ಪೆಕ್ಟರ್‌ಗೆ ಅರ್ಥವಾಯಿತು. ಕಮಟು ವಾಸನೆಯ ಜೊತೆಗೆ ಪೆಟ್ರೋಲ್ ವಾಸನೆ ಬರುತ್ತಿತ್ತು. ಜೀಪಿನ ಹೆಡ್‌ಲೈಟ್‌ಗಳನ್ನು ಹೆಣದ ಮೇಲೆ ಬೀಳುವಂತೆ ತಿರುಗಿಸಲು ಡ್ರೈವರ್‌ಗೆ ತಿಳಿಸಿದ ಇನ್ಸ್‌ಪೆಕ್ಟರ್ ಹೆಣದ ಸುತ್ತಲೂ ಪರೀಕ್ಷೆ ನಡೆಸಿದರು.
ಅಲ್ಲಿ ಐದು ಲೀಟರ್‌ನ ಪೆಟ್ರೋಲ್ ಕ್ಯಾನು, ಒಂದು ಹಗ್ಗ ಮತ್ತು ಸುತ್ತಿಗೆ ಬಿದ್ದಿತ್ತು. ಅವನ್ನು ಪರಿಶೀಲಿಸಿದಾಗ ಸುತ್ತಿಗೆಗೆ ಅಂಟಿಕೊಂಡಿರುವ ರಕ್ತ ಇನ್ನೂ ಒಣಗಿರಲಿಲ್ಲ. ಅಂದರೆ ಎಲ್ಲಿಯೋ ಕೊಲೆ ಮಾಡಿ ತಂದು ಹೆಣವನ್ನು ಇಲ್ಲಿ ಹಾಕಿರಬಹುದು ಜೊತೆಗೆ ಕೊಲೆ ನಡೆದು ಹೆಚ್ಚು ಸಮಯ ಆಗಿರಲಿಲ್ಲ ಎಂಬುದು ಅವರಿಗೆ ಅರಿವಾಯಿತು. ಹೆಣ ಬೋರಲಾಗಿ ಬಿದ್ದು ಮುಖ ಕಾಣಿಸುತ್ತಿರಲಿಲ್ಲ. ಪೇದೆಗೆ ಹೆಣವನ್ನು ತಿರುಗಿಸಲು ಹೇಳಿದರು. ಹೆಣ ತಿರುಗಿಸಿದಾಗ ಗೊತ್ತಾಗಿದ್ದು ಸತ್ತಿರುವುದು 25 ವರ್ಷದ ಪುರುಷ ಅಂತ. ಬೆನ್ನಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಾರಣ, ಹೆಣದ ಹೊಟ್ಟೆಯ ಭಾಗದಲ್ಲಿ ಅರೆಬರೆ ಸುಟ್ಟಿತ್ತು. ಹಾಗಾಗಿ ಹೆಣದ ಮೇಲಿದ್ದ ಅಂಗಿಯ ಜೇಬಿನಲ್ಲಿ ಒಂದು ಟೆಲಿಫೋನ್ ಡೈರೆಕ್ಟರಿ ಇತ್ತು.
ಅದರ ಮೇಲೆ 'ಎಸ್.ಟಿ. ಅಮರನಾಥ್' ಎಂದು ಬರೆಯಲಾಗಿತ್ತು. ಒಳಗೆ ಪರಿಶೀಲಿಸಿದಾಗ ಮತ್ತೊಂದು ಕಡೆ 'ಎಸ್.ಟಿ. ಮೂರ್ತಿ' ಎಂದು ಬರೆಯಲಾಗಿತ್ತು. ಎರಡೂ ಇನ್ಷಿಯಲ್ ಒಂದೇ ಇದ್ದ ಕಾರಣ ಆ ಸಂಖ್ಯೆಗೆ ಫೋನ್ ಮಾಡಿ 'ಅಮರನಾಥ್ ಎಂಬವರು ನಿಮಗೆ ಗೊತ್ತೇ?' ಎಂದು ಕೇಳಿದರು ಇನ್ಸ್‌ಪೆಕ್ಟರ್. 'ಹೌದು ಸರ್ ಅವನು ನನ್ನ ತಮ್ಮ ಏನಾಯಿತು?' ಎಂಬುದು ಅತ್ತಿಂದ ಬಂದ ದನಿ. 'ಇಲ್ಲೊಂದು ಸಣ್ಣ ಅಪಘಾತವಾಗಿದೆ. ದಯವಿಟ್ಟು ಬೇಗ ಬನ್ನಿ' ಎಂದು ಇನ್ಸ್‌ಪೆಕ್ಟರ್ ಮನವಿ ಮಾಡಿದರು. ಮುಂದಿನ ಎರಡು ಗಂಟೆ ಕಳೆಯುವಷ್ಟರಲ್ಲಿ ಎಸ್.ಟಿ. ಮೂರ್ತಿ ಅಲ್ಲಿಗೆ ಹಾಜರು. ಪರಿಸ್ಥಿತಿ ತಿಳಿದು ದುಃಖಿತರಾದರು.
'ಈತನಿಗೆ ಮದುವೆ ಆಗಿದೆ ಹೆಂಡತಿ ರಮಾದೇವಿ. ಯಾರೂ ಶತ್ರುಗಳೇ ಇರಲಿಲ್ಲ. ಯಾಕೆ ಹೀಗೆ ನಡೆಯಿತು ಎಂಬುದು ನನಗೂ ತಿಳಿಯುತ್ತಿಲ್ಲ ಸರ್' ಎಂದು ಮೂರ್ತಿ ಹೇಳಿದರು. ಘಟನೆ ತಿಳಿದ ಸ್ವಲ್ಪವೇ ಸಮಯದಲ್ಲೇ ಕೊಲೆಯಾದ ವ್ಯಕ್ತಿ ಯಾರು ಎಂಬುದನ್ನು ತಿಳಿದ ಕಾರಣ ಅರ್ಧ ಭಾರ ಇಳಿದಂತಾಗಿತ್ತು ಇನ್ಸ್‌ಪೆಕ್ಟರ್‌ಗೆ. ನಂತರ ಬಂದಿದ್ದ ಇಬ್ಬರು ಪೇದೆಗಳನ್ನು ಅಲ್ಲಿಯೇ ಕಾವಲಿಗೆ ನಿಯೋಜಿಸಿ ಬೆಳಗ್ಗೆ ಶವಪರೀಕ್ಷೆಗೆ ವೈದ್ಯರನ್ನು ಕರೆತರುವುದಾಗಿ ಹೇಳಿ ಅಲ್ಲಿಂದ ಹೊರಟರು ಇನ್ಸ್‌ಪೆಕ್ಟರ್.
---
ಮಾರನೇ ದಿನ ಬೆಳಗಾಗುವಷ್ಟರಲ್ಲಿ ಕೊಲೆಯಾದ ಅಮರನಾಥನ ಹೆಂಡತಿ ರಮಾದೇವಿ ಬಂದು ಹೆಣದ ಬಳಿ ಒಂದೇ ಸಮನೆ ಅಳುತ್ತಿದ್ದರು. ವೈದ್ಯರು ಶವಪರೀಕ್ಷೆ ನಡೆಸಿ ಗಟ್ಟಿಯಾದ ವಸ್ತುವಿನಿಂದ ತಲೆಗೆ ಹೊಡೆದು ಹಗ್ಗದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂಬ ಅಂಶವನ್ನು ತಿಳಿಸಿದರು. ಅದೇ ಸಮಯಕ್ಕೆ ರಘುನಾಥಶೆಟ್ಟಿ ಎಂಬವರು ಬಂದರು. ಆತ ಅಮರನಾಥ್ ಕೆಲಸ ಮಾಡುತ್ತಿದ್ದ ರೈಸ್‌ಮಿಲ್ ಮಾಲೀಕರು. ಅವರನ್ನು ವಿಚಾರಿಸಿದಾಗ ಇನ್ಸ್‌ಪೆಕ್ಟರ್‌ಗೆ ಕೊಲೆ ನಡೆದಿರುವುದು ಹಣಕ್ಕಾಗಿಯೇ ಎಂಬ ಅಂಶ ಮನದಟ್ಟಾಗಿತ್ತು.
ಅಮರನಾಥ್ ತುಮಕೂರಿನ ಅನ್ನಪೂರ್ಣೇಶ್ವರಿ ರೈಸ್‌ಮಿಲ್‌ನಲ್ಲಿ ಕೆಲಸಕ್ಕಿದ್ದ. ಉತ್ತಮ ನಂಬಿಕಸ್ಥ. ರಘುನಾಥ ಶೆಟ್ಟಿ ಪ್ರತಿ ವಾರ ಬೆಂಗಳೂರಿನ ಆರ್‌ಎಂಸಿ ಯಾರ್ಡ್‌ಗೆ ಅಕ್ಕಿ ಸಾಗಿಸುತ್ತಿದ್ದರು. ಆ ಹಣವನ್ನು ವಸೂಲಿ ಮಾಡಿಕೊಂಡು ಬರಲು ವಾರಕ್ಕೆರಡು ಬಾರಿ ಈತನನ್ನೇ ಕಳುಹಿಸಲಾಗುತ್ತಿತ್ತು. ಪ್ರತಿ ಬುಧವಾರ, ಶುಕ್ರವಾರ ಅಮರನಾಥನೇ ಹೋಗಿ ಹಣ ತರುತ್ತಿದ್ದ. ಪ್ರತಿ ಬಾರಿ ಆತನ ಜೊತೆ ಮುಸ್ಲಿಂ ಹುಡುಗನೊಬ್ಬ ಸಹಾಯಕನಾಗಿ ಹೋಗುತ್ತಿದ್ದ. ಆದರೆ ಅಂದು ಶುಕ್ರವಾರವಾದ ಕಾರಣ ನಮಾಜ್‌ಗೆ ಹೋಗಿ ಆತ ಬೆಂಗಳೂರಿಗೆ ಹೋಗಿರಲಿಲ್ಲ. ಆದ್ದರಿಂದ ಅಮರನಾಥ್ ಒಬ್ಬನೇ ಹೋಗಿದ್ದ.
ಯಾರನ್ನು ವಿಚಾರಿಸಿದರೂ ಕೊಲೆ ಆರೋಪಿಗಳ ಸುಳಿವು ದೊರೆಯದೆ ಇನ್ಸ್‌ಪೆಕ್ಟರ್ ತೀವ್ರ ತಲೆಕೆಡಿಸಿಕೊಂಡಿದ್ದರು. ಅಮರನಾಥನ ಹೆಂಡತಿ ಇನ್ನೂ ಅಳುತ್ತಲೇ ಇದ್ದಳು. ಆಕೆಯನ್ನು ವಿಚಾರಿಸಿದರೆ ಸುಳಿವು ದೊರೆಯಬಹುದೇ ಎಂದು ಅಮರನಾಥ ನಿಮ್ಮನ್ನು ಕೊನೆಯದಾಗಿ ಮಾತನಾಡಿದ್ದು ಯಾವಾಗ? ಏನು ಹೇಳಿದರು ಹೇಳಿ ಪ್ರಕರಣ ಭೇದಿಸಲು ಅದು ನೆರವಾಗಬಹುದು ಎಂದು ಕೇಳಿದರು. 'ನನ್ನ ತವರೂರು ಬೆಂಗಳೂರು. ನಿನ್ನೇ ನಾವಿಬ್ಬರೂ ಬೆಂಗಳೂರಿಗೆ ಬಂದೆವು. ನನ್ನನ್ನು ಮನೆಗೆ ಬಿಟ್ಟು ಸಂಜೆ ಬಂದು ಕರೆದುಕೊಂಡು ಹೋಗುವುದಾಗಿ ಹೇಳಿ ಅವರು ಹಣ ಸಂಗ್ರಹಕ್ಕೆ ಆರ್‌ಎಂಸಿ ಯಾರ್ಡ್‌ಗೆ ಹೋದರು. ಆದರೆ ಸಂಜೆ ಫೋನ್ ಮಾಡಿ, ನಾನು ಸಂಜೆ ಬರುವುದಿಲ್ಲ. ನಾಳೆ ನೀನೇ ಬಸ್ಸಿನಲ್ಲಿ ಬಂದುಬಿಡು. ನಾನು ಸಂಜೆ ಪ್ರಸನ್ನಕುಮಾರ್ ಅವರ ಕಾರಿನಲ್ಲಿ ತುಮಕೂರಿಗೆ ಹೋಗುತ್ತೇನೆ ಎಂದು ಹೇಳಿದರು. ಅದೇ ಅವರು ಮಾತನಾಡಿದ ಕೊನೆಯ ಮಾತು' ಎಂದು ಹೇಳಿದರು.
ಪ್ರಸನ್ನಕುಮಾರ್! ಪ್ರಸನ್ನಕುಮಾರ್ ಯಾರು ಎಂಬುದು ತಿಳಿದರೆ ಪ್ರಕರಣ ಒಂದು ಹಂತಕ್ಕೆ ಬರುತ್ತದೆ ಎಂದು ಭಾವಿಸಿದ ಇನ್ಸ್‌ಪೆಕ್ಟರ್ ಆತನ ಬಗ್ಗೆ ಪರಿಶೀಲಿಸಲು ಮುಂದಾದರು. ಆತ ಆರ್‌ಎಂಸಿ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಾನೆ ಎಂಬ ವಿಷಯ ರೈಸ್‌ಮಿಲ್ ಮಾಲೀಕ ರಘುನಾಥಶೆಟ್ಟಿಯಿಂದ ತಿಳಿಯಿತು.
ಆತನ ಜಾಡು ಹಿಡಿದು ಪೊಲೀಸರು ಬೆಂಗಳೂರಿಗೆ ಬಂದರು. ಆರ್‌ಎಂಸಿ ಯಾರ್ಡ್‌ನಲ್ಲಿ ವಿಚಾರಿಸಿದಾಗ ಆತನೊಬ್ಬ ಮಾರುಕಟ್ಟೆ ಬ್ರೋಕರ್ ಎಂಬುದು ತಿಳಿದುಬಂತು. ಆತನನ್ನು ನೆಲಮಂಗಲ ಠಾಣೆಗೆ ಕರೆತಂದು ವಿಚಾರಿಸಿದರೆ, 'ಆತ ನನಗೆ ಶುಕ್ರವಾರ ಸಿಕ್ಕೇ ಇಲ್ಲ' ಎಂದು ಹೇಳಿದ. ಆದರೆ ಶುಕ್ರವಾರ ಅಮರನಾಥನ ಜೊತೆ ಈ ಪ್ರಸನ್ನಕುಮಾರ್ ಶುಕ್ರವಾರ ಓಡಾಡುತ್ತಿದ್ದ ಬಗ್ಗೆ ಹಲವರು ನೋಡಿದ್ದರು, ಅದನ್ನು ಪೊಲೀಸರಿಗೂ ತಿಳಿಸಿದ್ದರು. ಆದ್ದರಿಂದ ಕೊಲೆಗೆ ಈತನಿಗೂ ಸಂಬಂಧವಿದೆ ಎಂದು ಅರ್ಥಮಾಡಿಕೊಳ್ಳಲು ಪೊಲೀಸರಿಗೆ ಹೆಚ್ಚು ಕಾಲ ಬೇಕಿರಲಿಲ್ಲ.
ಪೊಲೀಸ್ ಮರ್ಯಾದೆ ನೀಡುವವರೆಗೆ ಆತ ನಿಜ ಬಾಯಿಬಿಡಲಿಲ್ಲ. ಆದರೆ ಕೊನೆಗೂ ಆತನ ಬಾಯಿಂದ ನಿಜ ಕಕ್ಕಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ಆತ ಪೊಲೀಸರಿಗೆ ಹೇಳಿದ ಹೇಳಿಕೆ ಈ ರೀತಿ ಇತ್ತು. 'ನಾನು ಮಾರುಕಟ್ಟೆಯ ಮಧ್ಯವರ್ತಿಯಾಗಿ ಸಂಪಾನೆ ಮಾಡುವುದು ಅಷ್ಟಕಷ್ಟೆ. ಮಾಡಿದ ಸಂಪಾದನೆಯಲ್ಲೂ ಕುಡಿಯಲು ಹೆಚ್ಚು ಪೋಲಾಗುತ್ತಿದ್ದ ಕಾರಣ ಮತ್ತು ಸಾಲ ಮಾಡಿ ಹೆಚ್ಚಿನ ಬಡ್ಡಿ ಹೊರೆ ಬಿದ್ದ ಕಾರಣ ತೀವ್ರ ತೊಂದರೆ ಅನುಭವಿಸುತ್ತಿದ್ದೆ. ನನ್ನ ಹಾಗೆ ಹಣದ ತೊಂದರೆಯಲ್ಲಿದ್ದವರು ಸುಂದರ್ ಸಿಂಗ್, ಶ್ಯಾಮ್‌ಸುಂದರ್ ಮತ್ತು ಸಂಪತ್‌ಕುಮಾರ್. ನಾವೆಲ್ಲಾ ಒಂದು ದಿನ ಬಾರಿನಲ್ಲಿ ಕುಳಿತು ಮದ್ಯ ಸೇವಿಸುವಾಗ ಏನಾದರೂ ಮಾಡಿ ಹಣ ಸಂಪಾದಿಸಬೇಕು ಎಂದು ಯೋಚಿಸತೊಡಗಿದೆವು.
ಆಗ ನನಗೊಂದು ಯೋಚನೆ ಬಂತು. ವಾರಕ್ಕೆರಡು ಬಾರಿ ಅಮರನಾಥ್ ಮಾರುಕಟ್ಟೆಯಲ್ಲಿ ಹಣ ವಸೂಲಿ ಮಾಡಿಕೊಂಡು ಹೋಗುತ್ತಾನೆ. ಆತನ ಬಳಿ ಏನಿಲ್ಲವೆಂದರೂ 4 ಲಕ್ಷ ರು. ಇರುತ್ತೆ. ಅವನ ಕೊಲೆ ಮಾಡಿ ಹಣ ದೋಚಿದರೆ ಎಲ್ಲರ ಸಮಸ್ಯೆ ಪರಿಹಾರವಾಗುತ್ತೆ ಎಂಬುದನ್ನು ಎಲ್ಲರೂ ಒಪ್ಪಿಕೊಂಡರು. ಬುಧವಾರವಾದರೆ ಆತನ ಜೊತೆ ಇನ್ನೊಬ್ಬ ಹುಡುಗ ಇರುವುದರಿಂದ ಶುಕ್ರವಾರವೇ ನಮ್ಮ ಪ್ಲಾನ್‌ಗೆ ಮುಹೂರ್ತ ಎಂಬ ತೀರ್ಮಾನಕ್ಕೆ ಬರಲಾಯಿತು. ಅದರಂತೆ ಅಂದು ಬಂದ ಅಮರನಾಥನಿಗೆ ನಾನೂ ತುಮಕೂರಿಗೆ ಕಾರಿನಲ್ಲಿ ಬರುವುದಾಗಿ, ಸಂಜೆ ಇಬ್ಬರೂ ಹೊರಡೋಣ. ಬಸ್ಸಿಗೆ ಹೋಗಬೇಡ ಎಂದು ಹೇಳಿದೆ. ಅದಕ್ಕೆ ಆತನೂ ಒಪ್ಪಿದ. ಮಾರುಕಟ್ಟೆಯಲ್ಲಿ ಆತ ಅಂಗಡಿಗಳಿಂದ ಬರಬೇಕಾದ ಹಣ ವಸೂಲಿ ಮಾಡುತ್ತಿರುವಾಗ ಆತನನ್ನು ಹಿಂಬಾಲಿಸಿಕೊಂಡು ನಾನು ಓಡಾಡಿದೆ. ಸಂಜೆ ಬೇಕು ಅಂತಲೇ ನಾನು ತಡ ಮಾಡಿ ಯಶವಂತಪುರದ ವರೆಗೂ ನಡೆದುಕೊಂಡು ಬಂದೆವು. ಆಗ ಆತ ಕಾರು ಎಲ್ಲಿ ಎಂದು ಪ್ರಶ್ನಿಸಿದ ನಾನು ಮುಂದೆ ಇದೆ ಬಾ ಎಂದು ಕರೆದು ಕೊಂಡು ಬಂದೆ. ಯಶವಂತಪುರದ ಬಳಿ ಸುಂದರ್‌ಸಿಂಗ್ ಒಂದು ಆಟೋ ಹಿಡಿದು ಕುಳಿತಿದ್ದ. ನಾವು ಬಂದು ಕಾರು ಎಲ್ಲಿ ಎಂದು ಕೇಳಿದ್ದಕ್ಕೆ ಕಾರು ರಿಪೇರಿ ಇದೆ. ನೆಲಮಂಗಲದ ಗ್ಯಾರೇಜ್‌ನಲ್ಲಿದೆ. ಅಲ್ಲಿಯವರೆಗೂ ಆಟೋದಲ್ಲಿ ಹೋಗೋಣ ಬನ್ನಿ ಎಂದು ಕರೆದ.
ಆಟೋ ಓಡಿಸುತ್ತಿದ್ದವನ ಹೆಸರು ಶ್ಯಾಮಸುಂದರ್. ನಾವು ನಾಲ್ಕು ಜನ ಆಟೋದಲ್ಲಿ ಪೀಣ್ಯ ಬಳಿ ಬರುವಷ್ಟರಲ್ಲಿ ಸಂಪತ್‌ಕುಮಾರ್ ಬಂದು ಸೇರಿಕೊಂಡ ಆಗ ಅಮರನಾಥ್ ಕಾರು ಎಲ್ಲಿದೆ ಎಂದು ಪುನಃ ಪ್ರಶ್ನಿಸಿದ. ಇನ್ನು ತಡ ಮಾಡಿದರೆ ಕೆಲಸ ಕೆಡುತ್ತದೆ ಎಂದು ಭಾವಿಸಿದ ನಾವು ಮೊದಲೇ ತಂದಿದ್ದ ಹಗ್ಗದಿಂದ ಸುಂದರ್‌ಸಿಂಗ್ ಅಮರನಾಥನ ಕುತ್ತಿಗೆ ಬಿಗಿದ. ಆತ ಒದ್ದಾಡದಂತೆ ನಾನು ಕೈಗಳನ್ನು ಹಿಂದಕ್ಕೆ ಬಿಗಿಯಾಗಿ ಹಿಡಿದುಕೊಂಡೆ ಒದ್ದಾಟ ತೀವ್ರವಾದ ಕಾರಣ ಸಂಪತ್‌ಕುಮಾರ್ ಸುತ್ತಿಗೆಯಿಂದ ತಲೆಗೆ ಹೊಡೆದ ಸ್ವಲ್ಪ ಸಮಯದಲ್ಲಿಯೇ ಅಮರನಾಥ ಸುಮ್ಮನಾದ. ಸತ್ತಿದ್ದಾನೆಂದು ನಾವು ಹೊಸಕೆರೆ ರಸ್ತೆಯ ನೀಲಗಿರಿ ತೋಪಿಗೆ ಬಂದು ಹೆಣವನ್ನು ಕೆಳಗೆ ಇಳಿಸಿ ಕ್ಯಾನಿನಲ್ಲಿ ತಂದಿಟ್ಟಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದೆವು. ಆದರೆ ಉರಿಯುತ್ತಿರುವ ಬೆಂಕಿಯಲ್ಲೇ ಆತ ಎದ್ದು ನಿಂತು ಓಡಲು ಪ್ರಯತ್ನಿಸಿದ. ಇದನ್ನು ಕಂಡ ನಾವು ಕಂಗಾಲಾಗಿ ಸುತ್ತಿಗೆಯಿಂದ ಮತ್ತೆ ಬಡಿದು ಸಾಯಿಸಿ ಆತುರದಲ್ಲಿ ಆಟೋ ಹತ್ತಿ ಬೆಂಗಳೂರಿಗೆ ಪರಾರಿಯಾದೆವು' ಎಂದು ವಿವರವಾಗಿ ಹೇಳಿಕೆ ಕೊಟ್ಟ.
ಇಷ್ಟು ಮಾಹಿತಿ ಪಡೆದ ಪೊಲೀಸರು ಅದೇ ದಿನ ರಾತ್ರಿ ದಾಳಿ ನಡೆಸಿ ಉಳಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಕೋರ್ಟಿಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸಂಚು ನಡೆಸಿ ಹತ್ಯೆ ಮಾಡಿರುವುದು, ಕೊಲೆ ಮಾಡಿ ಹಣ ದೋಚಿರುವುದು ಸೇರಿದಂತೆ ಇತರೆ ಪ್ರಕರಣಗಳಾದ ಭಾರತೀಯ ದಂಡ ಸಂಹಿತೆ 302, 392, 201 ಮತ್ತು 34ರ ಅಡಿ ಪ್ರಕರಣ ದಾಖಲಿಸಿದರು. ಆರೋಪ ಸಾಬೀತಾದ ಕಾರಣ ನಾಲ್ಕೂಜನ ಅಪರಾಧಿಗಳಿಗೆ ಕೋರ್ಟು ಜೀವಾವಧಿ ಶಿಕ್ಷೆಯ ಜೊತೆಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿತು.
-ಅಶ್ವತ್ಥನಾರಾಯಣ್ ಎಲ್.
sathyajns@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


