ಬೈಟುಕಾಫಿ

Dream ಯುಗಾದಿ

ಯುಗಾದಿ ಬರುತ್ತಿದ್ದಂತೆ ನಿಸರ್ಗ ಹೊಸದಾಗಿ ಕಾಣಿಸುವುದು ಸಹಜ. ಅದಕ್ಕೆ ಕಾರಣ ಎಲ್ಲೆಡೆ ನಳನಳಿಸುವ ಚಿಗುರು. ಮರಗಿಡಬಳ್ಳಿಗಳಲ್ಲಿ ಮೊಳೆತ ಈ ಚಿಗುರು, ವಾತಾವರಣಕ್ಕೆ ಹೊಸತನವನ್ನು...

Dream ಯುಗಾದಿ
Published On :

ಯುಗಾದಿ ಬರುತ್ತಿದ್ದಂತೆ ನಿಸರ್ಗ ಹೊಸದಾಗಿ ಕಾಣಿಸುವುದು ಸಹಜ. ಅದಕ್ಕೆ ಕಾರಣ ಎಲ್ಲೆಡೆ ನಳನಳಿಸುವ ಚಿಗುರು. ಮರಗಿಡಬಳ್ಳಿಗಳಲ್ಲಿ ಮೊಳೆತ ಈ ಚಿಗುರು, ವಾತಾವರಣಕ್ಕೆ ಹೊಸತನವನ್ನು ತುಂಬುವುದು ಮಾತ್ರವಲ್ಲ, ಎಲ್ಲ ಜೀವಿಗಳಲ್ಲೂ ಬದುಕಿನ ಭರವಸೆಯನ್ನೂ ತುಂಬುತ್ತದೆ. ಅದೇ ಕ್ಷಣ, ನಮ್ಮ ಸಮಾಜ ಜೀವನದಲ್ಲೂ ಭರವಸೆಯ ಹೊನ್ನ ಕಿರಣ ಮೂಡಿಸುವ ಹಲವಾರು ಯುವ ಪ್ರತಿಭೆಗಳೂ ನಮ್ಮ ಕಣ್ಣಿಗೆ ಬೀಳುತ್ತಿದ್ದಾರೆ. ಅಂಥ ಹತ್ತು ಮಂದಿಯನ್ನು ಇಲ್ಲಿ ಗುರುತಿಸಿದ್ದೇವೆ. ಈ ಪಟ್ಟಿಯೇ ಅಂತಿಮವಲ್ಲ. ಇಂಥ ಇನ್ನೂ ಹತ್ತಾರು ಚಿಗುರುಗಳಿರಬಹುದು. ಇವರೆಲ್ಲ ನಮ್ಮ ಭವಿಷ್ಯವನ್ನು ಚೆಲುವಾಗಿಸಲಿ.



ನಿತ್ಯಾ ನೂತನ
ನಟಿ ನಿತ್ಯಾ ಮೆನನ್ ಕನ್ನಡದ ಹುಡುಗಿ ಎಂಬುದನ್ನು ಬಹಳಷ್ಟು ಜನ ಮರೆತಿದ್ದರೂ ಆಕೆಯ ಅಭಿನಯ ಮಾತ್ರ ಯಾರೂ ಮರೆಯುವಂಥದ್ದಲ್ಲ. 1998ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಈಕೆ, 'ಸವೆನ್ ಓ ಕ್ಲಾಕ್‌' ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ದರ್ಶನ ಕೊಟ್ಟಳು. ಆ ನಂತರ ಮಲೆಯಾಳಂನಲ್ಲಿ ಗೆಲುವಿನ ಮಾಲೆಯಾದ ಮೇಲೆ ಗಾಂಧಿನಗರಕ್ಕೆ ಬಂದಿದ್ದು ಕಡಿಮೆ. ಪರಭಾಷೆಯ ಚಿತ್ರರಂಗದಲ್ಲಿ ಈ ಚಿಟ್ಟೆ ಹಾರಾಡುತ್ತಿದ್ದರೂ ಬೆಂಗಳೂರಿನಲ್ಲೇ ನೆಲೆಸಿದ ಅಭಿಮಾನಿಗಳ ಈ ನಲ್ಲೆ, 'ಮೈನಾ' ಚಿತ್ರದ ಮೂಲಕ ಸದ್ಯ ಕನ್ನಡದ ಈ ಹಳೆ ಮುಖ ಹೊಸ ಪ್ರತಿಭೆಯಾಗಿ ಕಂಗೊಳಿಸುತ್ತಿದೆ. ನಾಗಶೇಖರ್ ನಿರ್ದೇಶನದ 'ಮೈನಾ' ಚಿತ್ರದಲ್ಲಿ ಛಾಯಾಗ್ರಹಕ ಸತ್ಯ ಹೆಗ್ಡೆ ಸೆರೆ ಹಿಡಿದ ಪ್ರಕೃತಿ ಸೌಂದರ್ಯಕ್ಕೆ ಈಕೆಯ ಕ್ಯೂಟ್‌ನೆಸ್ ಸ್ಪರ್ಧೆ ಕೊಟ್ಟಿದ್ದು ಹೌದು.
 ಅಂದಹಾಗೆ 'ಮೈನಾ' ಚಿತ್ರಕ್ಕೂ ಮುನ್ನ, ಶಿವಮಣಿ ನಿರ್ದೇಶನದ 'ಜೋಶ್‌' ಚಿತ್ರದಲ್ಲಿ ಬಂದು ಹೋದರೂ ಪ್ರೇಕ್ಷಕರಿಗೆ ಇಷ್ಟವಾದ ಚಿನಕುರಳಿ. ಇದರ ನಡುವೆ 'ಐದೊಂದ್ಲ ಐದು' ಚಿತ್ರದಲ್ಲೂ ನಿತ್ಯಾ ಅಭಿನಯಿಸಿದ್ದಾಳೆ. ಕನ್ನಡ, ತೆಲುಗು, ಮಲೆಯಾಳಂ ಹಾಗೂ ತಮಿಳು, ಹಿಂದಿ ಚಿತ್ರಗಳಲ್ಲಿ ತನ್ನ ಪ್ರತಿಭೆಯ ಛಾಪು ಒತ್ತಿದ ಈ ಕನ್ನಡತಿ, ಗಾಯಕಿಯಾಗಿಯೂ ತನ್ನ ಅದೃಷ್ಟ ಪರೀಕ್ಷೆ ಬರೆದಿದ್ದಾಳೆ. ಕನ್ನಡದ ಎರಡು ಚಿತ್ರಗಳೂ ಸೇರಿದಂತೆ ಒಟ್ಟು ಒಂಬತ್ತು ಚಿತ್ರಗಳಲ್ಲಿ ತನ್ನ ಕಂಠದ ಪ್ರತಿಭೆಯನ್ನು ತೋರಿಸಿದ್ದಾಳೆ. ಬಹುಮುಖಿ ಪ್ರತಿಭಾವಂತೆ ನಟಿಯಾಗಿರುವ ನಿತ್ಯಾಳಿಗೆ 'ಮೈನಾ' ಚಿತ್ರದ ನಂತರ ಕನ್ನಡದಲ್ಲಿ ಸಾಕಷ್ಟು ಅವಕಾಶಗಳು ಬರತೊಡಗಿವೆ. 'ಮೈನಾ'ದ ಗೆಲುವನ್ನು ನಿತ್ಯಾ ಬಳಸಿಕೊಂಡು ಮುಂದಿನ ಪಯಣ ರೂಪಿಸಿಕೊಂಡರೆ ಕನ್ನಡಕ್ಕೆ ನಿಜಕ್ಕೂ ಭರವಸೆಯ ನಟಿ ಸಿಕ್ಕಂತೆ. <


ಹರಿಸರ್ವೋತ್ತಮ


2011ರಲ್ಲಿ ರೋಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಕರ್ನಾಟಕದ ಹರೀಶ್ ಹಂದೆ ಎಂಬ ಅನಾಮಿಕನಿಗೆ ಕೊಟ್ಟಾಗ, ಯಾರೀ ವ್ಯಕ್ತಿ ಎಂದು ನಾಡು ಅಚ್ಚರಿಯಿಂದ ನೋಡಿತು. ಅಲ್ಲಿಯವರೆಗೆ ಸದ್ದಿಲ್ಲದೆ ಕೆಲಸ ಮಾಡುತ್ತ ಬಂದಿದ್ದ ಹರೀಶ್, ತಮ್ಮ ಸಾಧನೆಯಿಂದಲೇ ಮೇಲೇರಿದ್ದರು. ರಾಜ್ಯ ಕರಾವಳಿಯ ಕುಂದಾಪುರದಲ್ಲಿ ಹುಟ್ಟಿ, ಒರಿಸ್ಸಾದಲ್ಲಿ ಬೆಳೆದು, ಖರಗ್‌ಪುರದಲ್ಲಿ ಐಐಟಿ ಕಲಿತು, ಅಮೆರಿಕದಲ್ಲಿ ಪಿಎಚ್.ಡಿ ಮಾಡಿದ ಹರೀಶ್, ತಮ್ಮ ಸೇವೆಯನ್ನು ಮುಡಿಪಿಟ್ಟದ್ದು ಮಾತ್ರ ಭಾರತದ ಹಳ್ಳಿಗಳಿಗೆ.
1995ರಲ್ಲಿ ಸೆಲ್ಕೋ ಕಂಪನಿ ಹುಟ್ಟುಹಾಕಿದ ಬಳಿಕ ಇವರು ಹಿಂದಿರುಗಿ ನೋಡಿದ್ದೇ ಇಲ್ಲ. ಗುರಿ ಸ್ಪಷ್ಟವಿತ್ತು. ಅದು ಗ್ರಾಮೀಣ ಭಾರತಕ್ಕೆ ಸುಸ್ಥಿರ ಪರ್ಯಾಯ ಇಂಧನ ಪೂರೈಕೆ, ಆ ಮೂಲಕ ಬಡತನ ನಿವಾರಣೆ. ಬಡವರ ಮನೆಗಳನ್ನು ಹುಡುಹುಡುಕಿ ಸೋಲಾರ್ ಇಂಧನ ವ್ಯವಸ್ಥೆ ಅಳವಡಿಸಿದ್ದು, ಅದರ ಸರಿಯಾದ ಬಳಕೆಯ ಬಗ್ಗೆ ಒಂದಿಡೀ ತಲೆಮಾರಿಗೆ ಪಾಠ ಹೇಳಿದ್ದು ಈಗ ದಂತಕಥೆ. ಭಾರತವನ್ನು 21ನೇ ಶತಮಾನದಲ್ಲಿ ಸಮರ್ಥವಾಗಿ ಮುಂದಕ್ಕೊಯ್ಯಬಲ್ಲ ಯುವ ನಾಯಕರಲ್ಲಿ ಇವರೊಬ್ಬರೆಂದು ಈಗಾಗಲೇ ಹಲವಾರು ಸಂಸ್ಥೆಗಳು ಗುರುತಿಸಿವೆ. ನಮ್ಮ ನಿರೀಕ್ಷೆಗಳ ಭಾರ ಅವರ ಹೆಗಲ ಮೇಲಿದೆ. 


ಧನ ಲಾಭ



ಒಂದು ಚಿತ್ರ ಬಿಡುಗಡೆಯಾಗಿ ಅದು ಗೆದ್ದರೂ ಆ ಚಿತ್ರದಲ್ಲಿ ಅಭಿನಯಿಸಿದ ಕಲಾವಿದರಿಗೆ ಮತ್ತೊಂದು ಚಿತ್ರದಲ್ಲಿ ನಟಿಸುವ ಅವಕಾಶ ಸಿಗುವುದು ಅಪರೂಪ. ನಿರುದ್ಯೋಗಿಗಳಂತೆ ನಿರ್ದೇಶಕ, ನಿರ್ಮಾಪಕರ ಮನೆ ಬಾಗಿಲು ತಟ್ಟಬೇಕಾಗುತ್ತದೆ. ಇಲ್ಲವೇ ಯಾರಾದರೂ ಸ್ಟಾರ್ ನಟರ ಹಿಂಬಾಲಕರಾಗಿ ಗುರುತಿಸಿಕೊಂಡರೆ ಅವಕಾಶಗಳು ಸಿಗಬಹುದು. ಆದರೆ ಧನಂಜಯ ಎನ್ನುವ ಈ ಯುವ ಪ್ರತಿಭಾವಂತ ನಟನ ಮೊದಲ ಚಿತ್ರ 'ಡೈರೆಕ್ಟರ್ ಸ್ಪೆಷಲ್‌' ಇನ್ನೂ ಬಿಡುಗಡೆಯಾಗಿಲ್ಲ. ಆಗಲೇ, ಎರಡ್ಮೂರು ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾನೆ. ಇದು ಈತನ ಪ್ರತಿಭೆಗೆ ಸಾಕ್ಷಿ. 'ರಾಟೆ', 'ಹುಚ್ಚ' ಚಿತ್ರಗಳು ಈಗಾಗಲೇ ಚಿತ್ರೀಕರಣದಲ್ಲಿವೆ. ಗುರುಪ್ರಸಾದ್ ನಿರ್ದೇಶನದ 'ಡೈರೆಕ್ಟರ್ ಸ್ಪೆಷಲ್‌' ಚಿತ್ರದಲ್ಲಿ ಈತ ಚೆನ್ನಾಗಿ ಅಭಿನಯಿಸಿದ್ದಾನೆ ಎನ್ನುವ ಹೊಗಳಿಕೆಯ ಮಾತುಗಳಿಂದಲೇ ಧನಂಜಯರನ್ನು ಇನ್ನೊಂದಿಷ್ಟು ಚಿತ್ರಗಳು ಕೈ ಹಿಡಿದಿವೆ.ಆರಂಭದಲ್ಲೇ 'ಧನ' ಲಾಭದ ಭರವಸೆ ಮೂಡಿಸಿರುವ ನಟ ಈತ. <


ತೇಜಸಿರಿ


'ಕಣ್ಣ ಪ್ರತಿ ಮಿಟುಕಿನಲ್ಲಿ ಹೊಮ್ಮುವ
ಭಾವಕ್ಕೆ, ಶಬ್ದ ಹೊಮ್ಮಿಸಲಾಗದ ಅರ್ಥಕ್ಕೆ
ನವಿಲಿನ ನಾಟ್ಯ'
ಎಂದು ಬರೆಯುವ ಜ.ನಾ.ತೇಜಶ್ರೀ, ಕನ್ನಡ ಸಾಹಿತ್ಯದ ಭರವಸೆಯ ಪ್ರತಿಭೆ. 2013ರ ಸಾಲಿನ ಪ್ರತಿಷ್ಠಿತ 'ಶ್ರೀವಿಜಯ ಸಾಹಿತ್ಯ ಪ್ರಶಸ್ತಿ'ಗೆ ಆಯ್ಕೆಯಾಗಿರುವ ತೇಜಶ್ರೀ ಅವರು ಕವಿಯಾಗಿ ಹೆಸರು ಮಾಡಿದ್ದರೂ, ಗದ್ಯದಲ್ಲೂ ಹೆಜ್ಜೆಗುರುತು ಮೂಡಿಸುತ್ತಿದ್ದಾರೆ.
ತೇಜಶ್ರೀ ಕನ್ನಡದಲ್ಲಿ ಬೇರೂರಿದ್ದು ಲಯ, ತಿಳಿಗೊಳ, ಕತ್ತಲೆಯ ಬೆಳಗು, ಉಸ್ರುಬುಂಡೆ ಕವನ ಸಂಕಲನಗಳ ಮೂಲಕ. 'ಅವನರಿವಲ್ಲಿ' ನೀಳ್ಗಾವ್ಯ ಇವರ ಪ್ರತಿಭೆಯ ಆಳವನ್ನು ಕಾಣಿಸುವ ಕೃತಿ. ಪಾಬ್ಲೊ ನೆರೂಡನ ಕವನಗಳ ಅನುವಾದ 'ಕಡಲ ತಡಿಯ ಗುಡಾರ' ಹಾಗೂ ಅಲಿ ಸರ್ದಾರ್ ಜಾಫ್ರಿಯವರ ಕವಿತೆಗಳ ಅನುವಾದ 'ಬೆತ್ತಲೆ ಫಕೀರ' ಇವರಿತ್ತ ಸರ್‌ಪ್ರೈಸುಗಳು. ವೋಲೆ ಶೋಯಿಂಕಾನ ಸಾವು ಮತ್ತು ರಾಜನ ಕುದುರೆ ಸವಾರ ನಾಟಕಗಳು, ಚೀನೀ ತತ್ವಶಾಸ್ತ್ರದ ಕಥೆ, ಭಾರತೀಯ ರಾಷ್ಟ್ರೀಯ ಚಳವಳಿ, ರವೀಂದ್ರರ ಕವನಗಳು ಇತರ ಅನುವಾದ ಕೃತಿಗಳು.
ಮೈಸೂರು ವಿವಿಯಿಂದ ಇಂಗ್ಲಿಷ್ ಎಂಎ ಹಾಗೂ ಭಾಷಾಂತರ ಡಿಪ್ಲೊಮೋ ಪಡೆದ ತೇಜಶ್ರೀಯವರಿಂದ ಕನ್ನಡ ಇನ್ನಷ್ಟನ್ನು ನಿರೀಕ್ಷಿಸಬಹುದು. <


ಸಿಂಪಲ್ ಸುನಿ
ಈ ವರ್ಷದ ಆರಂಭದಲ್ಲಿ ಸಿಂಪಲ್ ಆಗಿ ಸಿನಿಮಾ ಮಾಡಿ ಗೆಲ್ಲುವುದು ಹೇಗೆ ಎಂದು ತಿಳಿಸಿಕೊಟ್ಟ ನಿರ್ದೇಶಕ ಸುನಿ. ಚಿತ್ರರಂಗದಲ್ಲಿ ಆಗಾಗ ಹೊಸ ಚಿಗುರುಗಳು ಕಾಣಿಸಿಕೊಂಡು ನಮ್ಮ ಸಿನಿಮಾಗಳ ಬಗ್ಗೆ ಮತ್ತೆ ಮತ್ತೆ  ಹೊಸ ಭರವಸೆ ಮೂಡಿಸುವ ಪ್ರಕ್ರಿಯೆ ಆಗಾಗ ನಡೆಯುತ್ತಿರುತ್ತದೆ. ಈ ನಿಟ್ಟಿನಲ್ಲಿ ಈ ವರ್ಷದ ಯುಗಾದಿಯ ಸಂದರ್ಭದಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರು ಸುನಿ ಅವರದ್ದು. ಹೆಚ್ಚೇನೂ ಸರ್ಕಸ್ ಮಾಡದೆ, ಯಾವ ಸ್ಟಾರ್‌ಗಳನ್ನೂ ಕಟ್ಟದೆ ತಮ್ಮಂತೆಯೇ ಇರುವ ಇತರ ಹೊಸ ಪ್ರತಿಭೆಗಳನ್ನು ಬಳಸಿಕೊಂಡು ಹೆಸರು  ಮಾಡಿರುವ ಸುನಿ ಕೇವಲ ತಾನೊಬ್ಬನೇ ಬೆಳೆಯದೆ ತಮ್ಮ ಜೊತೆಗೆ ಇನ್ನೊಂದಿಷ್ಟು ಭರವಸೆಯ ಮುಖಗಳನ್ನೂ ಕರೆದುಕೊಂಡು ಬಂದಿರುವುದು ವಿಶೇಷ. ಹಾಗಾಗಿ, ಸುನಿ ಎಂಬ ಹೊಸ ಚಿಗುರಿನ ಜೊತೆ 'ಸಿಂಪಲ್ಲಾಗೊಂದ್ ಲವ್ ಸ್ಟೋರಿ' ಚಿತ್ರದ ನಾಯಕ ರಕ್ಷಿತ್, ನಾಯಕಿ ಶ್ವೇತಾ, ಸಂಗೀತ ನಿರ್ದೇಶಕ ಭರತ್ ಕೂಡಾ ಬೆಳೆಯುವ ಲಕ್ಷಣಗಳನ್ನು ತೋರಿಸಿರುವುದು ಖುಷಿಯ ಸಂಗತಿ. ಮೊದಲ ಚಿತ್ರದಲ್ಲಂತೂ ಸಾಕಷ್ಟು ಭರವಸೆ ಮೂಡಿಸಿರುವ ಸುನಿ ಪ್ರತಿಭೆ ಈ ವರ್ಷದ ಮುಂದಿನ ದಿನಗಳಲ್ಲಿ ಯಾವ ರೀತಿಯ ಬೆಳವಣಿಗೆ ಕಾಣುತ್ತದೆ ಎಂಬುದು ಕುತೂಹಲದ ವಿಷಯ.


ಚಸ್ವಾ ಮಸ್ಕಾ


3ಜಿ ನೆಟ್‌ವರ್ಕ್‌ನಲ್ಲೂ ಬಹುಶಃ ಇಷ್ಟೊಂದು ಸ್ಪಷ್ಟವಾದ ಧ್ವನಿ ಕೇಳಿಸಲಾರದು ಎನ್ನುವಂತಿರುವ ಕಂಠ ಈ ಹುಡುಗನದ್ದು. ಹೆಸರು ಚಸ್ವಾ. ಚಿತ್ರರಂಗದ ಇತ್ತೀಚಿನ ಕೆಲವು ಯುವ ನಟರ ಬಗ್ಗೆ ಮಾತನಾಡುವಾಗ ಚಸ್ವಾ ಅವರ ಹೆಸರು ದೊಡ್ಡ ಮಟ್ಟದಲ್ಲೇ ಕೇಳಿ ಬರುತ್ತಿದೆ. ಕಳೆದ ವಾರ ಬಿಡುಗಡೆಯಾದ ಶಿವರಾಜ್‌ಕುಮಾರ್ ಅಭಿನಯದ 'ಅಂದರ್ ಬಾಹರ್‌' ಚಿತ್ರ ಚಸ್ವಾ ಅವರ  ಪ್ರತಿಭೆಗೆ ತಕ್ಕ ಅವಕಾಶ ಕಲ್ಪಿಸಿದೆ ಎಂದರೆ ಸುಳ್ಳಲ್ಲ. ಖಳನಟನ ಪಾತ್ರದಲ್ಲಿ ಈ ಅವಕಾಶವನ್ನು ಎರಡೂ ಕೈಯಲ್ಲಿ ಬಾಚಿಕೊಂಡಿರುವ ಅವರ ಪ್ರತಿಭೆಗೆ ಶಿವರಾಜ್‌ಕುಮಾರ್ ಅವರಿಂದ 'ಚಸ್ವಾ ಅವರ ಮಾತಿನ ಏರಿಳಿತಗಳನ್ನು ಕೇಳಿದಾಗ ನನಗೆ ವಜ್ರಮುನಿ ಅವರ ನೆನಪಾಯಿತು' ಎಂಬ ಹೊಗಳಿಕೆ ಸಂದಾಯವಾಗಿರುವುದು ವಿಶೇಷ. ನೀನಾಸಂ ಗರಡಿಯಿಂದ ಬಂದ ಚಸ್ವಾಗೆ 'ಅಂದರ್ ಬಾಹರ್‌' ಮೊದಲ ಚಿತ್ರ ಏನಲ್ಲ. 'ಸಿದ್ಲಿಂಗು', 'ಕೂರ್ಮಾವತಾರ' ಚಿತ್ರಗಳಲ್ಲೇ ಸಣ್ಣ ಮಟ್ಟದಲ್ಲಾದರೂ ಎಲ್ಲರೂ ಮಾತನಾಡಿಕೊಳ್ಳುವಂತೆ ಮಾಡಿದ್ದರು ಅವರು. ಅದಕ್ಕೂ ಮುಂಚೆ ಕಿರುತೆರೆಯ ಧಾರಾವಾಹಿಗಳಲ್ಲೂ ಚಸ್ವಾ ದೊಡ್ಡ ಹೆಸರನ್ನೇ ಮಾಡಿದ್ದರು. ಈಗ ಅಂಥ ಪ್ರತಿಭಾವಂತರಿಗೆ ಹಿರಿತೆರೆಯಲ್ಲಿ ಅವಕಾಶ ಸಿಕ್ಕಿದ್ದು ಮತ್ತು ಅದನ್ನವರು ಸಮರ್ಥವಾಗಿ ಬಳಸಿಕೊಳ್ಳುತ್ತಿರುವುದು ಕನ್ನಡ ಸಿನಿಮಾಗಳಲ್ಲಿ ಪರಭಾಷಾ ವಿಲನ್‌ಗಳನ್ನು ನೋಡಿ ಸಾಕಾದವರಿಗಂತೂ ಖುಷಿ ಕೊಡುತ್ತಿದೆ.



ಅಶ್ವಿನಿ ದೇವತೆ

ಸರಿಯಾಗಿ ಒಂದು ವರ್ಷ ಹಿಂದೆ. ಬೆಂಗಳೂರು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಚುನಾವಣೆ. ವಸಂತ ಋತುವಿನ ಆಗಮನದ ಹಿಂದೆಯೇ ಮೆಲ್ಲನೆ ಬದಲಾವಣೆ ಗಾಳಿ ಬೀಸಲಾರಂಭಿಸಿತ್ತು. ಸಾಮಾಜಿಕ ಕಾಳಜಿ, ದೂರದೃಷ್ಟಿಯುಳ್ಳವ ತಮ್ಮ ನೇತಾರನಾಗಬೇಕೆಂಬ ಭಾವನೆ ಒಂದು ವರ್ಗದ ಮತದಾರರಲ್ಲಿ ಮೂಡತೊಡಗಿತ್ತು. ವೃತ್ತಿಪರ ರಾಜಕಾರಣಿಗಳಿಗಿಂತ ಮಹೇಶ್ ಅಶ್ವಿನ್ ಎಂಬ ಭಿನ್ನ ಅಭ್ಯರ್ಥಿ ಬಗ್ಗೆ ಒಲವು ಹೆಚ್ಚತೊಡಗಿತ್ತು. ಸಾಮಾಜಿಕ ತಾಣಗಳಲ್ಲಿ ಇವರ ಪರ ಭಾರಿ ಪ್ರಚಾರ. ಅವರು ಸ್ಪರ್ಧಿಸಿದ್ದು ಲೋಕಸತ್ತಾ ಪಾರ್ಟಿಯಿಂದ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಕಿರಣ್ ಮುಜುಮ್‌ದಾರ್ ಶಾ, ಮೋಹನದಾಸ್ ಪೈ ಅವರಂಥವರೂ ಇವರಿಗಾಗಿ ಮತ ಯಾಚಿಸಿದರು. ಚುನಾವಣೆಯಲ್ಲಿ ಸೋತರು ಖರೆ. ಆದರೆ ಅವರ ಸ್ಪರ್ಧೆಯ ಉದ್ದೇಶ ಒಂದು ರೀತಿಯಲ್ಲಿ ಈಡೇರಿತ್ತು. ಚುನಾವಣೆಯಿಂದ ಹೊರತಾಗಿ ಮತ್ತೊಂದು ಖುಷಿ ಅವರಿಗಾಗಿ ಕಾದಿತ್ತು. ಬ್ರಿಟನ್‌ನ Wired  ಸಂಸ್ಥೆಯThe Smart List 2012: 50 people who will change the world' ನಲ್ಲಿ ಇವರ ಹೆಸರು ಸೇರಿತ್ತು. ಏಳೆಂಟು ವರ್ಷದ ಅವರ ಪ್ರಯತ್ನಕ್ಕೆ ಅಲ್ಲಿ ಮಾನ್ಯತೆ ಸಿಕ್ಕಿತ್ತು.
ಅಶ್ವಿನ್ ಬೆಂಗಳೂರಿನವರು. ಬಾಲ್ಯದಲ್ಲಿ ಖಗೋಳ ವಿಜ್ಞಾನದ ಕುರಿತು ಟಿ.ವಿಯಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದನ್ನು ನೋಡಿ ಖಗೋಳ ಶಾಸ್ತ್ರಜ್ಞನಾಗುವ ಕನಸು. ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ. ಎಂಬಿಎ ಓದಲು ಪಾಂಡಿಚೇರಿಗೆ ಪಯಣ. ಮನಸ್ಸು ವಿಜ್ಞಾನದಲ್ಲಿ ನೆಟ್ಟಿದ್ದರಿಂದ ವಿದೇಶದಲ್ಲಿ ಉನ್ನತ ವ್ಯಾಸಂಗ.  ಖಗೋಳ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ. ಜಿಯೋಫಿಸಿಕ್ಸ್‌ನಲ್ಲಿ ಪಿಎಚ್.ಡಿ. ಕೆಲಕಾಲ ನಾಸಾದಲ್ಲಿ ಸಂಶೋಧನಾ ಸಹಾಯಕನಾಗಿ ಕಾರ್ಯ. 2004-05ರಲ್ಲಿ ಬೆಂಗಳೂರಿಗೆ ವಾಪಸ್. ಐಐಎಂ, ಐಐಟಿ, ಐಐಎಸ್‌ಸಿಗಳಲ್ಲಿ ಬೋಧನೆ.
ನಗರ ಯೋಜನೆಗಳ ಬಗ್ಗೆಯೂ ಅಶ್ವಿನ್‌ಗೆ ಅಪರಿಮಿತ ಆಸಕ್ತಿ. ವಿಶೇಷವಾಗಿ ಬಿಗ್ 10 ಬಸ್ ಸಂಚಾರ ಸೇರಿದಂತೆ ಬೆಂಗಳೂರಿಗೆ ಸಂಬಂಧಿಸಿ ಅನೇಕ ಯೋಜನೆಗಳ ಹಿಂದಿನ ಮೆದುಳು ಇವರದೇ. ಸರ್ಕಾರದ ಮಟ್ಟದಲ್ಲೂ ಇವರ ಮಾತು, ಸಲಹೆಗೆ ಈಗಲೂ ಗೌರವ, ಮನ್ನಣೆ. ಅಧಿಕಾರಿಗಳು, ರಾಜಕಾರಣಿಗಳೇ ನಗರ ಆಡಳಿತ ನಿರ್ವಹಿಸುವ ಬದಲು ಜನರ ಸಹಭಾಗಿತ್ವದೊಂದಿಗೆ ಯೋಜನೆ ರೂಪಿಸಬೇಕು. ನಗರಾಡಳಿತದಲ್ಲಿ ಭಾಗವಹಿಸಲು ಜನರನ್ನು ಹುರಿದುಂಬಿಸಬೇಕು ಎನ್ನುವುದು ನಂಬಿಕೆ. ಅದಕ್ಕಾಗಿ ಅನೇಕ ಸರ್ಕಾರೇತರ ಸಂಸ್ಥೆಗಳೊಂದಿಗೆ ಕೈ ಜೋಡಿಸಿದ್ದಾರೆ. ಹಲವು ಆಂದೋಲನಗಳಲ್ಲಿ ಭಾಗವಹಿಸಿದ್ದಾರೆ. ಭ್ರಷ್ಟಾಚಾರ ವಿರೋಧಿ ಮತ್ತು ಲೋಕಸತ್ತಾ ಚಳವಳಿಗಳಲ್ಲೂ ಸಕ್ರಿಯ. ಹೋರಾಟ, ಚರ್ಚೆ, ವಿಚಾರ ಸಂಕಿರಣಗಳಲ್ಲಿ ತಪ್ಪದೆ ಭಾಗವಹಿಸುತ್ತಾರೆ.


ಇಷ್ಟು ವರ್ಷಗಳ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಸಾಧಿಸಿದ್ದೇನು? ನಮ್ಮ ಭವಿಷ್ಯವೂ ಹೀಗೆಯೇ ಇರಬೇಕೇನು? ಇದನ್ನು ಬದಲಿಸಲೇಬೇಕು. ಪ್ರಜಾಪ್ರಭುತ್ವದಲ್ಲಿ ಗ್ರಾಹಕರಾಗಿರುವ ನಾವೇ ಇನ್ನುಮುಂದೆ ಉತ್ಪಾದಕರಾಗೋಣ. ನಮಗೆ ಏನು ಬೇಕೊ ಅದನ್ನು ನಾವೇ ಮಾಡಿಕೊಳ್ಳೋಣ. ಹೊಸ ಯೋಜನೆ, ತಂತ್ರಜ್ಞಾನ, ಅಭಿವೃದ್ಧಿ, ಸಾರ್ವಜನಿಕ ಆಡಳಿತ ಎಲ್ಲದರಲ್ಲೂ ಒಟ್ಟಾಗಿ ಸಾಗೋಣ. ಬದಲಾವಣೆಗೆ ಮುನ್ನುಡಿ ಬರೆಯೋಣ.
-ಅಶ್ವಿನ್ ಮಹೇಶ್


ನಿರ್ಮಲ ಹೃದಯ



ಆದಿಚುಂಚನಗಿರಿ ಮಠಾಧೀಶರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ದೇಹಾಂತ್ಯವಾದಾಗ ಅವರ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆ ಉದ್ಭವವಾಗಲೇ ಇಲ್ಲ. ಚಿಕ್ಕಬಳ್ಳಾಪುರ ಶಾಖಾ ಮಠದ ಮುಖ್ಯಸ್ಥರಾಗಿ 'ಶೈಕ್ಷಣಿಕ ಕ್ರಾಂತಿ'ಯನ್ನೇ ಮಾಡಿ, ಮೂರು ವರ್ಷಗಳಿಂದ ಬಾಲಗಂಗಾಧರರ ಜತೆಯಲ್ಲೇ ಇದ್ದು ಯೋಗಕ್ಷೇವು ನೋಡಿಕೊಳ್ಳುತ್ತಿದ್ದ ನಿರ್ಮಲಾನಂದನಾಥರೇ ಪೀಠ ಏರಲು ಸೂಕ್ತ ಎನ್ನುವುದು ಇಡೀ ಸಮಾಜದ ಒಮ್ಮತವಾಗಿತ್ತು. ಅದು ಬಾಲಗಂಗಾಧರ ಅಪೇಕ್ಷೆಯೂ ಆಗಿತ್ತು ಎನ್ನುವುದು ಎಲ್ಲರಿಗೂ ತಿಳಿದಿದ್ದ ಸತ್ಯವಾಗಿತ್ತು.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಚೀರನಹಳ್ಳಿಯ ನಾಗರಾಜು ಗೌಡ ಇವತ್ತು ಒಕ್ಕಲಿಗ ಸಂಸ್ಥಾನವನ್ನು ಮುನ್ನಡೆಸುವ ಪೀಠಾಧಿಪತಿ. ಮನಸ್ಸು ಮಾಡಿದ್ದರೆ ಕಾರ್ಪೊರೇಟ್ ಸಂಸ್ಕೃತಿಯಲ್ಲಿ ಮೆರೆದಾಡಬಹುದಿತ್ತು. ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಬಹುದಿತ್ತು. ಕೈತುಂಬಾ ಸಂಬಳ ತರುವ ದೊಡ್ಡ ಹುದ್ದೆಯಲ್ಲಿ ಇರಬಹುದಾಗಿತ್ತು. ಅದೆಲ್ಲವನ್ನೂ ತೊರೆದು, ವಿವೇಕಾನಂದರ ಆದರ್ಶದ ಬೆನ್ನು ಹತ್ತಿ, ಅಮ್ಮನ ವಿರೋಧವನ್ನೂ ಲೆಕ್ಕಿಸದೇ ಸನ್ಯಾಸ ದೀಕ್ಷೆ ಪಡೆದರು.
ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ, ಮೈಸೂರಿನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ನಲ್ಲಿ ಬಿ.ಇ (ಸಿವಿಲ್), ಮದ್ರಾಸ್ ಐಐಟಿಯಿಂದ ಎಂ.ಟೆಕ್. ಇದು ನಿರ್ಮಲಾನಂದರ ಪ್ರತಿಭೆ. ಪುಣೆಯ ಕೇಂದ್ರ ವಿದ್ಯುತ್ ಮತ್ತು ಜಲ ಸಂಶೋಧನಾ ಸಂಸ್ಥೆಯಲ್ಲಿ ನೌಕರಿ ಹುಡುಕಿಕೊಂಡು ಮನೆ ಬಾಗಿಸಿಗೆ ಬಂದಿತ್ತು. ಅದನ್ನು ನಿರಾಕರಿಸಿ ಸಂಸ್ಕೃತ ಓದಿನಲ್ಲಿ ತೊಡಗಿಕೊಂಡರು. ಅದ್ವೈತ ವೇದಾಂತ ಮತ್ತು ಶೈವಾಗಮದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.
ಬಾಲಗಂಗಾಧರನಾಥರು ಹಾಕಿಕೊಟ್ಟ ಭದ್ರ ಬುನಾದಿ ಇದೆ. ಅದನ್ನು ಅವರಷ್ಟೇ ಸಮರ್ಥರಾಗಿ ಮುನ್ನಡೆಸುವ ಜವಾಬ್ದಾರಿ ಮತ್ತು ಸಾಮರ್ಥ್ಯ ಎರಡೂ ನಿರ್ಮಲಾನಂದರಲ್ಲಿದೆ.


ಸಮರ್ಥ ಗುರುವಿನ ಮಾರ್ಗದರ್ಶನದಲ್ಲಿ ಕಲಿತವರಿಗೆ ಯಾವುದೂ ಕಷ್ಟವಲ್ಲ. ಬಾಲಗಂಗಾಧರನಾಥರ ಆಶೀರ್ವಾದ ನನ್ನ ಮೇಲಿರುವಾಗ ಮಠವನ್ನು ಮುನ್ನಡೆಸುವುದು ಕಷ್ಟ ಆಗಲಾರದು.
-ನಿರ್ಮಲಾನಂದನಾಥ ಸ್ವಾಮೀಜಿ


ಶರಣು ಶರಣು

ಡಾ.ಶರಣ್‌ಪ್ರಕಾಶ್ ರುದ್ರಪ್ಪ ಪಾಟೀಲ್. ಎಂಬಿಬಿಎಸ್, ಎಂಡಿ. ಪ್ರಾಕ್ಟೀಸ್ ಚೆನ್ನಾಗಿಯೇ ಇತ್ತು. ಜನಸೇವೆ ಮಾಡುವ ತುಡಿತ. ಅದು ರಾಜಕೀಯಕ್ಕೆ ಸೆಳೆಯಿತು. ಕಾಂಗ್ರೆಸ್ ಸೇರ್ಪಡೆ. ಮೊದಲ ಪ್ರಯತ್ನದಲ್ಲಿಯೇ ಗೆಲುವು ಕೈ ಹಿಡಿಯಿತು. 2000-04ರ ಅವಧಿಯಲ್ಲಿ ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಸದಸ್ಯ. 2004ರಲ್ಲಿ ಸೇಡಂ ಕ್ಷೇತ್ರದಿಂದ ಪಕ್ಷ ಕಣಕ್ಕಿಳಿಸಿತು. ಜನಪರ ನಿಲುವಿನ ಡಾಕ್ಟರ್ ವಿಧಾನಸಭೆ ಪ್ರವೇಶಿಸಿದರು. ಅಲ್ಲಿಯೂ ಸುಮ್ಮನೆ ಕೂತವರಲ್ಲ. ಮಾತನಾಡುವ ಅವಕಾಶ ಸಿಕ್ಕಾಗಲೆಲ್ಲ, ಲಭ್ಯ ಅಲ್ಪ ಸಮಯದಲ್ಲೇ ಕ್ಷೇತ್ರದ ಸಮಸ್ಯೆಗಳ ಪರಿಣಾಮಕಾರಿಯಾಗಿ ಮಾತನಾಡಿ ಗಮನ ಸೆಳೆಯುತ್ತಿದ್ದರು. ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದ್ದರ, ಅಭಿವೃದ್ಧಿ ವೇಗ ತೀವ್ರಗೊಂಡಿದ್ದರ ಫಲ ಅದು. 2008ರ ಚುನಾವಣೆಯಲ್ಲೂ ಗೆಲುವು. ಈಗ ಹ್ಯಾಟ್ರಿಕ್ ಸಾಧನೆಯ ಕನಸು.


ಮೌನ ಕಥೆಯಾಯಿತು!
ಮೈಮೇಲೆ ಖಾದಿ ಬಟ್ಟೆ. ಶೇವಿಂಗೇ ವ್ಯರ್ಥ ಎನ್ನುವಂಥ ಗಡ್ಡ. ಕನ್ನಡ ಕಥಾಲೋಕದ ಹೊಸಮುಖ ಮೌನೇಶ್ ಎಲ್. ಬಡಿಗೇರ್ ತುಂಬಾ ಸಿಂಪಲ್ ಮನುಷ್ಯ. ಮೌನ ಕಥೆ ಹುಟ್ಟಿಸಿದಾಗ ಎಷ್ಟು ಹರ್ಷ ಚೆಲ್ಲುತ್ತದೋ, ಮೌನೇಶ್ ಎಲ್. ಬಡಿಗೇರ್‌ರ ಕಥೆಗಳೂ ಅಷ್ಟೇ ಉಲ್ಲಾಸವನ್ನು ಉಕ್ಕೇರಿಸುವಂಥವು. ರಂಗಭೂಮಿಯ ಸಹವಾಸದ ಜತೆಗೆ ಕಥೆಗಳೊಂದಿಗೆ ಬದುಕುತ್ತಿದ್ದಾರೆ. ನೀನಾಸಂನಿಂದ ರಂಗಶಿಕ್ಷಣದಲ್ಲಿ ಡಿಪ್ಲೋಮಾ. 'ತಿಂಗಳು' ಮಾಸಪತ್ರಿಕೆಯಲ್ಲಿ 'ಕ್ರೈಮ್ ಡೈರಿ' ಕಥೆಗೆ ಮೊದಲ ಸಿಕ್ಕಿದಾಗಲೇ ಮೌನೇಶ್ ಬೆರಗು ಹುಟ್ಟಿಸಿದ್ದರು. ಈಗ ಅವರ ಚೊಚ್ಚಲ ಕಥಾಸಂಕಲನಕ್ಕೆ 'ಛಂದ' ಬಹುಮಾನವೂ ಸಿಕ್ಕಿದೆ. ರಂಗ ಬರಹಗಳೇ ಕಾಣೆಯಾಗುತ್ತಿರುವ ಈ ದಿನಗಳಲ್ಲಿ, ಆ ಕ್ಷೇತ್ರಕ್ಕೂ ಕಾಣಿಕೆ ಸಲ್ಲಿಸುವ ಜವಾಬ್ದಾರಿ ಹೊತ್ತಿದ್ದಾರೆ. ಕಥೆಗಳನ್ನು ಸ್ಪಷ್ಟವಾಗಿ, ಗಟ್ಟಿ ದನಿಯಲ್ಲಿ ಓದುವ ಅಪರೂಪದ ಪ್ರತಿಭೆಯೂ ಮೌನೇಶ್ ಹೌದು. ಇನ್ನಷ್ಟು ಕಥೆಗಳಿಗೆ ಜನ್ಮಕೊಡುವ ಉತ್ಸಾಹ ಅವರ ಆ ಗಟ್ಟಿ ದನಿಯಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.