ಸೇಬು ಸಾಹೇಬ್!

ಅಲ್ಲಿಯ ತನಕ ಆ ಆ್ಯಪಲ್‌ನ ಬೆಲೆ ಮೂವತ್ತು ರು.!
ತುಟಿಗೆ ಏನನ್ನೂ ತುಟ್ಟಿಯಾಗಿಸುವ ಶಕ್ತಿಯಿದೆ. ಕೆಲವರದ್ದು ಅಂಥ ಚುಂಬಕಶಕ್ತಿ. ಆ ಕೆಲವೇ ಕೆಲವರಲ್ಲೊಬ್ಬರು ನಟಿ ರಮ್ಯಾ. ಅವರ ತುಟಿಯ ಕೆಂಪೇ ಆ ಸೇಬಿಗೆ ಬಳಿದಿದ್ದಾನೆ ಆ ಭಗವಂತನೆಂಬ ಸಾಹೇಬ. 'ಕಠಾರಿವೀರ ಸುರಸುಂದರಾಂಗಿ'ಯಲ್ಲಿ ರಮ್ಯಾ ಸೇಬುಹಣ್ಣನ್ನು ಕಚ್ಚುವ ದೃಶ್ಯ ಗೊತ್ತಲ್ಲ... ಈ ಚಿತ್ರ ರಿಲೀಸ್ ಆದ ತಕ್ಷಣ ಖಾಸಗಿ ಚಾನೆಲೊಂದು ಸಂದರ್ಶನದಲ್ಲಿ ರಮ್ಯಾಳ ಕೈಗೆ ಆ್ಯಪಲ್ ಕೊಟ್ಟು, ಯಥಾವತ್ತು ಸಿನಿಮಾದ ದೃಶ್ಯದಂತೆ ಕಚ್ಚಲು ಹೇಳಿತು. ರಮ್ಯಾ ರಗಳೆ ತೆಗೆಯಲಿಲ್ಲ. ಕಚ್ಚಲೂ ಇಲ್ಲ. ತುಟಿಯನ್ನು ಒಂದಿಂಚು ಮುಂದೆ ತಂದು ಚುಂಬಿಸಿದರು.
ನಂತರ ಅದೇ ಆ್ಯಪಲ್‌ನ ಬೆಲೆ 10 ಸಾವಿರ ರು.!
ನಿರ್ಮಾಪಕ ಮುನಿರತ್ನ ಅವರಿಗೆ ತಮ್ಮ ಚಿತ್ರ ತೋಪೆದ್ದು ಹೋಗುತ್ತದೆ ಎಂಬ ಭಯವಿತ್ತೋ ಏನೋ, ಅದನ್ನು ಹರಾಜಿಗಿಟ್ಟರು. ವಿಶಾಲ್ ಎಂಬ ರಮ್ಯಾಳ ಅಭಿಮಾನಿ ಅದಕ್ಕೆ 10 ಸಾವಿರ ಬೆಲೆ ಕಟ್ಟಿ ಕೊಂಡುಕೊಂಡ! ಯಾಕೋ ಏನೋ ಆಗ ಸಿಲ್ಕ್‌ಸ್ಮಿತಾ ನೆನಪಾದರು. ಸಿಲ್ಕ್ ಕಚ್ಚಿಬಿಟ್ಟ ಕಾಶ್ಮೀರಿ ಸೇಬುಗಳಿಗೆ ರಾತ್ರೋ ರಾತ್ರಿ ರೇಟು ಹೆಚ್ಚಾಗಿದ್ದೂ ಒಂದು ಮಾರ್ಕೆಟಿಂಗ್ ಗಿಮಿಕ್ಕೇ.
ಆದರೆ, ಮೊನ್ನೆ ನ್ಯೂಜಿಲೆಂಡಿನ ಕ್ರಿಕೆಟಿಗ, ಆರ್‌ಸಿಬಿಯ ಡೆಡ್ಲಿ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ ಆ್ಯಪಲ್‌ಗೆ ಚುಂಬಿಸಲೂ ಇಲ್ಲ. ಕಚ್ಚಲೂ ಇಲ್ಲ. 'ನನ್ನ ಮೂರೂ ಮಕ್ಕಳಿಗೆ ನಿತ್ಯ ರಾಯಲ್ ಗಾಲಾ ಸೇಬು ಕೊಡುತ್ತೇನೆ' ಅಂತ ಹೇಳಿದರಷ್ಟೇ. ಈಗ ಬೆಂಗಳೂರಲ್ಲಿ ರಾಯಲ್ ಗಾಲಾ ಸೇಬಿಗೆ ಡಿಮ್ಯಾಂಡು ಶುರುವಾಗಿದೆ. ಸಾವಿರಗಟ್ಟಲೇ ಅಲ್ಲದಿದ್ದರೂ 80- 100 ರುಪಾಯಿಗೇ 'ಕಚ್ಚಾಡಲು' ಶುರುಮಾಡಿದ್ದಾರೆ ಜನ!
ಏನಿದು ರಾಯಲ್ ಗಾಲಾ?
ಆರ್‌ಸಿಬಿಗೂ ಈ 'ರಾಯಲ್'ಗೂ ದೇವ್ರಾಣೆ ರಿಲೇಶನ್ ಇಲ್ಲ. ಇದು ನ್ಯೂಜಿಲೆಂಡಿನ ಸೇಬು. 1930ರಲ್ಲಿ ಅಲ್ಲಿನ ಹಣ್ಣಿನತೋಟದ ಮಾಲೀಕ ಜೆ.ಎಚ್. ಕಿಡ್ಡ್ ಈ ತಳಿ ಬೆಳೆದ. ಅಲ್ಲಿಯ ತನಕ ಲೋಕಲ್ಲಾಗಿದ್ದ ರಾಯಲ್, 1974ರಲ್ಲಿ 'ಯುಎಸ್ ಪ್ಲ್ಯಾಂಟ್ ಪೇಟೆಂಟ್' ಗಿಟ್ಟಿಸಿಕೊಂಡ ಮೇಲೆ ವಿಶ್ವಮಟ್ಟಕ್ಕೆ ಸಿಹಿ ಹಂಚಿತು. ಈಗಿದು ವಿಶ್ವದಲ್ಲೇ ಅತಿಹೆಚ್ಚು ಡಿಮ್ಯಾಂಡುಳ್ಳು ಸೇಬು.
ಹೆಸರಿಗೆ 'ರಾಣಿ'ಕಾರಣ
ಕಿಡ್ಡ್ ಈ ಸೇಬು ಬೆಳೆದ ನಿಜ. ಆದರೆ, ಅದಕ್ಕೊಳ್ಳೆಯ ಹೆಸರಿಡುವಲ್ಲಿ ಸೋತ. ಅದೇ ವೇಳೆ ನ್ಯೂಜಿಲೆಂಡಿಗೆ ಇಂಗ್ಲೆಂಡಿನ ರಾಣಿ ಎರಡನೇ ವಿಕ್ಟೋರಿಯಾ ಭೇಟಿಕೊಟ್ಟಳು. ಚಿನ್ನದ ಹೊಳಪಿನ ವಿಕ್ಟೋರಿಯಾಳ ಮೈಬಣ್ಣ ಮತ್ತು ಆಕೆ ತೊಟ್ಟ ಡ್ರೆಸ್ಸಿಗೆ ಮಾರುಹೋದ ಕಿಡ್ಡ್‌ನ ಮಿತ್ರ ಡೇವಿಸ್ ಈ ಸೇಬಿಗೆ 'ರಾಯಲ್ ಗಾಲಾ' ಅಂತ ಹೆಸರಿಟ್ಟ. ಅಲ್ಲಿಂದ ಇದು ಬೆಲೆಬಾಳುವ ಸೇಬಾಯಿತು.
ಹಾರ್ಟ್ ಸ್ಪೆಶಲಿಸ್ಟ್!
ಮಿಕ್ಕೆಲ್ಲದರಕ್ಕಿಂತ ಇದರ ಮೈಬಣ್ಣ ಭಿನ್ನ. ಕಿತ್ತಳೆ ಹಳದಿ. ತೆಳುಕೆಂಪು ನೀರಿನ ಹೊಳಪು. ಈ ಮಧ್ಯ ಹಾದುಹೋಗುವ ಕೆಂಪು ಪಟ್ಟಿಗಳೇ ಈ ತಳಿಯ ಮುಖ್ಯ ಗುರುತು. ಇದರಲ್ಲಿ ನೀರಿನಾಂಶ ಹೆಚ್ಚು. ಮೀಡಿಯಂ ಸೈಜಿನ ರಾಯಲ್ ಗಾಲಾದಲ್ಲಿರೋದು 80 ಕ್ಯಾಲೊರಿ. ಬೇರೆ ಸೇಬುಗಳಿಗೆ ಹೋಲಿಸಿದರೆ ಕ್ಯಾಲೊರಿ ಕಮ್ಮಿ. ರುಚಿಯ ಬಗ್ಗೆ ಕೆಮ್ಮಂಗಿಲ್ಲ. ವಿಟಮಿನ್ 'ಎ', 'ಬಿ', 'ಸಿ'ಯ ಅತ್ಯಧಿಕ ಸ್ಟಾಕ್ ಇದರ ಹೊಟ್ಟೆಯೊಳಗಿದೆ. ವಿಶ್ವಮಾರುಕಟ್ಟೆಯಲ್ಲಿ ಇದು ಹಿಟ್ ಆಗಲು ಇದರಲ್ಲಿನ ಅತಿಕಡಿಮೆ ಕೊಬ್ಬಿನಾಂಶವೇ ಕಾರಣ. ಪೆಕ್ಟಿನ್ ಎಂಬ ಫೈಬರ್ ಅಂಶದಿಂದ 'ಸಂತುಲಿತ ಆಹಾರ'ವೆಂಬ ಖ್ಯಾತಿ ಇದಕ್ಕೆ. ಹೃದಯದ ಆಯುಸ್ಸು ಹೆಚ್ಚಿಸುವ ವೈದ್ಯ. ಇದಲ್ಲಿನ ಬೊರಾನ್ ನಮ್ಮ ಮೂಳೆಗಳನ್ನು ಗಟ್ಟಿಗೊಳಿಸುವಂಥದ್ದು.
ಯಾವ ಟೈಮಲ್ಲಿ ಸಿಗುತ್ತೆ?
ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಇದು ಬಿಡುತ್ತದೆ. ನ್ಯೂಜಿಲೆಂಡಿನಲ್ಲಿ ಹುಟ್ಟಿದ ಹತ್ತು ವರ್ಷದ ಬಳಿಕ ಆಸ್ಟ್ರೇಲಿಯಾದ ಏಕೈಕ ದ್ವೀಪರಾಜ್ಯ ಟಾಸ್ಮೇನಿಯಾದಲ್ಲಿ 'ರಾಯಲ್ ಗಾಲಾ'ವನ್ನು ಬೆಳೆಯಲಾಯಿತು. ನಂತರ ಕೆಲವೇ ವರ್ಷದಲ್ಲಿ ಇದು ಅಮೆರಿಕದಲ್ಲಿ ಫೇಮಸ್ಸಾಯಿತು. ಉತ್ತರ ಅಮೆರಿಕದಲ್ಲೂ ಇದನ್ನು ಮುಖ್ಯವಾಗಿ ಬೆಳೆಯಲಾಗುತ್ತಿದೆ.
ಕ್ರಿಕೆಟಿಗರಿಂದಲೇ ಪ್ರಚಾರ
2011ರಲ್ಲಿ ಮುಂಬೈನಲ್ಲಿ ಇದನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ನ್ಯೂಜಿಲೆಂಡಿನ ಮಾಜಿ 'ಬೌಲಿಂಗ್ ಬಿರುಗಾಳಿ' ಸರ್ ರಿಚರ್ಡ್ ಹ್ಯಾಡ್ಲೀ. ಕೋಲ್ಕತ್ತಾದ 'ಉದಯನ್ ಕುಷ್ಠರೋಗಿ ಮಕ್ಕಳ ಆಶ್ರಮ'ಕ್ಕೆ ಬಂದಾಗಲೆಲ್ಲ ಆಸೀಸ್‌ನ ಮಾಜಿ ಕಪ್ತಾನ ಬ್ರೆಟ್ ಲೀ ಹಂಚುವುದೂ 'ರಾಯಲ್ ಗಾಲಾ' ಸೇಬುಗಳನ್ನೇ. ಈಗ ಸರದಿ ಡೇನಿಯಲ್ ವೆಟ್ಟೋರಿಯದ್ದು. ಆರ್‌ಸಿಬಿ ಆಟಗಾರ ಆಗಿರುವ ಕಾರಣದಿಂದ ಬೆಂಗಳೂರಿನಲ್ಲಿ ಈ ಸೇಬಿಗೆ ಮಾರುಕಟ್ಟೆ ಸೃಷ್ಟಿಸುವ ಉತ್ಸಾಹ ಈ ಹಣ್ಣಿನ ಸಂಸ್ಥೆಯವರದ್ದು. ವೆಟ್ಟೋರಿ ಅಷ್ಟೇ ಅಲ್ಲ, ನ್ಯೂಜಿಲೆಂಡ್ ಆಟಗಾರರು ವಿಶ್ವದಲ್ಲಿ ಎಲ್ಲೇ ಹೋದರೂ 'ರಾಯಲ್ ಗಾಲಾ'ದ ಗಾಯನ ಶುರುಮಾಡ್ತಾರೆ.
ಹೌದು, ಕಚ್ಚದೇ ಇರುವ ಸೇಬಿಗೆ ಕಮ್ಮಿ ಬೆಲೆ!
--ಕೀರ್ತಿ ಕೋಲ್ಗಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


