ಪವಾಡಕ್ಕೆ ಮೀರಿದ ಬದುಕು
ಜೀವನವೆಂಬುದು ಪವಾಡಗಳಿಂದ ತುಂಬಿ ಹೋಗಿರುವಂಥದ್ದು ಖಂಡಿತಾ ಅಲ್ಲ. ಪ್ರತಿ ಹಂತದಲ್ಲೂ, ಪ್ರತಿ ಸಂಕಷ್ಟದಲ್ಲೂ ಹಾಗೊಂದು ಪವಾಡ ನಡೆದು ಹೋಗಲಿ ಎಂಬಂತೆ ನಾವು ಬಯಸುತ್ತಲೇ ಇರುತ್ತೇವೆ. ಹೀಗೇಕೆ ನಾವಂದುಕೊಂಡಂತೆಲ್ಲ ಆಗಿ ಹೋಗುವಂತಿದ್ದರೆ ಅದು ಜೀವನವಾಗುತ್ತಿರಲಿಲ್ಲ. ದಿಗ್ದರ್ಶಕನ ಆಣತಿಯಂತೆ ನಟಿಸುವ ರಂಗಭೂಮಿಯೋ, ಸಿನಿಮಾವೋ ಆಗಿರುತ್ತಿತ್ತು. ಯಾವುದೇ ಸಂದರ್ಭದಲ್ಲಿ ನೋಡಿ, ಅಯ್ಯೋ ದೇವರೆ, ಇದೊಂದು ಹೀಗಾಗಿಬಿಡಲಿ. ನನ್ನ ಪರೀಕ್ಷೆ ಪಾಸಾಗಲಿ, ಆ ಹುಡುಗಿಯೇ ನನ್ನವಳಾಗಿ ಸಿಗಲಿ. ನನ್ನ ಸಾಲವೆಲ್ಲ ತೀರಿ ನೆಮ್ಮದಿಯಾಗಲಿ, ಅಂಥ ನೌಕರಿ ಸಿಕ್ಕಲಿ, ಮನೆ ಆಗಲಿ, ಹೆಚ್ಚಿನ ಹಣ ಸಿಗಲಿ, ಪ್ರಮೋಷನ್ ಆಗಲಿ... ಹೀಗೆ ಬೇಡಿಕೆಗಳ ಪಟ್ಟಿಯೇ ಹೊರಬರುತ್ತದೆ. ಎಲ್ಲ ಸಂದರ್ಭಗಳಲ್ಲೂ ಇವೆಲ್ಲವೂ ನಮ್ಮ ಪ್ರಯತ್ನದ ಫಲದ ಮೇಲೆ ನಿಂತಿರುವಂಥದ್ದು. ಪ್ರಯತ್ನ ಮಾಡುತ್ತೇನೆ. ಫಲ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವನ್ನೇ ನಾವು ಮರೆಯುತ್ತೇವೆ. ಎಲ್ಲ ಸಂದರ್ಭಗಳಲ್ಲೂ ಪವಾಡ ನಡೆಯಲಿ ಎಂಬ ನಿರೀಕ್ಷೆಯೇ. ಅಷ್ಟಕ್ಕೂ ಜೀವನವೆಂಬುದು ಪವಾಡವನ್ನೂ ಮೀರಿದ್ದು. ಅದಕ್ಕಿಂತ ಹೆಚ್ಚಿನದ್ದು. ಅದು ಅತ್ಯದ್ಭುತ ಅನುಭವಗಳ ಗಣಿ. ಅಲ್ಲಿನ ಪ್ರತಿಯೊಂದು ಅಂಶಗಳನ್ನೂ ನಾವೇ ಸ್ವಂತ ಪ್ರಯತ್ನಗಳಿಂದ ದಕ್ಕಿಸಿಕೊಂಡಾಗ, ಅದರ ಕೊನೆಯಲ್ಲಿ ಸಿಗುವ ಸಾರ್ಥಕ್ಯ ಇದೆಯಲ್ಲಾ, ಅದಕ್ಕಿಂಥ ಹೆಚ್ಚಿನ ಸಂತಸ ಪವಾಡದಲ್ಲೂ ಇರಲು ಸಾಧ್ಯವೇ ಇಲ್ಲ. ಜೀವನವನ್ನು, ಅದನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿನ ಅಂಶಗಳನ್ನು ಉಪೇಕ್ಷಿಸುವ ನಾವು ಸದಾ ಅಘಟಿತವೊಂದು ಘಟಿಸಿಬಿಡಲಿ. ಅನಾಯಾಸವಾಗಿ ನಾವಂದುಕೊಂಡದ್ದು ಆಗಿಬಿಡಲಿ ಎಂದು ಬಯಸುತ್ತಾ ಕೂರುತ್ತೇವೆ. ನಮ್ಮೊಳಗಿನ ವಿಶ್ವಾಸವನ್ನು ಒಮ್ಮೆಯೂ ಉದ್ದೀಪಿಸಿಕೊಂಡು, ಪ್ರಯತ್ನದ ಫಲ ಕಾಣುವ ಮನೋಭಾವಕ್ಕೆ ಮುಂದಾಗುವುದೇ ಇಲ್ಲ. ಜೀವನದಲ್ಲಿ ನಮ್ಮ ನಡೆಗೆ ನಾವೇ ನಿರ್ದೇಶಕರು. ಪ್ರತಿ ಹಂತದಲ್ಲೂ ನಮ್ಮ ಹೆಜ್ಜೆ ಹೇಗಿರಬೇಕೆಂಬ ನಿರ್ಧಾರ ನಮ್ಮದೇ ಆಗಬೇಕು. ಅದಕ್ಕೂ ಮೀರಿದ್ದು ಇದ್ದರೆ, ನಮ್ಮ ಪ್ರಯತ್ನದ ನಂತರವೂ ಏನಾದರೂ ಉಳಿದಿದ್ದರೆ ಅದನ್ನು ಪವಾಡವೆಂದುಕೊಳ್ಳೋಣ. ಆದರೆ ಬದುಕೇ ಪವಾಡವಾಗಿಬಿಟ್ಟರೆ ಜಗತ್ತಿಗೆ ಅರ್ಥವೇನಿದೆ ಹೇಳಿ? ಈಜಲು ಬಂದವ ಮಾತ್ರ ಪ್ರವಾಹದಲ್ಲಿ ಪಾರಾಗಬಲ್ಲ. ಅದನ್ನು ಕಲಿಯದೇ ನೀರಿಗೆ ಹಾರಿಕೊಂಡರೆ ಎಲ್ಲ ಸಂದರ್ಭದಲ್ಲೂ ಬದುಕಿ ಬರುವ ಪವಾಡ ನಡೆಯಲು ಸಾಧ್ಯವಿಲ್ಲ, ನೆನಪಿಡಿ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

