ತಿನ್ನುವ ಪದಾರ್ಥದಲ್ಲಿದೆ ಆರೋಗ್ಯದ ಕೀಲಿಕೈ
ಬಹಳಷ್ಟು ಜನರ ನಂಬಿಕೆ ಎಂದರೆ ನಮಗೆ ಅನಾರೋಗ್ಯವಾದಾಗ ಔಷಧಗಳು ಮ್ಯಾಜಿಕ್ ಮಾಡುತ್ತವೆ ಎಂಬುದು. ಬೇಸರದ ಸಂಗತಿ ಏನೆಂದರೆ ನಾವು ಸೇವಿಸುವ ಆಹಾರ ಎಂಥ ಜಾದೂ ಮಾಡಬಲ್ಲದು ಎನ್ನುವುದು ನಮಗೆ ಗೊತ್ತೇ ಇಲ್ಲ. ಪ್ರಮುಖವಾಗಿ ಸೃಷ್ಟಿಯಲ್ಲಿನ ಗಿಡಮೂಲಿಕಗಳಿಂದಲೇ ಎಷ್ಟೋ ಮದ್ದುಗಳು ಸಿಗುತ್ತವೆ. ಪ್ರಯೋಗಾಲಯದಲ್ಲಿ ಸಿದ್ಧವಾದದ್ದು ಎಂದುಕೊಂಡು ನಾವು ಖರೀದಿಸಿ, ಸೇವಿಸುವ ಈಗಿನ ಶೇ 25ಕ್ಕೂ ಅಧಿಕ ಔಷಧಗಳು ಸಸ್ಯಜನ್ಯವಾದದ್ದು ಎನ್ನುವುದು ಅಧಿಕೃತ ಮಾಹಿತಿ. ನಮ್ಮ ದೇಹದಲ್ಲಿರುವ ಕಣಗಳ ಮೇಲೆ ನಿರಂತರವಾಗಿ ಕೆಲಸ ಮಾಡುತ್ತಿರುವ ಆಹಾರ, ನಮ್ಮ ಅರಿವಿಗೆ ಬಾರದಂತೆ ಆರೋಗ್ಯದ ಕೀಲಿಕೈ ಆಗಿಯೂ ವ್ಯವಹರಿಸುತ್ತಿರುತ್ತದೆ.
ನಾವು ಸೇವಿಸುವ ಸಸ್ಯಜನ್ಯಯುಕ್ತ ಪದಾರ್ಥಗಳು ನಮ್ಮನ್ನು ಆರೋಗ್ಯಕರವಾಗಿ ಇಡಬಲ್ಲವು ಎಂಬುದಕ್ಕೆ ವೈಜ್ಞಾನಿಕವಾಗಿ ನಿರೂಪಿತವಾಗಿರುವ ಸಾಕಷ್ಟು ಉದಾಹರಣೆಗಳನ್ನು ನೀಡಬಲ್ಲೆ. ಕತ್ತಿನ ಕ್ಯಾನ್ಸರ್‌ಗೆ ಕಾರಣವಾಗುವ ವೈರಸ್‌ಗಳನ್ನು ಎದುರಿಸುವ ಸಾಮರ್ಥ್ಯ ಬೆಳ್ಳುಳ್ಳಿಯಲ್ಲಿದೆ ಎನ್ನುವುದು ಎಷ್ಟು ಜನರಿಗೆ ಗೊತ್ತು? ಕಲುಷಿತ ವಾತಾವರಣದಲ್ಲಿ ಜೀವಿಸುತ್ತಿರುವ ನಮ್ಮ ದೇಹದೊಳಕ್ಕೆ ಅದೆಷ್ಟೋ ವಿಷಕಾರಕ ಪದಾರ್ಥಗಳು ನಿತ್ಯವೂ ಸೇರಿಕೊಳ್ಳುತ್ತಲೇ ಇರುತ್ತವೆ. ಅವುಗಳನ್ನು ಹೊರಹಾಕುವ ತಾಕತ್ತು ಇರುವುದು ಕ್ಯಾಬೇಜ್‌ಗೆ. ನಮ್ಮ ದೇಹಕ್ಕೆ ಒಗ್ಗದ ಪದಾರ್ಥಗಳನ್ನು ನಾಶಗೊಳಿಸುವ ಶಕ್ತಿ ಧಾನ್ಯಗಳು, ತರಕಾರಿ, ಹಣ್ಣುಗಳಲ್ಲಿ ಅಡಕವಾಗಿದೆ. ಸೂಕ್ತ ಆಹಾರ ಸೇವನೆ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನೂ ತಡೆಯಬಲ್ಲದು; ಹಾನಿಕಾರಕ ಕೊಲೆಸ್ಟರಾಲ್ ಮಟ್ಟ ಮಿತಿ ಮೀರದಂತೆ ತಡೆಯಬಲ್ಲದು.
ಹಸಿವಾಗುತ್ತದೆ, ತಿನ್ನುತ್ತೇವೆ, ಹೊಟ್ಟೆ ತುಂಬುತ್ತದೆ. ಆಹಾರ ಎಂದರೆ ಇಷ್ಟೇ ಅಲ್ಲ. ನಮ್ಮ ದೃಷ್ಟಿಯಲ್ಲಿ ಆಹಾರ ಎಂದರೆ ನೆನಪಿಗೆ ಬರುವುದು ಹಸಿವು, ಹೊಟ್ಟೆ ಅಷ್ಟೆ. ಬಹುಶಃ ದೇಹದ ಮೇಲೆ ಆಹಾರ ಯಾವ ರೀತಿ ಕೆಲಸ ಮಾಡುತ್ತದೆ ಎನ್ನುವುದು ಅರಿತುಕೊಂಡರೆ ಆಹಾರ ಮಹತ್ವ ತಿಳಿಯಲು ನೆರವಾದೀತು. ಮಾನವ ದೇಹದಲ್ಲಿ 60 ಟ್ರಿಲಿಯನ್ (ಒಂದರ ಮುಂದೆ 12 ಸೊನ್ನೆ!) ಕೋಶಗಳಿರುತ್ತವೆ. ಇನ್ನೂ ಆಶ್ಚರ್ಯವಾದೀತು, ಪ್ರತಿ ಕೋಶವೂ ಪ್ರತಿ ನಿಮಿಷ ಬಿಲಿಯನ್‌ಗಟ್ಟಳೆ ರಾಸಾಯನಿಕ ಪ್ರಕ್ರಿಯೆಗಳನ್ನು ನಡೆಸುತ್ತಿರುತ್ತವೆ. ಈ ರೀತಿಯ ದಣಿವರಿಯದ ನಿರಂತರ ಚಟುವಟಿಕೆಗಳಿಗೆ ಅವುಗಳಿಗೆ ಸ್ಫೂರ್ತಿಯಾದರೂ ಎಲ್ಲಿಂದ ಸಿಗಬೇಕು? ಬಲವಾದರೂ ಎಲ್ಲಿಂದ ಬರಬೇಕು? ನಾವು ಏನು ಕೊಡುತ್ತೇವೆಯೊ ಅದೇ ಶಕ್ತಿ. ಅಂದರೆ ನಮ್ಮ ಆಹಾರವೇ ನೂರಾರು ಕೋಶಗಳಿಗೆ ಶಕ್ತಿ ಮೂಲ!
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

