ಕುದುರೆ ಗೆದ್ದ ಚದುರೆ
ಹೊಟ್ಟೆಪಾಡಿಗಾಗಿ ಬಾಲ್ಯದಲ್ಲೇ ಬೆಂಗಳೂರು ಸೇರಿದ ರಾಜಮ್ಮ ಈಗ ಕೋಟಿ ಒಡತಿ. ಅದಕ್ಕೆ ಕಾರಣ ಅವರ ಮುದ್ದಿನ ಕುದುರೆ.

ಹೆಸರು ರಾಜಮ್ಮ. ಬೆಂಗಳೂರಿನ ಶಿವಾನಂದ ವೃತ್ತದ ಬಳಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದಾರೆ. ಇವರನ್ನು ಡ್ರೀಂ ಗರ್ಲ್, ಕನಸಿನ ಕುದುರೆಯೇರಿದಾಕೆ ಎಂದೂ ಕರೆಯಬಹುದು.
ಸದ್ಯ ಅವರು ಬ್ಯೂಟಿಷಿಯನ್ ಮಾತ್ರವಲ್ಲ ಕುದುರೆಯ ಮಾಲೀಕರು. ಅದರಲ್ಲೇನು ವಿಶೇಷ ಎನ್ನಬೇಡಿ. ಈ ಹುಡುಗಿಯ ಹಿಂದೆ ಒಂದು ಕಥೆ ಇದೆ. ನೀವೇ ಓದಿ.
ಹೊಟ್ಟೆಪಾಡಿಗಾಗಿ ಬಾಲ್ಯದಲ್ಲೇ ಬೆಂಗಳೂರು ಸೇರಿದ ಇವರು ಈಗ ಕೋಟಿ ಒಡತಿ. ಅದಕ್ಕೆ ಕಾರಣ ಅವರ ಮುದ್ದಿನ ಕುದುರೆ. ಈ ಡ್ರೀಂ ಗರ್ಲ್‌ಗೆ ಈಗ ಮತ್ತೊಂದು ಕುದುರೆ ಏರುವ ಆಸೆ ಆಗಿದೆಯಂತೆ.
ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂತೀರಾ? ಮಹಿಳೆಯರು ಕುದುರೆ ಏರುವುದು, ಕುದುರೆಯನ್ನು ಖರೀದಿಸಿ ಮಾಲೀಕರಾಗುವುದು, ಅದರ ಜವಾಬ್ದಾರಿ ವಹಿಸುವುದು ಸುಲಭಸಾಧ್ಯವಾದ ಕನಸಲ್ಲ. ಎಲ್ಲೋ ಶ್ರೀಮಂತರಿಗಷ್ಟೇ ಸಾಧ್ಯ ಅದು. ಕುದುರೆ ಬಾಲ ಹಿಡಿದರೆ ಮನೆ ಮಠ ಕಳ್ಕೊಂಡ್ ಬೀದಿಗೆ ಬೀಳಬೇಕು ಎಂಬುದು ಸಾಮಾನ್ಯ ಜನರ ನಂಬಿಕೆ.
ಆದರೆ, ರಾಜಮ್ಮ ಇದೆಲ್ಲದಕ್ಕೂ ಹೊರತಾಗಿದ್ದಾರೆ. ಇಂತಹ ಮಾತುಗಳನ್ನಾಡಿ, ಹಣ ಕಳೆದುಕೊಳ್ಳುವವರಿಗೆ, ಮಹಿಳೆಯರಿಗೆ ಮಾದರಿಯಾಗಿದ್ದು, ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಕಾರಣ, ಇವರ ಕುದುರೆ ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ಅಷ್ಟೇ ಅಲ್ಲ ರು. 1.8 ಕೋಟಿ ಬಹುಮಾನ ಸಹ ಗಳಿಸಿದೆ. ಹಾಗಾಗಿ ಈ ಕುದುರೆ ಬಾಲಕ್ಕೆ ಈಗ ಬೆಲೆ ಹೆಚ್ಚಾಗಿದೆ ಎನ್ನುತ್ತಾರೆ ಬುಕ್ಕಿಗಳು.
ಕಮರದ ಕನಸು
ರಾಜಮ್ಮ ಈ ಅದೃಷ್ಟದ ಕುದುರೆ ಬಗ್ಗೆ ಹೀಗೆ ಹೇಳ್ತಾರೆ:
ಮನೆಯಲ್ಲಿ ತೊಂದರೆ ಇದ್ದ ಕಾರಣ ಚಿಕ್ಕವಯಸ್ಸಿನಲ್ಲೇ ಬೆಂಗಳೂರು ಸೇರಿದೆ. ಆಗ ಬೆಂಗಳೂರಿನ ಟರ್ಫ್ ಕ್ಲಬ್‌ನಲ್ಲಿ ಪಾರ್ಟ್ ಟೈಂನಲ್ಲಿ ಟಿಕೆಟ್ ಕೊಡುವ ಕೆಲಸ ಮಾಡುತ್ತಿದ್ದೆ. ಇದರ ಜೊತೆಜೊತೆಯಲ್ಲೇ ಬ್ಯೂಟಿಷಿಯನ್ ತರಬೇತಿಗೆ ಹೋಗುತ್ತಿದ್ದೆ. ಅದನ್ನೂ ಕಲಿತೆ.
ಅಲ್ಲಿ ಕೆಲಸ ಮಾಡುವಾಗ ಬರುತ್ತಿದ್ದ ಕುದುರೆ ಮಾಲೀಕರನ್ನು ನೋಡಿದ್ದೆ. ನಾನು ಅವರಂತೆ ಒಂದು ಕುದುರೆಯ ಮಾಲೀಕಳಾಗಬೇಕು ಎಂಬ ಕನಸು ಕಂಡಿದ್ದೆ. ಈ ಬಗ್ಗೆ ಅಲ್ಲಿನ ನನ್ನ ಸಹೋದ್ಯೋಗಿಯೊಬ್ಬರಿಗೆ ತಿಳಿಸಿದ್ದೆ. ಆಮೇಲೆ ಅದು ಕೈಗೆಟುಕದ ಹುಳಿ ದ್ರಾಕ್ಷಿ ಎಂದು ಸುಮ್ಮನಾದೆ.
ಕೆಲ ದಿನಗಳ ನಂತರ ಟರ್ಫ್ ಕ್ಲಬ್ ಬಿಟ್ಟು, ಸ್ವಂತ ಪಾರ್ಲರ್ ತೆರೆದೆ. ಆದರೂ ಕುದುರೆಯ ಕನಸು ಕಮರಿರಲಿಲ್ಲ. ನಾನು ಒಂದು ಕುದುರೆಯ ಮಾಲೀಕಳಾಗಬೇಕು. ಅದು ರೇಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂಬ ನನ್ನ ಕನಸು ಸದಾ ಹಸಿರಾಗಿತ್ತು. ಆದರೆ, ಅದು ಸಾಧ್ಯವಿಲ್ಲ ಎಂದು ಸುಮ್ಮನಾಗುತ್ತಿದ್ದೆ.
ಐಯಾಮ್ ಲಕ್ಕಿ
ಒಂದು ರೀತಿ ನಾನು ಲಕ್ಕಿ. ಅದ್ಯಾವ ದೇವರ ಕೃಪೆಯೋ, ಇದ್ದಕ್ಕಿದ್ದಂತೆ ಒಂದು ದಿನ ನನ್ನ ಸಹೋದ್ಯೋಗಿ ಕರೆ ಮಾಡಿ, ಒಂದು ಕುದುರೆ ಇದೆ. ಅದರ ಮಾಲಿಕತ್ವಕ್ಕೆ ಪಾಲುದಾರರು ಬೇಕಾಗಿದ್ದಾರೆ ಎಂದರು. ಹಿಂದೆ ಮುಂದೆ ನೋಡದೆ ಒಪ್ಪಿದೆ. 'ಸೂಪರ್ ಸ್ಟಾರ್' ಎಂಬ ಕುದುರೆ ಖರೀದಿಸಿದೆ. ಅದೇ ನನ್ನ ಲಕ್ಕಿ ಕುದುರೆ ಎನ್ನಬಹುದು. ಅದು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತು. ಇದನ್ನು ಕನಸಿನಲ್ಲೂ ಎಣಿಸಿರಲಿಲ್ಲ. ನಿಜಕ್ಕೂ ಸಂತೋಷವಾಗುತ್ತಿದೆ. ರಿಯಲಿ ಐಯಾಮ್ ಲಕ್ಕಿ.
ಲಕ್ಕಿಯ ಮತ್ತೊಂದು ಕುದುರೆ
ಸದ್ಯ 'ಸೂಪರ್ ಸ್ಟಾರ್'ಗೆ ನಾಲ್ವರು ಮಾಲೀಕರಿದ್ದಾರೆ. ರಾಜಮ್ಮ ಕೂಡ ಒಬ್ಬರು. ಈ ಕುದುರೆ ಕೈಬಿಡುವ ಚಿಂತೆಯಿಲ್ಲ. ಬದಲಾಗಿ ಮತ್ತೊಂದು ಕುದುರೆ ಖರೀದಿಸುವ ಕನಸು ಕಂಡಿದ್ದಾರೆ.
ಆ ಕನಸಿಗೆ ಆಗಲೇ ಅಡಿಗಲ್ಲು ಬಿದ್ದಿದೆ. ಐದಾರು ತಿಂಗಳ ಕುದುರೆಯ ಮರಿಯನ್ನು ಖರೀದಿಸಲಾಗಿದೆ. ಸದ್ಯ ಬೇರೆ ಪಾಲುದಾರರ ಬಗ್ಗೆ ಚಿಂತಿಸಿಲ್ಲ.
ಈಗಿರುವ ಕುದುರೆ ತರಬೇತುದಾರ ಸತೀಸ್ ನೆರಡು ಹಾಗೂ ಜಾಕಿ ಇಬ್ಬರೂ ಆ ಕುದುರೆಯನ್ನೂ ಪಳಗಿಸಲಿದ್ದಾರೆ. ಈ ಕೀರ್ತಿ ಅವರಿಗೂ ಸಲ್ಲಬೇಕು. ಈಗ ಖರೀದಿಸಿರುವ ಕುದುರೆಯನ್ನೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಾಸೆ. ಆ ಕನಸು ನನಸಾಗಲಿ ಎಂಬುದು ನಮ್ಮ ಕುಟುಂಬ ಸದಸ್ಯರ ಆಸೆ.
ಈ ಕೆಲಸಕ್ಕೆ ಕುಟುಂಬ ಸದಸ್ಯರ ಪ್ರೋತ್ಸಾಹವಿದೆ. ಕುದುರೆಗೆ ಪ್ರತಿ ತಿಂಗಳು ಕನಿಷ್ಠ 20 ಸಾವಿರ ಖರ್ಚು ಬರುತ್ತದೆ. ಅದರ ನಿರ್ವಹಣೆ, ಉತ್ತಮ ತರಬೇತಿ ಪ್ರಮುಖ ಆದ್ಯತೆ ಎನ್ನುತ್ತಾರೆ ರಾಜಮ್ಮ. ರಾಜಮ್ಮ ಅವರ ವತಿ ವೆಂಕಟೇಶ್ ಸರ್ಕಾರಿ ಉದ್ಯೋಗಿ. ದಂಪತಿಗೆ ಮುಕ್ತ ಹಾಗೂ ಖುಷಿ ಎಂಬ ಇಬ್ಬರು ಮಕ್ಕಳಿದ್ದಾರೆ.
- ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


