ಬದುಕು ವ್ಯವಸ್ಥಿತವಲ್ಲ
ಎಲ್ಲವೂ ಅಷ್ಟೊಂದು ಅಚ್ಚುಕಟ್ಟಾಗಿ ಇದ್ದರೆ ಅದನ್ನು ಜೀವನ ಅಂತ ಹೇಗೆ ಕರೆಯಲು ಸಾಧ್ಯ? ಒಂದಿನಿತೂ ಆಚೀಚೆ ಆಗದಂತೆ, ಅತ್ಯಂತ ಶಿಸ್ತಿನಲ್ಲಿ, ಗೆರೆ ಹೊಡೆದಂತೆ ಹೋಗಲು ಬದುಕೇನು ಯಂತ್ರವೇ? ಯಾವುದೇ ಯಂತ್ರೋಪಕರಣಗಳನ್ನು ಗಮನಿಸಿ. ಅದರಲ್ಲಿ ವೈವಿಧ್ಯ ಎಂಬುದು ಇರಲಿಕ್ಕೆ ಸಾಧ್ಯವೇ ಇಲ್ಲ. ಅಥವಾ ಅದಕ್ಕೆ ನಿಗದಿಪಡಿಸಿದ ಕೆಲಸವನ್ನು ಬಿಟ್ಟರೆ ಬೇರೆ ಯಾವುದನ್ನೂ ಅದರಿಂದ ನಿರೀಕ್ಷಿಸಲು ಸಾಧ್ಯವೇ ಇಲ್ಲ. ಅಲ್ಲಿ ಭಾವನೆಗಳಿರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಿಗದಿತ ಆದೇಶಗಳಿಲ್ಲದೆ ಯಾವ ಯಂತ್ರಗಳೂ ಕೆಲಸ ಮಾಡಲು ಸಾಧ್ಯವೇ ಇಲ್ಲ. ಸ್ವಿಚ್ ಒತ್ತಿದರೆ ಮಾತ್ರ ಮೋಟಾರು ಚಲಿಸುತ್ತದೆ. ಕಿಕ್ ಹೊಡೆದು, ಗಿಯರ್ ಬದಲಿಸಿದರೆ ಮಾತ್ರವೇ ಗಾಡಿ ಚಲಿಸುತ್ತದೆ. ಹೀಗೆ ಎಲ್ಲವೂ ನಿಯಂತ್ರಿತ ಕೆಲಸಗಳು. ಯಾವ ಸಂದರ್ಭದಲ್ಲಾದರೂ ಅದರ ಚಾಲನಾಶಕ್ತಿ ಮುಗಿದು ಹೋಗಿ ಬಿಡಬಹುದು. ಅದರೆ ಬದುಕು ಹಾಗಿರಲು ಸಾಧ್ಯವೇ ಇಲ್ಲ. ಇಡೀ ಬದುಕು ನಿಂತಿರುವುದೇ ಭಾವನೆಗಳ ಮೇಲೆ. ಮನಸ್ಸಿನೊಳಗಣ ಆಲೋಚನೆಗಳೆಲ್ಲವೂ ಮೆದುಳಿನ ಅದೇಶಗಳಾಗಿ ಬದಲಾಗಿ ಕೃತಿಯ ರೂಪದಲ್ಲಿ ವ್ಯಕ್ತವಾಗುತ್ತದೆ. ಇಂಥ ಆಲೋಚನೆಗಳು ಸದಾ ಬದಲಾಗುತ್ತಲೇ ಇರುತ್ತವೆ. ಅದಕ್ಕೆ ಮಿತಿ ಎಂಬುದೇ ಇಲ್ಲ. ಅದು ವೈವಿಧ್ಯಮಯ ಮಾತ್ರವಲ್ಲ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಲೇ ಇರುತ್ತದೆ. ಹಾಗಾಗಿ ಅಂಥ ವೈವಿಧ್ಯಗಳು ನಮ್ಮ ದಿನನಿತ್ಯದ ವರ್ತನೆಗಳಲ್ಲೂ ಕಾಣುತ್ತದೆ. ಸಂಬಂಧಗಳಿಗೂ ಇದೇ ಅನ್ವಯ. ನಾವು ಅತ್ಯಂತ ಪ್ರೀತಿಸುವ, ಗೌರವಿಸುವ, ಹೆಚ್ಚು ಇಷ್ಟಪಡುವ ವ್ಯಕ್ತಿಗಳೊಂದಿಗಿನ ನಮ್ಮ ಸಂಬಂಧ ಅತ್ಯಂತ ಅಸ್ತವ್ಯಸ್ಥವಾಗಿರುವುದಕ್ಕೆ ಮನಸ್ಸಿನ ಇಂಥ ಗುಣವೇ ಕಾರಣ. ಪ್ರೀತಿ ಎಂಬುದು ವ್ಯವಸ್ಥಿತವಾಗಿ ರೂಪುಗೊಂಡಿರಬೇಕಿಲ್ಲ. ಹಾಗಿದ್ದರೆ ಅದು ಪ್ರೀತಿಯಾಗಿರುವುದೇ ಇಲ್ಲ. ನಾವು ಯಾರೊಂದಿಗಾದರೂ ಅತ್ಯಂತ ಶಿಸ್ತಿನಲ್ಲಿ ವರ್ತಿಸುತ್ತಿದ್ದೇವೆ, ಒಂದಿನಿತೂ ಅಪಚಾರವಾಗದಂತೆ ಅವರೊಂದಿಗೆ ನಮ್ಮ ನಡವಳಿಕೆ ಇರುತ್ತದೆ ಎಂದಾದರೆ ಅಲ್ಲಿ ನಿಜಕ್ಕೂ ಪ್ರೀತಿಗಿಂತ ಹೆಚ್ಚಾಗಿ ಭಯವೋ, ಅನಿವಾರ್ಯತೆಯೋ ಕೆಲಸ ಮಾಡುತ್ತಿದೆ ಎಂದೇ ಅರ್ಥ. ಒಂದಷ್ಟು ಜಗಳ, ಮನಸ್ತಾಪ, ಮುನಿಸು, ಅಸಮಾಧಾನ, ಕಿತ್ತಾಟಗಳಿರುವುದು ಸಲುಗೆಯಲ್ಲಿ ಮಾತ್ರವೇ. ಹಾಗಿದ್ದಾಗಲೇ ಪ್ರೀತಿ ಬಲಿಯುವುದು. ಬದುಕು ಎಂಬುದು ಯಾವತ್ತಿಗೂ ವ್ಯವಸ್ಥಿತವಲ್ಲ. ಪರಿಪೂರ್ಣ, ಕ್ರಮಬದ್ಧತೆಯ ಬದುಕು ಸುಂದರವಾಗಿರಲು ಸಾಧ್ಯವೇ ಇಲ್ಲ. ಎಲ್ಲ ಅವ್ಯವಸ್ಥೆಯ ಜತೆಗೇ ಹೊಂದಿಸಿಕೊಂಡು ಸಾಗುವುದು ಸುಂದರ ಜೀವನ ಎನಿಸಿಕೊಳ್ಳುತ್ತದೆ ಎಂಬುದನ್ನು ನೆನಪಿಡಿ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

