ಲತಾ ಸ್ಕೂಲ್
ಬಡಮಕ್ಕಳಿಗೆ ವಿದ್ಯಾದಾನವನ್ನು ತಪಸ್ಸಿನಂತೆ ಮಾಡುತ್ತಿದ್ದಾರೆ ಲತಾ.

ಲಿಕಾನ್ ಸಿಟಿ ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ತಲೆ ಎತ್ತುತ್ತಿರುವ ಕಾಂಕ್ರೀಟ್ ಕಟ್ಟಡಗಳು, ಸಾವಿರಾರು ಮಕ್ಕಳ ಶಿಕ್ಷಣಕ್ಕೆ ಎರವಾಗಿವೆ ಎಂದರೆ ನಿಮಗೆ ನಂಬಿಕೆಯಾಗುತ್ತದಾ?
ಕಾಂಕ್ರೀಟ್ ನಾಡು ಕಟ್ಟಲು ಇಲ್ಲಿಗೆ ಬರುವ ಕೂಲಿ ಕಾರ್ಮಿಕರ ವಸತಿಗಳಿಗೆ ಒಮ್ಮೆ ಭೇಟಿ ನೀಡಿ. ಅವರ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪೋಷಕರಿಗೆ ಕಷ್ಟವೇ. ಮೂರು ತಿಂಗಳಿಗೊಮ್ಮೆ ಬದಲಾಗುವ ವಾಸಸ್ಥಳ, ಅವಿದ್ಯಾವಂತ ಪರಿಸರ, ಪೋಷಕರ ನಿರ್ಲಕ್ಷ್ಯ... ಇವೆಲ್ಲ ಅನಕ್ಷರತೆಗೆ ಕಾರಣಗಳು.
ಪರಿಸ್ಥಿತಿ ಹೀಗಿರುವಾಗ ಬೀದಿ ಮಕ್ಕಳಿಗೆ, ಬಡವರ ಮಕ್ಕಳಿಗೆ ಪಾಠ ಹೇಳುವುದು, ನಿತ್ಯ ಶಾಲೆ ನಡೆಸುವುದು, ಅವರಿಗೆ ಅಕ್ಷರ ಕಲಿಸುವುದು ತಮಾಷೆಯೇನಲ್ಲ. ಅಂತಹ ಸಾಹಸಕ್ಕೆ ಯಾರೂ ಕೈಹಾಕುವುದಿಲ್ಲ.
ಆದರೆ ಇಲ್ಲೊಬ್ಬರಿದ್ದಾರೆ. ಬೀದಿಬದಿಯ, ಕೂಲಿಕಾರ್ಮಿಕರ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಬಡಮಕ್ಕಳಿಗೆ ವಿದ್ಯಾದಾನವನ್ನು ತಪಸ್ಸಿನಂತೆ ಮಾಡುತ್ತಿದ್ದಾರೆ.
ಹೆಸರು ಲತಾ. ಎಂಜಿನಿಯರಿಂಗ್ ಪದವೀಧರೆ. ಪತಿಗೆ ಕೈತುಂಬ ಸಂಬಳ, ದುಡಿಯುವ ಅನಿವಾರ್ಯತೆ ಇಲ್ಲದಿರುವುದರಿಂದ ಗೃಹಿಣಿ. ಸುಮ್ಮನೆ ಕೂರುವ ಬದಲು ಬಡಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಕೈಜೋಡಿಸಿರುವವರು ಬಿಎ ಪದವೀಧರೆ ರೂಪ.
ಸದ್ಯ ರಾಜರಾಜೇಶ್ವರಿ ನಗರದ ಗ್ಲೋಬಲ್ ವಿಲೇಜ್ ಸಮೀಪದ ಕೃಷ್ಣನಗರ ಹಾಗೂ ಚಿಕ್ಕಲ್ಲಸಂದ್ರದ ಅರೆಹಳ್ಳಿ ಬಳಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಇವರ ಈ ಕೆಲಸಕ್ಕೆ ಹಣಕಾಸು ಸಹಾಯ ಮಾಡುತ್ತಿರುವುದು ಯೂತ್ ಫಾರ್ ಸೇವಾ. ನಿಮ್ಮಲ್ಲೂ ಸಮಾಜಸೇವೆಯ ಆಸಕ್ತಿಯಿದ್ದರೆ, ಮಕ್ಕಳಿಗೆ ಪುಸ್ತಕ, ಬಟ್ಟೆ ನೀಡಿ, ಇಲ್ಲವೇ ಶಿಕ್ಷಕರಾಗಿ ಇಂತಹ ಮಕ್ಕಳಿಗೆ ನೀವು ಸಹಾಯ ಮಾಡಬಹುದು.
ಉತ್ತರ ಕರ್ನಾಟಕದ ಮಕ್ಕಳು ಇಲ್ಲಿ ಅಕ್ಷರಾಭ್ಯಾಸ ಮಾಡುತ್ತಿರುವವರಲ್ಲಿ ಉತ್ತರ ಕರ್ನಾಟಕದವರೇ ಹೆಚ್ಚು. ಅಲ್ಲಿ ಬರ ಬಂದಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಸಾಕಷ್ಟು ಮಂದಿ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಇಲ್ಲಿಗೆ ಬಂದ ನಂತರ ಅವರ ಹೊಟ್ಟೆಪಾಡು ಮಾತ್ರ ಅವರಿಗೆ ಮುಖ್ಯವಾಗುತ್ತದೆ. ಮಕ್ಕಳ ಭವಿಷ್ಯದತ್ತ ಗಮನ ಹರಿಸುವುದಿಲ್ಲ. ಇಂತಹ ಮಕ್ಕಳನ್ನು ಪತ್ತೆ ಮಾಡಿ ಅವರಿಗೆ ಶಿಕ್ಷಣ ನೀಡುವುದು ಪ್ರಮುಖ ಉದ್ದೇಶ.
ಕಟ್ಟಡ ನಿರ್ಮಾಣ ನಡೆಯುತ್ತಿರುವ ಸ್ಥಳಕ್ಕೆ ಹೋಗಿ ಅಂತಹ ಮಕ್ಕಳನ್ನು ಗುರುತಿಸಲಾಗುತ್ತದೆ. ಈಗ ಅಂತಹ 30 ಮಕ್ಕಳನ್ನು ಗುರುತಿಸಿ ಅಲ್ಲಿಯೇ ಪಾಠ ಹೇಳಿಕೊಡಲಾಗುತ್ತಿದೆ. ಇಬ್ಬರು ಯುವತಿಯರು ಪಾಠ ಹೇಳಿಕೊಡುತ್ತಾರೆ. ಅವರಿಗೆ ಸಂಬಳ ನೀಡಲಾಗುತ್ತಿದೆ. ಈ 30 ಮಕ್ಕಳಲ್ಲಿ ಎಲ್ಲರೂ ಕಲಿಯಬೇಕೆಂಬುದು ನಮ್ಮ ಆಸೆ. ಕೊನೆಪಕ್ಷ ಅವರಲ್ಲಿ ಅರ್ಧ ಮಂದಿ ಕಲಿತರೆ ಈ ಶ್ರಮಕ್ಕೆ ಸಾರ್ಥಕತೆ ಎಂದಾಗ ಲತಾ ಅವರ ಕಣ್ಣಲ್ಲಿ ಸಮಾಧಾನದ ಛಾಯೆ.
ಪಾರ್ಕಿಂಗ್ ನಿಲ್ದಾಣವೇ ಶಾಲೆ
ಪೂರ್ಣಪ್ರಜ್ಞಾ ಲೇಔಟ್‌ನಲ್ಲಿ, ರಾಜರಾಜೇಶ್ವರಿ ನಗರ ಹಾಗೂ ಚಿಕ್ಕಲ್ಲಸಂದ್ರದಲ್ಲಿ ಶಾಲೆಗಳು ನಡೆಯುತ್ತಿವೆ. ಕಾರು ಪಾರ್ಕಿಂಗ್‌ನ ನೆಲಮಹಡಿ, ಕಾಮಗಾರಿ ನಡೆಯುತ್ತಿರುವ ಕಟ್ಟಡದಲ್ಲೇ ಒಂದು ಕೊಠಡಿಯನ್ನು ಮಾಲೀಕರು ಬಿಟ್ಟುಕೊಟ್ಟಿದ್ದಾರೆ. ಆ ಸ್ಥಳದಲ್ಲಿ ಪಾಠ ಮಾಡಲಾಗುತ್ತಿದೆ. ಬೆಳಗಿನಿಂದ ಮಧ್ಯಾಹ್ನದವರೆಗೂ ತರಗತಿಗಳು ನಡೆಯುತ್ತವೆ. ಮಧ್ಯಾಹ್ನದ ನಂತರ ಮನೆಗೆ ಹೋಗಿ ಪಾಠ ಅಭ್ಯಾಸ ಮಾಡಲು ಹೇಳುತ್ತೇವೆ. ಆದರೆ, ಅವರು ಮಕ್ಕಳ ಲಾಲನೆ, ಪೋಷಣೆ, ಮನೆಕೆಲಸದಲ್ಲಿ ನಿರತರಾಗುತ್ತಾರೆ. ಸಾಕಷ್ಟು ಮಕ್ಕಳು ಹಿಂದಿನ ದಿನ ಹೇಳಿಕೊಟ್ಟಿದ್ದನ್ನು ಮರುದಿನ ಮರೆತುಹೋಗುತ್ತಾರೆ. ಕೆಲವೊಮ್ಮೆ ಸಾಕಪ್ಪ ಈ ಕೆಲಸ ಅನಿಸುವಷ್ಟು ಸುಸ್ತಾಗುತ್ತದಂತೆ. ಆದರೆ ಛಲ ಬತ್ತಿಲ್ಲ. ಸಂಪರ್ಕ: 9900158351
-ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


