ಬೈಟುಕಾಫಿ

ಚೌಟರ ಚೌಕಿ

ಚೌಟರ ಚೌಕಿ
Published On :

ವಚನ ಚಳವಳಿಯಲ್ಲಿ ಹಾದುಹೋದ ಮಿಂಚಿನ ಗೆರೆ ಅಲ್ಲಮಪ್ರಭು. ಅನುಭಾವದ ಮಹಾತುಣುಕು. ಹೀಗಾಗಿ, ಅವರ ವಚನಗಳೂ ಅನುಭಾವದ ನೆಲೆಯಿಂದ ಹುಟ್ಟಿದವು. ಬೆಡಗಿನ ರೂಪ ತಾಳಿದವು. ವಾಸ್ತವದಿಂದ ಬೇರೆಯಾದ ಶಾಶ್ವತವಾದ ಜಗತ್ತಿನೊಂದರ ಕಡೆಗೆ ಕರೆದೊಯ್ದವು. ಅತೀತವಾದಿಯಾಗಿ ಉಸಿರಾಡಿ, ಬಸವಾದಿ ಶರಣರಿಗೆ ಪ್ರಭುವಾದ 'ಅಲ್ಲಮ' ಅತ್ಯುತ್ತಮ ಕವಿಯೂ ಹೌದು, ಸಾಧಕನೂ ಹೌದು.
ಅರಸುಮನೆತನದ ದಿರಿಸು ಕಳಚಿ, ಬುದ್ಧನಂತೆ ಮನೆಬಿಟ್ಟಾಗ ಅಲ್ಲಮನ ಕಣ್ಮನದೊಳಗೆ ಗಿರಕಿಹೊಡೆದದ್ದು ಸಾಮಾಜಿಕ ಚಿಂತನೆಗಳೇ. ಲೋಲುಪತೆಯನ್ನು ಮೆಟ್ಟಿ ಬಸವಣ್ಣನ ಕಲ್ಯಾಣಕ್ಕೆ ಬಂದ ಅಲ್ಲಮ ಅನುಭವ ಮಂಟಪದ ಶೂನ್ಯಸಿಂಹಾಸನದ ಅಧ್ಯಕ್ಷನಾದ. ಅನುಭವದ ನಡೆ, ಅನುಭಾವದ ನುಡಿ. ಸಂಪತ್ತಿನ 'ಮಹಾಮನೆ' ತೊರೆದು ಅಧ್ಯಾತ್ಮದ 'ಮಹಾಮನೆ'ಗೆ ದೀಪನಾದ.
ಈ ಅಲ್ಲಮನ ಹೆಸರಿನಲ್ಲಿ ದಕ್ಷಿಣ ಕನ್ನಡದಲ್ಲಾಗಲೇ ಪೀಠ ಸ್ಥಾಪನೆಯಾಗಿದೆ. ಪೀಠದ ಪ್ರಧಾನ ನಿರ್ದೇಶಕರು, ಹಿರಿಯ ಸಾಹಿತಿಗಳಾದ ಡಾ. ನಾ. ಮೊಗಸಾಲೆ. ಈ ಪೀಠವನ್ನು ನೀವಾಗಲೇ ನೋಡಿರಲೂಬಹುದು. ಮೂಡುಬಿದ್ರೆ ಮತ್ತು ಕಾರ್ಕಳವನ್ನು ಸಂಪರ್ಕಿಸುವ ರಾಜರಸ್ತೆ ನಡುವೆ ಸಿಗುವ ಪುಟ್ಟ ಪೇಟೆ ಬೆಳುವಾಯಿ. ಅಲ್ಲಿ ನಿಂತು ಪಶ್ಚಿಮಕ್ಕೆ ತಿರುಗಿ, ದೂರ ಪಡುಬಿದ್ರೆಗೆ ಬೆಳ್ಮಣ್ಣು ಮೂಲಕ ಹಾದುಹೋಗುವ ರಸ್ತೆಯಲ್ಲಿ 5 ಕಿ.ಮೀ. ಮುಂದೆ ಬರಬೇಕು. ಮೊದಲು ಬಯಲು. ಆಮೇಲೆ ಏರು. ಮತ್ತೆ ಕಾಡು. ಒಂಥರ ಆಗುಂಬೆಯ ನೆನಪು. ಅಲ್ಲೇ ಮುಂದಕ್ಕೆ ಹೋದರೆ ಸಿಗುವುದು ಕಾಂತೇಶ್ವರ ನಗರ. ಅಲ್ಲಮನ ಪೀಠ ನೆಲೆಯಾಗಿರುವುದೂ ಇದೇ ಕಾಂತಾವರದಲ್ಲಿ. ಇದೇ ಕಾಂತಾವರದಲ್ಲಿ ಏ.12ರಿಂದ 14ರ ವರೆಗೆ 'ಚೌಟರ ಚೌಕಿ' ಬಯಲು ರಂಗಮಂದಿರದ ಶುಭಾರಂಭ. ಈ ಮೂರೂ ದಿನ ರಂಗಾನುಭವ ಸಮಾರಂಭವಿರುತ್ತದೆ.
ಚೌಕಿಯ ವಿಶೇಷವೇನು?
ಈ ಬದುಕೇ ಬಯಲಾಟದ ಹಾಗೆ ಎಂಬುದು ಅಲ್ಲಮನ ಥಿಯರಿ. ಹೀಗಾಗಿ, ಮಹಾಮನೆಯ ಬಲಭಾಗದಲ್ಲಿರುವ ತೆಂಗಿನತೋಪಿನ ತಂಪಿನಲ್ಲಿ ಎಲ್ಲರೂ ಕುಳಿತು ನಾಟಕ ನೋಡಬೇಕೆನ್ನುವುದು ಪೀಠದ ಆಶಯ. ಈ ಬಯಲು ರಂಗಮಂದಿರದ ವಿಸ್ತೀರ್ಣ 800 ಅಡಿ ಉದ್ದ, 800 ಅಡಿ ಅಗಲ. ತೆಂಗಿನತೋಟವನ್ನೇ ಗ್ಯಾಲರಿಯ ಸ್ವರೂಪಕ್ಕೆ ಪರಿವರ್ತಿಸಲಾಗಿದೆ. ಈ 'ಚೌಟರ ಚೌಕಿ' ಬಯಲುರಂಗಮಂದಿರದ ಹಿಂದೆ ಡಾ.ಡಿ.ಕೆ. ಚೌಟರ ಕಲಾತ್ಮಕ ಕಲ್ಪನೆಗಳಿದ್ದರೆ ಮುಂದೆ ಭಾರತೀಯ ಭಾಷೆಗಳಲ್ಲಿರುವ ಬಹುಮುಖ್ಯ ನಾಟಕಗಳೆಲ್ಲ ಇಲ್ಲಿ ಅರಳುತ್ತಲೇ ಇರಬೇಕೆನ್ನುವುದು ಪೀಠದ ಮಹಾದಾಸೆ.
ಪೀಠದ ಕನಸು ಸಾಕಾರಗೊಳ್ಳಲಿ...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.