ಬೈಟುಕಾಫಿ

ಒಂದೆಲಗ- ಬರಿಯ ಎಲೆಯಲ್ಲ, ಕ್ಲಿನಿಕ್!

Published On :

ಒಂದೆಲಗ ಯಾರಿಗೆ ತಾನೇ ಗೊತ್ತಿಲ್ಲ? ನೋಡಿದರೆ ಖುಷಿ ಕೊಡುವ, ಕಣ್ಮನಗಳನ್ನು ತಣಿಸುವ ಹಸುರಿನಿಂದ ಕೂಡಿರುವ ಈ ಒಂದೆಲಗದಲ್ಲಿ ಒಂದು ಕ್ಲಿನಿಕ್ಕೇ ಇದೆ.
ಒಂದೆಲಗ, ಬ್ರಾಹ್ಮಿ, ಮಂದಾರನಜಡೆ ಹೀಗೆ ಒಂದೊಂದು ಭಾಗದಲ್ಲಿ ಒಂದೊಂದು ಹೆಸರಿನಿಂದ ಕರೆಸಿಕೊಳ್ಳುವ ಈ ಸಸ್ಯ ಆಹಾರವಾಗಿಯೂ, ಔಷಧವಾಗಿಯೂ ಉಪಯೋಗಿ. ಮಿದುಳಿನ ಟಾನಿಕ್ ಎಂದೇ ಕರೆಯುವ ಒಂದೆಲಗವನ್ನು ಮಕ್ಕಳ ಜ್ಞಾಪಕಶಕ್ತಿ ವೃದ್ಧಿಗಾಗಿ ಪ್ರತಿದಿನ ಬೆಳಗ್ಗೆ ಕೊಡುವ ಪದ್ಧತಿಯಿದೆ. ಇದರ 4-5 ಎಲೆಯನ್ನು ಪ್ರತಿನಿತ್ಯ ಸೇವಿಸುವುದರಿಂದ ಉಗ್ಗುವಿಕೆ ಇಲ್ಲವಾಗುವುದು. ಅಲ್ಲದೇ ಇದು ರಕ್ತಹೀನತೆಯನ್ನೂ ನಿವಾರಿಸುತ್ತದೆ. ನೀರಿನ ಆಶ್ರಯವಿರುವಲ್ಲಿ, ಗದ್ದೆಗಳ ಬದುಗಳ ಮೇಲೆ ಇದು ತಾನಾಗಿಯೇ ಬೆಳೆಯುತ್ತದೆ.
ದಕ್ಷಿಣಕನ್ನಡ ಹಾಗೂ ಉತ್ತರಕನ್ನಡ ಭಾಗಗಳಲ್ಲಿ ಬೇಸಿಗೆ ಕಾಲದಲ್ಲಿ ಪ್ರತಿದಿನ ಒಂದೆಲಗದ ತಂಬುಳಿ ಇರಲೇಬೇಕು. ದೇಹಕ್ಕೆ ತಂಪು ಹಾಗೂ ಹಿತ ನೀಡುವ ಸಸ್ಯ ಈ ಒಂದೆಲಗ. 8-10 ಒಂದೆಲಗದ ಗಿಡವನ್ನು ಬೇರು ಸಹಿತ ಕಿತ್ತು ನೀರಿನಿಂದ ಚೆನ್ನಾಗಿ ತೊಳೆಯಬೇಕು. ಇದಕ್ಕೆ ಸ್ವಲ್ಪ ತೆಂಗಿನಕಾಯಿತುರಿ ಸೇರಿಸಿ ನುಣ್ಣಗೆ ರುಬ್ಬಬೇಕು. ರುಬ್ಬಿದ ಮಿಶ್ರಣಕ್ಕೆ ಕಡೆದ ಮಜ್ಜಿಗೆ, ರುಚಿಗೆ ಸ್ವಲ್ಪ ಉಪ್ಪು ಸೇರಿಸಿ ಕೊನೆಯಲ್ಲಿ ಜಿರಿಗೆ-ಕರಿಬೇವಿನ ಒಗ್ಗರಣೆ ಕೊಡಬೇಕು. ಈಗ ತಂಬುಳಿ ರೆಡಿ. ಇದನ್ನು ಅನ್ನದ ಜತೆ ಅಥವಾ ಹಾಗೇ ಕುಡಿಯಬಹುದು. ದೇಹದ ಉಷ್ಣತೆ ನಿವಾರಿಸಲು ಒಂದೆಲಗದ ತಂಬುಳಿ ದಿವ್ಯೌಷಧ. ಮಳೆಗಾಲದಲ್ಲಿ ಹೇರಳವಾಗಿ ಸಿಗುವ ಒಂದೆಲಗದಿಂದ ಬಿಸಿಯಾದ ಪಳದ್ಯ ತಯಾರಿಸಿಯೂ ಉಪಯೋಗಿಸುತ್ತಾರೆ.
ಒಂದೆಲಗದ ರಸಕ್ಕೆ ಕೊಬ್ಬರಿ ಎಣ್ಣೆ ಸೇರಿಸಿ ತಯಾರಿಸಿದ ಎಣ್ಣೆಯಿಂದ ಕೂದಲು ಸೋಂಪಾಗಿ ಬೆಳೆಯುತ್ತದೆ. ಇದರ ತೈಲ ಮಾರುಕಟ್ಟೆಗಳಲ್ಲೂ ಸಿಗುತ್ತದೆ.
ಕೆಮ್ಮು, ಉಸಿರಾಟದ ತೊಂದರೆ ಇರುವವರು ಇದರ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುತ್ತಾರೆ. ಮಲಬದ್ಧತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸುತ್ತಾರೆ. ಈಗೀಗ ಒಂದೆಲಗದ ಪುಡಿಯೂ ಮಾರುಕಟ್ಟೆಯಲ್ಲಿ ಸಿಗುತ್ತದೆ.
ಶುಶ್ರುತ ಸಂಹಿತೆಯಲ್ಲಿಯೂ ಬ್ರಾಹ್ಮಿಯ ಉಲ್ಲೇಖವಿದೆ. ಏಷ್ಯಾ ಇದರ ಮೂಲಸ್ಥಾನವೆಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಇದರ ವೈಜ್ಞಾನಿಕ ಹೆಸರು, ಸೆಂಟಿಲ್ಲಾ ಏಸಿಯಾಟಿಕ್. ಪಾರಂಪರಿಕ ಔಷಧವಾಗಿಯೂ ಬಳಕೆಯಲ್ಲಿದೆ. ಇದರ ಎಲ್ಲಾ ಭಾಗಗಳೂ ಆರೋಗ್ಯ ರಕ್ಷಕ ಗುಣಗಳನ್ನು ಹೊಂದಿರುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ನರರೋಗಗಳಿಗೆ ಇದು ದಿವ್ಯೌಷಧವೆಂದು ಆಯುರ್ವೇದದಲ್ಲಿ ಪರಿಗಣಿಸಿದ್ದಾರೆ. ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದು ಸಿಗುವುದರಿಂದ ಆಗ ಒಣಗಿಸಿ ಸಂಗ್ರಹಿಸಿಟ್ಟುಕೊಳ್ಳಬಹುದು. ಹಾಲಿನಲ್ಲಿ ಜೀರಿಗೆಪುಡಿ ಹಾಗೂ ಒಣಗಿಸಿ ಪುಡಿಮಾಡಿಟ್ಟುಕೊಂಡ ಒಂದೆಲಗದ ಪುಡಿಯನ್ನು ಬೆರೆಸಿ ಸೇವಿಸಿದರೆ ಬಾಣಂತಿಯರಲ್ಲಿ ಎದೆಹಾಲು ವೃದ್ಧಿಯಾಗುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.


-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.