ಬೈಟುಕಾಫಿ

ಅಪ್ಪಟ ಮಾಲು

Published On :

ಬಳಕೆದಾರ ಎಂಬ ಪದವನ್ನು ನಾವು ಕೇಳಿಯೇ ಇರುತ್ತೇವೆ. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಬಳಕೆದಾರರೇ. ಬೇಕೋ ಬೇಡವೋ, ನಮ್ಮೆಲ್ಲರಲ್ಲೂ ಬಳಕೆದಾರತನ ಜಾಗೃತವಾಗಿಯೇ ಇರುತ್ತದೆ. ಕಂಡಕ್ಟರ್ ಐವತ್ತುಪೈಸೆ ಕಡಿಮೆ ಚಿಲ್ಲರೆ ಕೊಟ್ಟರೆ, ಹಾಲಿನವನು ಒಂದು ದಿವಸ ಹಳತು ಪ್ಯಾಕೆಟ್ ಕೊಟ್ಟರೆ ನಮ್ಮ ಬಳಕೆದಾರತನ ಎಚ್ಚೆತ್ತುಕೊಳ್ಳುತ್ತದೆ. ಯಾರೂ ನಮಗೆ ಕೊಡುವ ಮಾಲಿನಲ್ಲಿ ಧೋಖಾ ಎಸಗಬಾರದು ಎಂಬುದು ನಮ್ಮ ಕಾಳಜಿ. ಹಾಗೆಯೇ ನಡೆದುಕೊಳ್ಳುತ್ತೇವೆ ಕೂಡ. ಅದು ನಮ್ಮ ಮಟ್ಟಿಗೆ ಪ್ರಾಮಾಣಿಕ ಕಾಳಜಿಯೇ. ನಮಗೆ ಸಿಗಬೇಕಾದ ಪರಿಪೂರ್ಣತೆಯನ್ನು ನಾವೇ ಪಡೆಯಲು ಹೋರಾಡಲಿಲ್ಲವೆಂದಾದರೆ ಇನ್ಯಾರು ಹೋರಾಡುತ್ತಾರೆ?
ಪ್ರೀತಿಯ ವಿಷಯದಲ್ಲೂ ನಮ್ಮದು ಇದೇ ಧೋರಣೆಯೇ. ಅವನು, ಅವಳ ಪ್ರೀತಿ ಕಡಿಮೆಯಾಯಿತೆಂದು ಕನವರಿಸುತ್ತಾನೆ. ಇವಳು, ಇವನ ಪ್ರೀತಿ ಇಡಿ ಇಡಿಯಾಗಿ ತನಗೆ ಬೇಕೆಂದು ಹಂಬಲಿಸುತ್ತಾಳೆ. ಗಂಡ ತನಗೆ ಸಮಯ ಮೀಸಲಿಡಬೇಕೆಂದು ಹೆಂಡತಿಯ ಬೇಡಿಕೆ. ಹೆಂಡತಿ ತನಗೆ ಮಾಡುವ ಸೇವೆಯಲ್ಲಿ ಕಿಂಚಿತ್ತೂ ಲೋಪವಾಗಬಾರದೆಂಬುದು ಈತನ ಹಕ್ಕೊತ್ತಾಯ. ತಾನು ಪಡೆಯುವ ಮಟ್ಟಿಗೆ ಇದು ಪೂರ್ಣತೆಯ ಹಂಬಲವೇ. ಆದರೆ ಕೊಡುವಾಗ?
ನಿಮ್ಮನ್ನೇ ಒಂದು ಸಲ ಆ ಅಂಗಡಿಯಾತನ, ಸೇವೆ ನೀಡುವಾತನ ಸ್ಥಾನದಲ್ಲಿ ಕಲ್ಪಿಸಿಕೊಂಡು ನೋಡಿ. ಆತನಿಂದ ಸೇವೆ ಪಡೆಯುವಾಗ ನೀವು ಹೇಗೆ ಹಂಡ್ರೆಡ್ ಪರ್ಸೆಂಟ್ ಬಯಸುತ್ತೀರೋ, ಕೊಡುವಾಗಲೂ ಅಷ್ಟೇ ಕೊಡಬೇಕಲ್ಲವೇ? ಹೆಂಡತಿಯಿಂದ ಸಂಪೂರ್ಣ ಗಮನ ಬಯಸುವವರು ಆಕೆಗೆ ಅಷ್ಟೇ ಅಕ್ಕರಾಸ್ತೆ ನೀಡಬೇಕಲ್ಲವೇ? ಯಾರಿಂದ ಪ್ರೀತಿ ಬಯಸುತ್ತೇವೊ, ಅವರಿಗೆ ನಾವೂ ಅಷ್ಟೇ ಪ್ರೀತಿ ನೀಡಬೇಕಾದ್ದು ನ್ಯಾಯ ತಾನೆ? ಆದರೆ, ದುರದೃಷ್ಟ ಎಂದರೆ, ನಾವು ಇಲ್ಲೇ ಸೋಲುತ್ತೇವೆ. ಪಡೆಯಬೇಕಾದ್ದನ್ನು ಪಡೆಯುತ್ತೇವೆ, ಕೊಡಬೇಕಾದ್ದನ್ನು ಕೊಡುವುದಿಲ್ಲ. ಇದೇ ಎಲ್ಲ ಸಂಬಂಧಗಳ ಹಿನ್ನೆಲೆಯಲ್ಲಿ ಪಡಿಮೂಡುವ ಬಿರುಕಿನ ಮೂಲ ಕಾರಣಗಳಲ್ಲಿ  ಪ್ರಮುಖವಾದುದು.
ಪ್ರೀತಿ, ಮಾನವೀಯತೆ, ಕಾಳಜಿಗಳನ್ನು ವ್ಯಾಪಾರದ ಪರಿಭಾಷೆಯಲ್ಲಿ ನೋಡಬಹುದೇ ಎಂಬುದು ಎದುರಾಗಬಹುದಾದ ಪ್ರಶ್ನೆ. ಆಧುನಿಕ ಕಾಲದ ಮಾನವ ಸಂಬಂಧಗಳನ್ನೂ ನಾವು ವ್ಯವಹಾರದ ಪರಿಭಾಷೆಯಲ್ಲೇ ವಿವರಿಸಿಕೊಳ್ಳಬೇಕಾಗುತ್ತದೆ. ಅಪ್ಪಟ ಮಾಲು ನೀಡುವಾಗ ಮನಸ್ಸಿಗೆ ಸಂತೋಷವಿರುತ್ತದೆ. ಪ್ರಾಮಾಣಿಕತೆಯಿಂದ ತುಂಬಿ ಬರುವ ಸಂತೋಷ ಅದು. ಇನ್ನೊಬ್ಬರಿಗೆ ನಮ್ಮಿಂದಾಗಿ ಸಂತೋಷ ಆದಾಗ ಉಂಟಾಗುತ್ತದಲ್ಲ, ಅಂಥ ಸಂತೋಷ. ಮಾತು, ಕ್ರಿಯೆ, ಸ್ಪರ್ಶ, ಪ್ರೀತಿ ಎಲ್ಲದರಲ್ಲೂ ಇಂಥ ಅಪ್ಪಟ ಮಾಲು ಇದ್ದರೆ ಜೀವನ ವ್ಯವಹಾರದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಒಳ್ಳೆಯದು.


- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.