ಕಣ್ಣೀರಿಗೂ ಬಗ್ಗದ ಶೂನ್ಯವಾಗಿ...

ಮನಸ್ಸಿನಲ್ಲಿ ಏಳುತಿರುವ ಪ್ರೀತಿಯ ಭಾವನೆಗಳ ಅಲೆಗಳಿಗೆ ಆಕರ್ಷಣೆಯ ನಾಮಾಂಕಿತ ಮಾಡಿ ದೂರ ಸರಿಯತ್ನಿಸಿದಷ್ಟೂ ಹತ್ತಿರದಲ್ಲೇ ಬಂದು ನಿಲ್ಲುತ್ತಾನೆ. ಮುಂಜಾನೆಯ ಅರುಣರಾಗದಿಂದ ಮುಸ್ಸಂಜೆಯ ರಾಗರತಿಯನು ದಾಟಿ ನಕ್ಷತ್ರಗಳು ತಮ್ಮ ಕೆಲಸವ ಮುಗಿಸಿ ಮತ್ತೊಂದು ದಿನ ಹೊಸ್ತಿಲಲಿ ನಿಂತಾಗಲೂ ಅವನ ಗುಂಗಿನಿಂದ ಹೊರಬರಲು ಸಾಧ್ಯವೇ ಇಲ್ಲ ಎನ್ನುವ ಮಟ್ಟಿಗೆ ಆವರಿಸಿ ಬಿಟ್ಟಿದ್ದಾನೆ. ಆದರೆ ವಾಸ್ತವವೇ ಬೇರೆ. ಇಲ್ಲಿ ಜಾತಿಯ ಗೋಡೆ ಇದೆ. ಧರ್ಮದ ಏರು ಶಿಖರ ಹಿಮಾಲಯ ಕಡಿದರೂ ಕೆಡವಲಾದಂತೆ ತಲೆ ಎತ್ತಿದೆ.
ಬರೋಬ್ಬರಿ ಹತ್ತು ವರ್ಷಗಳ ಪ್ರೇಮ. ನಾನು ಕೇಳಲೂ ಇಲ್ಲ ಅವನು ಹೇಳಲೂ ಇಲ್ಲ. ಪ್ರೇಮಲೋಕದ ಭಾವನೆಗಳ ಗುಂಗಲಿ ತೇಲಾಡುತ್ತಿದ್ದ ನಮಗೆ ಜಾತಿ, ಧರ್ಮ ಅನಿವಾರ್ಯವೂ ಅನ್ನಿಸಲಿಲ್ಲ. ದಿನಗಳು ಕಳೆದವು. ಪ್ರತಿ ವರ್ಷವೂ ಪ್ರೀತಿಯ ಹುಟ್ಟು ಹಬ್ಬದ ಸಂಭ್ರಮ ಆಚರಣೆಯೂ ಆಯಿತು. ಹತ್ತನೇ ವರ್ಷದ ಸಂಭ್ರಮದಲಿ ಅವನು ಕೊಟ್ಟ, ಒತ್ತಿದಾಗಲೆಲ್ಲಾ 'ಐ ಲವ್ ಯು' ಅಂತ ಹೇಳುವ ಕೆಂಪು ಹೃದಯ ಇನ್ನೂ ತನ್ನ ಶಲ್ನ ಬ್ಯಾಟರಿಯನ್ನೇ ಮುಗಿಸಿಲ್ಲ. ಆಗಲೇ ತಿಳಿ ನೀರಿನಂತಹ ಪ್ರೀತಿಯ ಕಡಲಲಿ ನಾವು ಬೇಡದೇ ಆಕಸ್ಮಿಕವಾಗಿ ತಿಳಿದ ಜಾತಿ, ಧರ್ಮ ಎಂಬ ಹುದುಗಿ ಹೋಗದ ಸುನಾಮಿ ಎದ್ದಿದೆ! ಕಡಿದು ಬಿಡೋಣ ನಮ್ಮ ಬಂಧವ ಎಂದಾಗ ಅವನು ಒಮ್ಮೆಯೂ ಪ್ರೀತಿಸು ಎಂದು ಪೀಡಿಸಲಿಲ್ಲ. ಅಂದು ಪ್ರೇಮ ಸೇತುವೆಯ ಕೆಡವಿ ನಿಂತಾಗ 'ನೆನಪುಗಳನ್ನು ಹೊತ್ತೊಯ್ಯಲು ಸಾಧ್ಯವೇ?' ಎಂದು ಕೇಳಬೇಕೆಂದಿದ್ದೆ. ಉಮ್ಮಳಿಸಿ ಬರುತ್ತಿದ್ದ ಹೃದಯದ ಕಣ್ಣಿರ ಹೊಳೆಯ ಒತ್ತಿ ಹಿಡಿದಿದ್ದೆ. ಅದೇಕೋ ಕಣ್ಣ ಹನಿಗಳು ಕೆನ್ನೆ ತೋಯಿಸುತ್ತಾ ಮಾತನಾಡಿದ್ದನ್ನು ಅವನು ಕೇಳಿಸಿಕೊಳ್ಳಲೇ ಇಲ್ಲ.
ಪ್ರೀತಿಯ ಮೊರೆತ ಇಳಿವು ಕಂಡ ಆ ದಿನವ ಮರೆಯಲು ಸಾಧ್ಯವೇ? ಅವನೇಕೋ ಅಂದು ಮೌನ ತಳೆದಿದ್ದ ಎನಿಸಲಿಲ್ಲ. ಆದರೆ ಮಾತುಗಳನ್ನೂ ಆಡಲಿಲ್ಲ. ಏನಾಗಿತ್ತು ಆ ದಿನ? ತೊರೆದು ಹೋಗುವಾಗ ಚೂರೇಚೂರು ಸಮಾಧಾನ ಇರಲಿ, ಭರವಸೆಯ ಭಾಷೆಯನ್ನೂ ನೀಡಲಿಲ್ಲ. ಹತ್ತು ವರುಷದಿಂದ ಹನಿಹನಿ ಪ್ರೀತಿಯಲಿ ನೆನದಿದ್ದ ಅವನಿಗೆ ಬೇಡವಾಗಿ ಹೋದೆನಾ? ಅಥವಾ ಬೀಳ್ಕೊಡುಗೆ ಅನಿವಾರ್ಯವಾಗಿತ್ತಾ? ಇಂದಿಗೂ ಕೆದಕಿ ಕೆದಕಿ ಹುಡುಕುತ್ತಿದ್ದರೂ ಸಿಕ್ಕಿಲ್ಲ ಉತ್ತರ.
ನೋಡನೋಡುತ್ತಲೇ ಅವನು ಹೊರಟು ಹೋಗಿದ್ದ. ಅವನ ಪ್ರೀತಿಯ ಹೊಳೆಯಲಿ ಒದ್ದೆಯ ಮುದ್ದೆಯಾಗಿದ್ದ ನಾನು ಕೊರಗುತ್ತಿದ್ದೆ. ಹಿಂತಿರುಗಿ ಬರಬಹುದೆಂದು ನನ್ನೆರಡು ಬೆರಳುಗಳ ತಿರುಗಿಸಿಕೊಂಡೇ ಇದ್ದೆ. ಪ್ರತಿಕ್ಷಣವೂ ಅವನ ಸನಿಹಕ್ಕಾಗಿ ಹಂಬಲಿಸುತ್ತಿದ್ದೆ. 'ಮತ್ತೆ ಒಮ್ಮೆ ಸಿಕ್ಕರೆ ಸಾಕು, ಜೀವನ ಪೂರ್ತಿಗಾಗುವಷ್ಟು ಕಣ್ತುಂಬಿಕೊಳ್ಳಬೇಕು. ಅವನ ಎದೆಗೊರಗಿ ಕಣ್ಣೀರ ಕೊಳದಲ್ಲಿ ಮುಳುಗಬೇಕು. ಕಣ್ಣಲ್ಲಿ ಕಣ್ಣಿಟ್ಟು ಯಾರೂ ಕಾಣದ ಊರಲ್ಲಿ ಅವನೊಂದಿಗೆ ಕಳೆದು ಹೋಗಬೇಕು. ಅವನ ಹೃದಯ ಬಡಿತದ ಸದ್ದು ಕೇಳುತ್ತಾ ನನ್ನ ಹೃದಯದ ಸದ್ದು ಅಡಗಬೇಕು' ಅಂತೆಲ್ಲಾ ಅನ್ನಿಸುತ್ತಲಿದ್ದರೂ ಅವನು ಮಾತ್ರ ತನಗೇನೂ ಆಗೇ ಇಲ್ಲ ಎನ್ನುವಂತೆ ಇದ್ದ!!!
ಇದೆಲ್ಲಾ ಆಗಿ ಸುಮಾರು ವರುಷಗಳೇ ಕಳೆದಿದೆ. ಅವನ ದೃಷ್ಟಿಯಲ್ಲಿ ನಾನು ಏನು ಅಂತ ಗೊತ್ತಿಲ್ಲ. ಆದರೆ ನನಗೆ ಮಾತ್ರ ಅವನ ಇರುವಿಕೆ ಇನ್ನೂ ಭಾಸವಾಗುತ್ತಲೇ ಇದೆ. ಅವನು ಕೊಟ್ಟ ಜೋಡಿ ಬಳೆಗಳಲ್ಲಿ, ಗೋಡೆಗೆ ನೇತು ಹಾಕಿರುವ ಕೆಂಪು ಹೃದಯದಲ್ಲಿ, ಸದ್ದು ಮಾಡದೆ ತಿರುಗುವ ನನ್ನ ಕೈ ಗಡಿಯಾರದಲ್ಲಿ, ಆಗಾಗ ಪುಸ್ತಕಗಳ ಮಧ್ಯೆ ಸಿಗುವ ಗ್ರೀಟಿಂಗ್ ಕಾರ್ಡಿನಲ್ಲಿ, ಅವನಿಗಾಗಿ ಮುಂಗುರುಳ ತೆಗೆದು ಬಾಚುತ್ತಿದ್ದ ಕೂದಲಿನಲ್ಲಿ ಅವನೇ ಕೈಯಾಡಿಸಿ ಕಿವಿಯ ಹಿಂದೆ ಸರಿಸಿದಂತೆ...
ಅವನ ದೃಷ್ಟಿಯಲಿ ನಾನು ಓಡಿ ಹೋಗಲು ಹೆದರಿದ ಹೇಡಿ. ಪ್ರೀತಿಸಿ ಅರ್ಧದಲ್ಲೇ ಕೈಕೊಟ್ಟ ಪಾಪಿ. ನನಗಾಗಿ ಪ್ರಾಣವನ್ನೂ ಕೊಡಲೂ ಸಿದ್ದನಿದ್ದ. ಆದರೆ ನಾನೇಕೆ ಅಂದು ಹಿಂದೇಟು ಹಾಕಿದೆನೋ ಗೊತ್ತಿಲ್ಲ. ನಿನ್ನ ದಾರಿ ನಿನಗೆ. ನಾನು ಜೊತೆಯಾಗಲು ಸಾಧ್ಯವಿಲ್ಲ. ಹರೆಯದ ವಯಸ್ಸಿನಲ್ಲಿ ಗೆಳೆಯ ಬೇಕೆನಿಸಿದ್ದು ಸತ್ಯ. ಆಗ ಸಿಕ್ಕವನೇ ನೀನು. ಮಂಗನ ಮಾಡಿ ಸುತ್ತಿದೆ, ನನ್ನ ವಯಸ್ಸಿನ ಸುಂದರ ಭಾವನೆಗಳಿಗೆ ನೀರನೆರೆದೆ. ಇಂದು ಸಾಕಾಗಿದೆ ದೂರ ಸರಿ. ನೀನು ಬೋರಾಗಿದ್ದೀಯ. ಇನ್ನು ನಿನ್ನ ಸಹಿಸಲು ಸಾಧ್ಯವಿಲ್ಲ ಎಂದಾಗ ಅವನ ಮುಖದಲ್ಲಿ ಶೂನ್ಯದ ನರ್ತನ ಎದ್ದು ನಲಿಯುತ್ತಿತ್ತು. ಅದೆಷ್ಟು ಶಪಿಸಿದನೋ ಆ ಭಗವಂತನೇ ಬಲ್ಲ.
ಅವನು, ಈಗಲೂ ಮತ್ತೆ ಮತ್ತೆ ನೆನಪಾಗುತ್ತಾನೆ. ಬಿರುಬೇಸಿಗೆಯಲ್ಲೂ, ಶಿಶಿರನ ಇಬ್ಬನಿಯಲ್ಲೂ, ಮಳೆಯ ಮರದ ಹನಿಗಳಲ್ಲೂ... ಪ್ರತಿದಿನದ ಸೂರ್ಯ ಉದಯಿಸಿದಾಗಲೂ ಅವನಿಗಾಗಿ ಹುಡುಕುತ್ತೇನೆ... ಉಡುಗೊರೆಗಳಲ್ಲಿ, ನನ್ನ ಕನ್ನಡಿಯ ಬಿಂಬದ ಮುಗುಳ್ನಗೆಯಲ್ಲಿ, ನಡೆಯುವ ಪ್ರತಿ ಹೆಜ್ಜೆಯಲ್ಲಿ ಘಲ್ಲೆನ್ನುವ ಗೆಜ್ಜೆಯ ಸದ್ದಿನಲ್ಲಿ... ಮತ್ತೆ ಸಿಗುತ್ತಾನೆ ಎಂಬ ಭರವಸೆಯಿಂದಲ್ಲ. ಸಿಗದಿದ್ದರೂ ನೀನು ನನ್ನಲ್ಲೇ ಇರುವೆ ಎನ್ನುತಾ... ನೀನು ಬಿಟ್ಟು ಹೋದ ಹಾಗೆಯೇ ಇದ್ದಾಳೆ ಈ ಹೇಡಿ ನಿನ್ನ ನೆನಪಲ್ಲಿ ಖುಷಿಯಾಗಿ ಕೆಲವೊಮ್ಮೆ ಕಣ್ಣೀರಿಗೂ ಬಗ್ಗದ ಶೂನ್ಯವಾಗಿ ಎನ್ನುತ್ತಾ...
= ಜಮುನಾ ರಾಣಿ ಎಚ್.ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


