ಹೊಸ ಬಾಳು ಕಟ್ಟೋಣ ಬಾ...
ಬಾ ಒಲವೇ...ಪದೇ ಪದೇ ಕರೆದು ಅವಮಾನಿಸಲಾರೆ. ನಿನ್ನ ಕರೆಯುವುದೇ ಕಾಯಕವಲ್ಲ, ನನಗೂ ನೂರಾರು ಕೆಲಸಗಳಿವೆ...

ಬಾ ಒಲವೇ...
ಪದೇ ಪದೇ ಕರೆದು ಅವಮಾನಿಸಲಾರೆ. ನಿನ್ನ ಕರೆಯುವುದೇ ಕಾಯಕವಲ್ಲ, ನನಗೂ ನೂರಾರು ಕೆಲಸಗಳಿವೆ. ಜೊತೆಗೂಡಿ ಮಾಡಿದ, ಮಾಡದೇ ಬಿಟ್ಟ ಅದೆಷ್ಟೋ ಅರ್ಧಂಬರ್ಧವಾದ ಕೆಲಸಗಳು ಹಾಗೇ ಉಳಿದುಹೋಗಿವೆ. ಅವುಗಳನ್ನು ಪೂರ್ತಿ ಮಾಡೋಣ. ವಯಸ್ಸು ಯಾರಿಗೂ ಕಾಯಲ್ಲ. ಕಾಲ ಕ್ಯಾಲೆಂಡರಿನಂತೆ ವರ್ಷವರ್ಷವೂ ಮಗ್ಗಲು ಬದಲಾಯಿಸ್ತಾ ಇರುತ್ತೆ. ನಿನ್ನೆಯ ನೆನೆದು ನಾಳೆಗಳ ಸಾಯಿಸಬೇಡ.
ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದೂ ಕೇಳುತಿದೆ
ನನ್ನ ಕಲ್ಪನೆ ತನ್ನ ಕಡಲನೇ
ಚಿತ್ರಿಸಿ, ಚಿಂತಿಸಿ ಸುಯ್ಯುತಿದೆ...
ನಿನಗೂ ಗೊತ್ತು. ಇಲ್ಲದ್ದಕ್ಕೆ ಹಂಬಲಿಸುತ್ತಾ ಹೋದರೆ ಇದ್ದದ್ದನ್ನೂ ಕಳೆದು ಕೊಳ್ಳಬೇಕಾಗುತ್ತೆ ಅಂತ. ಹೊಸತು ಏನಾಗಲೀ ಸುಖವಷ್ಟೇ ಅಲ್ಲ, ದುಃಖವನ್ನೂ ತರುತ್ತೆ. ಅದರ ಎದುರುಗೊಳ್ಳುವಿಕೆಗೆ ನಾವು ಸಿದ್ಧರಾಗಬೇಕು ಅಷ್ಟೇ!
ನಾನಾಗಲೀ ನೀನಾಗಲೀ ಕಳೆದ ದಿನಗಳು ಎಷ್ಟು... ನಮ್ಮವಾಗಿಸಿಕೊಂಡ ದಿನಗಳು ಎಷ್ಟು... ಲೆಕ್ಕ ಇಟ್ಟವರಾರು ಸಖಿ? ಬೊಗಸೆಯೊಳಗಿನ ನೀರಂತೆ ದಕ್ಕಿದ್ದಷ್ಟೇ ನಮ್ಮವು; ಚೆಲ್ಲಿದ್ದು ಪರರ ಪಾಲು! ದಿನಗಳಾಗಲಿ, ಕ್ಷಣಗಳಾಗಲಿ ಅಷ್ಟೇ!
ಬಂದಿದೆ ಹೊಸತು; ಹೊಸತೆಂದರೆ ಹೊಸತು ಇಲ್ಲವಾದರೆ ಇಲ್ಲ!
ಕನಸುಗಳ ಹೊಲದೊಳಗೆ
ಆಸೆಯೇ ಬೇಲಿ
ಬಂದ ಭಾಗ್ಯವ ನೇರ ನೋಡದಿರೆ
ಖಾಲಿ ಖಾಲಿ!
ನನಗೂ ನಿನಗೂ ಹರಿವ ನೀರಂತೆ ಸುಮ್ಮನೆ ವಯಸ್ಸಾಗುತ್ತಿದೆ. ಬರುವ ಕ್ಷಣಗಳ ಇಡಿಯಾಗಿ, ಹಿಡಿಯಾಗಿ ಪಡೆದು ಅನುಭವಿಸದಿರೆ ಕೈ ಜಾರಿ ಹೋಗುವುದು ಖಚಿತ. ಹೊಸತು ಏನಾಗಲಿ ಹೊಸತೆ. ಆ ನೆಪದಲ್ಲಾದರೂ ಬಾ... ಮತ್ತೆ ಅದೇ ಹಳೇ ಗೆಳೆಯರಾಗೋಣ... ಕಳೆದಿದ್ದು ಮರೆತು ಬಿಡು, ಸಿಗುವುದಕ್ಕೆ ಕಣ್ಣಿಡು... ನಾಳೆ ನಮ್ಮದೇ ನೆನಪಿರಲಿ... ಕತೆಯಂತೆ, ಕಾವ್ಯದಂತೆ ಅನವರತ ಸಾಗುತಿರಲಿ ನಮ್ಮ ಅನಂತ ಪ್ರೀತಿ. ಬಾ ಒಲವೇ ನಾಳೆಗಳ ನಮ್ಮದಾಗಿಸಿಕೊಳ್ಳೋಣ, ಹೊಸ ಕವಿತೆ ಕಟ್ಟೋಣ ಬಾ ಒಲವೇ ಬಾಬಾ!
- ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


