ಮಕರಂದ/ದೋಣಿ

ಆವರಣದಾಚೆಗೆ...

ಆವರಣದಾಚೆಗೆ...
Published On :

ಕನ್ನಡದ ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ ಐದು ಕಾದಂಬರಿಗಳು ಈವರೆಗೆ ಇಂಗ್ಲಿಷ್‌ಗೆ ತೆರಳಿವೆ- ವಂಶವೃಕ್ಷ, ದಾಟು, ತಂತು, ಮಂದ್ರ ಮತ್ತು ಸಾರ್ಥ. ಆವರಣ ಆರನೇ ಕೃತಿ. ಇಂಗ್ಲಿಷ್ ಓದುಗರು ಇದನ್ನು ಸ್ವೀಕರಿಸಬಹುದು ಎಂಬ ವಿಶ್ವಾಸ ಅವರದ್ದು. 'ನಾನು ಮೊದಲಿನಿಂದಲೂ ನಡೆಸುತ್ತ ಬಂದಿರುವ ಸತ್ಯ ಮತ್ತು ಸೌಂದರ್ಯದ ಬಗೆಗಿನ ಚರ್ಚೆ ಆ ಕಾದಂಬರಿಯಲ್ಲೂ ಮುಂದುವರಿಸಿದ್ದೀನಿ. ಇನ್ನು ಮುಂದೆಯೂ ಮುಂದುವರಿಸ್ತೀನಿ. ಕಲೆಯ ಹೆಸರಿನಲ್ಲಿ ಸತ್ಯವನ್ನು ಮರೆಮಾಚಬಹುದಾ ಎನ್ನುವುದು ನನ್ನ ಪ್ರಶ್ನೆ. ನನ್ನ ಮನೋಧರ್ಮ ಸೃಜನಶೀಲ ಲೇಖಕನದು. ನಾನು ಇತಿಹಾಸವನ್ನು ಹಾಗೆ ಹಾಗೇ ಬರೆಯಕ್ಕೆ ಹೋಗಲ್ಲ. ಆದರೆ ಸತ್ಯವನ್ನು ಮರೆಮಾಚಬಾರದು, ಕಲಾವಿದ ಸತ್ಯಾನ್ವೇಷಿಯಾಗಿರಬೇಕು ಎನ್ನುವುದಷ್ಟೇ ನನ್ನ ಕಾಳಜಿ' ಎನ್ನುತ್ತಾರೆ ಅವರು.  
ತಾನು ಮುಂದೇನು ಬರೆಯಲಿದ್ದೇನೆ ಎಂಬ ಸುಳಿವನ್ನು ಕಾದಂಬರಿಕಾರ ಎಸ್.ಎಲ್.ಭೈರಪ್ಪನವರು ಯಾವತ್ತೂ ಬಿಟ್ಟು ಕೊಡುವುದಿಲ್ಲ. ಆದರೆ ಆಗಾಗ ಪತ್ರಿಕೆಗಳಲ್ಲಿ ಪ್ರಕಟವಾಗುವ ಅವರ ಬರಹಗಳು, ಕಾರ್ಯಕ್ರಮಗಳಲ್ಲಿ ಅವರಾಡುವ ಮಾತುಗಳನ್ನು ಹಿಂಬಾಲಿಸಿದರೆ, ಅವರ ಚಿಂತನೆಯ ಜಾಡನ್ನು ಹಿಡಿದರೆ ಆ ಬಗ್ಗೆ ತುಸುವಾದರೂ ಸುಳಿವು ಸಿಗಬಹುದೇನೋ! 'ಆವರಣ' ಮತ್ತು 'ಕವಲು' ಪ್ರಕಟವಾಗುವ ಮುನ್ನ ಅವರ ಸಾರ್ವಜನಿಕ ಮಾತುಗಳು ಯಾವ ದಿಕ್ಕಿನಲ್ಲಿದ್ದವು ಎಂಬುದನ್ನು ಗ್ರಹಿಸಿದರೆ ಇದು ಸ್ಪಷ್ಟ.

ಮುಂದೇನು ಬರೆಯುತ್ತಿದ್ದೀರಿ?
ಯಾವುದೂ ಇನ್ನೂ ಮನದಲ್ಲಿ ಹರಳುಗಟ್ಟಿಲ್ಲ. ಯಾವುದನ್ನು ಬರೆಯಬೇಕಾದರೂ ಅದರ ಬಗ್ಗೆ ಧ್ಯಾನಿಸಬೇಕಾಗುತ್ತದೆ, ರಿಸರ್ಚ್ ಮಾಡಬೇಕಾಗುತ್ತದೆ.

'ಪರ್ವ'ದಲ್ಲಿ ಪುರಾಣ, 'ಸಾರ್ಥ'ದಲ್ಲಿ ಮಧ್ಯಯುಗ, 'ಆವರಣ'ದಲ್ಲಿ ಇತಿಹಾಸ, 'ಕವಲು'ನಲ್ಲಿ ವರ್ತಮಾನಗಳನ್ನು ಸ್ಪರ್ಶಿಸಿದಿರಿ. ಮುಂದೆ ಭವಿಷ್ಯವಾ?
ಈಗ್ಲೇ ಏನೂ ಹೇಳಕ್ಕಾಗಲ್ಲ.

ಕನ್ನಡದ ಓದುಗರು ಕಡಿಮೆಯಾಗ್ತಿದಾರೆ ಎಂಬ ದೂರಿದೆ. ನೀವು ಯಾವ ಧೈರ್ಯದ ಮೇಲೆ ಬರೀತಿದೀರಿ?
ಓದುಗರು ಕಡಿಮೆಯಾಗ್ತಿಲ್ಲ, ಜಾಸ್ತಿಯಾಗ್ತಿದಾರೆ. ಓದಲು ಅವರು ಬೇರೆ ಬೇರೆ ಮಾಧ್ಯಮಗಳನ್ನು ಅವಲಂಬಿಸಿದಾರೆ ಅಷ್ಟೆ. ಈಗಂತೂ ಕನ್ನಡ ಸಾಹಿತ್ಯಕ್ಕೆ ಭಯವಿಲ್ಲ. ಆದರೆ ಇನ್ನಿಪ್ಪತ್ತು ವರ್ಷಗಳ ನಂತರ ಏನಾಗುತ್ತೆ ಹೇಳಕ್ಕಾಗುಲ್ಲ. ಈಗಿನ ತಲೆಮಾರನ್ನು ನಾವು ಸಂಪೂರ್ಣ ಇಂಗ್ಲಿಷ್‌ನಲ್ಲಿ ಬೆಳೆಸಿರ್ತೀವಲ್ಲ, ಆಗ ಆ ಫಲ ಕಾಣಬಹುದು.

ನಿಮ್ಮ ಓದುವಿಕೆ ಯಾವ ಬಗೆಯದು? ಈಗ ಏನು ಓದ್ತಿದೀರಿ?
ನಾನು ಎಲ್ಲ ಬಗೆಯ ಪುಸ್ತಕಗಳನ್ನು ಓದ್ತೀನಿ. ಹೆಚ್ಚಾಗಿ ಫಿಲಾಸಫಿ, ಇತಿಹಾಸ, ಸಾಮಾಜಿಕ, ವಿಜ್ಞಾನ ಮತ್ತು ಕ್ರಿಯೇಟಿವ್ ರೈಟಿಂಗ್ ಕೂಡ. ಇತ್ತೀಚೆಗೆ ಅಫಘಾನಿಸ್ತಾನದ ಬರಹಗಾರ ಖಾಲಿದ್ ಹುಸೇನಿಯ ದಿ ಕೈಟ್ ರನ್ನರ್ ಮತ್ತು ಎ ಥೌಸಂಡ್ ಸ್ಪೆ ್ಲಂಡಿಡ್ ಸನ್ಸ್ ಓದಿದೆ. ಅಲ್ಲಿನ ಭಾಷೆ, ನಡವಳಿಕೆಗಳು ನಮಗೆ ಹತ್ತಿರ ಅನಿಸುತ್ವೆ.

ನಿಮ್ಮಲ್ಲೊಂದು ಬದಲಾಗದ ತಾತ್ವಿಕ ಧೋರಣೆ ಇದೆ. ತರುಣ ಬರಹಗಾರರೂ ಇದನ್ನೇ ಅನುಸರಿಸಬೇಕೆಂದು ಹೇಳ್ತೀರಾ?
ಇಲ್ಲ. ತಾತ್ವಿಕತೆಯನ್ನು ಮೊದಲೇ ಆರೋಪಿಸಿಕೊಂಡು ಯಾರೂ ಬರೆಯಕೂಡದು. ಬರೀತಾ ಬರೀತಾ ಅದು ತಾನಾಗೇ ರೂಪುಗೊಳ್ಳಬೇಕು.



-ಹರೀಶ್ ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.