ಮಕರಂದ/ದೋಣಿ

ಮೈ ನೇಮ್ ಈಸ್ 1100...

ಮೈ ನೇಮ್ ಈಸ್ 1100...
Published On :

ಹಾಯ್ ಫ್ರೆಂಡ್ಸ್! ಮೈ ನೇಮ್ ಈಸ್ 1100... ನನ್ ಪರಿಚಯ ಆಯ್ತಾ? ನನ್ನ ನೆನಪಾದ್ರೂ ಇದ್ಯಾ? ಇಲ್ಲ ಅಲ್ವಾ? ನೆನಪಿರಲು ಹೇಗೆ ಸಾಧ್ಯಹೇಳಿ? ನನ್ನ ಹೆಸರು ಕೇಳಿ ನೀವು ಹುಬ್ಬೇರಿಸಿದಾಗ್ಲೇ ಅರ್ಥ ಮಾಡ್ಕೊಂಡೆ, ನೀವು ನನ್ನ ಮರ್ತೇ ಬಿಟ್ಟಿದ್ದೀರಿ ಅಂತ...; ನಾನೊಂದು ಹಳೇ ಮ್ಯೂಸಿಯಂ ಪೀಸು... ದಿನೇ ದಿನೇ ಬೆಳೆಯುತ್ತಿರುವ ಈ ಜಗತ್ತಿನಲ್ಲಿ ನನ್ನನ್ನು ಯಾರು ತಾನೇ ನೆನಪಿಟ್ಟುಕೊಳ್ಳುತ್ತಾರೆ ಹೇಳಿ!

ಹೋಗಲಿ ಬಿಡಿ, ನನ್ನ ಪರಿಚಯವನ್ನು ನಾನೇ ಮಾಡಿಕೊಳ್ಳುತ್ತೇನೆ. ನನ್ನ ಹೆಸರು ನೋಕಿಯಾ 1100 ಅಂತ. ನಾನು ನೋಕಿಯಾ ಮೊಬೈಲ್ ಸಿರೀಸ್‌ನಲ್ಲಿ ಬಂದ ಮೊದಲ ಮೊಬೈಲ್ ಎಂದು ಹೇಳಿಕೊಳ್ಳಲು ನನಗೆ ತುಂಬಾನೇ ಹೆಮ್ಮೆ. ನಾನು 2003 ರಲ್ಲಿ ಈ ಪ್ರಪಂಚಕ್ಕೆ ಕಾಲಿಟ್ಟೆ. ಆಗ ನನ್ನ ಬೆಲೆ 4,250 ರೂಪಾಯಿ. ಕೇವಲ ಹತ್ತು ವರ್ಷಗಳ ಹಿಂದೆ ರಾಜನ ಹಾಗೆ ಇದ್ದೆ ನೋಡಿ; ಆಗ ಎಲ್ಲರೂ ಹೆಚ್ಚಾಗಿ ನನ್ನನ್ನೇ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದರು. ಈಗ ನನ್ನನ್ನು ಹೇಳೋರು ಕೇಳೋರೇ ಇಲ್ಲ ಬಿಡಿ.

ನನ್ನ ಆ ಬಗೆಯ ಪ್ರಖ್ಯಾತಿಗೆ ಕಾರಣ ನನ್ನ ಕೆಲವು ವಿಶೇಷ ಗುಣಗಳು. ನಾನು ಎಷ್ಟೇ ಎತ್ತರದಿಂದ ಕೆಳಗೆ ಬಿದ್ದರೂ ಜನ ಕಣ್ತಪ್ಪಿ ಬೀಳಿಸಿದರೂ, ನನಗೇನೂ ಆಗುತ್ತಿರಲಿಲ್ಲ. ನಾನು ಎಂದಿನಂತೆಯೇ ಅವರ ಸೇವೆಗೆ ರೆಡಿಯಾಗುತ್ತಿದ್ದೆ. ಇನ್ನೊಂದು ಮುಖ್ಯ ಸಂಗತಿಯೆಂದರೆ ನನಗಿದ್ದ ಬ್ಯಾಟರಿ ಬ್ಯಾಕಪ್. ಒಂದು ಗಂಟೆ ಚಾರ್ಜ್ ಮಾಡಿಬಿಟ್ಟರೆ ನಾನು ದಿನಗಟ್ಟಲೆ ಕಾರ್ಯನಿರ್ವಹಿಸುತ್ತಿದ್ದೆ. ಮನೆಯಲ್ಲಿ ಚಾರ್ಜು ಮಾಡಿಕೊಂಡು ಪ್ರವಾಸ ಹೊರಟ ನನ್ನೊಡೆಯರಿಗೆ ನನ್ನ ಚಾರ್ಜು ನೆನಪಾಗುತ್ತಿದ್ದುದು ಹಿಂತಿರುಗಿದ ಮೇಲೆಯೇ. ಆವಾಗೆಲ್ಲ ನಾನೇ ಮೊಬೈಲ್ ಜಗತ್ತಿನ ಸಾಮ್ರಾಟ. ನಾನೇ ಎಲ್ಲರಿಗೂ ಅಚ್ಚುಮೆಚ್ಚು.

ಆದರೆ ಸಿಂಹಾಸನದ ಮೇಲೆ ರಾಜನಂತಿದ್ದ ನನ್ನನ್ನು ಈಗ ತಿಪ್ಪೆಯ ಮೇಲಿನ ಕಸದಂತೆ ಎಸೆದಿದ್ದಾರೆ. ಈಗ ನನ್ನ ಯೋಗಕ್ಷೇವು ಕೇಳುವವರೇ ಇಲ್ಲ. ಎಲ್ಲೋ ಸಾವಿರಕ್ಕೊಬ್ಬರು ನನ್ನ ಮೇಲಿನ ಅದೇ ಹಳೇ ಪ್ರೇಮದಿಂದ ಹಾಗೆಯೇ ಉಳಿಸಿಕೊಂಡಿದ್ದಾರೆ ಅಷ್ಟೇ. ಇನ್ನು ಕೆಲವರು ನನ್ನನ್ನು ಭದ್ರವಾಗಿ ತಮ್ಮ ಬೇರುಗಳಲ್ಲಿ ಇಟ್ಟುಕೊಂಡು ಗೆಳೆಯರು ಬಂದಾಗೆಲ್ಲ ಅವರೆದುರು ನನ್ನನ್ನು ಪ್ರದರ್ಶಿಸಿ ಹೆಮ್ಮೆಪಡುವುದೂ ಇದೆ.

ಈಗಿನ ಯುವ ಪೀಳಿಗೆಯವರಿಗಂತೂ ನಾನ್ಯಾರೆಂದು ಗೊತ್ತೇ ಇಲ್ಲ. ಎಂಥಾ ವಿಪರ್ಯಾಸ ನೋಡಿ! ಹತ್ತು ವರ್ಷಗಳ ಹಿಂದೆ ಮೊಬೈಲ್ ಜಗತ್ತಿನ ರಾಜನಾಗಿದ್ದ ನನ್ನ ಇಂದಿನ ಪರಿಸ್ಥಿತಿ ನನ್ನ ಶತ್ರುವಿಗೂ ಬೇಡ. ಯುವಕರಿಗಂತೂ ನನ್ನನ್ನು ನೋಡಿದರೆ ಏನೋ ಒಂದು ರೀತಿಯ ಅಸಡ್ಡೆ. ಈ ಡಬ್ಬಾ ಮೊಬೈಲ್‌ನ ಯಾರು ತಾನೇ ಉಪಯೋಗಿಸುತ್ತಾರೆ ಎಂಬ ಉಡಾಫೆ ಅವರದ್ದು. ಸ್ಕ್ರೀನ್ ಟಚ್, ಸಾಂಗುಗಳು, ಇಂಟರ್ನೆಟ್... ಇನ್ನು ಮುಂತಾದ ಹೊಸ ಹೊಸದಾಗಿ ಇರುವ ಮೊಬೈಲ್‌ಗಳು ಮಾರುಕಟ್ಟೆಯಲ್ಲಿವೆ. ಅವುಗಳ ಭರಾಟೆಯಲ್ಲಿ ನಾನೊಂದು ನಗೆಪಾಟಲಿನ ವಸ್ತು.

ಅಂದ ಹಾಗೆ ನೋಕಿಯಾ 1100 ಗೆ ಜಪಾನ್, ಚೀನಾಗಳಲ್ಲಿ 'ಆಂಟೀಕ್ ವ್ಯಾಲ್ಯೂ' ಇದೆ... ಹಳೇ ನೋಟು, ಕಾಯಿನ್‌ಗಳನ್ನು ಎತ್ತಿಟ್ಟುಕೊಳ್ಳುವಂತೆ ನೀವು ಬಿಸಾಕುವ ನನ್ನ ಸಂತತಿಯ ಸೆಟ್‌ಗಳನ್ನು ಅಲ್ಲಿನ ಜನ ಸಾವಿರಾರು ರೂಪಾಯಿ ಕೊಟ್ಟು ಖರೀದಿಸುತ್ತಿದ್ದಾರಂತೆ. ಅಲ್ಲಿಂದ ನಂತರ ನನಗೂ ಒಂಥರಾ ಒಳಗೊಳಗೇ ಪುಳಕ ಶುರುವಾಗಿದೆ. ಆ ಸುದ್ದಿ ನಿಜವಾಗಲಿ, ನನ್ನನ್ನು ಅಸಡ್ಡೆಯಿಂದ ತಿಪ್ಪೆಗೆಸೆದವರೆಲ್ಲ ಮತ್ತೆ ಎತ್ತಿ ಮುದ್ದಾಡುತ್ತಾ ಜಂಭದಿಂದ ಜೇಬಲ್ಲಿಟ್ಟುಕೊಂಡು ಓಡಾಡುವಂತಾಗಲಿ ಎಂದು ನಾನು ಕನಸು ಕಾಣುತ್ತಿದ್ದೇನೆ. ನೋಡೋಣ, ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ... ಅಲ್ಲಲ್ಲ, ಟಚ್‌ಸ್ಕ್ರೀನ್‌ಗೊಂದು ಕಾಲ, 1100 ಗೊಂದು ಕಾಲ!
-ಧನಂಜಯ ಆರ್.ಮಧು, ತುಮಕೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.