ಸನಿಹವನ್ನು ಬಯಸೀ ಬಯಸಿ...

ಪ್ರೀತಿಯ ಗೆಳೆಯ....
ನಮ್ಮಿಬ್ಬರ ಪ್ರೀತಿಯ ಸ್ನೇಹಕ್ಕೆ ಇದೀಗ 3ರ ಹರೆಯ. ಪುಟ್ಟಪುಟ್ಟ ಹೆಜ್ಜೆಗಳನ್ನಿಟ್ಟು ನಡೆಯಲಾರಂಭಿಸಿದೆ. ನಮ್ಮ ಪ್ರೀತಿಯ ಪಾಪು! ಅದೊಂದು ದಿನ ನಾನಿನ್ನ ಕಂಗಳ ನೋಟದಿಂದ ಆಕರ್ಷಿತಳಾದೆ. ನನಗೇನಾಯಿತೋ ನಾನರಿಯದಾದೆ. ನನಗರಿವಿಲ್ಲದಂತೆ ನಿನ್ನೆಡೆಗೆ ಸೆಳೆಯಲಾರಂಭಿಸಿದೆ. ನಾನು ನಿನ್ನ ಬಳಿ ಬಂದು ನಿನ್ನ ಹೆಸರೇನೆಂದು ಕೇಳಿದೆ. ಅದೆಷ್ಟು ಧೈರ್ಯವೋ ನನಗೆ! ಹುಡುಗಿಯಾಗಿ ನಾನೇ ನಿನ್ನ ಬಗ್ಗೆ ತಿಳಿದುಕೊಳ್ಳಲು ಮುಂದಾಗಿದ್ದೆ. ಆ ದಿನ ನೀನು ಬಹಳ ಅಶ್ಚರ್ಯಚಕಿತನಾಗಿ ನನ್ನನ್ನು ಮಾತನಾಡಿಸಿದಿಯಲ್ಲಾ... ಆಗ ನಿನ್ನ ಗಂಟಲ ನೀರು ಆರಿತ್ತು ಎಂದಿದ್ದೆ! ಆದರೆ ಈಗ ಆ ಭಾವನೆ, ಭಯ ಮಾಯವಾಗಿದೆ. ನಂತರದ ದಿನಗಳಲ್ಲಿ ದಿನವೂ ನಾನು ಕಾಲೇಜಿಗೆ ಹೋಗುವ ದಾರಿಯಲ್ಲಿ ನಿನ್ನ ಮುಖವನ್ನೊಮ್ಮೆ ನೋಡಿ ಸಂತೋಷಪಟ್ಟು ಮುಂದುವರಿಯುತ್ತಿದ್ದೆ. ನಿನ್ನ ಆ ವದನದಲ್ಲಿನ ಕಂಗಳನ್ನು ನೋಡದ ದಿನವಂತೂ ಏನೋ ಕಳೆದುಕೊಂಡವರಂತೆ, ರೆಕ್ಕೆ ಮುರಿದ ಹಕ್ಕಿಯಂತೆ ಒದ್ದಾಡುತ್ತಿದ್ದೆ. ಹೀಗೆ ತಿಂಗಳುಗಳು ಕಳೆದವು, ವರುಷವೂ ಕಳೆಯಿತು. ನಾನು ಬೇರೊಂದು ವಿದ್ಯಾಲಯಕ್ಕೆ ಹೋಗುವ ಸಮಯವೂ ಸನ್ನಿಹಿತವಾಯಿತು. ಹೊಸತಾಗಿ ಸೇರಿದ ಕಾಲೇಜಿಗೆ ಹೋದ ಮೊದಲ ದಿನದ ವಿಚಿತ್ರ ಅನುಭವವನ್ನು ನಿನ್ನೊಡನೆ ಪುಟ್ಟ ಮಗುವಿನಂತೆ ಹಂಚಿಕೊಂಡಿದ್ದೆ. ನೆನಪಿದೆಯಾ ನಿನಗೆ? ಆಗ ನೀನು ನನ್ನನ್ನು ಮುದ್ದಿನಿಂದ ಸಂತೈಸಿ ಧೈರ್ಯ ಹೇಳಿದ್ದೆ.
ಅದ್ಯಾರ ಕೆಟ್ಟ ದೃಷ್ಟಿ ನಮ್ಮ ಮೇಲೆ ಬಿತ್ತೋ ಗೊತ್ತಿಲ್ಲ. ನಮ್ಮಿಬ್ಬರ ಪ್ರೀತಿಯ ಬಂಧನದಲ್ಲಿ ಬಿರುಕುಂಟಾಯಿತು. ಇನ್ನೊಬ್ಬನಿಂದಾಗಿ! ಏನು ಮಾಡಲಿ ನನ್ನ ಹಣೆಬರಹ... ನಿನ್ನಿಂದ ದೂರವಾದೆ. ಆದರೆ ಮತ್ತೆ ನಿನ್ನೊಂದಿಗೆ ಮಾತನಾಡಬೇಕೆಂಬ ಹಂಬಲ ಮನದಲ್ಲಿ ಮನೆ ಮಾಡಿತ್ತು. ಅನಿರೀಕ್ಷಿತವಾಗಿ ಕೆಲವೊಮ್ಮೆ ನೀನು ನನಗೆ ಬಹು ದೂರದಿಂದ ಕಾಣಸಿಗುತ್ತಿದೆ. ಆಗೆಲ್ಲಾ ಸಂಕಟದಿಂದ ತೊಳಲಾಡುತ್ತಿದ್ದೆ. ನನ್ನನ್ನೇ ನಾನು ದುರದೃಷ್ಟೆ ಎಂದುಕೊಳ್ಳುತ್ತಿದ್ದೆ. ನೀ ಏನೇ ಹೇಳು, ಜೀವನದಲ್ಲಿ ನಾ ಕಂಡ ಉತ್ತಮ ಗೆಳೆಯನೆಂದರೆ ನೀನೇ ಕಣೋ... ನಿನ್ನೊಡನೆ ಮಾತನಾಡದ, ನಿನ್ನನ್ನಗಲಿ ಕಳೆದ ಒಂದು ವಸಂತವು ಯುಗವಾಗಿ ಕಂಡಿತ್ತು. ಮನಬಿಚ್ಚಿ ಮಾತನಾಡುತ್ತಿದ್ದ ನನ್ನೆಲ್ಲಾ ತಳಮಳ, ಗೊಂದಲಗಳನ್ನು ಹಂಚಿಕೊಳ್ಳುತ್ತಿದ್ದ ಸಂದರ್ಭ ನೆನೆದು ಬಹಳ ಬೇಸರಿಸಿದ್ದೆ. ಅದನ್ನು ಯಾರೊಂದಿಗಾದರೂ ಹೇಳಿಕೊಳ್ಳೋಣವೆನಿಸಿದರೂ, ಅಷ್ಟೊಂದು ಪ್ರೀತಿಯ ಸಲುಗೆಯ ಸ್ನೇಹದ ಕೊರತೆ ಕಾಡುತ್ತಿತ್ತು.
ನನ್ನ ಜೀವನದಲ್ಲಾದ ಅತಿ ಕೆಟ್ಟ ಘಟನೆಯ ಕುರಿತು ಹೇಳೋಣವೆಂದರೂ, ಹೇಳಲಾಗದ ಪರಿಸ್ಥಿತಿಯಲ್ಲಿದ್ದೆ . ಹೇಗೆ ಹೇಳಲಿ? ನಿನ್ನ ಬಿಟ್ಟು ಅದಾಗಲೇ ವಸಂತವು ಸಮೀಪಿಸುತ್ತಿರುವಾಗ... ಆದಾಗ್ಯೂ ಮನದ ಮೂಲೆಯಲ್ಲಿದ್ದ ಹುಸಿ ಧೈರ್ಯದಿಂದ ನಿನ್ನನ್ನು ಮಾತನಾಡಿಸಲು ಮುಂದಾದೆ. ಆದರೆ ನೀನು! ನಾನೆಣಿಸಿದಂತೆ ನಡೆದುಕೊಳ್ಳದೆ ನನ್ನ ಮನವನ್ನು ಮಗದೊಮ್ಮೆ ಗೆದ್ದೆ. ಹಿಂದಿನ ಯಾವುದೇ ಕಹಿ ಘಟನೆ ನೆನಪಿನಲ್ಲಿಡದೆ ಮೊದಲಿನಂತೆಯೇ ಮಾತನಾಡಿಸಿದೆ. ಬದುಕಿನಲ್ಲಿ ನೊಂದ ಪ್ರಸಂಗಗಳನ್ನು ವಿವರಿಸಿದಾಗ ನನ್ನ ಬಗ್ಗೆ ಮರುಕಪಟ್ಟು, ಕರುಣ ತೋರಿ ಸಂತೈಸಿದೆ. ಅಂತೆಯೇ ನೀನು ನೊಂದಿರುವ ಕ್ಷಣಗಳ ಬಗ್ಗೆ ಹೇಳಿ ನನ್ನ ಸಲಹೆಗಳನ್ನು ಕೇಳಿದೆ. ಅದೆಷ್ಟು ತಲುಪಿತೋ ನಿನ್ನ ಹೃದಯಕ್ಕೆ ನಾನರಿಯೆ. ಅಂತೂ ನಿನ್ನ ಮಾತುಗಳಿಂದ ಮತ್ತೆ ನಿನ್ನ ಮುಖ ನೋಡದೆ, ಮಾತನಾಡಿಸದೆ ನಿದ್ರೆಯೇ ಬಾರದಂತೆ ಮಾಡಿದ್ದೆ ನೀನು, ನಿನಗರಿವಿಲ್ಲದಂತೆ!
ಆದರೆ ಸಮಾಜದಲ್ಲಿ ನಮ್ಮಿಬ್ಬರ ಮಧುರ ಸ್ನೇಹಕ್ಕೆ ಬೆಲೆ ನೀಡುತ್ತಾರೆಯೇ? ನನ್ನ ಮತ್ತು ನಿನ್ನ ಜಾತಿ ಬೇರೆಯಾಗಿರುವುದು ನಮ್ಮನ್ನು ಈ ಆತ್ಮೀಯ ಬಾಂಧವ್ಯದಿಂದ ಕಿತ್ತೆಸೆಯುತ್ತದೆಯೇ? 'ಗೆಳೆಯಾ... ನನಗೆ ಆತಂಕವಾಗುತ್ತಿದೆ. ಎಲ್ಲಿ ನಮ್ಮಿಬ್ಬರ ಗೆಳೆತನಕ್ಕೆ ಕಡಿವಾಣ ಹಾಕುವರೋ ಎಂದು. ಯಾರೂ ನೀನು? ಯಾಕೆ ನನ್ನ ಮನದಲ್ಲಿ ಈ ಪರಿಯಾಗಿ ತಳವೂರಿದ್ದೀಯಾ? ನನ್ನ ನಿನ್ನ ಸಂಬಂಧವೇನು? ಹಿಂದಿನ ಜನ್ಮದಲ್ಲೇನಾದರೂ ಅಮ್ಮ- ಮಗಳಾಗಿದ್ದೇವೆಯೇ? ನನಗಂತೂ ಉತ್ತರ ಸಿಗದ ಪ್ರಶ್ನೆಗಳು. ಈಗಲೂ ನಿನ್ನನ್ನೇ ಕೇಳುವೆ. ನಾನು ಕೇಳಿದ ಪ್ರಶ್ನೆಗಳಿಗೆ ನಿನ್ನಲ್ಲೇನಾದರೂ ಉತ್ತರಗಳಿವೆಯಾ? ಹೇಳು. ನಿನ್ನ ಮೇಲೆ ಸಂಪೂರ್ಣ ನಂಬಿಕೆಯಿಟ್ಟಿದ್ದೇನೆ. ಈವರೆಗೆ ನನ್ನನ್ನು ನೋಡಿಕೊಂಡಂತೆ ಮುಂದೆಯೂ ನಾನಿರುವವರೆಗೂ ಕಾಪಾಡಿಕೊಳ್ಳುತ್ತೀಯಾ ತಾನೇ? ನಾನು ನಿನ್ನನ್ನು ಬಹಳವಾಗಿ ಹಚ್ಚಿಕೊಂಡಿದ್ದೇನೆ. ನಿನ್ನೊಡನೆಯೇ ಇರಲು, ನಿನ್ನ ಮಾತುಗಳನ್ನೇ ಕೇಳುತ್ತಿರುವಾಸೆ ನನಗಾಗಿದೆ. ನೀನು ನನ್ನೊಡನೆ ಸದಾ ಬೆನ್ನೆಲುಬಾಗಿ, ಪ್ರೀತಿಯ ಸ್ನೇಹಿತನಾಗಿ, ಗುರುವಾಗಿ, ಬಾಳ ಸಂಗಾತಿಯಾಗಿ ಇರಬಾರದೇಕೆ? ದಯವಿಟ್ಟು ಉತ್ತರಿಸು.
ಇಂತಿ ನಿನ್ನನ್ನೇ ನೆನೆಯುತ್ತಿರುವ,
'ಪುಟ್ಟ'
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


