ಮಕರಂದ/ದೋಣಿ

ಎಂಥ ಚಂದ ನಂದಗೋಪಾಲ

ಬಡ ವಿಧವೆಯೊಬ್ಬಳ ಪುಟ್ಟ ಮಗ, ವಿದ್ಯಾಭ್ಯಾಸಕ್ಕಾಗಿ ದಟ್ಟಡವಿಯ ಮೂಲಕ ಹಾದು ಹೋಗಬೇಕಾಗುತ್ತದೆ. ಆ ಕಾಡಿನಲ್ಲಿ ಒಂಟಿಯಾದ...

ಎಂಥ ಚಂದ ನಂದಗೋಪಾಲ
Published On :

ಬಡ ವಿಧವೆಯೊಬ್ಬಳ ಪುಟ್ಟ ಮಗ, ವಿದ್ಯಾಭ್ಯಾಸಕ್ಕಾಗಿ ದಟ್ಟಡವಿಯ ಮೂಲಕ ಹಾದು ಹೋಗಬೇಕಾಗುತ್ತದೆ. ಆ ಕಾಡಿನಲ್ಲಿ ಒಂಟಿಯಾದ ಗೋಪಾಲನಿಗೆ ವಿಪರೀತ ಭಯ ಉಂಟಾಗಿ, ಓಡುತ್ತಾ ಮನೆಗೆ ಬಂದು, ತಾನು ಶಾಲೆಗೆ ಹೋಗುವುದಿಲ್ಲ ಎಂದು ಅಲವತ್ತುಕೊಂಡಾಗ, ಮಗನ ವಿದ್ಯಾಭ್ಯಾಸದ ತೀವ್ರ ಹಂಬಲದಲ್ಲಿದ್ದ, ಆ ಕೃಷ್ಣ ಭಕ್ತೆ ತಾಯಿ ದಿಕ್ಕು ತೋಚದೆ 'ಕಾಡಿನಲ್ಲಿ ಭಯವಾದಾಗ, ಅಣ್ಣ ವೇಣುಗೋಪಾಲನನ್ನು ಕರೆದರೆ, ಆತ ಬಂದು ಕಾಡು ದಾಟಿಸುತ್ತಾನೆ. ಏನೂ ಭಯವಿಲ್ಲ' ಎಂದು ಮಗನ ಸಮಾಧಾನಕ್ಕಾಗಿ ನುಡಿಯುತ್ತಾಳೆ.
ಅಮ್ಮನ ಮಾತನ್ನು ನಂಬಿದ ಪುಟ್ಟ ಗೋಪಾಲ, ಕಾಡಿನಲ್ಲಿ ಭಯದಿಂದ, ಅಸಹಾಯಕತೆಯಿಂದ ತನ್ನ ಅಣ್ಣನನ್ನು ಆರ್ತನಾಗಿ ಕರೆಯುತ್ತಾನೆ. ತಲೆಯಲ್ಲಿ ನವಿಲುಗರಿ, ಕೈಯಲ್ಲಿ ಕೊಳಲು ಹಿಡಿದು 'ಅಣ್ಣ' ಪ್ರತ್ಯಕ್ಷನಾಗುತ್ತಾನೆ. ತಮ್ಮನೊಡನೆ ಮಾತುಕತೆಯಾಡುತ್ತಾನೆ, ಆಟವಾಡುತ್ತಾನೆ, ತಮ್ಮನಿಗಾಗಿ ಕೊಳಲು ನುಡಿಸುತ್ತಾನೆ. ನಂದಗೋಪಾಲನಿಗೆ ಬೇರೆಯೇ ಲೋಕಕ್ಕೆ ಹೋದಂತೆ ಭಾಸವಾಗುತ್ತದೆ.
ಗೋಪಾಲ ಅಮ್ಮನಲ್ಲಿ ಈ ವಿಚಾರ ಹೇಳಿದಾಗ ದಿಗ್ಬ್ರಾಂತಳಾದ ತಾಯಿ, ಕೃಷ್ಣ ತನಗೆ ಕಾಣಿಸದಿದ್ದರೂ ಮಗನಿಗಾದರೂ ಕಂಡನಲ್ಲ ಎನ್ನುವ ಸಂತೃಪ್ತಿ ಹೊಂದುತ್ತಾಳೆ. ಮರುದಿನ ವೇಣುಗೋಪಾಲನಿಗೆ ಅವಲಕ್ಕಿ, ಮೊಸರು ಕಟ್ಟಿ ಕೊಟ್ಟು ಅಮ್ಮನೇ ಆಗುತ್ತಾಳೆ. ಗುರುಗಳಿಗೆ ಗುರುದಕ್ಷಿಣೆ ಕೊಡಲು ತನ್ನ ಬಳಿ ಏನೂ ಇಲ್ಲದಿರುವುದರಿಂದ ಕಾಡಿನಲ್ಲಿ ಅಣ್ಣನಲ್ಲೇ ಕೇಳಲು ತಿಳಿಸುತ್ತಾಳೆ. ತಮ್ಮನ ಕೇಳಿಕೆಗೆ ಇಲ್ಲವೆನ್ನದ ಅಣ್ಣ, ಹಾಲು ತುಂಬಿದ ಮಡಕೆಯನ್ನು ಕೊಡುತ್ತಾನೆ. ಅದನ್ನು ಸ್ವೀಕರಿಸಿದ ಗುರುಗಳು ಮಡಕೆ 'ಅಕ್ಷಯ ಪಾತ್ರೆ'ಯಾದುದನ್ನು ಗಮನಿಸಿ ಬೆರಗಾಗುತ್ತಾರೆ. ನಂದಗೋಪಾಲನಿಗಾದ ದೈವ ಸಾಕ್ಷಾತ್ಕಾರ ತನಗೂ ಆದೀತೇನೋ ಎನ್ನುವ ಆಸೆಯಿಂದ ತಮಗೂ ಅಣ್ಣನನ್ನು ತೋರಿಸುವಂತೆ ನಂದಗೋಪಾಲನಲ್ಲಿ ಕೇಳಿಕೊಳ್ಳುತ್ತಾರೆ. ಎಷ್ಟು ಕರೆದರೂ ಅಣ್ಣ ಬರುವುದಿಲ್ಲ. ಬದಲಿಗೆ ಗುರುಗಳು ನನ್ನನ್ನು ಕಾಣಲು ಇನ್ನೂ ಬಹುಕಾಲ ಕಾಯಬೇಕು ಎನ್ನುವ ಅಶರೀರ ವಾಣಿ ಕೇಳಿಬರುತ್ತದೆ.
ತಿಳುವಳಿಕೆಗೆ ಆತ ಒಲಿಯಲಾರ. ಮುಗ್ಧ ಪ್ರೀತಿಗೆ ಮಾತ್ರ ದೇವರು ಒಲಿದಾನು ಎನ್ನುವುದು ಗುರುಗಳಿಗೆ ಅರಿವಾಗಿ, ಕನಿಷ್ಠ ಸ್ವರವನ್ನಾದರೂ ಕೇಳಿದ ತೃಪ್ತಿಯಿಂದ ತೆರಳುತ್ತಾರೆ. ಇನ್ನು ಅಣ್ಣ ತನಗೆ ಕಾಣಿಸಲಾರ ಎನ್ನುವುದು ಗೊತ್ತಾಗಿ ನಂದ ಗೋಪಾಲ ಬಿಕ್ಕಿ ಬಿಕ್ಕಿ ಅಳುತ್ತಾನೆ. ಕೊಳಲಿನ ಸ್ವರ ಕೇಳುತ್ತದೆ.
ಇಷ್ಟು ಕತೆಯ ಈ ನಾಟಕ ಕೊನೆಯ ತನಕವೂ ತನ್ನ ಸರಳತೆಯಿಂದಲೇ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತದೆ. ಹಿಂದೂಸ್ಥಾನಿ ಸಂಗೀತದ ಮಂದ್ರದ ಆಲಾಪನೆಯಂತೆ, ಗೆಳೆಯರಿಬ್ಬರ ನಡುವಿನ ಪಿಸು ಮಾತಿನಂತೆ, ಅನನ್ಯ ಶ್ರವಣ ಸುಖ ಇದರ ವೀಕ್ಷಣೆಯಿಂದ ಲಭ್ಯವಾಗುವುದೇ ಈ ನಾಟಕದ ಹೆಚ್ಚುಗಾರಿಕೆ. ಇಡೀ ನಾಟಕವೇ ಪ್ರೇಕ್ಷಕನಿಗೆ ಒಂದು ಕಾವ್ಯಾನುಭವವನ್ನು ನೀಡುತ್ತದೆ.
ಇದು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌ನಲ್ಲಿ ಅಳಿಕೆಯ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಮಕ್ಕಳು ಮೂರ್ತಿ ದೇರಾಜೆ ನಿರ್ದೇಶನದಲ್ಲಿ ಅಭಿನಯಿಸಿದ 'ನಂದ ಗೋಪಾಲ' ನಾಟಕದ ಫಲಿತ.

- ರಾಧೇಶ್ ತೋಳ್ಪಾಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.