ಸವಿ ಸವಿ ಎಸ್ವಿಪಿ

'ಪ್ರೀತಿಯ ಕರೆ ಕೇಳಿ/ಆತ್ಮನ ಮೊರೆ ಕೇಳಿ/ನೀ ಬಂದು ನಿಂದಿಲ್ಲಿ/ದೀಪ ಹಚ್ಚಾ' ಎಂಬ ಸಾಲು ಕೇಳಿಸಿದೊಡನೆ ನೆನಪಾಗುವುದು ಇಡೀ ಕನ್ನಡ ಕಾವ್ಯದ ಸಾರವನ್ನೇ ಹೀರಿಕೊಂಡಂತಹ ವ್ಯಕ್ತಿತ್ವ. ಪುಟ್ಟ ದೇಹ, ವಿನೋದಪ್ರಿಯತೆ, ಹೊಳೆಯುವ ಕಂಗಳ ಈ ವ್ಯಕ್ತಿ ಪ್ರೊ ಎಸ್ವಿಪಿ. ಅವರಿಗೀಗ ಶತಮಾನ.
ಕರ್ನಾಟಕದ ಹಿರಿಯ ವಿದ್ವಾಂಸರ ಸಾಲಿನಲ್ಲಿ ನಿಲ್ಲುವ ಎಸ್ವಿಪಿ ಉತ್ತಮ ವಾಗ್ಮಿ, ದಕ್ಷ ಅನುವಾದಕರಾಗಿ, ಸಹೃದಯ ಲೇಖಕರಾಗಿ ಕನ್ನಡ ನಾಡು ನುಡಿಗೆ ಸಲ್ಲಿಸಿದ ಸೇವೆ ಅಪಾರ. ಪರಮೇಶ್ವರ ಭಟ್ಟರು ಹುಟ್ಟಿದ್ದು 1914ರ ಫೆಬ್ರವರಿ ಎಂಟರಂದು. ತಂದೆ ಸದಾಶಿವರಾಯರು, ತಾಯಿ ಲಕ್ಷ್ಮಮ್ಮ. ತೀರ್ಥಹಳ್ಳಿಯ ಮಾಳೂರಿನಲ್ಲಿ ಜನಿಸಿದರು. ಇಬ್ಬರು ಹೆಣ್ಣು ಮಕ್ಕಳು, ಒಂದು ಗಂಡು ಮಗು. ಇವರೇ ಕಿರಿಯರು. ಹುಟ್ಟಿದ ಎರಡನೆಯ ವರ್ಷದಲ್ಲಿಯೇ ತಾಯಿ ತೀರಿಕೊಂಡರು. ಸದಾಶಿವರಾಯರು ತಮ್ಮ ಮೂವರು ಮಕ್ಕಳನ್ನು ಮುದ್ದಿನಿಂದ ಸಾಕಿದರು.
ಶಿಕ್ಷಕ ತಂದೆಯೇ ಮೊದಲ ಗುರು. ನಂತರ ತೀರ್ಥಹಳ್ಳಿಯ ಪ್ರೌಢಶಾಲೆಯಲ್ಲಿ ಪಂಡಿತ ಕಮಕೋಡು ನರಸಿಂಹ ಶಾಸ್ತ್ರಿಗಳ ಬಳಿ ವಿದ್ಯಾಭ್ಯಾಸ. ಆಧುನಿಕ ದೃಷ್ಟಿಯ ಕನ್ನಡ ಪಂಡಿತ, ಘನ ವಿದ್ವಾಂಸ ಶಾಸ್ತ್ರಿಗಳ ಪಾಠವೇ ಬಹುಶಃ ಪರಮೇಶ್ವರ ಭಟ್ಟರ ಸಾಹಿತ್ಯಾಸಕ್ತಿಗೆ ನಾಂದಿ. ನಂತರ ಇಂಟರ್ಮೀಡಿಯೆಟ್ ಕಾಲೇಜಿಗೆ ಸೇರಿದಾಗಲೂ ಎ.ಆರ್.ಕೃಷ್ಣಶಾಸ್ತ್ರಿ, ವಿ.ಸೀತಾರಾಮಯ್ಯ, ಡಿವಿಜಿ ಸಹೋದರ ಡಿ.ವಿ.ಶೇಷಗಿರಿರಾಯ ಮುಂತಾದ ಗುರುವರೇಣ್ಯರ ಪಾಠಗಳ ಪ್ರೇರಣೆ.
1939ರಲ್ಲಿ ತಾವು ಓದಿದ ಮೈಸೂರಿನ ಮಹಾರಾಜ ಕಾಲೇಜಿನಲ್ಲೇ ಕನ್ನಡ ಪಂಡಿತರಾಗಿ ಕೆಲಸಕ್ಕೆ ಸೇರಿಕೊಂಡರು. ಬಿಎ ಆನರ್ಸ್ ಪರೀಕ್ಷೆಯಲ್ಲಿ ಮಹಾರಾಜರಿಂದ ಚಿನ್ನದ ಪದಕ ಪಡೆದಿದ್ದರು. ಅಧ್ಯಾಪಕನಾಗಿ ಮೊಟ್ಟ ಮೊದಲು ಪಾಠ ಮಾಡಿದ್ದು ಮಹಾರಾಣಿ ಕಾಲೇಜಿನ ಇಂಟರ್ ವಿದ್ಯಾರ್ಥಿನಿಯರಿಗೆ. ಕಚ್ಚೆ ಪಂಚೆಯ ಶಾಲು ಹೊದ್ದ ಮುದುಕರ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳು ಸೂಟುಧಾರಿ ತರುಣನ ನಿರರ್ಗಳ ಕನ್ನಡ ನುಡಿಗೆ ಮಾರು ಹೋದರು.
1940ರಲ್ಲಿ ರಾಜಲಕ್ಷ್ಮಿಯೊಂದಿಗೆ ವಿವಾಹವಾಯಿತು. ಬಡ್ತಿ ಹೊಂದಿ, ತುಮಕೂರಿನ ಕಾಲೇಜಿಗೆ ವರ್ಗವಾಯಿತು. ಈ ಸಮಯದಲ್ಲೇ ಮೊಟ್ಟ ಮೊದಲ ಕವನ ಸಂಕಲನ 'ರಾಗಿಣಿ' ಪ್ರಕಟಿಸಿದರು. ಕುವೆಂಪು ಮುನ್ನುಡಿ ಬರೆದು ಹರಸಿದರು. 1942ರಲ್ಲಿ ಶಿವಮೊಗ್ಗಕ್ಕೆ ವರ್ಗವಾಯಿತು. ಅಲ್ಲಿನ ಕರ್ನಾಟಕ ಸಂಘದ ಕಾರ್ಯಕಲಾಪಗಳಲ್ಲಿ ಪಾಲ್ಗೊಂಡರು. ರಂಜನೀಯ, ಜೊತೆಗೆ ಉದ್ಬೋಧಕವಾದ ಇವರ ಭಾಷಣ ಶೈಲಿ ಜನಪ್ರಿಯವಾಯಿತು. ಪತ್ನಿಯ ಆರೋಗ್ಯ ಹದಗೆಟ್ಟಿದ್ದರಿಂದ, ಪುನಃ ಮೈಸೂರಿಗೆ ವರ್ಗ.
ಇವರ ಪಾಠದ ಶೈಲಿಯಿಂದಾಗಿ ತರಗತಿ ಅನ್ಯ ವಿದ್ಯಾರ್ಥಿಗಳಿಂದಲೂ ತುಂಬಿ ತುಳುಕುತ್ತಿತ್ತು. ಈ ಸಮಯದಲ್ಲಿ ಮುದ್ದಣ ಕವಿಯ ಶ್ರೀ ರಾಮ ಪಟ್ಟಾಭಿಷೇಕಂ ಮತ್ತು ಅದ್ಭುತ ರಾಮಾಯಣಗಳನ್ನು ಸಂಪಾದಿಸಿ, ಪ್ರಕಟಿಸಿದರು. ನಂತರ ಮಂಗಳೂರಿನ ಮಂಗಳ ಗಂಗೋತ್ರಿಗೆ ವರ್ಗವಾಯಿತು. ಅಲ್ಲಿ 'ಪಲಚಂವಿ' ಎಂಬ ಹೆಸರಿನಲ್ಲಿ ಒಂದು ಗ್ರಂಥಾಮಾಲೆ ತೆರೆದರು. ಪಲಚಂವಿ ಎಂದರೆ ಪರಮೇಶ್ವರ ಭಟ್ಟ, ಲಕ್ಕಪ್ಪಗೌಡ, ಚಂದ್ರಶೇಖರ ಐತಾಳ ಮತ್ತು ವಿವೇಕ ರೈ.
ಭಟ್ಟರು ಕನ್ನಡದ ಕಾಳಿದಾಸ ಎಂಬ ಖ್ಯಾತಿ ಪಡೆದವರು. ಕಾಳಿದಾಸ ಮಹಾಸಂಪುಟ, ಭಾಸ ಸಂಪುಟ, ಹರ್ಷ ಸಂಪುಟ, ಬುದ್ಧಚರಿತಗಳನ್ನು ಅನುವಾದಿಸಿದ ಮೊದಲಿಗ. ತ್ರಿಪದಿ, ಸಾಂಗತ್ಯ, ಏಳೆ ಮುಂತಾದ ಪ್ರಾಚೀನ ಛಂದೋರಚನೆಗಳನ್ನು ಪುನರುತ್ಥಾನಗೊಳಿಸಿದ ಕೀರ್ತಿ. ಗಾಥಾಸಪ್ತಶತಿ, ಚಂದ್ರವೀಧಿ ಮತ್ತು ಕೃಷ್ಣಮೇಧ ಇವರ ಸಾಂಗತ್ಯ ಕೃತಿಗಳು. ಸುರಗಿ ಸುರಹೊನ್ನೆ, ತ್ರಿಪದಿಯ ಬಿಡಿಬಿಡಿ ಮುಕ್ತಕಗಳು. ಉಪ್ಪು ಕಡಲು, ಪಾಮರ, ಉಂಬರ ವಚನಗಳು. ರಾಗಿಣಿ, ಗಗನಚುಕ್ಕಿ, ಅಂಚೆ ಪೆಟ್ಟಿಗೆ, ಜಹನಾರ, ಇಂದ್ರಚಾಪ, ಇಂದ್ರಗೋಪ ಕವನಸಂಕಲನಗಳು. ಸರಳತೆ, ಸ್ನೇಹಪರತೆ, ಹಾಸ್ಯ ಪ್ರವೃತ್ತಿ, ಅಗಾಧ ಸ್ಮರಣ ಶಕ್ತಿ, ಕಷ್ಟ ಸಹಿಷ್ಣುತೆ, ಪರೋಪಕಾರ, ಹೀಗೆ ಇವರ ಬದುಕು ತೆರೆದ ಪುಸ್ತಕ. ಕನ್ನಡ ಸಾಹಿತ್ಯ ಈ ನೂರು ವರ್ಷಗಳಲ್ಲಿ ಕಂಡ ಪ್ರತಿಭೆ ಪಾಂಡಿತ್ಯಗಳ ಅತ್ಯುನ್ನತಿಗೆ ಇವರೊಂದು ನಿದರ್ಶನ.
-ಭಾಗ್ಯ ನಂಜುಂಡಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


